ಲೋಕಸಭಾ ಚುನಾವಣೆ : ಖಚಿತವಾಯ್ತು ದೇವೇಗೌಡರ ಸ್ಪರ್ಧಾ ಕಣ..?

By Web DeskFirst Published Jan 28, 2019, 8:01 AM IST
Highlights

ಇನ್ನೇನು ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಇದೇ ವೇಳೆ ವಿವಿಧ ಕ್ಷೇತ್ರಗಳ ಸ್ಪರ್ಧೆಗೆ ನಾಯಕರು ರೆಡಿಯಾಗುತ್ತಿದ್ದಾರೆ. ಎಚ್.ಡಿ.ದೇವೇಗೌಡ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಈ ಬಾರಿ ಕಣಕ್ಕಿಳಿಯುವುದು ಬಹುತೇಕ ನಿಶ್ಚಿತವಾಗಿದೆ. 

ಬೆಂಗಳೂರು :  ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಈ ಬಾರಿ ಕಣಕ್ಕಿಳಿಯುವುದು ಬಹುತೇಕ ನಿಶ್ಚಿತವಾಗಿದೆ.  ಪಾಲುದಾರ ಪಕ್ಷಗಳಾದ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಸ್ಥಾನ ಹೊಂದಾಣಿಕೆ ಪ್ರಕ್ರಿಯೆ ಅಂತಿಮಗೊಂಡ ನಂತರ ಅಧಿಕೃತವಾಗಿ ಜೆಡಿಎಸ್‌ನಿಂದ ಈ ವಿಷಯ ಹೊರಬೀಳಲಿದೆ. ಅಲ್ಲಿವರೆಗೆ ದೇವೇಗೌಡರು ಈ ಬಗ್ಗೆ ಬಹಿರಂಗವಾಗಿ ಯಾವು ದೇ ಹೇಳಿಕೆ ನೀಡುವುದಿಲ್ಲ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ. 

ಗೌಡರು ಈಗ ಪ್ರತಿನಿಧಿಸುತ್ತಿರುವ ಹಾಸನ ಲೋಕಸಭಾ ಕ್ಷೇತ್ರವನ್ನು ಮೊಮ್ಮಗ ಪ್ರಜ್ವಲ್ ರೇವಣ್ಣ ಅವರಿಗೆ ಬಿಟ್ಟು ಕೊಡಲು ನಿರ್ಧರಿಸಿದ್ದಾರೆ. ಈ ಬಗ್ಗೆ ಹಿಂದೆಯೇ ಹೇಳಿಕೆಯನ್ನೂ ಅವರು ನೀಡಿದ್ದಾರೆ. ತಾವು ಬೇರೆ ಯಾವ ಕ್ಷೇತ್ರದಿಂದ ಕಣಕ್ಕಿಳಿಯುತ್ತೇನೆ ಎಂಬುದರ ಗುಟ್ಟನ್ನು ಮಾತ್ರ ಅವರು ಬಿಟ್ಟುಕೊಟ್ಟಿಲ್ಲ. 

ಮಂಡ್ಯದಿಂದ ಪಕ್ಷದ ಅಭ್ಯರ್ಥಿಯನ್ನಾಗಿ ಯಾರನ್ನೇ ಕಣಕ್ಕಿಳಿಸಿದರೂ ಗೆಲ್ಲಿಸಬಹುದು ಎಂಬ ವಿಶ್ವಾಸದಲ್ಲಿರುವ ದೇವೇಗೌಡರಿಗೆ ಮೈಸೂರು ಕ್ಷೇತ್ರಕ್ಕೆ ವಲಸೆ ಹೋಗಲು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಡ್ಡಿಯಾಗಿದ್ದಾರೆ. ಹೀಗಾಗಿ ಅಲ್ಲಿಂದ ಕಣಕ್ಕಿಳಿಯಲು ಹಿಂದೇಟು ಹಾಕುತ್ತಿದ್ದಾರೆ. ಅಂತಿಮವಾಗಿ ಬೆಂಗಳೂರಿನತ್ತ ಗೌಡರು ದೃಷ್ಟಿ ಹಾಯಿಸಿದ್ದಾರೆ. 

ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರಗಳ ಪೈಕಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿಯಿಂದ ಈ ಬಾರಿ ಕೇಂದ್ರ ಸಚಿವರಾಗಿದ್ದ ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಾಗಿರುವುದರಿಂದ ಆ ಕ್ಷೇತ್ರದತ್ತ ಗೌಡರು ಅಷ್ಟಾಗಿ ಒಲವು ಹೊಂದಿಲ್ಲ. ಇನ್ನು ಬೆಂಗಳೂರು ಕೇಂದ್ರ ಕ್ಷೇತ್ರ ಜಾತಿ ಸಮೀಕರಣದ ಲೆಕ್ಕಾಚಾರದಿಂದ ಸುರಕ್ಷಿತವಲ್ಲ ಎಂದೆನಿಸಿದೆ. ಕಾಂಗ್ರೆಸ್ಸಿಗೆ ಪ್ರಬಲ ಅಭ್ಯರ್ಥಿಗಳ ಕೊರತೆ ಇರುವುದು ಮತ್ತು ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಬೆಂಗಳೂರು ಉತ್ತರ ಕ್ಷೇತ್ರ ಸುರಕ್ಷಿತ ಎಂಬ ನಿಲುವಿಗೆ ಬಂದಿದ್ದಾರೆ ಎಂದು ತಿಳಿದು ಬಂದಿದೆ.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಎರಡರಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಇದು ಕೂಡ ಗೌಡರಲ್ಲಿ ವಿಶ್ವಾಸ ಹೆಚ್ಚಿಸಿದೆ. ಈಗಾಗಲೇ ತೆರೆಮರೆಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಕೆಲ ಚಟುವಟಿಕೆಗಳನ್ನು ದೇವೇಗೌಡ ಆರಂಭಿಸಿದ್ದಾರೆ.

ಸಭೆಯಲ್ಲೂ ಸೂಚ್ಯವಾಗಿ ಪ್ರಸ್ತಾಪ: ಮುಂಬರುವ ಲೋಕಸಭಾ ಚುನಾವಣೆಯ ಸಿದ್ಧತೆ ಹಿನ್ನೆಲೆಯಲ್ಲಿ ಭಾನುವಾರ ದೇವೇಗೌಡರು ಕರೆದಿದ್ದ ರಾಜಧಾನಿ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಮುಖಂಡರ ಸಭೆಯಲ್ಲಿ ಈ ವಿಷಯ ಸೂಚ್ಯವಾಗಿ ಪ್ರಸ್ತಾಪವಾಗಿದೆ. ಸಭೆಯಲ್ಲಿ ಪಾಲ್ಗೊಂಡಿದ್ದ ಮುಖಂಡರು ಈ ಬಾರಿ ಬೆಂಗಳೂರಿನಿಂದಲೇ ದೇವೇಗೌಡರು ಸ್ಪರ್ಧಿಸಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಆದರೆ, ಅದಕ್ಕೆ ಸ್ಪಷ್ಟ ಉತ್ತರ ನೀಡದ ಗೌಡರು ನಸುನಕ್ಕರು ಎಂದು ತಿಳಿದು ಬಂದಿದೆ.

ನಂತರ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಬೆಂಗಳೂರು ಉತ್ತರದಿಂದ ಸ್ಪರ್ಧೆ ಮಾಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ದೇವೇಗೌಡ, ಅದು ಬಿಡಿ. ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾದ ಕಾಂಗ್ರೆಸ್ ಮತ್ತು ನಮ್ಮ ಪಕ್ಷದ ಸ್ಥಾನಗಳ ತೀರ್ಮಾನ ಇನ್ನೂ ಆಗಿಲ್ಲ. ಉಭಯ ಪಕ್ಷದ ನಾಯಕರು ಆ ಬಗ್ಗೆ ಇನ್ನೂ ಮಾತುಕತೆ ನಡೆಸಿಲ್ಲ. ಈಗಲೇ ಈ ವಿಚಾರ ಬೇಡ ಎಂದು ವಿಷಯಾಂತರಕ್ಕೆ ಮುಂದಾದರು.

ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಅವರು, ಹಾಸನ ಲೋಕಸಭೆ ಕ್ಷೇತ್ರದಿಂದ ನನ್ನ ಮೊಮ್ಮಗ ಪ್ರಜ್ವಲ್‌ನನ್ನು ಸ್ಪರ್ಧೆಗಿಳಿಸುವ ಬಗ್ಗೆ ಹಿಂದೆಯೇ ನಾನು ಹೇಳಿದ್ದೇನೆ. ಅದು ನನ್ನ ಅಭಿಪ್ರಾಯ. ಅದಿನ್ನೂ ಪಕ್ಷದ ಪಾರ್ಲಿಮೆಂಟ್ ಬೋರ್ಡ್‌ನಲ್ಲಿ ತೀರ್ಮಾನವಾಗಿಲ್ಲ ಎಂದು ಹೇಳಿದರು. ಸಭೆಯಲ್ಲಿ ಎಷ್ಟು ಕಡೆ ಅಭ್ಯರ್ಥಿ ಹಾಕಬೇಕು? ನಮಗೆ ಎಷ್ಟು ಶಕ್ತಿ ಇದೆ ಎಂಬುದರ ಮಾಹಿತಿ ಪಡೆದಿದ್ದೇನೆ. ಸಂಘಟನೆ ದೃಷ್ಟಿಯಿಂದ ಸಭೆ ಸೇರಿದ್ದೇವೆ.

ಹೊಂದಾಣಿಕೆಯಿಂದ ಪರಸ್ಪರ ಮಾತನಾಡಿಕೊಂಡು ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ. ಎರಡೂ ಪಕ್ಷದ ಕಾರ್ಯಕರ್ತರು ಒಟ್ಟಿಗೆ ಕೆಲಸ ಮಾಡಬೇಕಿದೆ. ಬಿಜೆಪಿಯನ್ನು ಹಿಂದಿಕ್ಕಬೇಕಾದಲ್ಲಿ ನಮ್ಮ ಮುಖಂಡರು ಒಗ್ಗಟ್ಟಾಗಿರಬೇಕು ಎಂದು ಗೌಡರು ತಿಳಿಸಿದರು.

click me!