
ಬೆಂಗಳೂರು (ಮಾ.4): ರಾಜ್ಯದಲ್ಲಿ ಬೇಸಿಗೆಯ ಬಿಸಿ ಏರುತ್ತಿರುವ ಬೆನ್ನಲ್ಲೇ ಕೈಗಾರಿಕೆ ಮತ್ತು ವಾಣಿಜ್ಯ ವಿದ್ಯುತ್ ಬಳಕೆದಾರರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (KERC) ವಿದ್ಯುತ್ ದರವನ್ನು ಪರಿಷ್ಕರಿಸುವ ಮೂಲಕ ಗ್ರಾಹಕರಿಗೆ ದೊಡ್ಡ ಹೊರೆ ನೀಡಿದೆ.
ವಿದ್ಯುತ್ ಸರಬರಾಜು ಕಂಪನಿಗಳು (ಎಸ್ಕಾಂಗಳು) ಎದುರಿಸುತ್ತಿರುವ ಆರ್ಥಿಕ ನಷ್ಟದ ನೆಪವೊಡ್ಡಿ ದರ ಏರಿಕೆ ಮಾಡುವಂತೆ ಸಲ್ಲಿಸಿದ್ದ ಪ್ರಸ್ತಾವನೆಗೆ ಕೆಇಆರ್‌ಸಿ ಅಸ್ತು ಎಂದಿದೆ. ಎಸ್ಕಾಂಗಳ ನಿರಂತರ ಒತ್ತಡದ ಹಿನ್ನೆಲೆಯಲ್ಲಿ ಈ ದರ ಪರಿಷ್ಕರಣೆ ಮಾಡಲಾಗಿದ್ದು, ಏಪ್ರಿಲ್ 1 ರಿಂದ ಹೊಸ ದರಗಳು ಜಾರಿಗೆ ಬರಲಿವೆ.
ವಾಣಿಜ್ಯ ವಿದ್ಯುತ್ ದರವನ್ನು ಪ್ರತಿ ಯೂನಿಟ್‌ಗೆ 7 ರೂ.ನಿಂದ 7.10 ರೂ.ಗೆ ಹೆಚ್ಚಿಸಲಾಗಿದೆ. ಕೈಗಾರಿಕಾ ವಲಯದಲ್ಲೂ ಗಣನೀಯ ಏರಿಕೆಯಾಗಿದ್ದು, ಎಲ್.ಟಿ. 5 ಕೈಗಾರಿಕೆ ದರ 4.5 ರೂ.ನಿಂದ 5.20 ರೂ.ಗೆ ಹಾಗೂ ಹೆಚ್.ಟಿ.2ಬಿ ಕೈಗಾರಿಕೆ ದರವನ್ನು 5.95 ರೂ.ನಿಂದ 6.90 ರೂ.ಗೆ (ಅಂದರೆ ಯೂನಿಟ್‌ಗೆ 95 ಪೈಸೆ) ಹೆಚ್ಚಳ ಮಾಡಲಾಗಿದೆ.
ಒಂದೆಡೆ ಕೈಗಾರಿಕೆಗಳಿಗೆ ದರ ಏರಿಸಿದ್ದರೆ, ಮತ್ತೊಂದೆಡೆ ಕೃಷಿ ಪಂಪ್‌ಸೆಟ್‌ಗಳಿಗೆ ಬಳಕೆಯಾಗುವ ವಿದ್ಯುತ್ ದರದಲ್ಲಿ ಯೂನಿಟ್‌ಗೆ 95 ಪೈಸೆ ಕಡಿತ ಮಾಡಲಾಗಿದೆ. ಅಲ್ಲದೆ, ಎಲ್ಲಾ ಎಸ್ಕಾಂಗಳ ವ್ಯಾಪ್ತಿಯಲ್ಲಿ ಒಂದೇ ರೀತಿ ಇದ್ದ ದರವನ್ನು ಈಗ ಆಯಾ ಎಸ್ಕಾಂಗಳಿಗೆ ತಕ್ಕಂತೆ ಪ್ರತ್ಯೇಕವಾಗಿ ನಿಗದಿಪಡಿಸಲಾಗಿದೆ.
ಸಾಮಾನ್ಯ ಜನರಿಗೆ ಸಮಾಧಾನ ತರುವ ವಿಷಯವೆಂದರೆ, ಗೃಹ ಬಳಕೆಯ ವಿದ್ಯುತ್ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಮನೆಗಳಲ್ಲಿ ಬಳಸುವ ವಿದ್ಯುತ್ ಬೆಲೆ ಯಥಾಸ್ಥಿತಿಯಲ್ಲಿ ಮುಂದುವರಿಯಲಿದ್ದು, ಕೇವಲ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮಿಗಳಿಗೆ ಮಾತ್ರ ಈ ದರ ಏರಿಕೆ ಅನ್ವಯವಾಗಲಿದೆ.
ಬೇಸಿಗೆಯ ಆರಂಭದಲ್ಲೇ ಮಾಡಲಾಗಿರುವ ಈ ದರ ಏರಿಕೆ ಕೈಗಾರಿಕೋದ್ಯಮಿಗಳ ಮತ್ತು ವಾಣಿಜ್ಯೋದ್ಯಮಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ಕೈಗಾರಿಕೆಗಳಿಗೆ ಈ 'ಹೈಕ್' ಗಾಯದ ಮೇಲೆ ಬರೆ ಎಳೆದಂತಾಗಿದ್ದು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ