
ಬೆಂಗಳೂರು (ಮಾ.04): ಕರ್ನಾಟಕ ಲೋಕಸೇವಾ ಆಯೋಗದ (KPSC) ಪರೀಕ್ಷಾ ಪ್ರಕ್ರಿಯೆಗಳು ಮತ್ತೊಮ್ಮೆ ವಿವಾದದ ಸುಳಿಗೆ ಸಿಲುಕಿವೆ. ಇತ್ತೀಚೆಗೆ ಬಿಡುಗಡೆಯಾದ ಪರೀಕ್ಷಾ ಫಲಿತಾಂಶಗಳಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ, ಕೆಪಿಎಸ್‌ಸಿ ಕಾರ್ಯದರ್ಶಿ ಜ್ಯೋತಿ ಅವರು ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆಗೆ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿ ಅಕ್ರಮದ ಸಾಧ್ಯತೆಗಳನ್ನು ತಳ್ಳಿಹಾಕಿದ್ದಾರೆ.
ಕೆಪಿಎಸ್ಸಿ ಫಲಿತಾಂಶದ ಬಗ್ಗೆ ಕೇಳಿಬರುತ್ತಿರುವ ಆರೋಪಗಳಿಗೆ ಪ್ರತಿಕ್ರಿಯಿಸಿದ ಜ್ಯೋತಿ, 'ಕೆಪಿಎಸ್‌ಸಿ ಫಲಿತಾಂಶದಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರ ನಡೆದಿಲ್ಲ. ಅತ್ಯಂತ ಪಾರದರ್ಶಕವಾಗಿ ಪರೀಕ್ಷೆ ನಡೆಸಿ ಫಲಿತಾಂಶ ಬಿಡುಗಡೆ ಮಾಡಲಾಗಿದೆ. ಯಾವುದೇ ಆಧಾರವಿಲ್ಲದೆ ಭ್ರಷ್ಟಾಚಾರದ ಆರೋಪ ಮಾಡುವುದು ಸರಿಯಲ್ಲ' ಎಂದು ಸಮರ್ಥಿಸಿಕೊಂಡರು. ಈ ವಿಚಾರವನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಗಂಭೀರವಾಗಿ ಪರಿಗಣಿಸಿದ್ದು, ವರದಿ ಕೇಳಿದ್ದಾರೆ. 'ಇನ್ನೆರಡು ದಿನಗಳಲ್ಲಿ ನಾವು ಸರ್ಕಾರಕ್ಕೆ ವಿವರವಾದ ವರದಿ ಸಲ್ಲಿಸಲಿದ್ದೇವೆ. ಆಂತರಿಕವಾಗಿಯೂ ತನಿಖೆ ನಡೆಯಲಿದೆ' ಎಂದು ತಿಳಿಸಿದರು.
ಪರೀಕ್ಷಾ ಅಕ್ರಮದ ಅನುಮಾನಕ್ಕೆ ಮುಖ್ಯ ಕಾರಣವಾಗಿದ್ದು ಒಂದೇ ಪರೀಕ್ಷಾ ಕೊಠಡಿಯಲ್ಲಿದ್ದ 10ಕ್ಕೂ ಹೆಚ್ಚು ಅಭ್ಯರ್ಥಿಗಳು ಪಾಸಾಗಿರುವುದು. ಈ ಬಗ್ಗೆ ಮಾತನಾಡಿದ ಕಾರ್ಯದರ್ಶಿ ಜ್ಯೋತಿ, 'ಸುಮಾರು 5,700ಕ್ಕೂ ಅಧಿಕ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಒಂದು ಕೊಠಡಿಯಲ್ಲಿ 24 ಅಭ್ಯರ್ಥಿಗಳು ಇರುತ್ತಾರೆ. ಅದರಲ್ಲಿ 10 ರಿಂದ 12 ಅಭ್ಯರ್ಥಿಗಳು ಆಯ್ಕೆಯಾಗುವುದು ಸಂಭವನೀಯ. ಆದರೆ, ಕೆಪಿಎಸ್‌ಸಿ ಇತಿಹಾಸದಲ್ಲೇ ಒಂದೇ ರೂಮ್‌ನಲ್ಲಿ ಇಷ್ಟು ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳು ಪಾಸ್ ಆಗಿರುವುದು ಇದೇ ಮೊದಲು ಎನಿಸುತ್ತದೆ. ಇದನ್ನು ನಾನು ಖುದ್ದಾಗಿ ತನಿಖೆ ನಡೆಸುತ್ತಿದ್ದೇನೆ, ಇದಕ್ಕಾಗಿ ಯಾವುದೇ ಪ್ರತ್ಯೇಕ ಸಮಿತಿ ರಚಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಕೆಎಎಸ್ (KAS) ಮೇನ್ಸ್ ಪರೀಕ್ಷೆಯಲ್ಲೂ ಮತ್ತೊಂದು ಗಂಭೀರ ಎಡವಟ್ಟು ಬೆಳಕಿಗೆ ಬಂದಿದೆ. ಕಳೆದ ವರ್ಷ ಮೇ ತಿಂಗಳಲ್ಲಿ ನಡೆದಿದ್ದ ಮೇನ್ಸ್ ಪರೀಕ್ಷೆಯ ವೇಳೆ ಪ್ರಶ್ನೆ ಪತ್ರಿಕೆಯ ಸೀಲ್ ಮೊದಲೇ ಓಪನ್ ಆಗಿತ್ತು ಎಂದು ಅಭ್ಯರ್ಥಿಗಳು ಆರೋಪಿಸಿದ್ದರು. ಅಚ್ಚರಿಯ ವಿಷಯವೆಂದರೆ, ಪರೀಕ್ಷಾ ಮೇಲ್ವಿಚಾರಕರೇ ಈ ತಪ್ಪನ್ನು ಒಪ್ಪಿಕೊಂಡು ಅಭ್ಯರ್ಥಿಗಳಿಗೆ ಪತ್ರದ ಮೂಲಕ ಲಿಖಿತ ಹೇಳಿಕೆ ನೀಡಿದ್ದರು.
ಆ ಸಮಯದಲ್ಲಿ ಸುವರ್ಣ ನ್ಯೂಸ್ ಈ ಸುದ್ದಿಯನ್ನು ವಿಸ್ತೃತವಾಗಿ ಪ್ರಸಾರ ಮಾಡಿತ್ತು ಮತ್ತು ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದ ಮುಂದೆ ಪ್ರತಿಭಟನೆ ನಡೆಸಿದ್ದರು. ಆದರೂ ಕೆಪಿಎಸ್‌ಸಿ ಈ ಬಗ್ಗೆ ಯಾವುದೇ ತನಿಖೆ ನಡೆಸದೆ ಮೌನ ವಹಿಸಿತ್ತು. ಈ ಬಗ್ಗೆ ಪ್ರಶ್ನಿಸಿದಾಗ, ಕಾರ್ಯದರ್ಶಿ ಜ್ಯೋತಿ ಅವರು, 'ಮೇನ್ಸ್ ಪರೀಕ್ಷೆಯ ಸೀಲ್ ಓಪನ್ ಆಗಿರುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ, ಈ ಬಗ್ಗೆ ಮಾಹಿತಿ ಪಡೆದು ಮಾತನಾಡುತ್ತೇನೆ' ಎಂದು ಹೇಳುವ ಮೂಲಕ ಜಾರಿಕೊಂಡಿದ್ದಾರೆ.
ಸಾವಿರಾರು ಅಭ್ಯರ್ಥಿಗಳ ಭವಿಷ್ಯದ ಜೊತೆ ಬೆಸೆದುಕೊಂಡಿರುವ ಕೆಪಿಎಸ್‌ಸಿ ಪರೀಕ್ಷೆಗಳಲ್ಲಿ ಪದೇ ಪದೇ ಇಂತಹ ಗೊಂದಲಗಳು ಉಂಟಾಗುತ್ತಿರುವುದು ಉದ್ಯೋಗಾಕಾಂಕ್ಷಿಗಳಲ್ಲಿ ಆತಂಕ ಮೂಡಿಸಿದೆ. ಸರ್ಕಾರದ ವರದಿ ಸಲ್ಲಿಕೆಯಾದ ನಂತರವಷ್ಟೇ ಈ "ಅತೀ ಹೆಚ್ಚು ಅಭ್ಯರ್ಥಿಗಳು ಪಾಸ್" ಆದ ರಹಸ್ಯ ಬಯಲಾಗಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ