
ಬೆಂಗಳೂರು (ಜೂ.26): ರಾಜ್ಯದಲ್ಲಿ ಅದ್ಧೂರಿಯಾಗಿ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಆಚರಣೆ ಮಾಡಲಾಗುತ್ತಿದ್ದರೂ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಆಹ್ವಾನಿ ನೀಡದ ಸರ್ಕಾರದ ವಿರುದ್ಧ ಸ್ವತಃ ಒಕ್ಕಲಿಗರ ಸಂಘವೇ ತಿರುಗಿಬಿದ್ದಿದೆ.
ಹೌದು, ಈ ಬಾರಿ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಲು ಸರ್ಕಾರದಿಂದ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರ ಸಾಧನೆಯನ್ನು ರಾಜ್ಯದ ಎಲ್ಲ ಮಕ್ಕಳಿಗೂ ತಿಳಿಸುವ ನಿಟ್ಟಿನಲ್ಲಿ ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಚರ್ಚಾ ಸ್ಪರ್ಧೆ ಏರ್ಪಡಿಸಲು ಬಿಬಿಎಂಪಿ ವತಿಯಿಂದ 2.40 ಕೋಟಿ ರೂ. ಖರ್ಚು ಮಾಡಿಸಲಾಗುತ್ತಿದೆ. ಜೊತೆಗೆ, ರಾಜ್ಯ ಸರ್ಕಾರದಿಂದ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿರುವ ನಾಡಪ್ರಭು ಕೆಂಪೇಗೌಡರ ಜಯಂತಿಗೆ ಒಕ್ಕಲಿಗ ನಾಯಕರಿಗೇ ಆಹ್ವಾನ ನೀಡಿಲ್ಲ ಎಂಬ ದೂರು ಕೇಳಿಬಂದಿದೆ.
ಕೆಂಪೇಗೌಡ ಜಯಂತಿ ಹೆಸರಲ್ಲಿ ಸೇಡಿನ ರಾಜಕಾರಣ..? ಶಿಷ್ಟಾಚಾರ ಮರೆಯಿತಾ ಕಾಂಗ್ರೆಸ್ ಸರ್ಕಾರ..?
ಈಗಾಗಲೇ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮಕ್ಕೆ ಸಿದ್ಧಪಡಿಸಲಾದ ಆಹ್ವಾನ ಪತ್ರಿಕೆಯಲ್ಲಿ ಒಕ್ಕಲಿಗ ನಾಯಕರಾದ ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಹೆಸರಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಒಕ್ಕಲಿಗರ ಸಂಘದಿಂದಲೇ ಸರ್ಕಾರದ ವಿರುದ್ಧ ತಿರುಗಿ ಬೀಳಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಒಕ್ಕಲಿಗರ ಸಂಘದಿಂದ ಸರ್ಕಾರದ ವಿರುದ್ಧ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿ ಆಕ್ರೋಶ ವ್ಯಕ್ತಪಡಿಸಲಾಗಿದೆ.
ಸರ್ಕಾರದ ನಡವಳಿಕೆಯನ್ನ ಖಂಡಿಸಿ ಪತ್ರಿಕಾ ಪ್ರಕಟಣೆಯಲ್ಲಿ ಹೀಗಿದೆ..
ರಾಜ್ಯ ಸರ್ಕಾರದ ವತಿಯಿಂದ ನಾಳೆ ನಾಡಪ್ರಭು ಕೆಂಪೇಗೌಡರ 515 ನೇ ಜಯಂತಿಯನ್ನ ಆಚರಿಸುತ್ತಿರುವುದು ಸಂತೋಷ ವಿಚಾರ. ಆದರೆ, ಕಾರ್ಯಕ್ರಮಕ್ಕೆ ಒಕ್ಕಲಿಗ ಸಂಘದ ಹಿರಿಯ ನಾಯಕರಾದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನ ಮತ್ತು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರನ್ನ ಆಹ್ವಾನಿಸಿಲ್ಲ. ಇದು ಒಕ್ಕಲಿಗ ಸಮುದಾಯಕ್ಕೆ ಅವಮಾನದ ವಿಚಾರವಾಗಿದೆ. ಸರ್ಕಾರದ ಈ ಧೋರಣೆಯನ್ನು ಒಕ್ಕಲಿಗರ ಸಮುದಾಯ ಮತ್ತು ರಾಜ್ಯ ಒಕ್ಕಲಿಗರ ಸಂಘವು ತೀವ್ರ ಖಂಡಿಸುತ್ತದೆ ಎಂದು ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ