
ಹಾಸನ (ಜೂ.28) : ಕೆಂಪೇಗೌಡರು ಕೇವಲ ಒಕ್ಕಲಿಗರ ಸ್ವತ್ತಲ್ಲ, ಇಡೀ ರಾಜ್ಯದ ಏಳು ಕೋಟಿ ಜನರ ಸ್ವತ್ತು. ಸರ್ಕಾರದಿಂದ ಜಯಂತಿ ಆಚರಣೆ ಮಾಡಿದರೆ ಇಡೀ ಸಮಾಜ ಮಾಡಿದಂತಾಗುತ್ತದೆ ಎಂದು ನಾವು ಕೆಂಪೇಗೌಡರ ಜಯಂತಿ ಆಚರಣೆ ಮಾಡಿದೆವು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರಿನ ಹೊರಗೆ, ಹಾಸನದಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಿದ್ದ ರಾಜ್ಯಮಟ್ಟದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದ ಅವರು, 2013ಕ್ಕೂ ಮೊದಲು ಕೆಂಪೇಗೌಡ ಜಯಂತಿ ಆಚರಣೆ ಮಾಡುತ್ತಿರಲಿಲ್ಲ. ನಾವು ಕೆಂಪೇಗೌಡರ ಜಯಂತಿ ಆಚರಣೆ ಮಾಡಬೇಕೆಂದು ತೀರ್ಮಾನಿಸಿ ನಿರ್ಮಲಾನಂದ ಶ್ರೀಗಳ ಅಭಿಪ್ರಾಯ ಕೇಳಿದೆವು. ದಿನಾಂಕವನ್ನೂ ಅವರಿಂದಲೇ ಗೊತ್ತು ಮಾಡಿಸಿದೆವು. ಮೊತ್ತ ಮೊದಲ ಬಾರಿಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಕೆಂಪೇಗೌಡ ಜಯಂತಿ ಆಚರಿಸಿದೆವು. ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ, ಹೆಸರು ಮಾಡಿದ್ದರೆ, ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ ಎಂದು ಕರೆಸಿಕೊಳ್ಳಲು ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರೇ ಕಾರಣ. ಅವರಿಗೆ ದೂರದೃಷ್ಟಿಇತ್ತು ಎಂದರು.
ಕೆಂಪೇಗೌಡ, ನಾಲ್ವಡಿ ಸಾಧನೆ ಯಾರೂ ಮಾಡಲಾಗದು: ಕೃಷಿ ಸಚಿವ ಚೆಲುವರಾಯಸ್ವಾಮಿ
ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಮ್ಮ ಸರ್ಕಾರದ ಅವಧಿಯಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣ ಎಂದು ನಾಮಕರಣ ಮಾಡಲಾಯಿತು. ರಾಜ್ಯದಲ್ಲಿ ಕೆಂಪೇಗೌಡ ಜಯಂತಿ ಆಚರಣೆಗೆ ಚಾಲನೆ ನೀಡಿದ್ದೇ ನಾವು. ಅದೇ ರೀತಿ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಿ ಐದು ಎಕರೆ ಜಾಗವನ್ನು ನನ್ನ ಸರ್ಕಾರದ ಅವಧಿಯಲ್ಲಿ ನೀಡಲಾಯಿತು. ಇದು ಇತಿಹಾಸ. ಇದನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ ಕೆಲವರು ಪಠ್ಯವನ್ನು ತಿರುಚಿದಂತೆ ಇತಿಹಾಸವನ್ನು ತಿರುಚುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು. ಇತಿಹಾಸ ಅರಿಯುವ ಮೂಲಕ ನಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು. ಆದರೆ ಕೆಲವರು ಇತಿಹಾಸವನ್ನು ತಿರುಚುವ ಕೆಲಸ ಮಾಡುತ್ತಾರೆ. ಅಂಬೇಡ್ಕರ್, ನಾರಾಯಣ ಗುರು ಸೇರಿ ಹಲವರ ಇತಿಹಾಸವನ್ನು ತಿರುಚಲಾಗಿತ್ತು. ನಾವೀಗ ಅದನ್ನು ಸರಿ ಮಾಡುತ್ತಿದ್ದೇವೆ. ಸತ್ಯ ಹೇಳುವ ಕೆಲಸ ಮಾಡುತ್ತಿದ್ದೇವೆ ಎಂದರು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಆಯೋಜಿಸಿದ್ದ ಮೆರವಣಿಗೆಗೆ ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥಸ್ವಾಮೀಜಿ ಡೋಲು ಬಡಿಯುವ ಮೂಲಕ ಚಾಲನೆ ನೀಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ರಾಜಣ್ಣ ಮತ್ತಿತರರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ದೇವೇಗೌಡ, ರೇವಣ್ಣ ಗೈರು
ಕೆಂಪೇಗೌಡರ ರಾಜ್ಯಮಟ್ಟದ ಜಯಂತಿ ಹಾಸನ ನಗರದಲ್ಲಿ ಇದೇ ಮೊದಲ ಬಾರಿಗೆ ನಡೆದರೂ ಒಕ್ಕಲಿಗ ಸಮುದಾಯದ ಪ್ರಬಲ ನಾಯಕರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಚಿವ ಎಚ್.ಡಿ.ರೇವಣ್ಣ, ಪುತ್ರ ಎಂಎಲ್ಸಿ ಸೂರಜ್ ರೇವಣ್ಣ ಕಾರ್ಯಕ್ರಮದಿಂದ ದೂರವೇ ಉಳಿದಿದ್ದರು. ರೇವಣ್ಣ ಅವರ ಮತ್ತೊಬ್ಬ ಪುತ್ರ, ಸಂಸದ ಪ್ರಜ್ವಲ್ ರೇವಣ್ಣ ಕಾರ್ಯಕ್ರಮಕ್ಕೂ ಮುನ್ನ ನಡೆದ ಮೆರವಣಿಗೆಯಲ್ಲಿ ಪಾಲ್ಗೊಂಡು ನಗಾರಿ ಬಡಿದು ಹೋದರು. ಇನ್ನು ದೇವೇಗೌಡರು ಕಾರ್ಯಕ್ರಮಕ್ಕೆ ತಮ್ಮ ಸಂದೇಶ ರವಾನಿಸಿದರು. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿಗಾರರೊಂದಿಗೆ ಮಾತನಾಡಿ, ನಾವು ಸಂಪ್ರದಾಯದಂತೆ ಮಾಜಿ ಪ್ರಧಾನಿ ದೇವೇಗೌಡರಿಗೆ ಆಹ್ವಾನ ನೀಡಿದ್ದೆವು ಎಂದು ಸ್ಪಷ್ಟಪಡಿಸಿದರು.
ಪುಕ್ಸಟ್ಟೆಕೇಳುತ್ತಿಲ್ಲ: ಇದೇ ವೇಳೆ ಅನ್ಯಭಾಗ್ಯದ ವಿಚಾರ ಪ್ರಸ್ತಾಪಿದ ಸಿದ್ದರಾಮಯ್ಯ, ನಾವೇನು ಕೇಂದ್ರ ಸರ್ಕಾರದಿಂದ ಪುಕ್ಸಟ್ಟೆಅಕ್ಕಿ ಕೇಳುತ್ತಿಲ್ಲ. ಕೇಂದ್ರ ಸರ್ಕಾರದವರು ಅಕ್ಕಿ ವಿಚಾರದಲ್ಲಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಎಷ್ಟೇ ಕಷ್ಟವಾದರೂ ನಾವು ಅಕ್ಕಿ ಕೊಟ್ಟೇ ಕೊಡುತ್ತೇವೆ. ನಾವು ನುಡಿದಂತೆ ನಡೆಯುತ್ತೇವೆ ಎಂದರು.
ಕರುನಾಡಿನ ಹೆಗ್ಗುರುತು ನಾಡಪ್ರಭು ಕೆಂಪೇಗೌಡ: ಡಾ.ಸಿ.ಎನ್.ಅಶ್ವತ್ಥನಾರಾಯಣ
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಒಂದು ತಿಂಗಳಾಯಿತು. ಅನೇಕರು ಸರ್ಕಾರದ ಐದು ಗ್ಯಾರಂಟಿಗಳ ಕುರಿತು ಟೀಕೆ ಮಾಡುತ್ತಿದ್ದಾರೆ. ಈಗಾಗಲೇ ನಾವು ಐದರಲ್ಲಿ ಒಂದು ಗ್ಯಾರಂಟಿ ಜಾರಿ ಮಾಡಿದ್ದೇವೆ. ಜು.1ರಿಂದ ಗೃಹಜ್ಯೋತಿ ಜಾರಿಗೆ ತರಲಾಗುತ್ತಿದೆ. 1.28 ಕೋಟಿ ಕುಂಟುಬಗಳ ಯಜಮಾನಿಗೆ ತಿಂಗಳಿಗೆ ತಲಾ .2000 ನೀಡುವ ಗೃಹಲಕ್ಷ್ಮೀ ಯೋಜನೆ ಕೂಡ ಶೀಘ್ರ ಜಾರಿಗೆ ಬರಲಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ