ಕೆಇಎ ಪರೀಕ್ಷಾ ಅಕ್ರಮ: ಮೊಬೈಲ್‌ ಬದಲಿಸುತ್ತ ಯಾಮಾರಿಸುತ್ತಿರುವ ಕಿಂಗ್‌ಪಿನ್‌ ಆರ್‌.ಡಿ.ಪಾಟೀಲ್‌

By Kannadaprabha News  |  First Published Nov 11, 2023, 12:30 AM IST

ಕೆಇಎ ನೇಮಕಾತಿ ಪರೀಕ್ಷೆಗಳಲ್ಲಿ ಬ್ಲೂಟೂತ್‌ ತಂತ್ರಜ್ಞಾನ ಬಳಸಿ ನಡೆಸಲಾದ ಅಕ್ರಮದ ಮುಖ್ಯ ಆರೋಪಿ ಆರ್‌.ಡಿ.ಪಾಟೀಲ್‌, ಪ್ರಕರಣ ಬೆಳಕಿಗೆ ಬಂದು 14 ದಿನವಾದರೂ ಪೊಲೀಸರ ಕೈಗೆ ಸಿಗದೆ ತಲೆ ಮರೆಸಿಕೊಳ್ಳುತ್ತಿದ್ದಾನೆ. 


ಶೇಷಮೂರ್ತಿ ಅವಧಾನಿ

ಕಲಬುರಗಿ (ನ.11): ಕೆಇಎ ನೇಮಕಾತಿ ಪರೀಕ್ಷೆಗಳಲ್ಲಿ ಬ್ಲೂಟೂತ್‌ ತಂತ್ರಜ್ಞಾನ ಬಳಸಿ ನಡೆಸಲಾದ ಅಕ್ರಮದ ಮುಖ್ಯ ಆರೋಪಿ ಆರ್‌.ಡಿ.ಪಾಟೀಲ್‌, ಪ್ರಕರಣ ಬೆಳಕಿಗೆ ಬಂದು 14 ದಿನವಾದರೂ ಪೊಲೀಸರ ಕೈಗೆ ಸಿಗದೆ ತಲೆ ಮರೆಸಿಕೊಳ್ಳುತ್ತಿದ್ದಾನೆ. ಅ.28ರಿಂದಲೇ ನಾಪತ್ತೆಯಾಗಿರುವ ಪಾಟೀಲ್‌ನ ಬೆನ್ನಟ್ಟಿ ಪೊಲೀಸರು ಉತ್ತರ ಭಾರತಕ್ಕೂ ಹೋಗಿದ್ದರು. ಆದರೆ, ಆತ ಕಳೆದ ಸೋಮವಾರ (ನ.6) ಕಲಬುರಗಿಯಲ್ಲೇ ಪ್ರತ್ಯಕ್ಷನಾಗಿದ್ದ. ಬಳಿಕ, ತನ್ನನ್ನು ಹಿಡಿಯಲು ಬಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಪ್ಪಿಸಿಕೊಂಡಿದ್ದ. ಕಲಬುರಗಿಯ ಫ್ಲ್ಯಾಟ್‌ನಿಂದ ಪಾಟೀಲ್‌ ಹೋದನೆಲ್ಲಿ ಎಂದು ಆತನ ಜಾತಕ ಜಾಲಾಡುವಷ್ಟರಲ್ಲಿಯೇ ಆತ ಸೊಲ್ಲಾಪೂರಕ್ಕೆ ಹೋಗಿರುವ ಸುಳಿವು ಸಿಕ್ಕಿತು. 

Tap to resize

Latest Videos

ಪೊಲೀಸರು ಅತ್ತ ಧಾವಿಸಿದ್ದರೆ, ಆತ ಜಿಲ್ಲೆಯ ಜೇವರ್ಗಿಯ ನೆಲೋಗಿ ಹತ್ತಿರ ಅವಿತು ಕುಳಿತು ಪೊಲೀಸರಿಗೆ ಯಾಮಾರಿಸಿದ್ದ ಎಂಬುದು ಗೊತ್ತಾಗಿದೆ. ಮೂಲಗಳ ಪ್ರಕಾರ, ಕಲಬುರಗಿಯ ಲೇಮನ್‌ ಟ್ರೀ ಅಪಾರ್ಟ್‌ಮೆಂಟ್‌ನಿಂದ ಡ್ರಾಪ್‌ ಪಡೆದಿದ್ದ ಆರ್‌ಡಿಪಿ, ಮಧ್ಯದಲ್ಲೇ ಇಳಿದು, ಮತ್ತೆ ಪೊಲೀಸರ ದಿಕ್ಕು ತಪ್ಪಿಸಲು ಅದೇ ವಾಹನವನ್ನು ಸೊಲ್ಲಾಪೂರಕ್ಕೆ ಕಳುಹಿಸಿದ್ದ. ಮೊಬೈಲ್‌ ಲೊಕೇಶನ್‌ ಬೆನ್ನಟ್ಟಿದ್ದ ಪೊಲೀಸರು ಸೊಲ್ಲಾಪುರಕ್ಕೆ ಹೋದಾಗ ಅಲ್ಲಿ ಪಾಟೀಲನ ಬಲಗೈ ಬಂಟರಿಬ್ಬರು ಸಿಕ್ಕಿದ್ದಾರೆ. ಆದರೆ, ಆತ ನೆಲೋಗಿ ತೋಟದ ಮನೆಯೊಂದರಲ್ಲಿ ತಂಗಿದ್ದ. 

KEA ಪರೀಕ್ಷಾ ಅಕ್ರಮ ರಾಜ್ಯಾದ್ಯಂತ ವ್ಯಾಪಿಸಿರೋ ಶಂಕೆ: ಸಚಿವ ಪ್ರಿಯಾಂಕ್‌ ಖರ್ಗೆ

ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆಯೇ ಅಲ್ಲಿ ಹೋಗಿ ಶೋಧಿಸಿದ್ದ ಪೊಲೀಸರಿಗೆ ಆತನ ಮೊಬೈಲ್‌ ಲೊಕೇಶನ್‌ ಮತ್ತೆ ಮಹಾರಾಷ್ಟ್ರ ತೋರಿಸಿದ್ದರಿಂದ ಪೊಲೀಸರ ಶೋಧ ಕಾರ್ಯ ಮುಂದುವರಿದಿದೆ. ಈ ಮಧ್ಯೆ, ಇಲ್ಲಿಂದ ಆತ ಸೊನ್ನ ಟೋಲ್‌ಗೇಟ್‌ ಮಾರ್ಗವಾಗಿ ಪ್ರಯಾಣಿಸಿದ್ದಾನೆಂಬ ಬಲವಾದ ಶಂಕೆಗಳಿರೋದರಿಂದ ಪೊಲೀಸರು ಟೋಲ್‌ಗೇಟ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಇದೇ ವೇಳೆ, ಆರ್‌.ಡಿ.ಪಾಟೀಲ್‌ನ ಸಹೋದರ ಮಹಾಂತೇಶ ಪಾಟೀಲನ ವಿಚಾರಣೆಯನ್ನೂ ಪೊಲೀಸರು ನಡೆಸಿದ್ದಾರೆ. ಈ ಮಧ್ಯೆ, ನೆಲೋಗಿ ಬಳಿ ತಂಗಲು ಆರ್‌ಡಿಪಿಗೆ ನೆರವು ನೀಡಿದ್ದಾರೆಂಬ ಆರೋಪಗಳ ಹಿನ್ನೆಲೆಯಲ್ಲಿ ಪೊಲೀಸರು ಇನ್ನಿಬ್ಬರನ್ನು ವಿಚಾರಣೆಗೆ ಪಡೆದಿದ್ದಾರೆಂದು ಹೇಳಲಾಗುತ್ತಿದೆಯಾದರೂ ಪೊಲೀಸರು ಇದನ್ನು ಧೃಢಪಡಿಸಿಲ್ಲ

KEA ಪರೀಕ್ಷಾ ಅಕ್ರಮ: ಪೊಲೀಸ್‌ ಪಾಲಿಗೆ ಕಿಂಗ್‌ಪಿನ್‌ ಆರ್‌.ಡಿ.ಪಾಟೀಲ್‌ ಬಿಸಿತುಪ್ಪ!

ಮೊಬೈಲ್‌ ಕರಾಮತ್ತು!: ಮೊಬೈಲ್‌ ಬಳಸಿ ಪೊಲೀಸರ ಗಮನ ಬೇರೆಡೆ ಸೆಳೆಯುವಲ್ಲಿ ತಾನು ನಿಪುಣ ಎಂಬುದನ್ನು ಆತ ತೋರಿಸಿದ್ದಾನೆ. ಅದಾಗಲೇ ತನ್ನದೊಂದು ಮೊಬೈಲ್‌ನ್ನು ಉತ್ತರ ಪ್ರದೇಶದಲ್ಲಿಟ್ಟು ಖಾಕಿ ಪಡೆಯನ್ನೇ ಯಾಮಾರಿಸಿದ್ದಾನೆ. ತನ್ನ ಇರುವಿಕೆ ಬಗ್ಗೆ, ಸಂಚಾರದ ಬಗ್ಗೆ ಸಾಕಷ್ಟು ಮೂಲಗಳಿಂದ ಮಾಹಿತಿ ಹರಿದು ಬರುತ್ತಿದ್ದರೂ ಕೂಡಾ ಮೊಬೈಲ್‌ ಲೊಕೇಶನ್‌ನ ಜಾಡು ಬೆನ್ನಟ್ಟಿದ್ದ ಕಲಬುರಗಿ ಪೊಲೀಸರು ಉತ್ತರ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ ರಾಜ್ಯದ ಹಲವು ಭಾಗಗಳಲ್ಲಿ ಸುತ್ತುವಂತೆ ಮಾಡಿದ್ದಾನೆ.

click me!