
ಬೆಂಗಳೂರು (ನ.17): ಹಫ್ತಾ ವಸೂಲಿ ವಿಚಾರವಾಗಿ ಉಡುಪಿ ಮೂಲದ ಉದ್ಯಮಿ ಹಾಗೂ ಆತನ ಪುತ್ರನಿಗೆ ಕೊಲೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಭೂಗತ ಪಾತಕಿ ಬನ್ನಂಜೆ ರಾಜನ ಸಹಚರ ಶಶಿ ಪೂಜಾರಿಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ. ಜಾಮೀನು ಕೋರಿ ಶಶಿಕುಮಾರ್ ಅಲಿಯಾಸ್ ಶಶಿ ಪೂಜಾರಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ವಜಾಗೊಳಿಸಿ ಆದೇಶಿಸಿದೆ. ಅಲ್ಲದೆ, ಅಪರಾಧ ಕೂಟಕ್ಕಾಗಿ (ಕೈಂ ಸಿಂಡಿಕೇಟ್) ವೈಯಕ್ತಿಕವಾಗಿ ಕಾರ್ಯ ನಿರ್ವಹಿಸುವರ ವಿರುದ್ಧವೂ ಕೋಕಾ ಅನ್ವಯವಾಗುತ್ತದೆ ಎಂದು ಸ್ಪಷ್ಟಪಡಿಸಿದೆ.
ಏನಿದು ಪ್ರಕರಣ: ಉಡುಪಿ ಉದ್ಯಮಿ ರತ್ನಾಕರ ಶೆಟ್ಟಿನೀಡಿದ ದೂರಿನ ಮೇಲೆ ಅನಾಮಧೇಯ ವ್ಯಕ್ತಿಗಳ ವಿರುದ್ಧ 2019ರ ಮಾ.15ರಂದು ಎಫ್‌ಐಆರ್ ದಾಖಲಾಗಿತ್ತು. ತಮಗೆ ಒಬ್ಬ ವ್ಯಕ್ತಿ ಕರೆ ಮಾಡಿ 2019ರ ಮಾ.13ರಂದು ನಿಂದನೆ ಮಾಡಿದರಲ್ಲದೆ, ಹಣ ನೀಡದಿದ್ದರೆ ತಮ್ಮನ್ನು ಮತ್ತು ತಮ್ಮ ಮಗನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ ದೂರು ನೀಡಿದ್ದರು. ತನಿಖೆ ನಡೆಸಿದ್ದ ಪೊಲೀಸರು, 2019ರ ಮಾ.21ರಂದು ಅರ್ಜಿದಾರ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದರು.
Bengaluru: ಡ್ರಗ್ಸ್ ಸ್ಮಗ್ಲಿಂಗ್: ಔಷಧಿ ವ್ಯಾಪಾರಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್
ಪೊಲೀಸರು ತನಿಖೆ ಪೂರ್ಣಗೊಳಿಸಿ 2019ರ ಸೆ.13ರಂದು ಅರ್ಜಿದಾರನ ವಿರುದ್ಧ ಕೋಕಾ ಮತ್ತು ಐಪಿಸಿಯ ವಿವಿಧ ಸೆಕ್ಷನ್‌ಗಳಡಿ ದೋಷಾರೋಪ ಪಟ್ಟಿಸಲ್ಲಿಸಿದ್ದರು. ಇದರಿಂದ ಅರ್ಜಿದಾರ ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋಗಿದ್ದನು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ತನಗೂ ಹಾಗೂ ಪ್ರಕರಣಕ್ಕೆ ಯಾವುದೇ ಸಂಬಂಧವಿಲ್ಲ ಎಂಬುದಾಗಿ ಆರೋಪಿ ಹೇಳುತ್ತಿದ್ದಾರೆ. ಆದರೆ, ದೂರುದಾರರ ಹೇಳಿಕೆ ಗಮನಿಸಿದರೆ, ಪ್ರಕರಣದ ನಾಲ್ಕನೇ ಆರೋಪಿಯಾದ ಅರ್ಜಿದಾರನ ಸಹೋದರ ರವಿಚಂದ್ರ ಪೂಜಾರಿ ಜೈಲಿನಲ್ಲಿದ್ದುಕೊಂಡೇ, ಅರ್ಜಿದಾರನ ಹೆಸರಿನಲ್ಲಿದ್ದ ಸಿಮ್‌ಕಾರ್ಡ್ ಬಳಸಿ ದೂರುದಾರಿಗೆ ಬೆದರಿಕೆ ಕರೆ ಮಾಡಿರುವುದಾಗಿ ತಿಳಿದು ಬಂದಿದೆ ಎಂದು ತಿಳಿಸಿದೆ.
ಲಿಂಗರಾಜು ಹತ್ಯೆ: ಮಾಜಿ ಕಾರ್ಪೋರೇಟರ್ ಖುಲಾಸೆ
ಪ್ರಕರಣದ ಮೊದಲ ಆರೋಪಿ ಬನ್ನಂಜೆ ರಾಜ, ಅಪರಾಧ ಕೂಟ ನಡೆಸಿದ ಆರೋಪದಲ್ಲಿ ಶಿಕ್ಷೆಗೆ ಒಳಗಾಗಿದ್ದಾನೆ. ಬನ್ನಂಜೆ ರಾಜನನ್ನು ಆರೋಪಿ ಹಲವು ಬಾರಿ ಭೇಟಿಯಾಗಿದ್ದಾನೆ. ಅರ್ಜಿದಾರನು ಬನ್ನಂಜೆ ರಾಜನ ಅಪರಾಧ ಕೂಟದ ಭಾಗವಾಗಿದ್ದಾನೆ ಎಂದು ದೋಷಾರೋಪ ಪಟ್ಟಿಯಲ್ಲಿ ಹೇಳಲಾಗಿದೆ. ಸಂಘಟಿತ ಅಪರಾಧ ಕೂಟ ಮತ್ತು ಸಂಘಟಿತ ಅಪರಾಧ ಎಂದರೆ, ಅಪರಾಧ ಕೂಟ ಎಸಗುವ ಅಪರಾಧ ಮತ್ತು ಕೂಟದ ಭಾಗವಾಗಿರುವ ವ್ಯಕ್ತಿ ವೈಯಕ್ತಿಕವಾಗಿ ಎಸಗುವ ಅಪರಾಧ ಎನ್ನುವುದಾಗಿದೆ. ಹಾಗಾಗಿ, ಅರ್ಜಿದಾರ ಅಪರಾಧ ಕೂಟಕ್ಕೆ ವೈಯಕ್ತಿಕವಾಗಿ ಕೆಲಸ ಮಾಡಿದರೆ, ಆತನಿಗೆ ಕೋಕಾ ಕಾಯ್ದೆಯಡಿ ಶಿಕ್ಷೆ ವಿಧಿಸಬಹುದು. ಆದ್ದರಿಂದ ಆತನಿಗೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಆದೇಶದಲ್ಲಿ ನ್ಯಾಯಪೀಠ ನುಡಿದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ