
ಬೆಂಗಳೂರು (ಏ.18): ಯಕ್ಷಗಾನ, ಬಯಲಾಟ ಅಕಾಡೆಮಿ ಅಧ್ಯಕ್ಷ ಎಂ.ಎ.ಹೆಗಡೆ (74) ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.
ಏಪ್ರಿಲ್ 13 ರಂದು ಕೊರೋನಾ ಸೋಂಕು ತಗುಲಿದ್ದು, ತೀವ್ರ ಉಸಿರಾಟದ ತೊಂದರೆಯಿಂದ ಎಂ.ಎ.ಹೆಗಡೆ ಇಂದು ಬೆಳಗ್ಗೆ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.
ಎಂ.ಎ.ಹೆಗಡೆ ಅವರು ಸಿದ್ದಾಪುರ ತಾಲೂಕಿನ ಜೋಗಿಮನೆಯವರಾಗಿದ್ದು 1948ರಲ್ಲಿ ಜನಿಸಿದರು. ಇಲ್ಲಿನ ಹೆಗ್ಗರಣಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಹೆಗಡೆ ಅವರು ಶಿರಸಿಯಲ್ಲಿ ಪದವಿ ಪಡೆದು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಬಳಿಕ ಪ್ರಾಧ್ಯಾಪಕರಾಗಿಯೂ ಅವರು ಕಾರ್ಯನಿರ್ವಹಿಸಿದರು.
ಜನ ಜಾಗೃತಿ: ಸಾವಿರಾರು ಜನ ನೋಡಿದ್ರು ಕೊರೋನಾ ಯಕ್ಷಗಾನ..!
ಯಕ್ಷಗಾನ ಅವರ ಹವ್ಯಾಸವಾಗಿದ್ದು 11ನೇ ವಯಸ್ಸಿಗೆ ಯಕ್ಷ ರಂಗ ಪ್ರವೇಶಿಸಿ ಕೆರೆ ಮನೆ ಶಂಭು ಹೆಗಡೆ ಅವರ ಶಿಷ್ಯರಾದರು.ವಿವಿಧ ಮೇಳಗಳಲ್ಲಿ ಯಕ್ಷಗಾನ ಮಾಡಿರುವ ಅವರು ಯಕ್ಷಗಾನ, ಬಯಲಾಟ ಅಕಾಡೆಮಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು.
ಖ್ಯಾತ ಯಕ್ಷಗಾನ ಕಲಾವಿದ ತಿಮ್ಮಣ್ಣ ಯಾಜಿ ಇನ್ನಿಲ್ಲ .
ಅಲ್ಲದೇ ಎಂ.ಎ.ಹೆಗಡೆ ಅವರು ಅನೇಕ ಕೃತಿಗಳನ್ನು ರಚನೆ ಮಾಡಿದ್ದಾರೆ. ಬ್ರಹ್ಮಸೂತ್ರ ಚತುಃಸೂತ್ರಿ, ಅಲಂಕಾರತತ್ವ, ಭಾರತೀಯ ತತ್ವಶಾಸ್ತ್ರ ಪ್ರವೇಶ, ಕುಮಾರಿಲಭಟ್ಟ, ಶಬ್ದ ಮತ್ತು ಜಗತ್ತು, ಭಾರತೀಯ ದರ್ಶನಗಳು ಮತ್ತು ಭಾಷೆ, ಅಭಿನಯದರ್ಪಣ, ಧನ್ಯಾಲೋಕ ಮತ್ತು ಲೋಚನ ಸೇರಿದಂತೆ ಅನೇಕ ಕೃತಿ ರಚಿಸಿದ್ದಾರೆ.
ಹಿರಿಯ ಯಕ್ಷಗಾನ ಕಲಾವಿದ ಹಡಿನಬಾಳು ಶ್ರೀಪಾದ ಹೆಗಡೆ ಇನ್ನಿಲ್ಲ .
ಇವರ ಸಾಧನೆಗೆ ಸದಾನಂದ ಪ್ರಶಸ್ತಿ, ಶೇಣಿ ಪುರಸ್ಕಾರ, ಚಿಟ್ಟಾಣಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ.
ಮುಖ್ಯಮಂತ್ರಿ ಸಂತಾಪ : ಯಕ್ಷಗಾನ ಕ್ಷೇತ್ರದಲ್ಲಿ ಖ್ಯಾತ ಅರ್ಥಧಾರಿ ಹಾಗೂ ಪ್ರಸಂಗ ಕರ್ತೃಗಳೂ ಆಗಿದ್ದ ಎಂ.ಎ ಹೆಗಡೆ ನಿಧನ ತೀವ್ರ ನೋವುಂಟು ಮಾಡಿದೆ. ಭಗವಂತನು ಮೃತರ ಆತ್ಮಕ್ಕೆ ಸದ್ಗತಿಯನ್ನು ನೀಡಲಿ.
ಯಕ್ಷಗಾನವನ್ನು ಇನ್ನಷ್ಟು ಜನಪ್ರಿಯ ಗೊಳಿಸಲು ಹಾಗೂ ಕಲಾವಿದರ ಹಿತರಕ್ಷಣೆಗೆ ಶ್ರಮಿಸಿದ್ದರು. ಸಂಸ್ಕೃತ ವಿದ್ವಾಂಸರಾಗಿದ್ದ ಅವರು ಸಂಸ್ಕೃತ ಮತ್ತು ಯಕ್ಷಗಾನ ಕುರಿತು ರಚಿಸಿದ ಕೃತಿಗಳು ಅತ್ಯಂತ ಮೌಲಿಕವಾದುದು. ಅವರ ಕುಟುಂಬ ವರ್ಗ ಮತ್ತು ಅಭಿಮಾನಿ ಗಳಿಗೆ ಈ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಸಿಎಂ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ