ರಾಜ್ಯದ ಅರಣ್ಯ ಪ್ರದೇಶದಲ್ಲಿ ವರ್ಷದಿಂದ ವರ್ಷಕ್ಕೆ ಆನೆಗಳ ಸಾವಿನ ಪ್ರಮಾಣ ಹೆಚ್ಚುತ್ತಿದ್ದು, ಕಳೆದ ಮೂರು ವರ್ಷಗಳಲ್ಲಿ 283 ಆನೆಗಳು ಸಾವನ್ನಪ್ಪಿವೆ.
ಬೆಂಗಳೂರು (ಜು.27): ರಾಜ್ಯದ ಅರಣ್ಯ ಪ್ರದೇಶದಲ್ಲಿ ವರ್ಷದಿಂದ ವರ್ಷಕ್ಕೆ ಆನೆಗಳ ಸಾವಿನ ಪ್ರಮಾಣ ಹೆಚ್ಚುತ್ತಿದ್ದು, ಕಳೆದ ಮೂರು ವರ್ಷಗಳಲ್ಲಿ 283 ಆನೆಗಳು ಸಾವನ್ನಪ್ಪಿವೆ. ದೇಶದಲ್ಲಿ ಅತಿಹೆಚ್ಚು ಆನೆಗಳನ್ನು ಹೊಂದಿರುವ ರಾಜ್ಯ ಕರ್ನಾಟಕವಾಗಿದೆ.
ಕಳೆದ ವರ್ಷದ ಗಣತಿಯಂತೆ ರಾಜ್ಯದ ಅರಣ್ಯ ಪ್ರದೇಶಗಳಲ್ಲಿ 6,395 ಆನೆಗಳಿವೆ. ಆದರೆ, ರಾಜ್ಯದಲ್ಲಿ ಆನೆಗಳ ಸಾವಿನ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಅದರಂತೆ 2021-23ರಿಂದ 2024-25ರ ಜುಲೈವರೆಗೆ 285 ಆನೆಗಳು ಸಾವನ್ನಪ್ಪಿವೆ. ಈ ಮೂರು ವರ್ಷಗಳ ಪೈಕಿ 2023-24ರಲ್ಲಿಯೇ ಅತಿಹೆಚ್ಚು 94 ಆನೆಗಳು ಮೃತಪಟ್ಟಿರುವ ಕುರಿತು ವರದಿಯಾಗಿದೆ. ಅಲ್ಲದೆ, ಬಹುತೇಕ ಆನೆಗಳು ನೈಸರ್ಗಿಕವಾಗಿ ಅಂದರೆ ವಯೋಸಹಜವಾಗಿ ಸಾವನ್ನಪ್ಪಿರುವ ಸಂಖ್ಯೆ ಹೆಚ್ಚಿದೆ. ಉಳಿದಂತೆ ಎಲೆಕ್ಟ್ರಿಕ್ ಶಾಕ್ ಸೇರಿದಂತೆ ಇನ್ನಿತರ ಅನೈಸರ್ಗಿಕವಾಗಿ 30ಕ್ಕೂ ಹೆಚ್ಚಿನ ಆನೆಗಳು ಸಾವಿಗೀಡಾಗಿವೆ. ಹಾಗೆಯೇ, 6 ಆನೆಗಳು ಬೇಟೆಗೆ ಬಲಿಯಾಗಿದ್ದು, ಈ ಕುರಿತು ಅರಣ್ಯ ಇಲಾಖೆ ತನಿಖೆ ನಡೆಸುತ್ತಿದೆ.
ಚಾಮರಾಜನಗರ ಭಾಗದಲ್ಲಿ ಹೆಚ್ಚಿನ ಸಾವು: ಚಾಮರಾಜನಗರ ಅರಣ್ಯ ವಲಯ ವ್ಯಾಪ್ತಿಯಲ್ಲಿಯೇ ಅತಿ ಹೆಚ್ಚಿನ ಆನೆಗಳು ಸಾವನ್ನಪ್ಪಿವೆ. ಪ್ರಸಕ್ತ ವರ್ಷದ ಏಪ್ರಿಲ್‌ನಿಂದ ಈವರೆಗೆ ಆನೆ ಸಾವು ಪ್ರಕರಣ ಗಮನಿಸಿದರೆ ಚಾಮರಾಜನಗರ ಅರಣ್ಯ ವಲಯ ವ್ಯಾಪ್ತಿಯಲ್ಲಿಯೇ 17 ಆನೆಗಳು ಸಾವಿಗೀಡಾಗಿವೆ. ಉಳಿದಂತೆ ಕೊಡಗು 11, ಚಿಕ್ಕಮಗಳೂರು, ಮೈಸೂರು ವಲಯದಲ್ಲಿ ತಲಾ 2, ಕೆನರಾ, ಮಂಗಳೂರು ಮತ್ತು ಬೆಂಗಳೂರು ವಲಯ ವ್ತಾಪ್ತಿಯಲ್ಲಿ ತಲಾ 1 ಆನೆಗಳು ಮೃತಪಟ್ಟಿವೆ. ಒಟ್ಟಾರೆ ಈ ವರ್ಷದ ಏಪ್ರಿಲ್‌ನಿಂದ ಈವರೆಗೆ 35 ಆನೆಗಳು ಸಾವಿಗೀಡಾಗಿರುವ ಕುರಿತು ವರದಿಯಾಗಿದೆ.
ಮಾನವ-ಆನೆ ಸಂಘರ್ಷ ಕುರಿತು ಅಂತಾರಾಷ್ಟ್ರೀಯ ಸಮ್ಮೇಳನ: ಆನೆ ಸಾವು ಹಾಗೂ ಮಾನವ-ಆನೆ ಸಂಘರ್ಷದ ಕುರಿತು ಚರ್ಚಿಸಿ, ಪರಿಹಾರ ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಅರಣ್ಯ ಇಲಾಖೆ ಆ. 12ರಂದು ಮಾನವ-ಆನೆ ಸಂಘರ್ಷ ನಿರ್ವಹಣೆಯ ಕುರಿತು ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜಿಸಿದೆ. ಈ ಸಮ್ಮೇಳನದಲ್ಲಿ ಅರಣ್ಯ ಮತ್ತು ವನ್ಯಜೀವಿ ತಜ್ಞರಿಂದ ಉಪನ್ಯಾಸ ಇರಲಿದೆ. ಮಾನವ-ಆನೆ ಸಂಘರ್ಷಕ್ಕೆ ಕಾರಣಗಳು, ಅದರಿಂದಾಗುವ ಪರಿಣಾಮಗಳು ಮತ್ತು ಅದಕ್ಕೆ ಪರಿಹಾರಗಳ ಕುರಿತು ಚರ್ಚಿಸಲಾಗುತ್ತದೆ. ಹಾಗೆಯೇ, ಆನೆ ಸಾವು ನಿಯಂತ್ರಿಸುವುದು ಮತ್ತು ಅವುಗಳ ರಕ್ಷಣೆ ಕುರಿತಂತೆಯೂ ವಿಚಾರ ವಿನಿಮಯ ಮಾಡಿಕೊಳ್ಳಲಾಗುತ್ತದೆ. ಈ ಸಮ್ಮೇಳನವು ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ನಡೆಯಲಿದ್ದು, ದೇಶ-ವಿದೇಶಗಳ ತಜ್ಞರು ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಆನೆ ಸಾವಿನ ವಿವರ
ವರ್ಷ | ಸಾವಿನ ಸಂಖ್ಯೆ |
2021-22 | 82 |
2022-23 | 72 |
2023-24 | 94 |
2024-25 | 35 |
ಒಟ್ಟು | 283 |
ಮಾನವ-ಆನೆ ಸಂಘರ್ಷದಲ್ಲಿ ಸಾವು: ರಾಜ್ಯಕ್ಕೆ 7ನೇ ಸ್ಥಾನ
ಮಾನವ ಹಾಗೂ ಆನೆಗಳ ನಡುವಿನ ಸಂಘರ್ಷದಲ್ಲಿ ಕರ್ನಾಟಕದಲ್ಲಿ ಕಳೆದ 5 ವರ್ಷದಲ್ಲಿ 160 ಜನರು ಸಾವನ್ನಪ್ಪಿದ್ದಾರೆ. ಈ ಮೂಲಕ ದೇಶದಲ್ಲಿಯೇ 7ನೇ ಸ್ಥಾನ ಪಡೆದಿದೆ ಎಂದು ಅರಣ್ಯ ಖಾತೆ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ರಾಜ್ಯಸಭೆಗೆ ತಿಳಿಸಿದ್ದಾರೆ. ಕೇಂದ್ರ ಸರ್ಕಾರ ರಾಜ್ಯಸಭೆಗೆ ಮಾಹಿತಿ ನೀಡಿದೆ. ಕಳೆದ ಐದು ವರ್ಷದಲ್ಲಿ ದೇಶದಲ್ಲಿ ಒಟ್ಟು 2853 ಜನರು ಮಾನವ ಆನೆ ಸಂಘರ್ಷದಿಂದಾಗಿ ಮೃತಪಟ್ಟಿದ್ದಾರೆ. ಅದರಲ್ಲಿ ಕಳೆದ ವರ್ಷ ಅತಿ ಹೆಚ್ಚು 628 ಜನರು ಸಾವನ್ನಪ್ಪಿದ್ದಾರೆ.
ರಾಜ್ಯಗಳ ಲೆಕ್ಕಾಚಾರಕ್ಕೆ ಬಂದರೆ, ಒಡಿಶಾದಲ್ಲಿ ಅತಿ ಹೆಚ್ಚು 624, ಜಾರ್ಖಂಡ್‌ನಲ್ಲಿ 474, ಪಶ್ಚಿಮ ಬಂಗಾಳದಲ್ಲಿ 436, ಅಸ್ಸಾಂನಲ್ಲಿ 383, ಛತ್ತೀಸ್‌ಗಢದಲ್ಲಿ 303, ತಮಿಳುನಾಡಿನಲ್ಲಿ 256 ಹಾಗೂ ಕೇರಳದಲ್ಲಿ 124 ಜನರು ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ.