ಮಳೆಗಾಲದಲ್ಲಿಯೂ ಒಣಗಿನಿಂತ ಪಶ್ಚಿಮ ಘಟ್ಟದ ಕಾಡು, ನದಿಗಳು: ಇದು ಅರಣ್ಯನಾಶದ ಮರುಹೊಡೆತ

By Sathish Kumar KH  |  First Published Jun 29, 2023, 8:39 PM IST

ರಾಜ್ಯದಲ್ಲಿ ಮಳೆಗಾಲ ಆರಂಭವಾದರೂ ಪಶ್ಚಿಮ ಘಟ್ಟದಲ್ಲಿನ ಕಾಡು ಮತ್ತು ನದಿಗಳು ಒಣಗಿ ನಿಂತಿರುವುದಕ್ಕೆ ಪ್ರಮುಖ ಕಾರಣ ಉದ್ದೇಶಪೂರ್ವಕ ಅರಣ್ಯನಾಶದ ಮರುಹೊಡೆತ  ಎಂದು ಪರಿಸರ ತಜ್ಞರು ಹೇಳಿದ್ದಾರೆ.


ಚಿಕ್ಕಮಗಳೂರು (ಜೂ.29): ರಾಜ್ಯದಲ್ಲಿ ಮುಂಗಾರು ಮಳೆ ದುರ್ಬಲವಾಗಿದೆ. ಇನ್ನೇನು ಮಳೆ ಬರುತ್ತದೆ ಎಂದು ನಿರೀಕ್ಷೆ ಇಟ್ಟುಕೊಂಡಿದ್ದ ಮೊಡಗಳು ಮಳೆಯನ್ನು ಸುರಿಸದೇ ತುಂತುರು ಹನಿಸಿ ಸುರಿಸಿ ಕಣ್ಮರೆ ಆಗುತ್ತಿವೆ. ಬಯಲು ಪ್ರದೇಶವಿರಲಿ, 365 ದಿನವೂ ಹಚ್ಚ ಹಸಿರಾಗಿರಬೇಕಾದ ಪಶ್ಚಿಮ ಘಟ್ಟದ ಕಾಡುಗಳು ಒಣಗಿ ನಿಂತಿವೆ. ಮಳೆಗಾಲದಲ್ಲಿ ಭೋರ್ಗರೆದು ಹರಿಯುವ ನದಿಗಳು ಒಣಗಿ ನಿಂತಿದ್ದು, ಮಳೆಗಾಗಿ ಬಾಯ್ತೆರೆದು ಕೂತಿವೆ. ಇದಕ್ಕೆಲ್ಲ ಕಾರಣ ಉದ್ದೇಶಪೂರ್ವಕ ಅರಣ್ಯ ನಾಶದ ಮರುಹೊಡೆತ ಎಂದು ಪರಿಸರ ತಜ್ಞ ಕಾರ್ತಿಕ್‌ ಆದಿತ್ಯ ಬೆಳಗೋಡು ಹೀಗೆ ಬರೆದುಕೊಂಡಿದ್ದಾರೆ.

'ಇದೇನೂ ಹೊಸದಲ್ಲ, 1938 ರ ಸಮಯದಲ್ಲೂ ಮೂಡಿಗೆರೆಯಲ್ಲಿ ಕೇವಲ 28 ಇಂಚು ಮಳೆಯಾಗಿತ್ತು. ಸಾಮಾನ್ಯವಾಗಿ ಹತ್ತು ವರ್ಷಕ್ಕೊಮ್ಮೆ ಬರ ಬರೋದು , ಅತಿವೃಷ್ಟಿಯಾಗೋದು ದಾಖಲಾಗಿರುವ ಸಂಗತಿ'. ಎಂದು ಹಿರಿಯರೊಬ್ಬರು ಮಾತಾಡುತ್ತಾ ಅಂದಿದ್ದರು. ಇರಬಹುದು, ಹಿಂದೆ ಅತ್ಯಂತ ಕಡಿಮೆ ಮಳೆಯಾದ ದಾಖಲೆಗಳಿರಬಹುದು. ಆದರೆ ಗಮನಿಸಬೇಕಾದ ಸಂಗತಿಯೆಂದರೆ ಹಿಂದೆ ಈಗಿನಷ್ಟು ತಾಪಮಾನದಲ್ಲಿ ಏರಿಕೆಯಾಗಿರಲಿಲ್ಲ. ಇಷ್ಟೊಂದು ಅರಣ್ಯ ನಾಶ, ಕೈಗಾರಿಕೀಕರಣ, ನಗರೀಕರಣಗಳು ನಡೆದಿರಲಿಲ್ಲ. ವಾಡಿಕೆಯ ಮಳೆಯಲ್ಲಿ ವ್ಯತ್ಯಾಸವಾದರೂ ಮರುವರ್ಷ ಸಮತೋಲನಕ್ಕೆ ಬರುತ್ತಿತ್ತು. 

Tap to resize

Latest Videos

undefined

ತವರಿನಲ್ಲೇ ಸೊರಗಿದ ಕಾವೇರಿ: ಕೃಷಿ ಮಾತ್ರವಲ್ಲ, ಪ್ರವಾಸೋದ್ಯಮಕ್ಕೂ ಸಂಕಷ್ಟ

2002ರಲ್ಲಿಯೂ ಬರಗಾಲ ಬಂದಿತ್ತು: ಆದರೆ 2002ರ ನಂತರ ನಿಧಾನಕ್ಕೆ ಬದಲಾಗಲು ಪ್ರಾರಂಭಿಸಿದ ಪ್ರಕೃತಿಯ ಸ್ವರೂಪವು 2022ರ ಹೊತ್ತಿಗೆ ಅತಿರೇಕಕ್ಕೆ ತಲುಪಿ ಈ ವರ್ಷ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. 2002 ರಲ್ಲಿ ಇಂಥದ್ದೇ ಬರಗಾಲ. ನನಗಿನ್ನೂ ನೆನಪಿದೆ, ನಮ್ಮಲ್ಲಿ ಗದ್ದೆ ನಟ್ಟಿಯಾಗಿದ್ದು ಸೆಪ್ಟೆಂಬರ್ ಮಧ್ಯಭಾಗದ ಹೊತ್ತಿಗೆ. ಭತ್ತ ಕದಿರಾಗುವ ಕಾಲಕ್ಕೆ ನಾಟಿ ಮಾಡಿ ಫೆಬ್ರವರಿ ಹೊತ್ತಿಗೆ ಗದ್ದೆ ಕುಯ್ದಿದ್ದ ವರ್ಷವದು. ಆದರೆ ಆ ವರ್ಷ ಬಿದಿರಿಗೆ ಸಂಪೂರ್ಣವಾಗಿ ಕಟ್ಟೆ ಬಂದಿತ್ತು. ಇಡೀ ಕಾಡಿಗೆ ಕಾಡೇ ಒಣಗಿ ನಿಂತಿತ್ತು. ಬಿದಿರಿಗೆ ಕಟ್ಟೆ ಬಂದರೆ ಮುಂದಿನೈದು ವರ್ಷಗಳ ಕಾಲ ಬರಗಾಲ ಎಂದು ಜನಸಾಮಾನ್ಯರು ನಂಬಿಕೆಗಳ ಆಧಾರದಲ್ಲಿ ಮಾತನಾಡಿದರೆ, ತಜ್ಞರು, ಮೋಡ ಕಟ್ಟಲು ಪ್ರಕೃತಿಯಲ್ಲಿ ಬಿದಿರೇ ಅತ್ಯಂತ ನಿರ್ಣಾಯಕವಾಗಿರುವುದರಿಂದ ಮಳೆ ಕಮ್ಮಿಯಾಗುವುದು ಸಾಮಾನ್ಯ ಎಂದು ಹೇಳಿದ್ದರು. 

ಮಳೆ ಮಾರುತಗಳು ಒಂದುಗೂಡುತ್ತಿಲ್ಲ:  ಇನ್ನು ನದಿಗಳು ಬತ್ತುವುದು, ಅಣೆಕಟ್ಟೆಗಳು ಬರಿದಾಗುವುದು ಹೊಸದೇನಲ್ಲ. ಆದರೆ ಇತ್ತೀಚಿನ ಬೆಳವಣಿಗೆಯಲ್ಲಿ ಸಾಂಪ್ರದಾಯಿಕ ಮಳೆ ಮಾರುತಗಳೇ ಒಂದುಗೂಡುತ್ತಿಲ್ಲ. ನಾನು ಕಳೆದ ಎಂಟು ದಿನಗಳಿಂದ ಗಮನಿಸುತ್ತಿದ್ದೇನೆ, ಮಳೆ ಮೋಡಗಳು ಎಷ್ಟು ದುರ್ಬಲವಾಗಿವೆಯೆಂದರೆ, ವಾತಾವರಣವು ಬೆಳಿಗ್ಗೆಯಿದ್ದಂತೆ ಮಧ್ಯಾಹ್ನದ ಹೊತ್ತಿಗಿರುವುದಿಲ್ಲ.  ಒಂದು ದಿನ ಸಂಪೂರ್ಣ ಮೋಡಗಳು ಕವಿದುಕೊಂಡು ಇನ್ನೇನು ಮಳೆ ಹಿಡೀತು ಎಂದು ನಿಟ್ಟುಸಿರು ಬಿಡುವಷ್ಟರಲ್ಲಿ ಮರುದಿನ ಒಂದೂ ಮೋಡಗಳೂ ಇಲ್ಲದಂತೆ ಸಂಪೂರ್ಣ ತಿಳಿಯಾದ ಆಕಾಶ, ಜೊತೆಗೆ ಮತ್ತದೇ ಬಿಸಿಲು. ಹಿಂದೆಂದೂ ಇಂಥಾ ಬದಲಾವಣೆ ಮುಂಗಾರಿನ ಕಾಲಕ್ಕೆ ನಡೆದ್ದನ್ನು ನಾನು ಕಂಡಿಲ್ಲ. 

ಉದ್ದೇಶಪೂರ್ವಕ ಅರಣ್ಯ ನಾಶದ ಮರುಹೊಡೆತ:  ಕಳೆದ ವರ್ಷ ಸುರಿದಿರುವ ಬಹುತೇಕ ಮಳೆಯು ಸೈಕ್ಲೋನ್ ನ ಪ್ರಭಾವದಿಂದಾಗಿ ಎಂದು ಹವಾಮಾನ ವರದಿಗಳೇ ಹೇಳಿವೆ‌. ಅಂದರೆ ಈಗೀಗ ಸುರಿಯುತ್ತಿರುವ ಮಳೆಯು accidental ಅಷ್ಟೇ. ಇದೇ ಆತಂಕಕ್ಕೆ ಕಾರಣವಾಗಿರುವ ಸಂಗತಿ. ಹೀಗಾಗಿಯೇ ಮಳೆ ಸುರಿಯಲಾರಂಭಿಸಿದರೆ ವಿಪರೀತ ಸುರಿದು ಇಡೀ ವ್ಯವಸ್ಥೆಯನ್ನೇ ಅಲ್ಲೋಲ ಕಲ್ಲೋಲಗೊಳಿಸುತ್ತಿರುವುದು. ಪ್ರಕೃತಿಯ ಮೇಲೆ ಸಂಭವಿಸುತ್ತಿರುವ ಉದ್ದೇಶಪೂರ್ವಕ ಡ್ಯಾಮೇಜ್ ಗಳು ಹೆಚ್ಚುತ್ತಾ ಹೋಗುತ್ತಿರುವಂತೆ ಪ್ರಕೃತಿಯು ಕೂಡಾ ಅದನ್ನು ಈ ಮೊದಲಿನಂತೆ ಮನ್ನಿಸದೆ ಪ್ರತಿಯಾಗಿ ಉಗ್ರವಾಗಿಯೇ ಮರುಹೊಡೆತ ನೀಡಲಾರಂಭಿಸಿದೆ. 

ಅರಣ್ಯ ಜಾಗ ಕಬಳಿಸಿದರೆ ಹುಷಾರ್‌: ಖಂಡ್ರೆ ಎಚ್ಚರಿಕೆ

ಆದರೆ ಈ ಡ್ಯಾಮೇಜ್ ಸರ್ಕಾರವನ್ನಾಗಲಿ, ಜನರನ್ನಾಗಲಿ ಎಚ್ಚರಿಸುತ್ತಲೇ ಇಲ್ಲ. ಬದಲಾಗಿ ಜನ ಇನ್ನೂ ಕಪ್ಪೆಗೆ, ಕತ್ತೆಗೆ ಮದುವೆ ಮಾಡಿಸುವುದರಲ್ಲಿಯೇ, ಹೋಮ ಹವನ ನಡೆಸುವುದರಲ್ಲಿಯೇ ತಲ್ಲೀನರಾಗಿದ್ದಾರೆ. ಸರ್ಕಾರಕ್ಕಂತೂ ಪರಿಸರ ಆದ್ಯತೆಯ ವಿಷಯವೇ ಅಲ್ಲ. ಮನುಷ್ಯ ಶತಮೂರ್ಖನಾಗುವತ್ತ ವೇಗವಾಗಿ ಹೆಜ್ಜೆಯಿಡುತ್ತಿರುವ ಸಂಕೇತವಿದು. 

ಲೇಖನ: ಪಶ್ಚಿಮ ಘಟ್ಟಗಳು ಎಂಬ ಟ್ವಿಟರ್‌ ಪೇಜ್‌ನಿಂದ ಹಂಚಿಕೊಂಡ ಕಾರ್ತಿಕಾದಿತ್ಯ, ಬೆಳ್ಗೋಡು ಅವರ ಲೇಖನ.

ಶರಾವತಿ - Sharavati 💔 pic.twitter.com/dkmWyGt5ZA

— Western Ghats🌱ಪಶ್ಚಿಮ ಘಟ್ಟಗಳು (@TheWesternGhat)
click me!