ಮತಗಳ್ಳತನ ಆರೋಪ: ರಾಜ್ಯದ 1.12 ಕೋಟಿ ಜನರಿಂದ ಮತಚೋರಿ ಬಗ್ಗೆ ಕೈ ಸಹಿ ಸಂಗ್ರಹ!

Kannadaprabha News, Ravi Janekal |   | Kannada Prabha
Published : Nov 09, 2025, 07:31 AM IST
CM Siddaramaiah DK Shivakumar

ಸಾರಾಂಶ

ರಾಜ್ಯದಲ್ಲಿ ನಡೆದಿದೆ ಎನ್ನಲಾದ ಮತಗಳ್ಳತನದ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಜನಜಾಗೃತಿ ಅಭಿಯಾನ ಆರಂಭಿಸಿದ್ದಾರೆ. ಈ ಅಭಿಯಾನದ ಭಾಗವಾಗಿ 1.12 ಕೋಟಿ ಸಹಿ ಸಂಗ್ರಹಿಸಲಾಗಿದ್ದು, ಇದನ್ನು ರಾಷ್ಟ್ರಪತಿ ಮತ್ತು ಚುನಾವಣಾ ಆಯೋಗಕ್ಕೆ ಸಲ್ಲಿಸಲಿದೆ.

ಬೆಂಗಳೂರು (ನ.9): ದೇಶದ ಹಲವು ರಾಜ್ಯಗಳಲ್ಲಿ ಮತಗಳ್ಳತನ ನಡೆದಿದ್ದು, ಅದರ ವಿರುದ್ಧ ಜನಜಾಗೃತಿ ಮಾಡುವ ಉದ್ದೇಶದೊಂದಿಗೆ ರಾಜ್ಯದಲ್ಲಿ ಈವರೆಗೆ 1.12 ಕೋಟಿ ಜನರಿಂದ ಸಹಿ ಸಂಗ್ರಹ ಮಾಡಲಾಗಿದೆ. ನ. 10ರಂದು ಆ ಸಹಿಗಳನ್ನು ಎಐಸಿಸಿ ಕಚೇರಿಗೆ ತಲುಪಿಸಲಾಗುವುದು. ಅಲ್ಲಿಂಅದ ರಾಷ್ಟ್ರಪತಿ ಅವರು ಮತ್ತು ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿದ್ದರಾಮಯ್ಯ, ಮತದಾನವು ಪ್ರಜಾಪ್ರಭುತ್ವದ ಬುನಾದಿಯಾಗಿದೆ. ಸಂವಿಧಾನವು ಒಬ್ಬರಿಗೆ ಒಂದು ಮತದ ಹಕ್ಕನ್ನು ನೀಡಿದೆ. ಚುನಾವಣಾ ಆಯೋಗವು ಸ್ವತಂತ್ರ ಸಂಸ್ಥೆಯಾಗಿದ್ದರೂ, ಬಿಜೆಪಿಯ ಕೈಗೊಂಬೆಯಂತೆ ಕೆಲಸ ಮಾಡುತ್ತಿರುವ ಅನುಮಾನವಿದೆ. ಬಿಜೆಪಿ ಕೂಡ ಮತಗಳ್ಳತನ ಮಾಡುವಲ್ಲಿ ನಿಸ್ಸೀಮವಾಗಿದ್ದು, ಹಲವು ರಾಜ್ಯಗಳಲ್ಲಿ ಮತಗಳ್ಳತನದ ಮೂಲಕವೇ ಅಧಿಕಾರಕ್ಕೆ ಬಂದಿದೆ ಎಂದರು.

ಚುನಾವಣಾ ಅಕ್ರಮ ಸಾಕ್ಷಿಸಹಿತ ಬಯಲು:

ಬಿಜೆಪಿ ಮತ್ತು ಚುನಾವಣಾ ಆಯೋಗದ ಈ ಅಕ್ರಮವನ್ನು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಸಾಕ್ಷಿಸಹಿತ ಬಟಾಬಯಲು ಮಾಡಿದ್ದಾರೆ. ದೆಹಲಿ ಚುನಾವಣೆಯಲ್ಲಿ ಮತ ಚಲಾಯಿಸಿದ್ದ ಬಿಜೆಪಿ ನಾಯಕರು ಈಗ ಬಿಹಾರ ಚುನಾವಣೆಯಲ್ಲೂ ಮತದಾನ ಮಾಡಿದ್ದಾರೆ. ಇದು ಸಂವಿಧಾನಬಾಹಿರವಾಗಿದ್ದು, ಈ ಬಗ್ಗೆ ಚುನಾವಣಾ ಆಯೋಗ ಸ್ಪಷ್ಟನೆ ನೀಡಬೇಕು. ರಾಹುಲ್‌ ಗಾಂಧಿ ಅವರು ಮೊದಲಿಗೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಾಗಿರುವ ಮತಗಳ್ಳತನವನ್ನು ಬಯಲಿಗೆಳೆದಿದ್ದರು. ಆನಂತರ ಹಲವು ರಾಜ್ಯಗಳಲ್ಲಿ ಈ ರೀತಿ ಮತಗಳ್ಳತನ ಪತ್ತೆಯಾಗಿದೆ. ಸಂವಿಧಾನ, ಪ್ರಜಾಪ್ರಭುತ್ವ ವಿರುದ್ಧದ ಅಕ್ರಮದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಕಾಂಗ್ರೆಸ್‌ನ 40 ರಾಜಕೀಯ ಜಿಲ್ಲೆಗಳಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಸಲಾಗಿದೆ. ರಾಜ್ಯದಲ್ಲಿ ಒಟ್ಟು 1.12 ಕೋಟಿ ಸಹಿ ಸಂಗ್ರಹವಾಗಿದ್ದು, ಅವುಗಳನ್ನು ಎಐಸಿಸಿಗೆ ಕಳುಹಿಸಲಾಗುವುದು ಎಂದು ಹೇಳಿದರು.

ಆಳಂದ ಮತಗಳ್ಳತನ ನನಗೆ ಸಂಪೂರ್ಣ ಮಾಹಿತಿಯಿದೆ: ಡಿಕೆಶಿ

ಡಿ.ಕೆ. ಶಿವಕುಮಾರ್‌ ಮಾತನಾಡಿ, ರಾಜ್ಯದಲ್ಲಿ ಮಹದೇವಪುರ, ಆಳಂದ ಸೇರಿದಂತೆ ಇನ್ನಿತರ ವಿಧಾನಸಭಾ ಕ್ಷೇತ್ರಗಳಲ್ಲಿ ಸುಮಾರು 15 ಲಕ್ಷ ಮತಗಳ್ಳತನ ಆಗಿರುವ ಅನುಮಾನವಿದೆ. ಈ ಬಗ್ಗೆ ನನಗೆ ಸಂಪೂರ್ಣ ಮಾಹಿತಿಯಿದೆ. ಆಳಂದದಲ್ಲಿ ಮುಂಜಾನೆ 4 ಗಂಟೆಗೆ ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಇದು ಎಸ್‌ಐಟಿ ತನಿಖೆಯಲ್ಲೂ ಬಯಲಾಗುವ ಸಾಧ್ಯತೆಗಳಿವೆ. ಅಲ್ಲದೆ, ಬಿಜೆಪಿ ಪರಾಜಿತ ಅಭ್ಯರ್ಥಿಯೇ ಈ ಕೆಲಸ ಮಾಡಿದ್ದು ಎಂಬ ಬಗ್ಗೆ ದಾಖಲೆಗಳು ಲಭ್ಯವಾಗಿವೆ ಎಂಬ ಮಾಹಿತಿಯಿದೆ. ಈ ಮತಗಳ್ಳತನದ ವಿರುದ್ಧ ನಿರಂತರ ಅಭಿಯಾನ ನಡೆಸಲಾಗುವುದು. ಸಹಿ ಸಂಗ್ರಹವಷ್ಟೇ ಅಲ್ಲದೇ ರಾಜ್ಯದಲ್ಲಿ ಮತ್ತಿತರ ಕಾರ್ಯಕ್ರಮ ನಡೆಸಲಾಗುವುದು ಎಂದರು.

ಆಳಂದ ಕ್ಷೇತ್ರದಲ್ಲಿ ವಿಧಾನಸಭೆ ಚುನಾವಣೆಗೂ ಮುನ್ನ 2023ರ ಫೆ. 23ರಂದು 7,250 ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಗರುಡಾ ಆ್ಯಪ್‌ ಬಳಸಿ ಅನಧಿಕೃತ ವ್ಯಕ್ತಿಗಳು ಜಾರ್ಖಂಡ್‌, ಬಿಹಾರದಲ್ಲಿ ನೋಂದಣಿಯಾಗಿದ್ದ ಮೊಬೈಲ್‌ ಸಂಖ್ಯೆ ಬಳಸಿ ಮತದಾರರ ಹೆಸರನ್ನು ತೆಗೆದು ಹಾಕಿದ್ದಾರೆ. ಈ ಕುರಿತು ಮಾಹಿತಿ ನೀಡುವಂತೆ 12 ಬಾರಿ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರದ ಮೂಲಕ ಕೋರಿದ್ದರೂ ಯಾವುದೇ ಉತ್ತರ ಬಂದಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿ ತನಿಖೆ ನಡೆಸುತ್ತಿದೆ. ಉಳಿದ ಕಡೆಗಳಲ್ಲಿನ ಅಕ್ರಮಗಳ ಬಗ್ಗೆಯೂ ತನಿಖೆ ಮಾಡಲಾಗುತ್ತದೆ ಎಂದು ತಿಳಿಸಿದರು.

ನ. 25ಕ್ಕೆ ದೆಹಲಿಯಲ್ಲಿ ಸಮಾವೇಶ

ಮತಗಳ್ಳತನ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಹೀಗಾಗಿಯೇ ಎಐಸಿಸಿ ನಾಯಕರ ಸೂಚನೆ ಮೇರೆಗೆ ಸಹಿ ಸಂಗ್ರಹ ಮಾಡಲಾಗಿದ್ದು, ಈವರೆಗೆ ಒಟ್ಟು 1.12 ಕೋಟಿ ಸಹಿ ಸಂಗ್ರಹಿಸಲಾಗಿದೆ. ನ. 10ರಂದು ಅವುಗಳನ್ನು ಪಕ್ಷದ ಜಿಲ್ಲಾಧ್ಯಕ್ಷರು ವಿಮಾನದ ಮೂಲಕ ದೆಹಲಿಗೆ ತೆಗೆದುಕೊಂಡು ಹೋಗಿ, ಎಐಸಿಸಿ ಕಚೇರಿಗೆ ತಲುಪಿಸಲಿದ್ದಾರೆ. ಇನ್ನು, ಮತಗಳ್ಳನ ವಿರುದ್ಧ ನ. 25ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್‌ ಸಮಾವೇಶ ಮಾಡುವ ಕುರಿತು ಎಐಸಿಸಿ ನಾಯಕರು ನಿರ್ಧರಿಸಿದ್ದು, ಈ ಕುರಿತು ಶೀಘ್ರದಲ್ಲಿ ಅಧಿಕೃತ ಘೋಷಣೆ ಮಾಡಲಿದ್ದಾರೆ ಎಂದು ಡಿ.ಕೆ. ಶಿವಕುಮಾರ್‌ ವಿವರಿಸಿದರು.

ಜಿಬಿಎಗೆ ಬ್ಯಾಲೆಟ್‌ ಪೇಪರ್‌:

ಮತಗಳ್ಳತನ ತಡೆಗೆ ಸರ್ಕಾರದಿಂದೇನು ಕ್ರಮ ಎಂಬ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್‌, ಮತಗಳ್ಳತನ ತಡೆಯುವುದು ಚುನಾವಣಾ ಆಯೋಗದ ಕರ್ತವ್ಯ. ಅದನ್ನು ತೋರಿಸುವುದಷ್ಟೇ ನಮ್ಮ ಕೆಲಸ. ಇನ್ನು, ನಮ್ಮ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತಗಳ್ಳತನ ನಡೆಯದಂತೆ ತಡೆಯಲೆಂದೇ ಚುನಾವಣೆಯಲ್ಲಿ ಬ್ಯಾಲೆಟ್‌ ಪೇಪರ್‌ ಬಳಸಲು ನಿರ್ಧರಿಸಲಾಗಿದೆ. ಮುಂದಿನ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ 5 ನಗರ ಪಾಲಿಕೆಗಳ ಚುನಾವಣೆಯಲ್ಲಿ ಬ್ಯಾಲೆಟ್‌ ಪೇಪರ್‌ ಬಳಸಲಾಗುತ್ತದೆ ಎಂದು ಹೇಳಿದರು.

ಸಚಿವ ಸತೀಶ್‌ ಜಾರಕಿಹೊಳಿ, ವಿಧಾನಪರಿಷತ್‌ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹಮದ್‌, ಶಾಸಕರಾದ ಶಿವಣ್ಣ, ಎ.ಸಿ. ಶ್ರೀನಿವಾಸ್‌, ಎಐಸಿಸಿ ಕಾರ್ಯದರ್ಶಿ ಮನ್ಸೂರ್‌ ಅಲಿಖಾನ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್‌, ರಾಜ್ಯ ಯುವ ಕಾಂಗ್ರೆಸ್‌ ಅಧ್ಯಕ್ಷ ಮಂಜುನಾಥ್‌ ಗೌಡ ಇತರರಿದ್ದರು.

ವಾರದಲ್ಲಿ ನಿಗಮ ಮಂಡಳಿ ಸದಸ್ಯರ ನೇಮಕ

ಕಾರ್ಯಕರ್ತರಿಗೆ ನಿಗಮ-ಮಂಡಳಿ ಸದಸ್ಯರ ಸ್ಥಾನ ನೀಡುವ ಕುರಿತ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್‌, ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ನಂತರದಿಂದ ಈಗಾಗಲೇ 3 ಸಾವಿರ ಕಾರ್ಯಕರ್ತರಿಗೆ ಅಧಿಕಾರ ನೀಡಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಕನಿಷ್ಠ 60 ಜನರಿಗೆ ಅಧಿಕಾರ ಸಿಕ್ಕಿದೆ. ಇನ್ನು, ರಾಜ್ಯ ಮಟ್ಟದಲ್ಲಿ ನಿಗಮ-ಮಂಡಳಿಗಳಲ್ಲಿ 600 ಸ್ಥಾನಗಳನ್ನು ಭರ್ತಿ ಮಾಡಬೇಕಿದ್ದು, ಇನ್ನೊಂದು ವಾರದಲ್ಲಿ ನಿಗಮ-ಮಂಡಳಿ ಸದಸ್ಯರ ಹೆಸರು ಪ್ರಕಟಿಸಲಾಗುವುದು ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್