
ಮದ್ದೂರು (ನ.9): ಡೇರಿ ಕಾರ್ಯದರ್ಶಿಯೇ ಹಾಲಿಗೆ ನೀರು ಬೆರಸಿ ಕಳ್ಳಾಟವಾಡುತ್ತಿದ್ದ ಹಿನ್ನೆಲೆಯಲ್ಲಿ ತಾಲೂಕಿನ ಕಡಿಲುವಾಗಿಲು ಗ್ರಾಮದ ಬಿಎಂಸಿ ಕೇಂದ್ರವನ್ನು ರದ್ದು ಪಡಿಸಿ ಜಿಲ್ಲಾ ಹಾಲು ಒಕ್ಕೂಟ ಆದೇಶ ಹೊರಡಿಸಿದೆ. ಈ ಆದೇಶಕ್ಕೆ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.
ಕಳೆದ ತಿಂಗಳು ಗ್ರಾಮದ ಬಿಎಂಸಿ ಕೇಂದ್ರದಲ್ಲಿ ಕಾರ್ಯದರ್ಶಿಯೇ ಹಾಲಿಗೆ ನೀರು ಬೆರೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವಿಡಿಯೋ ವೈರಲ್ ಆದ ಬಳಿಕವೂ ಆಡಳಿತ ಮಂಡಳಿ ಆತನ ವಿರುದ್ಧ ಕ್ರಮ ಕೈಗೊಳ್ಳದೆ ಮುಂದುವರೆಸಿತ್ತು. ನಂತರ ಕೆಲವರು ಕಾರ್ಯದರ್ಶಿ ವಿರುದ್ಧ ಮನ್ಮುಲ್‌ಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಮನ್ಮುಲ್‌ನಿಂದ ಕಡಿಲುವಾಗಿಲು ಗ್ರಾಮದ ಬಿಎಂಸಿ ಕೇಂದ್ರ ರದ್ದು ಮಾಡಿ ಆದೇಶ ಹೊರಡಿಸಿರುವುದನ್ನು ಕಂಡಿಸಿ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಹಾಲಿಗೆ ನೀರು ಬೆರಸಿದ ಕಾರ್ಯದರ್ಶಿಯನ್ನು ವಜಾ ಮಾಡಿ ಬಿಎಂಸಿ ಕೇಂದ್ರ ಉಳಿಸಿ ಕೊಡುವಂತೆ ಗ್ರಾಮದ ಹಾಲು ಉತ್ಪಾದಕರು ಡೇರಿ ಎದುರು ಪ್ರತಿಭಟನೆ ನಡೆಸಿದರು. ನಂತರ ಕಾರ್ಯದರ್ಶಿ ಶಿವರಾಜ್ ಸಂಬಂಧಿಕರು ವಿಡಿಯೋ ವೈರಲ್ ಮಾಡಿದ ವೆಂಕಟರಾಜು ಎಂಬ ಯುವಕನ ಮೇಲೆ ಹಲ್ಲೆ ನಡೆಸಿದ್ದು, ಕಾರ್ಯದರ್ಶಿ ಶಿವರಾಜು ಹಾಗೂ ಸಂಬಂಧಿಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಶಿವರಾಜು ಸೇರಿ ಸಂಬಂಧಕರ ವಿರುದ್ಧ ಕೆ.ಎಂ.ದೊಡ್ಡಿ ಪೊಲೀಸರಿಗೆ ಗ್ರಾಮಸ್ಥರು ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಪ್ಲೈವುಡ್ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ ಅವಘಡ
ಮಳವಳ್ಳಿ: ಪಟ್ಟಣದ ಸುಲ್ತಾನ್ ರಸ್ತೆಯ ಪ್ಲೈವುಡ್ ಅಂಗಡಿಯಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಆಕಸ್ಮಿಕ ಬೆಂಕಿ ಅವಘಡದಿಂದ ಸಂಪೂರ್ಣ ಭಸ್ಮಗೊಂಡಿದೆ.
ಸುಲ್ತಾನ್ ರಸ್ತೆಯ ಎಸ್‌ಎಲ್ವಿ ಹಾರ್ಡ್ ವೇರ್ ಅಂಡ್ ಪ್ಲೈವುಡ್ ಬೆಂಕಿಗೆ ಆಹುತಿಯಾಗಿದ್ದು, ರಾತ್ರಿ 8:30ರ ವೇಳೆಗೆ ಅಂಗಡಿ ಮಾಲೀಕ ಶ್ರೀನಿವಾಸ್ ಬಾಗಿಲು ಮುಚ್ಚಿ ಮನೆಗೆ ತೆರಳಿದ್ದರು. ಕೆಲವೇ ನಿಮಿಷಗಳಲ್ಲಿ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಅಂಗಡಿಯಲ್ಲಿ ಪ್ಲೈವುಡ್ ಸೇರಿದಂತೆ ಆಯಿಲ್ ಮಿಶ್ರಿತ ಸಾಮಾಗ್ರಿಗಳು ಇದ್ದದ್ದರಿಂದ ಬೆಂಕಿಯ ಕೆನ್ನಾಗಿಗೆ ಆಕಾಶದ ಎತ್ತರಕ್ಕೆ ಚಿಮ್ಮಿತ್ತಿತ್ತು. ವಿಷಯ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸಲು ಯತ್ನಿಸುತ್ತಿದ್ದರೂ ಬೆಂಕಿಯು ವ್ಯಾಪಕವಾಗಿ ಹರಡುತ್ತಿದೆ. ಲಕ್ಷಾಂತರ ರು ಮೌಲ್ಯದ ವಸ್ತುಗಳು ಬೆಂಕಿಯಿಂದ ಸುಟ್ಟು ಭಸ್ಮವಾಗಿವೆ.
ಜೆಸಿಬಿ ಬಳಸಿ ಅಂಗಡಿ ಮುಂಭಾಗದ ಶಟರ್ ಗಳನ್ನು ತೆರವುಗೊಳಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಬೆಂಕಿ ಅವಘಡ ವನ್ನು ನೋಡಲು ನೂರಾರು ಜನ ಜಮಾಯಿಸಿದರು.
ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ