ಓಲಾ ಉಬರ್ ಆಟೋ ಸೇವೆ ಸ್ಥಗಿತಗೊಳಿಸುವ ಆದೇಶದ ವಿರುದ್ಧ ಟಾಕ್ಸಿ ಕಂಪನಿಗಳು ಹೈಕೋರ್ಟ್ ಮೆಟ್ಟಿಲೇರಿದೆ. ಇತ್ತ ಸಾರಿಗೆ ಇಲಾಖೆ , ಒಲಾ , ಉಬರ್ ಜೊತೆ ಮಹತ್ವದ ಸಭೆ ನಡೆಸಿದೆ. ಈ ಸಭೆಯ ಹೈಲೈಟ್ಸ್ ಇಲ್ಲಿದೆ.
ಬೆಂಗಳೂರು(ಸೆ.13): ಓಲಾ, ಉಬರ್, ರ್‍ಯಾಪಿಡೋ ಎಷ್ಟು ಆಟೋವನ್ನು ಓಡಿಸುತ್ತಿದ್ದಾರೆ? ಕಿಲೋಮೀಟರ್‌ಗೆ ಎಷ್ಟು ಚಾರ್ಜ್ ಮಾಡಲಾಗುತ್ತದೆ? ಯಾವ ಮಾನದಂಡದಲ್ಲಿ ದರಗಳನ್ನು ನಿಗಧಿಪಡಿಸಲಾಗಿದೆ? ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ರಾಜ್ಯ ಸಾರಿಗೆ ಇಲಾಖೆ ಒಲಾ, ಉಬರ್, ರ್‍ಯಾಪಿಡೋ ಬಳಿ ಕೇಳಿದೆ. ಈ ಕುರಿತ ವರದಿ ನೀಡುವಂತೆ ಸೂಚಿಸಿದೆ. ಆಟೋ ಸೇವೆ ಸ್ಥಗಿತಗೊಳಿಸುವ ಆದೇಶದ ಬಳಿಕ ಇಂದು ಟ್ಯಾಕ್ಸಿ ಕಂಪನಿಗಳ ಜೊತೆ ಸಾರಿಗೆ ಇಲಾಖೆ ಮಹತ್ವದ ಸಭೆ ನಡೆಸಿದೆ. ಈ ಸಭೆಯಲ್ಲಿ ಪರವಾನಗಿ ಕುರಿತು ಯಾವುದೇ ಚರ್ಚೆ ಮಾಡದ ಅಧಿಕಾರಿಗಳು ಕೇವಲ ದರದ ಕುರಿತು ಚರ್ಚೆ ನಡೆಸಿಸಭೆ ಮುಗಿಸಿದೆ. ಸಾರಿಗೆ ಕಾರ್ಯದರ್ಶಿ ಎನ್ ವಿ ಪ್ರಸಾದ್ ನೇತೃತ್ವದ ಸಭೆ ನಡೆಸಲಾಗಿದೆ.
ಕಾನೂನುಬಾಹಿರವಾಗಿ ನಡೆಯುತ್ತಿರುವ ಓಲಾ, ಉಬರ್, ರ್‍ಯಾಪಿಡೋ ಆಟೋ ಸೇವೆ ನಿಷೇಧಿಸಲು ಸಾರಿಗೆ ಇಲಾಖೆ ಆದೇಶ ನೀಡಿತ್ತು. ಇದರ ವಿರುದ್ದ ಕೋರ್ಟ್ ಟ್ಯಾಕ್ಸಿ ಸಂಸ್ಥೆಗಳು ಹೈಕೋರ್ಟ್ ಮೆಟ್ಟಿಲೇರಿದೆ. ಈ ಕುರಿತು ಓಲಾ- ಊಬರ್ ಕಂಪನಿಗಳ ಆಟೋ ಸಂಚಾರಕ್ಕೆ ದರ ನಿಗಧಿ ಮಾಡಿ ಕೋರ್ಟ್ ಗೆ ಪ್ರಪೋಸಲ್ ನೀಡುವಂತೆ ಸೂಚನೆ ನೀಡಲಾಗಿದೆ. ಇದರ ಹಿನ್ನಲೆಯಲ್ಲಿ ಸಾರಿಗೆ ಇಲಾಖೆ ಟ್ಯಾಕ್ಸಿ ಸಂಸ್ಥೆಗಳ ಜೊತೆ ಸಭೆ ನಡೆಸಿದೆ. ಈ ವೇಳೆ ದರದ ಕುರಿತು ಮಾಹಿತಿ ಕೇಳಿದೆ. ಟ್ಯಾಕ್ಸಿ ಸೇವೆ ನೀಡುವ ಕಂಪನಿಗಳ ದರದ ಮಾಹಿತಿ ಪಡೆದು ಬಳಿಕ ಕೋರ್ಟ್‌ಗೆ ಹೊಸ ಪ್ರಸ್ತಾವನೆ ಸಾರಿಗೆ ಇಲಾಖೆ ಸಲ್ಲಿಸಲಿದೆ.
ನಿತ್ಯ 10 ಕೋಟಿ ರೂ. ಬಾಚುತ್ತಿರುವ ಓಲಾ, ಉಬರ್!
ಅಗ್ರಿಗೇಟರ್ ನಿಯಮದಡಿ ಸೇವೆ ನೀಡುತ್ತಿರುವ ಟ್ಯಾಕ್ಸಿ ಸಂಸ್ಥೆಗಳು ಇದೀಗ ಒಕ್ಕೊರಲಿನಿಂದ 2021ರ ಅಧಿನಿಯಮದ ಪ್ರಕಾರ ದರ ನಿಗದಿ ಮಾಡಲು ಸಾರಿಗೆ ಇಲಾಖೆಯನ್ನು ಒತ್ತಾಯಿಸಿದೆ. 2021ರ ಎಪ್ರಿಲ್ ತಿಂಗಳಲ್ಲಿ ಸಾರಿಗೆ ಇಲಾಖೆ ಹೊರಡಿಸಿರುವ ಅಧಿಸೂಚನೆಯಂತೆ ದರ ನಿಗದಿ ಮಾಡಲು ಆ್ಯಪ್ ಆಧಾರಿತ ಕಂಪನಿಗಳು ಸಾರಿಗೆ ಇಲಾಖೆಯನ್ನು ಆಗ್ರಹಿಸಿದೆ.
ಇತ್ತ ಆದೇಶ ಜಾರಿಯಲ್ಲಿದ್ದರೂ ಓಲಾ, ಉಬರ್, ರ್‍ಯಾಪಿಡೋ ಆಟೋ ಸೇವೆ ಸಿಗುತ್ತಿದೆ. ಆದೇಶಕ್ಕೂ ಕ್ಯಾರೇ ಅನ್ನದೆ ಸೇವೆ ನೀಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಸಾರಿಗೆ ಇಲಾಖೆ ಸಹಾಯವಾಣಿ ಆರಂಭಿಸಿದೆ. ಬುಧವಾರದಿಂದ ಜಾರಿಗೆ ಬರುವಂತೆ ರಾಜ್ಯದಲ್ಲಿ ಆ್ಯಪ್ ಆಧರಿತ ಆಟೋ ಸೇವೆಯನ್ನು ನಿಷೇಧಿಸಿರುವ ರಾಜ್ಯ ಸರ್ಕಾರ, ಈ ಸಂಬಂಧ ದೂರು ನೀಡಲು ಸಹಾಯವಾಣಿ ಆರಂಭಿಸಿದೆ. ಎಲ್ಲೇ ಆದರೂ ಓಲಾ, ಉಬರ್ ಹಾಗೂ ರಾರಯಪಿಡೋ ಆಟೋರಿಕ್ಷಾ ಓಡಾಟ ಕಂಡುಬಂದರೆ ಸಾರಿಗೆ ಇಲಾಖೆ ಸಹಾಯವಾಣಿಗೆ ಕರೆ ಮಾಡಿ ಸಾರ್ವಜನಿಕರು ದೂರು ನೀಡಬಹುದು. ಶೀಘ್ರದಲ್ಲಿಯೇ ವ್ಯಾಟ್ಸಾಪ್ ಸಹ ಆರಂಭಿಸಲಾಗುವುದು. ಆ ದೂರನ್ನು ಆಧರಿಸಿ ಕಂಪನಿಗಳಿಗೆ ದಂಡ ವಿಧಿಸಲಾಗುತ್ತದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಬೊಮ್ಮಾಯಿ ಸರ್ಕಾರಕ್ಕೆ ಓಲಾ, ಉಬರ್ ಡೋಂಟ್‌ಕೇರ್!
ಕಾನೂನುಬಾಹಿರವಾಗಿ ನೀಡಲಾಗುತ್ತಿರುವ ಆ್ಯಪ್ ಆಧರಿತ ಆಟೋರಿಕ್ಷಾ ಸೇವೆಯನ್ನು ಬುಧವಾರದಿಂದ ಕಡ್ಡಾಯವಾಗಿ ಸ್ಥಗಿತಗೊಳಿಸಬೇಕು ಎಂದು ಓಲಾ, ಉಬರ್ ಹಾಗೂ ರಾರಯಪಿಡೋ ಸಂಸ್ಥೆಗಳಿಗೆ ರಾಜ್ಯ ಸಾರಿಗೆ ಇಲಾಖೆ ಸೂಚಿಸಿದೆ. ಒಂದು ವೇಳೆ ಆ್ಯಪ್ ಆಧಾರಿತ ಆಟೋ ರಿಕ್ಷಾ ಓಡಾಟ ನಡೆಸಿದರೆ ಪ್ರತಿ ಆಟೋಗೆ ಐದು ಸಾವಿರ ರು. ದಂಡವನ್ನು ವಿಧಿಸಿ, ಆ ದಂಡವನ್ನು ಆಯಾ ಕಂಪನಿಗಳಿಂದ ವಸೂಲಿ ಮಾಡಲಾಗುವುದು ಎಚ್ಚರಿಕೆ ನೀಡಿದೆ.