ನಿತ್ಯ 10 ಕೋಟಿ ರೂ. ಬಾಚುತ್ತಿರುವ ಓಲಾ, ಉಬರ್!
- ನಿತ್ಯ .10 ಕೋಟಿ ಬಾಚುತ್ತಿರುವ ಓಲಾ, ಉಬರ್!
- 1 ಲಕ್ಷ ಆಟೋ, 40 ಸಾವಿರ ಕಾರು ಓಡಾಟ
- ಪ್ರತಿ ಆಟೋದಿಂದ ಕನಿಷ್ಠ .500, ಕ್ಯಾಬ್‌ನಿಂದ ಕನಿಷ್ಠ .1000 ಕಮಿಷನ್
- ಲೈಸೆನ್ಸ್ ಇಲ್ಲದೆ ಆಟೋ ಸೇವೆ ನೀಡಿತ್ತಾ ಕೋಟ್ಯಂತರ ರುಪಾಯಿ ಆದಾಯ: ಆಟೋ, ಕ್ಯಾಬ್ ಚಾಲಕರ ಯೂನಿಯನ್ಸ್
ಜಯಪ್ರಕಾಶ್ ಬಿರಾದಾರ್
ಬೆಂಗಳೂರು (ಅ.13) : ಪರವಾನಗಿ ಪಡೆಯದೇ ಅನಧಿಕೃತವಾಗಿ ಆಟೋರಿಕ್ಷಾ ಸೇವೆ ನೀಡುತ್ತಿರುವ ಓಲಾ, ಉಬರ್ ಆ್ಯಪ್ ಕಂಪನಿಗಳು ಇದರಿಂದಲೇ ರಾಜಧಾನಿ ಬೆಂಗಳೂರಿನಲ್ಲಿ ನಿತ್ಯ ಅಂದಾಜು 5ರಿಂದ 6 ಕೋಟಿ ರುಪಾಯಿ ಆದಾಯ ಗಳಿಸುತ್ತಿವೆ ಎಂದು ಆಟೋ ಚಾಲಕ ಯೂನಿಯನ್‌ಗಳು ಆರೋಪಿಸುತ್ತಿವೆ.
ಆಟೋ ಹತ್ತಿದ್ರೆ 100 ರೂಪಾಯಿ, ಜನರ ರಕ್ತ ಹೀರುವ ಓಲಾ, ಊಬರ್‌ಗೆ ಸಾರಿಗೆ ಇಲಾಖೆ ನೋಟಿಸ್!
ಇತ್ತ ಕ್ಯಾಬ್ ಸೇವೆ ನೀಡಲು ಈ ಕಂಪನಿಗಳು ಪಡೆದಿರುವ ಪರವಾನಗಿಯೂ ಮುಗಿದು ಒಂದು ವರ್ಷ ಕಳೆದಿದ್ದು, ಈ ಕ್ಯಾಬ್ ಸೇವೆಯಿಂದಲೇ ನಿತ್ಯ .4 ಕೋಟಿ ಆದಾಯ ಪಡೆಯುತ್ತಿದ್ದಾರೆ. ಈ ಮೂಲಕ ಅನಧಿಕೃತವಾಗಿ ಉದ್ಯಮ ನಡೆಸುತ್ತಾ, ಚಾಲಕರು ಮತ್ತು ಸಾರ್ವಜನಿಕರಿಗೆ ಪ್ರಯಾಣ ದರ ವಂಚನೆ ಮಾಡುತ್ತಾ ಓಲಾ, ಉಬರ್ ಕಂಪನಿಗಳು ಬೆಂಗಳೂರಿನಲ್ಲಿ ಆಟೋ, ಕ್ಯಾಬ್ ಸೇವೆಯಲ್ಲಿ ಸೇರಿ ನಿತ್ಯ .10 ಕೋಟಿಗೂ ಅಧಿಕ ಆದಾಯವನ್ನು ಬಾಚುತ್ತಿವೆ.
ಸದ್ಯ ಓಲಾ ಮತ್ತು ಉಬರ್ ಆ್ಯಪ್ ಸಂಸ್ಥೆಗಳು ಆಟೋರಿಕ್ಷಾ ಚಾಲಕರಿಂದ ಪ್ರಯಾಣದ ದರದಲ್ಲಿ ಶೇಕಡ 30 ಕಮಿಷನ್, ನಿತ್ಯ .20 ಪ್ಲಾಟ್‌ಫಾರಂ ಶುಲ್ಕ ಹಾಗೂ ಸರ್‌ಚಾಜ್‌ರ್ (ದಟ್ಟಣೆ/ಬೇಡಿಕೆ ಅವಧಿಯ ಹೆಚ್ಚುವರಿ ದರದ ಮೊತ್ತ) ಸಂಪೂರ್ಣ ಮೊತ್ತ ಪಡೆಯುತ್ತವೆ. ಪ್ರತಿನಿತ್ಯ ಒಂದು ಆಟೋರಿಕ್ಷಾ ಚಾಲಕರು 10 ಟ್ರಿಪ್ ಮಾಡಬೇಕು. ಪ್ರೋತ್ಸಾಹ ಧನ ಬೇಕೆಂದರೆ 20 ಟ್ರಿಪ್ ಮಾಡಬೇಕು. ಈ ಮೂಲಕ ಒಂದು ಆಟೋರಿಕ್ಷಾದಿಂದ ಕನಿಷ್ಠ .500ರಿಂದ ಗರಿಷ್ಠ .800 ಆದಾಯ ಪಡೆಯುತ್ತಿದೆ. ಸದ್ಯ ನಗರದಲ್ಲಿ 1.1 ಲಕ್ಷ ಆಟೋಗಳು ಓಲಾ ಮತ್ತು ಉಬರ್ ಜತೆ ಒಪ್ಪಂದದೊಂದಿಗೆ ಕಾರ್ಯಾಚರಣೆ ನಡೆಸುತ್ತಿವೆ. ಈ ಲೆಕ್ಕಚಾರದಂತೆ ನಿತ್ಯ ಆಟೋರಿಕ್ಷಾ ಸೇವೆಯಿಂದಲೇ ಈ ಕಂಪನಿಗಳಿಗೆ 5ರಿಂದ 6 ಕೋಟಿ ರು. ಆದಾಯ ಬರುತ್ತಿದೆ ಎಂಬುದು ಆಟೋಚಾಲಕ ಯೂನಿಯನ್‌ಗಳ ವಿವರಣೆ.
ಕ್ಯಾಬ್‌ಗಳಿಂದ 4 ಕೋಟಿ ಆದಾಯ:
ಸದ್ಯ ನಗರದಲ್ಲಿ 40 ಸಾವಿರ ಕಾರುಗಳು ಓಲಾ ಮತ್ತು ಉಬರ್ ಜತೆ ಒಪ್ಪಂದದೊಂದಿಗೆ ಕಾರ್ಯಾಚರಣೆ ನಡೆಸುತ್ತಿವೆ. ಕ್ಯಾಬ್‌ಗಳಿಗೆ ಸರ್ಕಾರ ನಿಗದಿ ಪಡಿಸಿದಂತೆ ಕನಿಷ್ಠ ದರ ಪ್ರತಿ ಕಿ.ಮೀ. .21 ನೀಡುತ್ತಿದ್ದಾರೆ. ಉಳಿದ ಹಣವನ್ನು ಕಂಪನಿಗಳೇ ಉಳಿಸಿಕೊಳ್ಳುತ್ತಿವೆ. ಪ್ರತಿ ಕ್ಯಾಬ್‌ಗಳಿಂದ ಕಮಿಷನ್, ಸರ್‌ಜಾಜ್‌ರ್ ಸೇರಿ ಕನಿಷ್ಠ .1000 ಆದಾಯವನ್ನು ಆ್ಯಪ್ ಕಂಪನಿಗಳು ಪಡೆಯುತ್ತಿವೆ. ಈ ಲೆಕ್ಕಾಚಾರದಂತೆ 40 ಸಾವಿರ ಕ್ಯಾಬ್‌ಗಳಿಂದ ನಿತ್ಯ ನಾಲ್ಕು ಕೋಟಿ ರು.ಗಿಂತಲೂ ಅಧಿಕ ಆದಾಯ ಆ್ಯಪ್‌ಗಳ ಪಾಲಾಗುತ್ತಿದೆ ಎಂದು ಓಲಾ, ಉಬರ್ ಅಸೋಸಿಯೇಷನ್ ಪದಾಧಿಕಾರಿಗಳು ಹೇಳುತ್ತಿದ್ದಾರೆ.
ಸಾರ್ವಜನಿಕರಿಗೆ ಮಾತ್ರ ದಂಡ, ಕಂಪನಿಗಳ ದೌರ್ಜನ್ಯ ನಿರ್ಲಕ್ಷ್ಯ
‘ಕರ್ನಾಟಕ ರಾಜ್ಯ ಬೇಡಿಕೆ ಆಧಾರಿತ ಸಾರಿಗೆ ತಂತ್ರಜ್ಞಾನ ನಿಯಮ-2016’ರ ಪ್ರಕಾರ ರಾಜ್ಯದಲ್ಲಿ ಆ್ಯಪ್ ಆಧಾರಿತ (ಅಗ್ರಿಗೇಟರ್ಸ್)ನಲ್ಲಿ ಆಟೋರಿಕ್ಷಾ ಸೇವೆಗೆ ಅನುಮತಿಯೇ ಇಲ್ಲ. ಆದರೂ, ಕಳೆದ ಐದು ವರ್ಷದಿಂದ ಓಲಾ, ಒಂದೂವರೆ ವರ್ಷದಿಂದೀಚೆಗೆ ಉಬರ್ ಆಟೋ ಸೇವೆ ಲಭ್ಯವಿದೆ. ಸಾರಿಗೆ ಇಲಾಖೆಯು ಸಾರ್ವಜನಿಕರು ನಿಯಮ ಉಲ್ಲಂಘಿಸಿದರೆ ಸಾವಿರಾರು ರುಪಾಯಿ ದಂಡ ಹಾಕಿ ವಾಹನ ಜಪ್ತಿ, ಜೈಲು ಶಿಕ್ಷೆಯಂತಹ ಕ್ರಮಕೈಗೊಳ್ಳುತ್ತದೆ. ಆದರೆ, ಪರವಾನಗಿ ಪಡೆಯದೇ ಆಟೋರಿಕ್ಷಾ ಬಳಸಿಕೊಂಡು ಉದ್ಯಮ ನಡೆಸುತ್ತಾ ಚಾಲಕರು ಮತ್ತು ಸಾರ್ವಜನಿಕರಿಗೆ ಪ್ರಯಾಣ ದರ ವಂಚನೆ ಮಾಡುತ್ತಾ ನಿತ್ಯ ಕೋಟ್ಯಂತರ ಆದಾಯಗಳಿಸುತ್ತಿರುವ ಓಲಾ, ಉಬರ್ ಕಂಪನಿಗಳ ವಿರುದ್ಧ ಸಾರಿಗೆ ಇಲಾಖೆ ಅಥವಾ ರಾಜ್ಯ ಸರ್ಕಾರ ಯಾವುದೇ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳತ್ತಿಲ್ಲ. ಅಕ್ರಮ ಆದಾಯಕ್ಕೆ ನೆರವು ನಿಡುತ್ತಿವೆ ಎಂದು ಸಾರ್ವಜನಿಕರು, ಆಟೋ ಚಾಲಕರ ಸಂಘಗಳು ಸಾರಿಗೆ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಓಲಾ ಕಾರಿಗೆ ‘ಬೈಕ್ ವಿಮೆ’ ಮಾಡಿಸಿ ಮಾರಿದ ಭೂಪನ ಬಂಧನ..!
ಒಂದು ಲಕ್ಷಕ್ಕೂ ಅಧಿಕ ಆಟೋಗಳು ಓಲಾ, ಉಬರ್ ಜತೆ ಒಪ್ಪಂದೊಂದಿಗೆ ಓಡಾಟ ನಡೆಸುತ್ತಿದ್ದು, ಕನಿಷ್ಠ ಒಂದು ಆಟೋದಿಂದ .500ರಿಂದ .800 ಕಂಪನಿಗೆ ಹೋಗುತ್ತಿದೆ. ಚಾಲಕರ ಶ್ರಮದಲ್ಲಿ ಕೋಟ್ಯಂತರ ರುಪಾಯಿ ಆದಾಯ ಕಂಪನಿಗೆ ಸೇರುತ್ತಿದೆ. ಆದರೆ, ಸಾರ್ವಜನಿಕರ ದೃಷ್ಟಿಯಲ್ಲಿ ಚಾಲಕರೇ ತಪ್ಪಿತಸ್ಥರು/ವಸೂಲಿ ಕೋರರಾಗುತ್ತಿದ್ದಾರೆ.
-ಎಂ.ಮಂಜುನಾಥ್, ಅಧ್ಯಕ್ಷ, ಆದಶ್‌ರ್ ಆಟೋ ಮತ್ತು ಕ್ಯಾಬ್ ಚಾಲಕರ ಸಂಘ
40 ಸಾವಿರ ಕ್ಯಾಬ್‌ಗಳು ಓಲಾ, ಉಬರ್ ಜತೆ ಒಪ್ಪಂದ ಮಾಡಿಕೊಂಡಿವೆ. ಜಿಲ್ಲಾಡಳಿತ ನಿಗದಿ ಪಡಿಸಿದ ದರವನ್ನು ಚಾಲಕರಿಗೆ ನೀಡಿ, ಸರ್‌ಜಾಜ್‌ರ್ ಸೇರಿ ಉಳಿದ ಮೊತ್ತವನ್ನು ಕಂಪನಿಗಳೇ ಉಳಿಸಿಕೊಳ್ಳುತ್ತಿವೆ. ಒಂದು ಕ್ಯಾಬ್‌ನಿಂದ ಕನಿಷ್ಠ .1000 ನಿತ್ಯ ಆದಾಯ ಕಂಪನಿಗೆ ಸಿಗುತ್ತಿದೆ. ಆದರೆ, ಚಾಲಕರಿಗೆ ಯಾವುದೇ ಸೌಲಭ್ಯ ನೀಡದೆ, ಪ್ರೋತ್ಸಾಹ ಧನವನ್ನು ಹೆಚ್ಚಿಸದೇ ಕಂಪನಿ ಲಾಭಗಳಿಸುತ್ತಿವೆ.
-ತನ್ವೀರ್ ಪಾಷಾ, ಅಧ್ಯಕ್ಷ ಓಲಾ, ಉಬರ್ ಟ್ಯಾಕ್ಸಿ ಚಾಲಕರು ಮತ್ತು ಮಾಲಿಕರ ಸಂಘ.