
ಬೆಂಗಳೂರು (ಆ.23): ಮುಂದಿನ 2028ರ ಚುನಾವಣೆಯಲ್ಲೂ ನಮ್ಮ ಪಕ್ಷವೇ ಅಧಿಕಾರಕ್ಕೆ ಏರಲಿದೆ. ಅದರಲ್ಲಿ ಯಾವುದೇ ಅನುಮಾನ ಬೇಡ. ಆದರೆ, ನಾನು ಮುಖ್ಯಮಂತ್ರಿ ಆಗೋದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಶುಕ್ರವಾರ ವಿಧಾನಸಭೆಯಲ್ಲಿ ಹೇಳಿದ್ದಾರೆ. ಅದರೊಂದಿಗೆ ದದೇಶದಲ್ಲಿ ಸಿಎಂಗಳ ಮೇಲಿನ ಕ್ರಿಮಿಲನ್ ಕೇಸ್‌ಗಳ ಪಟ್ಟಿ ಬಿಡುಗಡೆಯಾಗಿದ್ದು ಸಿದ್ದರಾಮಯ್ಯ ನಾಲ್ಕನೇ ಸ್ಥಾನದಲ್ಲಿದ್ದಾರೆ. ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅಗ್ರಸ್ಥಾನದಲ್ಲಿದ್ದರೆ, ಎಂಕೆ ಸ್ಟ್ಯಾಲಿನ್, ಚಂದ್ರಬಾಬು ನಾಯ್ಡು ನಂತರದ ಸ್ಥಾನಗಳಲ್ಲಿದ್ದಾರೆ. ಉಳಿದಂತೆ ದಿನದ ಐದು ಪ್ರಮುಖ ಸುದ್ದಿಗಳ ವಿವರ ಇಲ್ಲಿದೆ.
1. ಸಿಎಂಗಳ ಕ್ರಿಮಿನಲ್ ಕೇಸು : ರೇವಂತ್ ನಂ.1, ಸ್ಟಾಲಿನ್ ನಂ.2, ನಾಯ್ಡು ನಂ.3, ಸಿದ್ದು ನಂ.4
ದೇಶದ 30 ಮುಖ್ಯಮಂತ್ರಿಗಳಲ್ಲಿ 12 ಮಂದಿ ಅಥವಾ ಶೇ.40ರಷ್ಟು ಮುಖ್ಯಮಂತ್ರಿಗಳು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ ಎಂದು ಚುನಾವಣಾ ಹಕ್ಕುಗಳ ಸಂಸ್ಥೆ ‘ಎಡಿಆರ್’ ವರದಿ ತಿಳಿಸಿದೆ.
2. ಕಂಡ ಕಂಡಲ್ಲಿ ಬೀದಿನಾಯಿಗೆ ಆಹಾರ ಹಾಕಬೇಡಿ : ಸುಪ್ರೀಂ ಎಚ್ಚರಿಕೆ
‘ನಾಯಿಗಳಿಗೆ ಬೀದಿಗಳಲ್ಲಿ ಸಿಕ್ಕಸಿಕ್ಕಲ್ಲಿ ಆಹಾರ ಹಾಕಬಾರದು’ ಎಂದು ಕಟ್ಟೆಚ್ಚರಿಕೆ ನೀಡಿರುವ ಸುಪ್ರೀಂ ಕೋರ್ಟ್, ಅದಕ್ಕಾಗಿ ಮೀಸಲು ಸ್ಥಳಗಳನ್ನು ಸ್ಥಾಪಿಸುವಂತೆ ನಗರಪಾಲಿಕೆಗಳಿಗೆ ಸೂಚಿಸಿದೆ. ‘ನಾಯಿಗಳ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು, ಅದಕ್ಕೆ ಅನುಗುಣವಾಗಿ ಪ್ರತಿ ಪುರಸಭೆಯ ವಾರ್ಡ್‌ಗಳಲ್ಲಿ ನಾಯಿಗಳಿಗೆ ಆಹಾರ ಹಾಕುವ ಜಾಗಗಳನ್ನು ನಿರ್ಮಿಸಬೇಕು. ಜತೆಗೆ, ಸೂಚನಾ ಫಲಕವನ್ನೂ ಅಳವಡಿಸಬೇಕು’ ಎಂದು ಹೇಳಿದೆ.
3. 2028ಕ್ಕೂ ಗೆಲ್ತೀವಿ, ನಾನು ಸಿಎಂ ಆಗಲ್ಲ: ಸಿದ್ದರಾಮಯ್ಯ!
ಮುಂದಿನ (2028ರ) ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವೇ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ. ಆದರೆ, ನಾನು ಮುಖ್ಯಮಂತ್ರಿಯಾಗುವುದಿಲ್ಲ! ಹೀಗಂತ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸದನದಲ್ಲಿ ಘೋಷಿಸಿದ್ದಾರೆ. ಅಭಿವೃದ್ಧಿ ಕುರಿತ ಚರ್ಚೆಗೆ ಉತ್ತರ ನೀಡುವ ವೇಳೆ ಶುಕ್ರವಾರ ಮಾತನಾಡಿದ ಅವರು, ‘2028ರಲ್ಲಿ ನಮ್ಮ ಪಕ್ಷವೇ ಮತ್ತೆ ಅಧಿಕಾರಕ್ಕೆ ಬರುತ್ತದೆ. ಇದು ನೂರಕ್ಕೆ ನೂರರಷ್ಟು ಸತ್ಯ. ಆದರೆ, ಮುಂದಿನ ಅವಧಿಗೆ ನಾನು ಮುಖ್ಯಮಂತ್ರಿ ಆಗುವುದಿಲ್ಲ. ಇನ್ನು ಜೆಡಿಎಸ್ 2-3 ಸ್ಥಾನ ಬಂದರೆ ಅದೇ ಹೆಚ್ಚು. ಹೀಗಾಗಿ ಜೆಡಿಎಸ್ ಪಕ್ಷವನ್ನು ಬಿಜೆಪಿ ಜತೆ ವಿಲೀನ ಮಾಡಲಿ’ ಎಂದು ಲೇವಡಿ ಮಾಡಿದರು.
4. ಅಕ್ರಮ ಗಣಿಗಾರಿಕೆ ಪ್ರಕರಣಗಳ ಮರು ತನಿಖೆ?: ಮಾಹಿತಿ ನೀಡಿದ ಸಿಎಂ ಸಿದ್ದರಾಮಯ್ಯ
ರಾಜ್ಯದಲ್ಲಿ 2006ರಿಂದ 2011ರವರೆಗೆ ನಡೆದಿರುವ ಅಕ್ರಮ ಅದಿರು ರಫ್ತಿನಿಂದ ಸರ್ಕಾರಕ್ಕೆ 78,245 ಕೋಟಿ ರು. ನಷ್ಟ ಉಂಟಾಗಿದೆ. ಈ ಬಗ್ಗೆ ತನಿಖೆ ನಡೆಸಿದ್ದ ವಿಶೇಷ ತನಿಖಾ ತಂಡ ನ್ಯಾಯಾಲಯಕ್ಕೆ ಸಲ್ಲಿಸಿರುವ 29 ಪ್ರಕರಣಗಳ ‘ಬಿ’ ರಿಪೋರ್ಟ್ ಮರುಪರಿಶೀಲಿಸಲು ಹಾಗೂ ಈ ಪೈಕಿ ಇನ್ನೂ ನ್ಯಾಯಾಲಯದ ಅನುಮತಿ ದೊರೆಯದ ಎಂಟು ‘ಬಿ’ ರಿಪೊರ್ಟ್ ಹಿಂಪಡೆಯಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
5. ಮನೆಯ ಬೀಗ ಮುರಿದು ವಕೀಲ ಜಗದೀಶ್ ಬಂಧಿಸಿದ ಪೊಲೀಸರು
ಸಮಾಜದಲ್ಲಿ ಶಾಂತಿ ಭಂಗಕ್ಕೆ ಯತ್ನಿಸಿದ ಪ್ರಕರಣದಲ್ಲಿ ಬಂಧನ ಭೀತಿಯಿಂದ ತಮ್ಮ ಮನೆಗೆ ಬೀಗ ಹಾಕಿ ಕುಳಿತಿದ್ದ ವಕೀಲ ಜಗದೀಶ್ ಅವರನ್ನು ಶುಕ್ರವಾರ ಕೊನೆಗೆ ಬೀಗ ಮುರಿದು ಒಳ ಪ್ರವೇಶಿಸಿ ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಮೂರು ದಿನಗಳ ಹಿಂದೆ ಮಂಜುನಾಥ್ ಎಂಬುವರ ನೀಡಿದ ದೂರು ಆಧರಿಸಿ ವಕೀಲ ಜಗದೀಶ್ ವಿರುದ್ಧ ಸಮಾಜದಲ್ಲಿ ಶಾಂತಿ ಕದಡಲು ಯತ್ನಿಸಿದ ಆರೋಪದ ಮೇರೆಗೆ ಎಫ್‌ಐಆರ್ ದಾಖಲಾಗಿತ್ತು. ಈ ಪ್ರಕರಣದ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ವಕೀಲರಿಗೆ ಕೊಡಿಗೇಹಳ್ಳಿ ಠಾಣೆ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದರು. ಆದರೆ ಈ ನೋಟಿಸ್‌ಗೆ ಕ್ಯಾರೇ ಎನ್ನದೆ ಮನೆಯೊಳಗೆ ಕುಳಿತಿದ್ದ ವಕೀಲನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ