
ಬೆಂಗಳೂರು: ರಾಜ್ಯದಲ್ಲಿ ಮತ್ತೆ ಮಳೆ ಆರಂಭವಾಗಿದೆ. ಈ ಹಿನ್ನೆಲೆ ರಾಜ್ಯದ 7 ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ಮತ್ತೊಂದೆಡೆ ವಿಧಾನಸಭೆಯಲ್ಲಿ ಗೃಹ ಸಚಿವ ಜಿ.ಪರಮೇಶ್ವರ್ ಧರ್ಮಸ್ಥಳದಲ್ಲಿ ನಡೆಯುತ್ತಿರೋ ಎಸ್‌ಐಟಿ ತನಿಖೆಯ ಮಧ್ಯಂತರ ವರದಿ ಮಾಹಿತಿ ನೀಡುವ ಸಾಧ್ಯತೆಗಳಿವೆ. ಇನ್ನುಳಿದಂತೆ ಇಂದಿನ ಪ್ರಮುಖ 5 ಸುದ್ದಿಗಳ ಮಾಹಿತಿ ಇಲ್ಲಿದೆ.
1.6ರ ಜೊತೆ ಉಡುಪಿ: ಒಟ್ಟು 7 ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ; ಇತ್ತ ಶಿರಾಡಿ ಸಂಚಾರಕ್ಕೆ ಮುಕ್ತ
ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿರೋ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಸತತವಾಗಿ ಮಳೆಯಾಗುತ್ತಿರುವುದರಿಂದ ಇಂದು ದಿನಾಂಕ 18/08/2025 ರಂದು ಉಡುಪಿ ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆ, ಪದವಿಪೂರ್ವ ಕಾಲೇಜು ಮತ್ತು ಐಟಿಐ ಗಳಿಗೆ ರಜೆ ನೀಡಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಇಂದು ಶಿವಮೊಗ್ಗ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಿರುವ ಹಿನ್ನೆಲೆ ಜಿಲ್ಲೆಯಾದ್ಯಂತ ಶಾಲಾ-ಕಾಲೇಜಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ. ಮಕ್ಕಳ ಸುರಕ್ಷತಾ ಕ್ರಮವಾಗಿ ಆಗಸ್ಟ್ 18 ರಂದು ರಜೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
2.ಧರ್ಮಸ್ಥಳ ಗ್ರಾಮ ಕೇಸ್: ಇಂದು ಪರಂ ಉತ್ತರ ಕುತೂಹಲ
ರಾಜ್ಯಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿರುವ ಧರ್ಮಸ್ಥಳ ಗ್ರಾಮದ ಅಸ್ಥಿ ಉತ್ಖನನ, ಎಸ್‌ಐಟಿ ತನಿಖೆ ಪ್ರಗತಿ ಬಗ್ಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿಧಾನಸಭೆಯಲ್ಲಿ ಉತ್ತರ ನೀಡಲಿದ್ದಾರೆ. ಈ ವೇಳೆ ಅವರು ‘ಎಸ್‌ಐಟಿ ತನಿಖೆಯ ಭವಿಷ್ಯದ ಬಗ್ಗೆ ಏನು ಹೇಳುತ್ತಾರೆ? ಸರ್ಕಾರದ ನಿಲುವು ಪ್ರಕಟಿಸುತ್ತಾರೆಯೇ?’ ಎಂಬುದು ಕುತೂಹಲ ಮೂಡಿಸಿದೆ. ಈ ವೇಳೆ ‘ಧರ್ಮಸ್ಥಳ ವಿರುದ್ಧ ಷಡ್ಯಂತ್ರ ನಡೆಸಿರುವವರ ಹೆಸರು ಬಹಿರಂಗಪಡಿಸಬೇಕು. ಮುಸುಕುಧಾರಿಯನ್ನು ಬಂಧಿಸಿ ಎಸ್ಐಟಿ ತನಿಖಾ ವರದಿಯನ್ನು ಸದನದಲ್ಲಿ ಮಂಡಿಸಬೇಕು’ ಎಂದು ಪ್ರತಿಪಕ್ಷ ಬಿಜೆಪಿ ಪಟ್ಟು ಹಿಡಿಯುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಸೋಮವಾರದ ಕಲಾಪ ತೀವ್ರ ಆಸಕ್ತಿ ಕೆರಳಿಸಿದೆ.
3.ಮತ್ತೆ ರಾಗಾ ವರ್ಸಸ್ ಆಯೋಗ : ದೂರದ ಬಿಹಾರದಲ್ಲೂ ರಾಜ್ಯದ ಮಹದೇವಪುರ ಪ್ರತಿಧ್ವನಿ
ಚುನಾವಣಾ ಆಯೋಗವು ಬಿಜೆಪಿ ಜೊತೆ ಸೇರಿಕೊಂಡು ಷಡ್ಯಂತ್ರ ರೂಪಿಸುವ ಮೂಲಕ ಚುನಾವಣೆಗಳನ್ನೇ ಕದಿಯುವ ಕೆಲಸ ಮಾಡುತ್ತಿದೆ. ಈ ವಿಷಯ ಇದೀಗ ಇಡೀ ದೇಶದ ಗಮನಕ್ಕೆ ಬಂದಿದೆ. ಆದರೆ ಬಿಹಾರ ಚುನಾವಣೆಯನ್ನು ಕದಿಯುವ ಈ ‘ಹೊಸ ಸಂಚು’ ಯಶಸ್ವಿಯಾಗಲು ಇಂಡಿಯಾ ಮೈತ್ರಿಕೂಟದ ಪಕ್ಷಗಳು ಬಿಡುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎಚ್ಚರಿಸಿದ್ದಾರೆ. ಜೊತೆಗೆ ಕರ್ನಾಟಕದ ಮಹದೇವಪುರ, ಕೇರಳ, ಮಹಾರಾಷ್ಟ್ರ ಸೇರಿದಂತೆ ಹಲವು ಕಡೆ ಮತಗಳವಿನ ಮೂಲಕ ಬಿಜೆಪಿ ಚುನಾವಣೆಯಲ್ಲಿ ಗೆಲುವು ಸಾಧಿಸಿದೆ ಎಂದು ತಮ್ಮ ಆರೋಪವನ್ನು ಪುನರುಚ್ಚರಿಸಿದ್ದಾರೆ.
4.ರಾಜ್ಯದಲ್ಲಿ ಜ್ಯುವೆಲ್ಲರಿ ಶಾಪ್ ರಾಬರಿ ಪ್ರಕರಣಗಳು ಹೆಚ್ಚಳ, ಆತಂಕದಲ್ಲಿ ಮಾಲೀಕರು!
ಚಿನ್ನಾಭರಣ ಅಂಗಡಿಯ ದರೋಡೆಯನ್ನು ನೋಡಿದವನನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದಲ್ಲಿ ಭಾನುವಾರ ಮುಂಜಾನೆ ಸಂಭವಿಸಿದೆ.ಹೋಟೆಲ್ ಮಾಲೀಕ ಮಾದಪ್ಪ (72) ಕೊಲೆಯಾದವರು. ಮಹಾಲಕ್ಷ್ಮೀ ಜುವೆಲ್ಲರ್ಸ್ ಆ್ಯಂಡ್ ಬ್ಯಾಂಕರ್ಸ್‌ಗೆ ಭಾನುವಾರ ನಸುಕಿನ ಜಾವ 2ರ ಸಮಯಕ್ಕೆ ದರೋಡೆಕೋರರು 12 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ದೋಚಿ ಪರಾರಿಯಾಗುವಾಗ ಶಬ್ಧವಾಗಿದೆ. ಆಗ ಹೋಟೆಲ್‌ನಿಂದ ಹೊರಬಂದು ಮಾದಪ್ಪ, ದರೋಡೆಕೋರರನ್ನು ನೋಡಿದ್ದಾರೆ. ಹೀಗಾಗಿ, ಅವರನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
5.SSLC-PUC: ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್! ಫಲಿತಾಂಶ ಕುಸಿತಕ್ಕೆ ವಿದ್ಯಾರ್ಥಿಗಳೇ ಹೊಣೆ ಎಂದ ಸರ್ಕಾರ
ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಹೆಚ್ಚಿಸುವ ದೃಷ್ಟಿಯಿಂದ 2023-24ರಲ್ಲಿ ಜಾರಿಗೆ ತಂದ ವರ್ಷಕ್ಕೆ ಮೂರೂ ಪರೀಕ್ಷೆ ನಡೆಸುವ ಪ್ರಯೋಗ ಸತತ 2ನೇ ವರ್ಷವೂ ಫಲಿತಾಂಶ ಕುಸಿತದೊಂದಿಗೆ ವಿಫಲವಾಗಿದೆ. ಇದರಿಂದ ಈ ಮೂರು ಪರೀಕ್ಷೆ ಅಗತ್ಯ ಬಗ್ಗೆಯೇ ಪ್ರಶ್ನೆ ಹುಟ್ಟುವಂತೆ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ