ಕರುನಾಡಿಗೆ ಮತ್ತೊಂದು ಆಘಾತ; ಸಿದ್ದರಾಮಯ್ಯ ಪರಮಾಪ್ತ ಉಗ್ರಾಣ ನಿಗಮದ ಅಧ್ಯಕ್ಷ ಜಯಣ್ಣ ನಿಧನ!

By Sathish Kumar KH  |  First Published Dec 10, 2024, 1:59 PM IST

ಕರ್ನಾಟಕದ ಮಾಜಿ ಶಾಸಕ ಮತ್ತು ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಎಸ್. ಜಯಣ್ಣ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೈಸೂರಿಗೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಜಯಣ್ಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರಾಗಿದ್ದರು.


ಚಾಮರಾಜನಗರ (ಡಿ.10): ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ನಿಧನ ಸುದ್ದಿ ರಾಜ್ಯದ ಜನರಿಗೆ ಆಘಾತವನ್ನು ನೀಡಿದೆ. ಆದರೆ, ಇದೀಗ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರೂ ಆಗಿದ್ದ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರೂ ಆಗಿರುವ ಮಾಜಿ ಶಾಸಕ ಎಸ್. ಜಯಣ್ಣ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರ ಬಣದಲ್ಲಿ ಗುರುತಿಸಿಕೊಂಡಿದ್ದ ಕೊಳ್ಳೇಗಾಲದ ಮಾಜಿ ಶಾಸಕ ಎಸ್. ಜಯಣ್ಣ ಅವರಿಗೆ ಇದೀಗ ಪಕ್ಷದ ಉಗ್ರಾಣ ನಿಗಮದ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಜಯಣ್ಣ ಅವರು, ಇಂದು ಬೆಳಗ್ಗೆ ಮೈಸೂರಿನ ಕಡೆಗೆ ಕಾರಿನಲ್ಲಿ ಹೋಗುವಾಗ ದಿಢೀರ್ ಹೃದಯಾಘಾತ ಉಂಟಾಗಿದೆ. ಈ ವೇಳೆ ಹತ್ತಿರದ ಜನನಿ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸದರೂ ಮಾರ್ಗ ಮಧ್ಯದಲ್ಲಿಯೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.  ಈ ಘಟನೆ ಕೊಳ್ಳೇಗಾಲ ತಾಲೂಕಿನ ಉತ್ತಂಬಳ್ಳಿ ಬಳಿ ಸಂಭವಿಸಿದೆ. ಈಗಾಗಲೇ ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರನ್ನು ಕಳೆದುಕೊಂದು ಆಘಾತಕ್ಕೆ ಒಳಗಾಗಿರುವ ಕರುನಾಡಿನ ಜನತೆಗೆ ಇದೀಗ ಮತ್ತೊಬ್ಬ ರಾಜಕೀಯ ನಾಯಕನ ಸಾವು ಗಾಯದ ಮೇಲೆ ಉಪ್ಪು ಸುರಿದಂತಾಗಿದೆ. ಕನ್ನಡ ಮಾತೆ ಇಬ್ಬಿಬ್ಬರು ಮಕ್ಕಳನ್ನು ಕಳೆದುಕೊಂಡಂತಾಗಿದ್ದಾಳೆ.

Tap to resize

Latest Videos

ಉಗ್ರಾಣ ನಿಗಮದ ಅಧ್ಯಕ್ಷರಾಗಿದ್ದ ಎಸ್. ಜಯಣ್ಣ ಅವರಿಗೆ 72 ವರ್ಷ ವಯಸ್ಸಾಗಿತ್ತು. ಕಳೆದ 1999 ರಲ್ಲಿ ಜೆಡಿಎಸ್ ನಿಂದ ಹಾಗೂ 2013 ರಲ್ಲಿ ಕಾಂಗ್ರೆಸ್ ನಿಂದ ಶಾಸಕರಾಗಿ ಆಯ್ಕೆಯಾಗಿದ್ದ ಎಸ್. ಜಯಣ್ಣ ಅವರಿಗೆ ಅನಾರೋಗ್ಯದ ಹಿನ್ನಲೆ 2018ರಲ್ಲಿ ಟಿಕೆಟ್ ಕೊಟ್ಟಿರಲಿಲ್ಲ. ಆದರೆ, ಈ ಬಾರಿ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಸರ್ಕಾರದಲ್ಲಿ ಉಗ್ರಾಣ ನಿಗಮದ ಅಧ್ಯಕ್ಷರಾಗಿದ್ದರು. 9-9-1952 ರಲ್ಲಿ ಜನಿಸಿದ್ದ ಎಸ್ ಜಯಣ್ಣ ಅವರ ಅಂತ್ಯಕ್ರಿಯೆಯನ್ನು ನಾಳೆ ಚಾಮರಾಜನಗರ ಜಿಲ್ಲೆ ಮಾಂಬಳ್ಳಿ ಗ್ರಾಮದಲ್ಲಿ ನಡೆಸಲಾಗುತ್ತದೆ ಎಂದು ಕುಟುಂಬ ಮೂಲದಿಂದ ತಿಳಿದುಬಂದಿದೆ.

ಇದನ್ನೂ ಓದಿ: ಎಸ್.ಎಂ.ಕೃಷ್ಣ ಆಗಲಿಕೆಯಿಂದ ಕರ್ನಾಟಕ ಮಾರ್ಗದರ್ಶಕರನ್ನು ಕಳೆದುಕೊಂಡಂತಾಗಿದೆ: ಬೊಮ್ಮಾಯಿ

ಜಯಣ್ಣ ಅವರ ಗೃಹ ಪ್ರವೇಶಕ್ಕೆ ಹೋಗಿದ್ದ ಸಿದ್ದರಾಮಯ್ಯ: ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ಮೂರು ದಿನಗಳ ಹಿಂದೆ ಶನಿವಾರ ಕೊಳ್ಳೇಗಾಲದ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಜಯಣ್ಣ ಅವರ ಮನೆಗೆ ಹೋಗಿದ್ದ ಸಿದ್ದರಾಮಯ್ಯ ಅವರ ಕೈಯಿಂದ ಮನೆಯನ್ನು ನೀವೇ ಉದ್ಘಾಟನೆ ಮಾಡಬೇಕು ಎಂದು ಕೇಳಿಕೊಂಡು ರಿಬ್ಬನ್ ಕಟ್ ಮಾಡಿಸಿದ್ದರು. ಆದರೆ, ನಾಳೆ ದೊಡ್ಡ ಮಟ್ಟದಲ್ಲಿ ಗೃಹ ಪ್ರವೇಶವನ್ನು ಹಮ್ಮಿಕೊಂಡಿದ್ದ ಹಿನ್ನೆಲೆಯಲ್ಲಿ ಮೈಸೂರಿಗೆ ಆಹ್ವಾನ ಪತ್ರಿಕೆ ಕೊಡಲು ಹೋಗುತ್ತಿದ್ದ ವೇಳೆ ಜಯಣ್ಣ ಅವರಿಗೆ ಹೃದಯಾಘಾತವಾಗಿ ಅವಘಡ ನಡೆದು ಹೋಗಿದೆ.

click me!