
ಬೆಂಗಳೂರು (ಜು.30): ಕರ್ನಾಟಕ ರಾಜ್ಯ ಸಹಕಾರ ಗ್ರಾಹಕ ಮಾರಾಟ ಮಹಾಮಂಡಳದಲ್ಲಿ ಅವಧಿ ಮುಗಿದರೂ ಮಹಾಮಂಡಳದ ದೊಡ್ಡ ಕುರ್ಚಿ ಬಿಡದೆ ಎಳೆದಾಡುತ್ತಿರುವ ಪ್ರಕರಣ ತೆರೆಮರೆಯಲ್ಲೇ ಜಟಾಪಟಿಗೆ ಕಾರಣವಾಗಿದೆ. ಅಂತಿಮ ಹಂತ ತಲುಪಿರುವ 34 ಹುದ್ದೆಗಳ ನೇರ ನೇಮಕಾತಿಯೂ ಈ ಮೌನ ಜಟಾಪಟಿಗೆ ಮೂಲ ಎನ್ನಲಾಗಿದೆ.
ಇನ್ನೂ ವಿಶೇಷ ಎಂದರೆ, ಈ ಹುದ್ದೆಗಳ ನೇಮಕಾತಿ ಬಯಸಿ ಪ್ರಭಾವಿ ಅಧಿಕಾರಿಗಳ ಮಕ್ಕಳು, ಬಂಧುಗಳು ಅಂತಿಮ ಪಟ್ಟಿ ಸೇರಲು ಲಾಬಿ ನಡೆಸಿರುವ ಖಚಿತ ಮಾಹಿತಿ ಇದೆ.
ಕರ್ನಾಟಕ ರಾಜ್ಯ ಸಹಕಾರ ಗ್ರಾಹಕ ಮಾರಾಟ ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕರಾಗಿ ಸಹಕಾರ ಇಲಾಖೆಯ ನಿವೃತ್ತ ಅಪರ ನಿಬಂಧಕರಾದ ಕೆ.ಎಂ. ಆಶಾ ಅವರನ್ನು ನೇಮಿಸಿ 2004ರ ಜುಲೈ 8ರಂದು ಸಹಕಾರ ಇಲಾಖೆ ಆದೇಶ ಹೊರಡಿಸಿತ್ತು. ಅದರ ಪ್ರಕಾರ ಇದೇ ಜುಲೈ 7ರಂದು ಮಹಾಮಂಡಳದ ಎಂಡಿಯಾಗಿ ಕೆ.ಎಂ. ಆಶಾ ಅವರ ಅವಧಿ ಮುಗಿದಿದೆ.
ಅವಧಿ ಮುಗಿದ ಹಿನ್ನಲೆಯಲ್ಲಿ ಕೆ.ಎಂ. ಆಶಾ ಅವರ ಜಾಗಕ್ಕೆ ಸಹಕಾರ ಸಂಘಗಳ ಜಂಟಿ ನಿಬಂಧಕ ಶಶಿಧರ್ ಅವರನ್ನು ಅಧಿಕ ಪ್ರಭಾರದಲ್ಲಿರಿಸಿ ಸಹಕಾರ ಇಲಾಖೆಯು ಜು.13ರಂದು ಕೂಡಲೇ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ. ಸರ್ಕಾರ ಆದೇಶ ಹೊರಡಿಸಿದ್ದರೂ ಕೆ.ಎಂ. ಆಶಾ ಅವರು ಶಶಿಧರ್ ಅವರಿಗೆ ಅಧಿಕಾರ ಬಿಟ್ಟುಕೊಡದೆ ತಾವೇ ಮುಂದುವರೆದಿದ್ದಾರೆ. ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಎಂಡಿಯಾಗಿ ಮರು ನೇಮಕ ಅಥವಾ ಅವಧಿ ವಿಸ್ತರಿಸಿಕೊಳ್ಳುವ ಪ್ರಯತ್ನದಲ್ಲಿ ಅಕ್ರಮವಾಗಿ ಹುದ್ದೆಯಲ್ಲಿ ಮುಂದುವರೆದಿದ್ದಾರೆ.
ಕರ್ನಾಟಕ ರಾಜ್ಯ ಸಹಕಾರ ಗ್ರಾಹಕ ಮಾರಾಟ ಮಂಡಳಿಯು ಫಾರ್ಮಸಿಸ್ಟ್, ಪ್ರಥಮ ದರ್ಜೆ ಸಹಾಯಕರು, ವಿಕ್ರಯ ಸಹಾಯಕರು ಸೇರಿದಂತೆ 34 ಹುದ್ದೆಗಳಿಗೆ ಕಳೆದ ಆಗಸ್ಟ್‌ನಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭಿಸಿತ್ತು. ಈ ನೇಮಕಾತಿಯ ಎಲ್ಲಾ ಪ್ರಕ್ರಿಯೆಗಳು ಮುಗಿದು ಅಂತಿಮ ಪಟ್ಟಿ ಪ್ರಕಟಿಸುವುದೊಂದೇ ಬಾಕಿ ಉಳಿದಿದೆ. ಕೆ.ಎಂ. ಆಶಾ ಅವರ ಎಂಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಅಂತಿಮ ಪಟ್ಟಿ ಪ್ರಕಟಗೊಂಡಿಲ್ಲ. ಈ ಅಂತಿಮ ಪಟ್ಟಿ ಸೇರಲು ಪ್ರಭಾವಿ ಅಧಿಕಾರಿಗಳ ಮಕ್ಕಳು, ಬಂಧುಗಳ ಲಾಬಿಯಿಂದಾಗಿ ಪಟ್ಟಿ ಪ್ರಕಟ ತಡವಾಗಿದೆ ಎನ್ನಲಾಗಿದೆ. ಎಂಡಿ ಅವಧಿ ವಿಸ್ತರಿಸಿಕೊಂಡು ಅಂತಿಮ ಪಟ್ಟಿ ಪ್ರಕಟಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪಗಳಿವೆ.
ಪ್ರಭಾರಿಯಾಗಿ ಅಧಿಕಾರ ಸ್ವೀಕರಿಸಬೇಕಾದ ಶಶಿಧರ್ ಅವರನ್ನು ‘ಕನ್ನಡಪ್ರಭ’ ಸಂಪರ್ಕಿಸಿದಾಗ, ಪ್ರತಿಕ್ರಿಯಿಸಲು ನನಗೆ ಅಧಿಕಾರವಿಲ್ಲ ಕ್ಷಮಿಸಿ ಎಂದು ಫೋನ್ ಕಟ್ ಮಾಡಿದರು. ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯಲ್ಲಿ ಅಕ್ರಮವಾಗಿ ಮುಂದವರೆದಿರುವ ಕೆ.ಎಂ. ಆಶಾ ಅವರನ್ನು ‘ಕನ್ನಡಪ್ರಭ’ವು ಸಂಪರ್ಕಿಸಲು ನಡೆಸಿದ ಪ್ರಯತ್ನ ವಿಫಲವಾಯಿತು.
ಈ ಕುರಿತು ‘ಕನ್ನಡಪ್ರಭ’ವು ಸಹಕಾರ ಇಲಾಖೆ ಕಾರ್ಯದರ್ಶಿ ಸಂಜಯ್ ಶೆಟ್ಟಣ್ಣನವರ್ ಅವರನ್ನು ಸಂಪರ್ಕಿಸಿದಾಗ, ಅವಧಿ ಮುಗಿದಿದೆ ಎಂದು ಪ್ರಭಾರಿ ಅಧಿಕಾರಿಯನ್ನು ನಿಯೋಜಿಸಿದ್ದಾರೆ. ಆದರೆ, ಎಂಡಿ ಅವಧಿ ವಿಸ್ತರಣೆಗೆ ಮುಖ್ಯಮಂತ್ರಿಗಳಿಗೆ ಫೈಲ್ ಕಳುಹಿಸಲಾಗಿದೆ. ಇನ್ನೊಂದೆರಡು ದಿನದಲ್ಲಿ ಬರಬಹುದು ಎಂದರು. ಹಾಗೆ ಮುಂದುವರೆಸುವುದಾದರೆ ಶಶಿಧರ್ ಅವರನ್ನು ನಿಯೋಜಿಸಿ ಆದೇಶಿಸುವ ಅಗತ್ಯ ಇರಲಿಲ್ಲ ಅಲ್ಲವೇ? ಅವಧಿ ಮುಗಿದ ಮೇಲೂ ಅವರು ಫೈಲುಗಳಿಗೆ ಸಹಿ ಹಾಕಬಹುದೇ ಎಂಬ ಪ್ರಶ್ನೆಗಳಿಗೆ, ‘ಆರೋಗ್ಯ ಸರಿ ಇಲ್ಲ, ಮನೆಯಲ್ಲಿದ್ದೇನೆ. ತಿಳಿದುಕೊಂಡು ಹೇಳುವೆ’ ಎಂದರು ಸಂಜಯ್ ಶೆಟ್ಟಣ್ಣನವರ್.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ