
ಬೆಂಗಳೂರು(ಜು.30): ಕಾವೇರಿ ನೀರು ವಿವಾ(Cauvery water dispute)ದದ ಕಿಚ್ಚು ಮತ್ತೆ ಮುನ್ನಲೆಗೆ ಬಂದಿದ್ದು. ಕಾವೇರಿ ನೀರು ನಿರ್ವಹಣಾ ಮಂಡಳಿ (CWRC) ಆದೇಶದ ವಿರುದ್ಧ ಕನ್ನಡ ಪರ ಸಂಘಟನೆಗಳು ತೀವ್ರ ಅಕ್ರೋಶ ವ್ಯಕ್ತಪಡಿಸಿ ಬೆಂಗಳೂರಿನಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದವು. ಅಲ್ಲದೆ, ಸರ್ಕಾರ ತಮಿಳುನಾಡಿಗೆ ನೀರು ಹರಿಸಿದರೆ ಕರ್ನಾಟಕ ಬಂದ್ ಮಾಡುವುದಾಗಿ ಎಚ್ಚರಿಕೆಯನ್ನು ನೀಡಿವೆ.
ಪ್ರತಿ ದಿನ 3500 ಕ್ಯುಸೆಕ್ ನೀರನ್ನು ತಮಿಳುನಾಡಿಗೆ ಹರಿಸುವ ಕಾವೇರಿ ಜಲಮಂಡಳಿ ಆದೇಶದ ವಿರುದ್ಧ ಕರ್ನಾಟಕ ಬಂದ್ ನಡೆಸುವ ಕುರಿತು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಅಧ್ಯಕ್ಷತೆಯಲ್ಲಿ ಜು.31ರಂದು ಬೆಳಗ್ಗೆ 11ಕ್ಕೆ ನಗರದ ವುಡ್‌ಲ್ಯಾಂಡ್ ಹೋಟೆಲ್‌ನಲ್ಲಿ ಸಭೆ ಕರೆಯಲಾಗಿದೆ. ಈಗಾಗಲೇ ಕನ್ನಡಪರ ಎಲ್ಲ ಸಂಘಟನೆಗಳಿಗೂ ಆಹ್ವಾನ ನೀಡಲಾಗಿದ್ದು, ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸಿದರೆ ರಾಜ್ಯಾದ್ಯಂತ ಬಂದ್ ನಡೆಸಿ ಹೋರಾಟ ನಡೆಸುವ ಕುರಿತು ಸಭೆಯಲ್ಲಿ ನಿರ್ಧಾರ ಕೈಗೊಳ್ಳುವುದಾಗಿ ವಾಟಾಳ್ ನಾಗರಾಜ್ ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ತೀವ್ರ ಮಳೆ ಕೊರತೆ ಉಂಟಾಗಿದ್ದು, ಕೆಆರ್‌ಎಸ್, ಕಬಿನಿ, ಹೇಮಾವತಿ, ಹಾರಂಗಿ ಸೇರಿದಂತೆ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹ ಆತಂಕಕಾರಿ ಮಟ್ಟಕ್ಕೆ ಕುಸಿದಿದೆ. ಈ ವೇಳೆ ಕರ್ನಾಟಕದ ಜನರಿಗೆ ಕುಡಿಯಲು ನೀರೇ ಇಲ್ಲದಿರುವಾಗ ತಮಿಳುನಾಡಿಗೆ ಸುಮಾರು 4.5 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಸೂಚಿಸಿರುವುದು ವಾಸ್ತವ ಸ್ಥಿತಿಯನ್ನು ಸಂಪೂರ್ಣವಾಗಿ ಕಡೆಗಣಿಸಿದ ಕ್ರಮವಾಗಿದೆ ಎಂದು ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ಅವರು ಕಿಡಿಕಾರಿದರು.
ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಕರವೇಯಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ತಕ್ಷಣವೇ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಮೇಲ್ಮನವಿ ಸಲ್ಲಿಸಿ, ಕರ್ನಾಟಕದ ನೈಜ ಜಲಸ್ಥಿತಿಯನ್ನು ವೈಜ್ಞಾನಿಕ ಅಂಕಿ-ಅಂಶಗಳೊಂದಿಗೆ ಮಂಡಿಸಬೇಕು. ಅಗತ್ಯವಿದ್ದರೆ ಸುಪ್ರೀಂ ಕೋರ್ಟ್ ಸೇರಿದಂತೆ ಲಭ್ಯವಿರುವ ಎಲ್ಲ ಕಾನೂನು ವೇದಿಕೆಗಳಲ್ಲಿ ಹೋರಾಟ ನಡೆಸಿ, ರಾಜ್ಯದ ನೀರಿನ ಹಕ್ಕನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದರು.
ಮುಂಗಾರು ಮಳೆ ಕೊರತೆ, ರಾಜ್ಯದಲ್ಲಿನ ತೀವ್ರ ಬರ ಹಾಗೂ ತಮಿಳುನಾಡಿಗೆ ನೀರು ಹರಿಸಬೇಕೆಂಬ ಕಾವೇರಿ ನೀರು ನಿಯಂತ್ರಣ ಸಮಿತಿಯ ಆದೇಶದ ಬೆನ್ನಲ್ಲೇ ದೆಹಲಿಯಲ್ಲಿ ಗುರುವಾರ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರದ ಸಭೆ ನಡೆಯಲಿದೆ. ಮುಂದಿನ 15 ದಿನ ತಮಿಳುನಾಡಿಗೆ ನಿತ್ಯ 3,500 ಕ್ಯೂಸೆಕ್ ನಂತೆ 4.5 ಟಿಎಂಸಿ ನೀರು ಹರಿಸಬೇಕು ಎಂಬ ಕಾವೇರಿ ನೀರು ನಿಯಂತ್ರಣ ಸಮಿತಿಯ ಆದೇಶ ಪ್ರಶ್ನಿಸಿ ಕರ್ನಾಟಕ ಸರ್ಕಾರ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಿದ್ದು, ಇದರ ವಿಚಾರಣೆ ನಡೆಯಲಿದೆ.
ದೆಹಲಿಯ ಕಾವೇರಿ ಪ್ರಾಧಿಕಾರದ ಕಚೇರಿಯಲ್ಲಿ ಮಧ್ಯಾಹ್ನ 2.30ಕ್ಕೆ ಸಭೆ ನಡೆಯಲಿದ್ದು, ಕರ್ನಾಟಕ ಎಸಿಎಸ್ ಗೌರವಗುಪ್ತಾ ಸಭೆಯಲ್ಲಿ ಭಾಗವಹಿಸಲಿದ್ದಾರೆ. ತೀವ್ರ ಬರದ ನಡುವೆಯೇ ತಮಿಳುನಾಡಿಗೆ ನೀರು ಹರಿಸಬೇಕೆಂಬ ಸಮಿತಿಯ ಶಿಫಾರಸ್ಸು, ಕಾವೇರಿ ಕೊಳ್ಳದ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ತಮಿಳುನಾಡಿಗೆ ನೀರು ಬಿಡುಗಡೆ ವಿರೋಧಿಸಿ ಕಾವೇರಿ ಕೊಳ್ಳದ ಜಿಲ್ಲೆಗಳಲ್ಲಿ ರೈತರು ತೀವ್ರ ಪ್ರತಿಭಟನೆ ನಡೆಸುತ್ತಿರುವುದು ಸರ್ಕಾರದ ತಲೆನೋವಿಗೆ ಕಾರಣವಾಗಿದೆ. ಹೀಗಾಗಿ, ಗುರುವಾರ ನಡೆಯಲಿರುವ ಪ್ರಾಧಿಕಾರದ ಸಭೆ ಎಲ್ಲರ ಗಮನ ಸೆಳೆದಿದ್ದು, ಸಮಿತಿಯ ಆದೇಶಕ್ಕೆ ಪ್ರಾಧಿಕಾರ ತಡೆ ನೀಡುತ್ತಾ? ಎಂಬುದು ಕುತೂಹಲ ಮೂಡಿಸಿದೆ.
ಇದೇ ವೇಳೆ, ಕಾವೇರಿ ಜಲಾನಯನ ಪ್ರದೇಶದ ಜಲ-ಹವಾಮಾನ ಪರಿಸ್ಥಿತಿ ಕುರಿತಾಗಿಯೂ ಸಭೆಯಲ್ಲಿ ಚರ್ಚೆ ನಡೆಯಲಿದೆ. ಜೊತೆಗೆ, 2026-27ರ ಜಲ ವರ್ಷದಲ್ಲಿ ಪುದುಚೇರಿಯ ಯು.ಟಿ.ಯ ಬಿಳಿಗುಂಡ್ಲು ಮತ್ತು ಕಾರೈಕಲ್ ಪ್ರದೇಶದಲ್ಲಿ ಕಂಡು ಬಂದ ಸಂಚಿತ ಹರಿವಿನ ಕೊರತೆ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆಯಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ