
ಬೆಂಗಳೂರು (ಏ.23): ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಪೋಷಕರು ಕುತೂಹಲದಿಂದ ಕಾಯುತ್ತಿದ್ದ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆಯ ಫಲಿತಾಂಶ ಅಂತಿಮವಾಗಿ ಪ್ರಕಟವಾಗಿದೆ. ಈ ಬಾರಿಯ ಫಲಿತಾಂಶ ಕೇವಲ ಅಂಕಗಳ ಕಾರಣಕ್ಕಲ್ಲದೆ, ತೃತೀಯ ಭಾಷೆಯ ಮೌಲ್ಯಮಾಪನ ವಿಚಾರದಲ್ಲಿ ನಡೆದ ಕಾನೂನು ಸಮರದಿಂದಾಗಿ ಇತಿಹಾಸದಲ್ಲಿ ವಿಶೇಷ ಸ್ಥಾನ ಪಡೆದಿದೆ. ತೃತೀಯ ಭಾಷೆಯಾಗಿ ಹಿಂದಿ ಆಯ್ಕೆ ಮಾಡಿಕೊಂಡಿದ್ದ ಸಾವಿರಾರು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದು, ಸರ್ಕಾರದ ‘ಗ್ರೇಡ್’ ಪದ್ಧತಿಯ ಯಡವಟ್ಟಿಗೆ ಹೈಕೋರ್ಟ್ ಬೀಸಿದ ಚಾಟಿಯ ಬಿಸಿ ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಬರೆ ಹಾಕಿದೆ.
ಈ ವರ್ಷ ಒಟ್ಟು 7,69,751 ವಿದ್ಯಾರ್ಥಿಗಳು ತೃತೀಯ ಭಾಷೆ ಪರೀಕ್ಷೆ ಬರೆದಿದ್ದರು. ಈ ಪೈಕಿ 7,58,623 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಒಟ್ಟು 11,128 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ.
ಅದರಲ್ಲೂ ವಿಶೇಷವಾಗಿ, ತೃತೀಯ ಭಾಷೆಯಾಗಿ ಹಿಂದಿಯನ್ನು ಆಯ್ಕೆ ಮಾಡಿಕೊಂಡಿದ್ದ 7,02,009 ವಿದ್ಯಾರ್ಥಿಗಳ ಪೈಕಿ 6,92,528 ಮಂದಿ ಉತ್ತೀರ್ಣರಾಗಿದ್ದಾರೆ. ಆದರೆ, ಬರೋಬ್ಬರಿ 9,481 ವಿದ್ಯಾರ್ಥಿಗಳು ಹಿಂದಿ ವಿಷಯದಲ್ಲಿ ಫೇಲ್ ಆಗುವ ಮೂಲಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ತೃತೀಯ ಭಾಷೆಯಲ್ಲಿ ಅನುತ್ತೀರ್ಣರಾದವರ ಪೈಕಿ ಬಹುಪಾಲು ವಿದ್ಯಾರ್ಥಿಗಳು ಹಿಂದಿ ಭಾಷೆಯವರೇ ಆಗಿರುವುದು ಗಮನಾರ್ಹ.
ಪರೀಕ್ಷೆ ನಡೆಯುತ್ತಿದ್ದ ಸಂದರ್ಭದಲ್ಲೇ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, ತೃತೀಯ ಭಾಷೆ ಮತ್ತು ಎನ್‌ಎಸ್‌ಕ್ಯೂಎಫ್ ವಿಷಯಗಳಿಗೆ ಅಂಕಗಳ ಬದಲು ‘ಗ್ರೇಡ್’ ನೀಡಲಾಗುವುದು ಎಂದು ಘೋಷಿಸಿದ್ದರು. ಹಿಂದಿ ವಿಷಯದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಫೇಲ್ ಆಗುತ್ತಿರುವುದರಿಂದ ಅವರ ಮೇಲಿನ ಒತ್ತಡ ಕಡಿಮೆ ಮಾಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂಬುದು ಸರ್ಕಾರದ ವಾದವಾಗಿತ್ತು. ಆದರೆ, ಈ ನಿರ್ಧಾರದಿಂದ ಮಕ್ಕಳ ಭವಿಷ್ಯದ ಮೇಲೆ ಹಾಗೂ ಒಂದು ವರ್ಷಗಳ ಕಾಲ ಹಿಂದಿ ಭಾಷೆ ಅಧ್ಯಯನ ಮಾಡಿದವರ ಫಲಿತಾಂಶ ಕಡಿಮೆ ಆಗುತ್ತದೆಂದು ಪೋಷಕರು ಹಾಗೂ ಕೆಲವು ವಿದ್ಯಾರ್ಥಿಗಳು ಕೋರ್ಟ್ ಮೆಟ್ಟೊಲೇರಿದ್ದರು.
ಸರ್ಕಾರದ ಈ ದಿಢೀರ್ ಬದಲಾವಣೆಯನ್ನು ಪ್ರಶ್ನಿಸಿ ಚಿಕ್ಕಮಗಳೂರಿನ ಸಹನಾ ಆರ್. ನಾಯ್ಕ್ ಹಾಗೂ ಉಡುಪಿಯ ಅನುಷಾ ಮತ್ತು ಸುದೀಕ್ಷಾ ಹೈಕೋರ್ಟ್ ಮೆಟ್ಟಿಲೇರಿದ್ದರು. ಪರೀಕ್ಷೆಯ ಅಧಿಸೂಚನೆ ಹೊರಡಿಸಿದಾಗ ಇದ್ದ ನಿಯಮವನ್ನು ಮಧ್ಯದಲ್ಲಿ ಬದಲಿಸುವುದು ಕಾನೂನುಬಾಹಿರ ಎಂದು ಅರ್ಜಿದಾರರು ವಾದಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಇ.ಎಸ್. ಇಂದಿರೇಶ್ ಅವರ ಪೀಠ, 'ಪಂದ್ಯ ಆರಂಭವಾದ ಮೇಲೆ ನಿಯಮ ಬದಲಿಸಲು ಸಾಧ್ಯವಿಲ್ಲ' ಎಂದು ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿತು. ಅಂತಿಮವಾಗಿ, ಈ ವರ್ಷ ಅಂಕಗಳನ್ನೇ ನೀಡಬೇಕು ಎಂದು ಕೋರ್ಟ್ ಆದೇಶಿಸಿತು. ಸರ್ಕಾರದ ಮರುಪರಿಶೀಲನಾ ಅರ್ಜಿಯನ್ನೂ ತಿರಸ್ಕರಿಸಿದ ಕೋರ್ಟ್, ಸರ್ಕಾರದ ನಿರ್ಧಾರಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
ಕಾನೂನು ಹೋರಾಟದಲ್ಲಿ ಹಿನ್ನಡೆಯಾದ ಹಿನ್ನೆಲೆಯಲ್ಲಿ ಮತ್ತು ಫಲಿತಾಂಶ ವಿಳಂಬವಾಗುವುದನ್ನು ತಪ್ಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಹೈಕೋರ್ಟ್ ಆದೇಶದಂತೆ ಅಂಕಗಳನ್ನೇ ನೀಡಲು ನಿರ್ಧರಿಸಿದರು. 'ನಮಗೆ ಮಕ್ಕಳ ಭವಿಷ್ಯ ಮುಖ್ಯ, ಹೀಗಾಗಿ ಕೋರ್ಟ್ ನಿರ್ದೇಶನದಂತೆ ಅಂಕ ಮತ್ತು ಗ್ರೇಡ್ ಎರಡನ್ನೂ ನೀಡುತ್ತಿದ್ದೇವೆ' ಎಂದು ಸಚಿವರು ಸ್ಪಷ್ಟಪಡಿಸಿದ್ದರು. ಇನ್ನು ಫಲಿತಾಂಶವು ನಿಗದಿತ ದಿನಕ್ಕಿಂತ ಒಂದು ದಿನ ಮುಂಚಿತವಾಗಿಯೇ ಅಂದರೆ ಏಪ್ರಿಲ್ 23 ರಂದೇ ಪ್ರಕಟವಾಗುವಂತಾಯಿತು. ತೃತೀಯ ಭಾಷೆಯಲ್ಲಿ ಅಂಕಗಳನ್ನು ನೀಡಿದ ಕಾರಣ, ಒಟ್ಟು ತೃತೀಯ ಭಾಷೆಯಲ್ಲಿ 11 ಸಾವಿರಕ್ಕೂ ಅಧಿಕ ಮಕ್ಕಳು ಫೇಲ್ ಆಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ