ಬಿಡಿಎ ಸ್ವತ್ತಿನ ಮೇಲೆ ಅನಧಿಕೃತ ರಸ್ತೆ: ಗಂಭೀರ ಆರೋಪ, ಆಯುಕ್ತರಿಗೆ NR ರಮೇಶ್‌ ಪತ್ರ

Published : Apr 23, 2026, 09:08 AM IST
BDA

ಸಾರಾಂಶ

ಬೆಂಗಳೂರಿನ ಸರ್‌.ಎಂ.ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಬಿಡಿಎಗೆ ಸೇರಿದ ನಿವೇಶನ, ಉದ್ಯಾನ ಹಾಗೂ ರಾಜಕಾಲುವೆ ಮೇಲೆ ಖಾಸಗಿ ವ್ಯಕ್ತಿಗಳಿಗೆ ಅನುಕೂಲ ಮಾಡಿಕೊಡಲು ಅನಧಿಕೃತ ರಸ್ತೆ ನಿರ್ಮಿಸಲಾಗುತ್ತಿದೆ ಎಂದು ಎನ್‌.ಆರ್‌.ರಮೇಶ್‌ ಆರೋಪಿಸಿದ್ದಾರೆ. 

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಸೇರಿದ ಸರ್‌.ಎಂ.ವಿಶ್ವೇಶ್ವರಯ್ಯ ಬಡಾವಣೆಯ 3ನೇ ಬ್ಲಾಕಿನ ನಿವೇಶನ, ಉದ್ಯಾನ ಹಾಗೂ ರಾಜ ಕಾಲುವೆ ಮೇಲೆ ಅನಧಿಕೃತ ರಸ್ತೆ ನಿರ್ಮಿಸಿ ಖಾಸಗಿ ಸ್ವತ್ತಿನ ಮಾಲೀಕರಿಗೆ ಅನುಕೂಲ ಮಾಡಿಕೊಡುತ್ತಿರುವ ಗಂಭೀರ ಆರೋಪ ಕೇಳಿ ಬಂದಿದೆ.

ಈ ಸಂಬಂಧ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್‌.ಆರ್‌.ರಮೇಶ್‌ ಅವರು ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಮುಖ್ಯ ಆಯುಕ್ತರು ಮತ್ತು ಬಿಡಿಎ ಆಯುಕ್ತರಿಗೆ ದೂರು ನೀಡಿದ್ದಾರೆ.

ಸರ್‌.ಎಂ.ವಿಶ್ವೇಶ್ವರಯ್ಯ ಬಡಾವಣೆ 3ನೇ ಬ್ಲಾಕಿನ ನಿವೇಶನ ಸಂಖ್ಯೆ 433ರ ಅಂಚಿನ ಉಳಿಕೆ ಜಾಗ, ಉದ್ಯಾನ ಸಂಖ್ಯೆ 5 ಹಾಗೂ ರಾಜಕಾಲುವೆಯ ಮೇಲೆ ಅನಧಿಕೃತವಾಗಿ ನಡೆಸುತ್ತಿರುವ ರಸ್ತೆ ನಿರ್ಮಾಣ ಕಾಮಗಾರಿ ತಡೆಹಿಡಿದು ಸರ್ಕಾರಿ ನೆಲಗಳ್ಳರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಈ ರಸ್ತೆ ನಿರ್ಮಾಣಕ್ಕೆ ಸ್ಥಳೀಯ ನಿವಾಸಿಗಳ ವಿರೋಧ

ಬಿಡಿಎ 2003-04ನೇ ಸಾಲಿನಲ್ಲಿ ಸರ್‌.ಎಂ.ವಿಶ್ವೇಶ್ವರಯ್ಯ ಬಡಾವಣೆಯ 1ನೇ ಬ್ಲಾಕಿನಿಂದ 9ನೇ ಬ್ಲಾಕ್‌ ಅಭಿವೃದ್ಧಿಪಡಿಸಿದೆ. ಈ ಪೈಕಿ 3ನೇ ಬ್ಲಾಕಿನ ನಿವೇಶನ ಸಂಖ್ಯೆ 433ರ ಪಕ್ಕದ ಸುಮಾರು 30/40 ಚ.ಅಡಿ ವಿಸ್ತೀರ್ಣದ ಜಾಗ ಖಾಲಿಯಿದೆ. ಈ ಜಾಗವನ್ನು ಈವರೆಗೂ ಯಾರಿಗೂ ಹಂಚಿಕೆ ಮಾಡಿಲ್ಲ. ಈ ಜಾಗದ ದಕ್ಷಿಣಕ್ಕೆ 40 ಅಡಿ ರಸ್ತೆ, ಉತ್ತರಕ್ಕೆ ಖಾಸಗಿ ಜಮೀನು, ಪೂರ್ವಕ್ಕೆ ಉದ್ಯಾನವಿದೆ. ಈ ಬಡಾವಣೆಯಲ್ಲಿ ಉಳಿಕೆ ನಿವೇಶನಗಳನ್ನು ಹರಾಜಿನಲ್ಲಿ ಮಾರಾಟ ಮಾಡಲಾಗುತ್ತಿದೆ. ಆದರೆ, 3ನೇ ಬ್ಲಾಕಿನ ನಿವೇಶನ ಸಂಖ್ಯೆ 433ರ ಪಕ್ಕದ ಖಾಲಿ ಜಾಗವನ್ನು ಹರಾಜು ಪ್ರಕ್ರಿಯೆಗೆ ಒಳಪಡಿಸಿಲ್ಲ ಎಂದು ವಿವರಿಸಿದ್ದಾರೆ.

ಕೆಲ ಖಾಸಗಿ ವ್ಯಕ್ತಿಗಳು ಈ ಜಾಗದಲ್ಲಿ ಅನಧಿಕೃತವಾಗಿ ರಸ್ತೆ ನಿರ್ಮಿಸಲು ಪದೇ ಪದೇ ಪ್ರಯತ್ನಿಸುತ್ತಿದ್ದಾರೆ. ಈ 30/40 ವಿಸ್ತೀರ್ಣದ ಜಾಗವನ್ನು ಹರಾಜು ಹಾಕಿದರೆ ಬಿಡಿಎಗೆ ಕೋಟ್ಯಂತರ ರು. ಅದಾಯ ಬರುತ್ತದೆ. ಅನಧಿಕೃತ ರಸ್ತೆಗೆ ನಿರ್ಮಾಣಕ್ಕೆ ಸ್ಥಳೀಯ ನಿವಾಸಿಗಳ ವಿರೋಧವೂ ಇದೆ. ಈ ಸಂಬಂಧ ನಿವಾಸಿಗಳು ಬಿಡಿಎಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಳಿಸಿದ್ದರು. ಇದೀಗ ಮತ್ತೆ ರಸ್ತೆ ನಿರ್ಮಾಣ ಕಾಮಗಾರಿ ಕೈಗೊಳ್ಳಲು ಮುಂದಾಗಿದ್ದಾರೆ. ಇದರ ವಿರುದ್ಧ ಸ್ಥಳೀಯ ನಿವಾಸಿಗಳು ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.

ಅಕ್ರಮ ಹಿಂದೆ ಶಾಸಕ ಸೋಮಶೇಖರ್ ಹಿಂಬಾಲಕ

ಇಲ್ಲಿನ ಖಾಸಗಿ ತೋಟದ ಮಾಲೀಕರು ವಸತಿ ಸಂಕೀರ್ಣ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇವರಿಗೆ ಅನುಕೂಲ ಮಾಡುವ ಉದ್ದೇಶದಿಂದ ಉಲ್ಲಾಳ ವಾರ್ಡ್‌ ಕಾಂಗ್ರೆಸ್‌ ಅಧ್ಯಕ್ಷ ರಮೇಶ್‌ ಗೌಡ ಎಂಬ ಸ್ಥಳೀಯ ಮುಖಂಡ ಈ ಸರ್ಕಾರಿ ಸ್ವತ್ತಿನಲ್ಲಿ ಅನಧಿಕೃತ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇದರ ಹಿಂದೆ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿರುವುದು ಸ್ಪಷ್ಟವಾಗಿದೆ. ಈ ವ್ಯಕ್ತಿ ಸ್ಥಳೀಯ ಶಾಸಕ ಎಸ್‌.ಟಿ.ಸೋಮಶೇಖರ್‌ ಹಿಂಬಾಲಕನೂ ಆಗಿದ್ದಾನೆ. ಹೀಗಾಗಿ ಬಿಡಿಎ ಅಧಿಕಾರಿಗಳು ಈ ಕಾನೂನು ಬಾಹಿರ ಕಾರ್ಯದ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕಿದ್ದಾರೆ ಎಂದು ರಮೇಶ್ ಆರೋಪಿಸಿದ್ದಾರೆ.

ಇದನ್ನೂ ಓದಿ: MLC ಸೂರಜ್ ರೇವಣ್ಣ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ: 2ನೇ ಆರೋಪಿಯಿಂದ ಅಚ್ಚರಿಯ ನಡೆ!

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಈ ಅನಧಿಕೃತ ರಸ್ತೆ ನಿರ್ಮಾಣ ತಡೆಯಬೇಕು. ಸರ್ಕಾರಿ ಭೂಮಿ ಕಬಳಿಸಲು ಮುಂದಾಗಿರುವ ಭೂಗಳ್ಳರು ಮತ್ತು ಇವರಿಗೆ ಸಹಕಾರ ನೀಡುತ್ತಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ವಾಣಿಜ್ಯ ತೆರಿಗೆ ಇಲಾಖೆಗೆ 410 ಕೋಟಿ ಜಿಎಸ್‌ಟಿ ವಂಚನೆ; ಬೆಂಗಳೂರಿನಲ್ಲಿ ಓರ್ವನ ಬಂಧನ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

MLC ಸೂರಜ್ ರೇವಣ್ಣ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ: 2ನೇ ಆರೋಪಿಯಿಂದ ಅಚ್ಚರಿಯ ನಡೆ!
ವಾಣಿಜ್ಯ ತೆರಿಗೆ ಇಲಾಖೆಗೆ 410 ಕೋಟಿ ಜಿಎಸ್‌ಟಿ ವಂಚನೆ; ಬೆಂಗಳೂರಿನಲ್ಲಿ ಓರ್ವನ ಬಂಧನ