
ಬೆಂಗಳೂರು (ಏ.7): ರಾಜ್ಯದಲ್ಲಿ ನಡೆಸಲುದ್ದೇಶಿಸಿರುವ ಜನಗಣತಿ ಕಾರ್ಯಕ್ಕೆ ಸರ್ಕಾರದ ಬಹುತೇಕ ಇಲಾಖೆಗಳ ಸಿಬ್ಬಂದಿಯನ್ನು ಬಳಸಿಕೊಳ್ಳುತ್ತಿರುವುದರಿಂದ ಪ್ರಮುಖವಾಗಿ ಕಂದಾಯ, ಶಿಕ್ಷಣ, ಸ್ಥಳೀಯ ಸಂಸ್ಥೆ, ಬೆಸ್ಕಾಂ ಸೇರಿ ಎಲ್ಲ ಎಸ್ಕಾಂಗಳು, ಕೃಷಿ ಇಲಾಖೆಗಳಿಂದ ಸಾರ್ವಜನಿಕರಿಗೆ ಸಕಾಲಕ್ಕೆ ಸೇವೆ ಸಿಗದೆ ವ್ಯತ್ಯಯವಾಗುತ್ತಿರುವ ದೂರು ಕೇಳಿ ಬಂದಿದೆ.
ಗಣತಿ ಸಂಬಂಧ ತರಬೇತಿ ಹಂತದಲ್ಲಿ ಈ ಸಮಸ್ಯೆ ಉದ್ಬವವಾಗಿದ್ದು, ಏ.16ರಿಂದ ಒಂದು ತಿಂಗಳ ಕಾಲ ಮನೆ ಗಣತಿ ನಡೆಯುವ ಅವಧಿಯಲ್ಲಿ ಜನರ ತೊಂದರೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ದೇಶದ ನಾಗರಿಕರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸ್ಥಿತಿ-ಗತಿ ಆಧರಿಸಿ ಯೋಜನೆ, ಕಾರ್ಯಕ್ರಮಗಳನ್ನು ರೂಪಿಸಲು ಅವಶ್ಯವಾಗಿರುವ ಗಣತಿ ಕಾರ್ಯ ರಾಜ್ಯದಲ್ಲಿ ನಡೆಸಲು ಸುಮಾರು 2.5 ಲಕ್ಷ ಸರ್ಕಾರಿ ಸಿಬ್ಬಂದಿ, ಅಧಿಕಾರಿಗಳನ್ನು ನಿಯೋಜಿಸಲಾಗುತ್ತಿದೆ.
ಜನಗಣತಿಗೆ ಪೂರ್ವಭಾವಿಯಾಗಿ ಹಂತ ಹಂತದಲ್ಲಿ ತರಬೇತಿ ನೀಡಿಕೆ ಆರಂಭವಾಗಿದ್ದು, ಈಗಾಗಲೇ ಮಾಸ್ಟರ್ ಟ್ರೈನರ್ ತರಬೇತಿ ಮುಗಿದಿದೆ. ಗಣತಿದಾರರಿಗೆ ಏ.1ರಿಂದ 9ರವರೆಗೆ ಮೂರು ಹಂತದಲ್ಲಿ ತರಬೇತಿ ನೀಡಿಕೆ ನಡೆಯಲಿದೆ. ಇದಾದ ನಂತರ ಏ.16ರಿಂದ ಮೇ 15ರವರೆಗೆ ಮನೆಗಳ ಪಟ್ಟಿ/ಮನೆ ಗಣತಿ ಕಾರ್ಯ ನಡೆಯಲಿದೆ.
ಸರ್ಕಾರ ಈಗಾಗಲೇ ಗಣತಿ ಕಾರ್ಯದಲ್ಲಿ ಯಾರು ಭಾಗಿಯಾಗಬೇಕೆಂದು ಆದೇಶ ನೀಡಿ, ಕಡ್ಡಾಯವಾಗಿ ತರಬೇತಿ ಪಡೆಯದಿದ್ದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ. ಗಣತಿ ಕಾರ್ಯಕ್ಕೆ ಶಿಕ್ಷಣ, ಕಂದಾಯ, ತೆರಿಗೆ ಇಲಾಖೆ, ಕೃಷಿ, ಇಂಧನ ಇಲಾಖೆ ಸೇರಿ ಎಲ್ಲ ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಆಯ್ಕೆ ಮಾಡಿ ತರಬೇತಿ ಕೊಡಲಾರಂಭಿಸಿದೆ. ರಾಜ್ಯಾದ್ಯಂತ ಗಣತಿದಾರರಿಗೆ ತರಬೇತಿ ನೀಡುತ್ತಿರುವುದರಿಂದ ಜನರಿಗೆ ಪ್ರಮುಖ ಇಲಾಖೆಗಳ ಸೇವೆ ಪಡೆಯಲು ಪರದಾಡಬೇಕಾಗಿದೆ.
ಸಿಇಟಿ ತರಬೇತಿಗೆ ಸಂಕಟ:
ಪ್ರೌಢಶಾಲೆ ಹಾಗೂ ಪಿಯು ಉಪನ್ಯಾಸಕರು ತರಬೇತಿಗೆ ಹೋಗುತ್ತಿರುವ ಪರಿಣಾಮ ಉತ್ತರ ಪತ್ರಿಕೆಗಳ ಮೌಲ್ಯಮಾಪನ ವಿಳಂಬವಾಗುವ ಆತಂಕವನ್ನು ಶಿಕ್ಷಕರು ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಅನೇಕ ಕಾಲೇಜುಗಳು ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗೆ ವಿದ್ಯಾರ್ಥಿಗಳನ್ನು ಸಿಇಟಿಗೆ ಸಜ್ಜುಗೊಳಿಸುತ್ತಿವೆ. ಈ ಸಂಬಂಧ ಶಿಕ್ಷಣ ಇಲಾಖೆ ಪಿಯುಸಿ ವಿಜ್ಞಾನ ವಿಭಾಗದ ಸರ್ಕಾರಿ ಕಾಲೇಜಿನ 25 ಸಾವಿರ ವಿದ್ಯಾರ್ಥಿಗಳಿಗೆ ನಿತ್ಯ ಆನ್‌ಲೈನ್ ತರಗತಿ ನಡೆಸಬೇಕು ಎಂದು ಸೂಚಿಸಿದೆ. ಆದರೆ ಉಪನ್ಯಾಸಕರನ್ನು ಗಣತಿ ತರಬೇತಿಗೆ ನಿಯೋಜನೆ ಮಾಡಿದೆ ಎಂದು ವಿದ್ಯಾರ್ಥಿಗಳು, ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ಜನರೊಂದಿಗೆ ಹೆಚ್ಚು ಸಂಪರ್ಕ ಹೊಂದಿರುವ ಕಂದಾಯ ಇಲಾಖೆಯಲ್ಲೂ ಸಮಸ್ಯೆಯನ್ನು ಸಾರ್ವಜನಿಕರು ಎದುರಿಸುತ್ತಿದ್ದಾರೆ. ಒಂದು ಕಡೆ ತೆರಿಗೆ ಪಾವತಿ, ಖಾತಾ ಬದಲಾವಣೆ ಸೇರಿ ಆಯ್ದ ಸೇವೆಗಳಲ್ಲಿ ವಿಳಂಬವಾಗುತ್ತಿದ್ದರೆ ಮತ್ತೊಂದು ಕಡೆ ತೆರಿಗೆ ವಸೂಲಿ ಕುಂಠಿತವಾಗುತ್ತಿದೆ. ಅತ್ಯಂತ ಅವಶ್ಯ ಸೇವೆ ಒದಗಿಸುವ ಎಸ್ಕಾಂ, ಜಲಮಂಡಳಿಗಳಲ್ಲೂ ಈ ಸಮಸ್ಯೆ ಕಂಡು ಬಂದಿದೆ. ಮೂರ್ನಾಲ್ಕು ಜನ ಸಿಬ್ಬಂದಿ ನೀಡಬೇಕಾದ ಸೇವೆ ಈಗ ಒಬ್ಬರು ಇಲ್ಲವೇ ಇಬ್ಬರು ಕೊಡುತ್ತಿದ್ದಾರೆ. ಬೆಸ್ಕಾಂನ ಕೆಲ ಕಡೆ ನಗದು ಕೌಂಟರ್ ಬಂದ್ ಮಾಡಿರುವ ಪರಿಣಾಮ ವಿದ್ಯುತ್ ಗ್ರಾಹಕರು, ಗುತ್ತಿಗೆದಾರರು ಸಮಸ್ಯೆ ಎದುರಿಸುತ್ತಿದ್ದಾರೆ.
ವಾಣಿಜ್ಯ ಹಾಗೂ ಆದಾಯ ತೆರಿಗೆ ಇಲಾಖೆಯಲ್ಲಿ ಹಿರಿಯ ಅಧಿಕಾರಿಗಳನ್ನು ಸಹ ಗಣತಿಯ ಮೇಲ್ವಿಚಾರಣೆಗೆ ನಿಯೋಜಿಸಿರುವುದರಿಂದ ಇವರ ಹಂತದಲ್ಲಿ ಆಗಬೇಕಾದ ಕೆಲಸಗಳು ಇತ್ಯರ್ಥವಾಗುತ್ತಿಲ್ಲ ಎಂದು ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.==
ರಾಜ್ಯಾದ್ಯಂತ ಮೊಬೈಲ್ ಆ್ಯಪ್ ಮೂಲಕ ನಡೆಯುವ ಗಣತಿ ಕಾರ್ಯದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಸುಮಾರು 25 ಸಾವಿರ ಜನರನ್ನು ನಿಯೋಜಿಸಲಾಗಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಸುಮಾರು 4300, ಮೈಸೂರು ಜಿಲ್ಲೆಯಲ್ಲಿ 7,748 ಸಿಬ್ಬಂದಿ ಭಾಗಿಯಾಗಲಿದ್ದಾರೆ.
==
ಜನಗಣತಿ ವೇಳಾಪಟ್ಟಿ
ಏ.1ರಿಂದ 15ರವರೆಗೆ ಸ್ವಯಂ ಗಣತಿಗೆ ಅವಕಾಶ
ಗಣತಿದಾರರು/ಸೂಪರ್‌ವೈಸರ್‌ಗೆ ತರಬೇತಿ
- ಮೊದಲ ಹಂತ-ಏ1ರಿಂದ ಏ.3
- ಎರಡನೇ ಹಂತ-ಏ. 4
- ಮೂರನೇ ಹಂತ-ಏ.7ರಿಂದ ಏ.9
==
ಮನೆಗಣತಿ
ಏ.16ರಿಂದ ಮೇ 16
==
ಜನಗಣತಿ
ಫೆಬ್ರವರಿ 2027ರಿಂದ ಆರಂಭ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ