‘108’ಕ್ಕೆ ಕರೆ ಮಾಡಿದರೆ ಇಂದು ರಾತ್ರಿಯಿಂದ ಆ್ಯಂಬುಲೆನ್ಸ್ ಬರಲ್ಲ! ಕರ್ತವ್ಯ ಬಹಿಷ್ಕರಿಸಿದ ಸಿಬ್ಬಂದಿ

Published : Oct 14, 2026, 07:13 AM IST
108 Ambulance Services bandh

ಸಾರಾಂಶ

ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ 108 ಆ್ಯಂಬುಲೆನ್ಸ್‌ ನೌಕರರು ಬುಧವಾರ ರಾತ್ರಿಯಿಂದ ಕರ್ತವ್ಯ ಬಹಿಷ್ಕರಿಸಲಿದ್ದಾರೆ. ಆದರೆ ನೌಕರರ ಬೆದರಿಕೆಗೆ ಜಗ್ಗುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಆರೋಗ್ಯ ಸಚಿವರು, ಮುಂದಿನ ಎರಡು ತಿಂಗಳು 108 ಸೇವೆಯನ್ನು ಅವಲಂಬಿಸದಂತೆ ಸಾರ್ವಜನಿಕರಿಗೆ ತಿಳಿಸಿದ್ದಾರೆ.

ಬೆಂಗಳೂರು : ವೇತನ ಪರಿಷ್ಕರಣೆ ಸೇರಿ ವಿವಿಧ ಬೇಡಿಕೆ ಈಡೇರಿಸದಿದ್ದರೆ ಬುಧವಾರ ರಾತ್ರಿ 10 ಗಂಟೆಯಿಂದ ಕರ್ತವ್ಯ ಬಹಿಷ್ಕರಿಸಿ ಸಾಮೂಹಿಕ ರಾಜೀನಾಮೆ ನೀಡುವುದಾಗಿ ಆರೋಗ್ಯ ಕವಚ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ 108 ಆ್ಯಂಬುಲೆನ್ಸ್‌ ನೌಕರರು ಹೇಳಿದ್ದಾರೆ.

ಮತ್ತೊಂದೆಡೆ, 108 ಆ್ಯಂಬುಲೆನ್ಸ್‌ ನೌಕರರ ಬೆದರಿಕೆಗೆ ಜಗ್ಗುವುದಿಲ್ಲ ಎಂದು ಆರೋಗ್ಯ ಸಚಿವರು ಸ್ಪಷ್ಟಪಡಿಸಿದ್ದಾರೆ.

ಹೀಗಾಗಿ 108 ಆ್ಯಂಬುಲೆನ್ಸ್‌ ನೌಕರರ ಮುಷ್ಕರ ಬಹುತೇಕ ಖಚಿತ ಎಂಬಂತಾಗಿದ್ದು, ಬುಧವಾರ ರಾತ್ರಿಯಿಂದ 108 ಆ್ಯಂಬುಲೆನ್ಸ್‌ ಸೇವೆಯಲ್ಲಿ ತೀವ್ರ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ. ವೇತನ ಪರಿಷ್ಕರಣೆ, ದೈನಂದಿನ ಕರ್ತವ್ಯದ ವೇಳಾಪಟ್ಟಿ ಬದಲಾವಣೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರಕ್ಕೆ ಸೆ.21ರ ಗಡುವು ನೀಡಲಾಗಿತ್ತು. ಸೆ.22 ರಂದು ನಡೆದ ಸಭೆಯಲ್ಲಿ ಬೇಡಿಕೆ ಈಡೇರಿಕೆಗೆ ಜಿವಿಕೆ ಕಂಪನಿ ಒಪ್ಪಿದ್ದು, ಮುಷ್ಕರ ಹಿಂಪಡೆಯುತ್ತಿರುವುದಾಗಿ ನೌಕರರು ಹೇಳಿದ್ದರು. ಆದರೆ, ಈವರೆಗೆ ಭರವಸೆ ಈಡೇರಿಸದ ಹಿನ್ನೆಲೆಯಲ್ಲಿ ಬುಧವಾರ ರಾತ್ರಿಯಿಂದ ಮುಷ್ಕರ ಹೂಡುತ್ತಿರುವುದಾಗಿ ನೌಕರರು ಸ್ಪಷ್ಟಪಡಿಸಿದ್ದಾರೆ.

ಅನ್ಯ ರಾಜ್ಯದಲ್ಲಿ ಉತ್ತಮ ವೇತನ

ಈ ಬಗ್ಗೆ ಮಾತನಾಡಿರುವ ಕರ್ನಾಟಕ ರಾಜ್ಯ ಆರೋಗ್ಯ ಕವಚ (108) ನೌಕರರ ಸಂಘದ ಅಧ್ಯಕ್ಷ ಪರಮಶಿವಯ್ಯ, ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜಿವಿಕೆ ಇಎಂಆರ್‌ಯ ಕಂಪನಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಇದೇ ಕಂಪನಿ ಬೇರೆ ರಾಜ್ಯಗಳಲ್ಲಿ ಉತ್ತಮ ವೇತನ ನೀಡುತ್ತಿದ್ದು, ರಾಜ್ಯದಲ್ಲಿ ಮಾತ್ರ ನಮ್ಮನ್ನು ಶೋಷಿಸುತ್ತಿದೆ. ರಾಜ್ಯದಲ್ಲಿ 108 ಸೇವೆಯಲ್ಲಿ ಚಾಲಕರು, ಸ್ಟಾಫ್ ನರ್ಸ್ ಸೇರಿ 3,200 ಸಿಬ್ಬಂದಿ ಇದ್ದು, ಎಲ್ಲರೂ ರಾಜೀನಾಮೆ ನೀಡಿ ಪರ್ಯಾಯ ಕೆಲಸ ನೋಡಿಕೊಳ್ಳುತ್ತೇವೆ. 108 ಆಂಬ್ಯುಲೆನ್ಸ್ ಇಲ್ಲದೆ ಸಾರ್ವಜನಿಕರಿಗೆ ತೊಂದರೆಯಾದರೆ ನಾವು ಜವಾಬ್ದಾರರಲ್ಲ. ಬದಲಿಗೆ ಗುತ್ತಿಗೆ ವಹಿಸಿಕೊಂಡಿರುವ ಜಿವಿಕೆ ಇಎಂಆರ್‌ಯ ಕಂಪನಿ ಹಾಗೂ ಸರ್ಕಾರವೇ ಹೊಣೆಯಾಗಲಿದೆ ಎಂದು ಹೇಳಿದರು.

ಬೇಡಿಕೆಗಳೇನು?

2017 ರಿಂದ 2022ರವರೆಗೆ ಯಾವುದೇ ವೇತನ ಹೆಚ್ಚಳ ಆಗಿಲ್ಲ. ಹೀಗಾಗಿ ಪ್ರತಿ ವರ್ಷ 108 ಆ್ಯಂಬುಲೆನ್ಸ್ ನೌಕರರ ವೇತನ ಪರಿಷ್ಕರಣೆ ಮಾಡಬೇಕು, 3 ಪಾಳಿಯಲ್ಲಿ ಆ್ಯಂಬುಲೆನ್ಸ್​ ವಾಹನದ ಸೌಕರ್ಯ ಮಾಡಬೇಕು. ⁠ವಲಯವಾರು ವಿಂಗಡಣೆ ಮಾಡಿ ನಿಗದಿ ಮಾಡಿರುವ ವೇತನ ರದ್ದುಪಡಿಸಿ ಏಕರೂಪ ವಲಯವಾಗಿ ಬದಲಾವಣೆ ಮಾಡಬೇಕು. ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ 50 ಲಕ್ಷ ರು. ಪರಿಹಾರ, ಜ್ಯೇಷ್ಠತೆ ಆಧಾರದ ಮೇಲೆ ಸಿಬ್ಬಂದಿಗೆ ವೇತನ ನಿಗದಿ ಮಾಡಬೇಕು. ಕಾರ್ಮಿಕ ಇಲಾಖೆ ಪ್ರಕಾರ ಪ್ರತಿ ತಿಂಗಳು 7ರ ಒಳಗೆ ವೇತನ ನೀಡಬೇಕು. ಎಲ್ಲಾ ಕೆಲಸದ ಸ್ಥಳಗಳಲ್ಲಿ ಕಾರ್ಮಿಕರಿಗೆ ಶೌಚಾಲಯ, ವಿಶ್ರಾಂತಿ ಕೊಠಡಿ, ಆ್ಯಂಬುಲೆನ್ಸ್ ಸ್ವಚ್ಛಗೊಳಿಸಲು ನೀರಿನ ವ್ಯವಸ್ಥೆ ಮಾಡಬೇಕು ಎಂದು ನೌಕರರ ಸಂಘ ಆಗ್ರಹಿಸಿದೆ.

ಬ್ಲ್ಯಾಕ್‌ಮೇಲ್‌ಗೆ ಜಗ್ಗಲ್ಲ, 2 ತಿಂಗಳು ಟೈಂ ಕೊಡಿ

108 ಆ್ಯಂಬುಲೆನ್ಸ್‌ ಸಿಬ್ಬಂದಿ ಬ್ಲ್ಯಾಕ್‌ಮೇಲ್‌ಗೆ ನಾವು ಜಗ್ಗುವುದಿಲ್ಲ. ಸಾರ್ವಜನಿಕರು ಮುಂದಿನ ಎರಡು ತಿಂಗಳು 108 ಆ್ಯಂಬುಲೆನ್ಸ್ ಮೇಲೆ ಅವಲಂಬಿಸಬೇಡಿ. 2 ತಿಂಗಳ ಬಳಿಕ ಅತ್ಯುತ್ತಮ ಆ್ಯಂಬುಲೆನ್ಸ್‌ ಸೇವೆ ವ್ಯವಸ್ಥೆ ಮಾಡುತ್ತೇವೆ.

- ಯು.ಟಿ. ಖಾದರ್‌, ಆರೋಗ್ಯ ಸಚಿವ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Karnataka News Live: ಕಬ್ಬು ರೈತರ ಹಿತರಕ್ಷಣೆಗೆ ರಾಜ್ಯ ಸರ್ಕಾರ ಬದ್ಧ: ರುದ್ರಪ್ಪ ಲಮಾಣಿ
ರೇಷನ್ ಕಾರ್ಡ್ ಇ-ಕೆವೈಸಿ ಅಪ್ಡೇಟ್ ಮಾಡುವ 'ಅನ್ನ ಸೇವೆ' ಆ್ಯಪ್ ರಾಜ್ಯದ ಎಲ್ಲ ಜಿಲ್ಲೆಗಳಿಗೂ ವಿಸ್ತರಣೆ!