ಶ್ರಮಿಕ ವರ್ಗಗಳಿಗೆ ಮೀಸಲಾತಿ ಐತಿಹಾಸಿಕ ತೀರ್ಮಾನ: ಆರೋಗ್ಯ ಸಚಿವ ಡಾ.ಕೆ. ಸುಧಾಕರ್

By Suvarna NewsFirst Published Dec 30, 2022, 7:30 PM IST
Highlights

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಮೀಸಲಾತಿ ವಿಚಾರದಲ್ಲಿ ಐತಿಹಾಸಿಕ ತೀರ್ಮಾನ ಕೈಗೊಂಡಿದ್ದು, ಶ್ರಮಿಕ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ವಿಚಾರದಲ್ಲಿ ಸರ್ಕಾರ ಕೈಗೊಂಡಿರುವ ಕ್ರಮ ಅಭಿನಂದನೀಯ ಎಂದು  ಸಚಿವ ಡಾ.ಕೆ. ಸುಧಾಕರ್ ಅಭಿಪ್ರಾಯಪಟ್ಟರು.

ವರದಿ: ರವಿಕುಮಾರ್ ವಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಬಳ್ಳಾಪುರ (ಡಿ.30): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಮೀಸಲಾತಿ ವಿಚಾರದಲ್ಲಿ ಐತಿಹಾಸಿಕ ತೀರ್ಮಾನ ಕೈಗೊಂಡಿದ್ದು, ಶ್ರಮಿಕ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ವಿಚಾರದಲ್ಲಿ ಸರ್ಕಾರ ಕೈಗೊಂಡಿರುವ ಕ್ರಮ ಅಭಿನಂದನೀಯ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅಭಿಪ್ರಾಯಪಟ್ಟರು. ಚಿಕ್ಕಬಳ್ಳಾಪುರ ಉತ್ಸವ ಕುರಿತು ಶುಕ್ರವಾರ ನಡೆದ ಮುಖಂಡರ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭೂಮಿಯನ್ನೇ ನಂಬಿರುವ ಒಕ್ಕಲಿಗ, ಲಿಂಗಾಯಿತ ಮತ್ತು ಪಂಚಮಸಾಲಿ ಸಮುದಾಯಗಳಿಗೆ ಮೀಸಲಾತಿ ನೀಡುವ ತೀರ್ಮಾನ ಕೈಗೊಂಡಿದ್ದು, ಈವರೆಗೆ 3ಎ ಮತ್ತು 3ಬಿಯಲ್ಲಿದ್ದ ಈ ಸಮುದಾಯಗಳನ್ನು 2ಸಿ ಮತ್ತು 2ಡಿ ಪ್ರವರ್ಗಗಳಾಗಿ ವಿಂಗಡಿಸಿ ಮೀಸಲಾತಿ ನೀಡಲು ತೀರ್ಮಾನ ಕೈಗೊಂಡಿದೆ ಎಂದು ಹೇಳಿದರು.

ಹಿಂದುಳಿದವರಿಗೆ ಭಯ ಇಲ್ಲ: ಈಗಾಗಲೇ 2ಎ ಮೀಸಲಾತಿಯಲ್ಲಿರುವ ಸುಮಾರು 107 ಜಾತಿಗಳವರು ಇದರಿಂದ ಆತಂಕ ಪಡಬೇಕಿಲ್ಲ. ಈವರೆಗೆ 2ಎ ಮೀಸಲಾತಿಯಂತೆ ಇದ್ದ ಶೇ.15 ಮೀಸಲಾತಿ ಹಾಗೆಯೇ ಮುಂದುವರಿಯಲಿದೆ. ಇದರಿಂದ ಯಾವುದೇ ಕಾರಣಕ್ಕೂ ಕಡಿಮೆ ಮಾಡುವ ಉದ್ಧೇಶ ಸರ್ಕಾರಕ್ಕಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ಕೇಂದ್ರ ಸರ್ಕಾರ ಈಗಾಗಲೇ ಕೈಗೊಂಡಿರುವ ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ ಹಾಗೂ ಈವರೆಗೆ ಯಾವುದೇ ಮೀಸಲಾತಿ ಸೌಲಭ್ಯ ಪಡೆಯದ ಸಮುದಾಯಗಳಿಗೆ ನೀಡಿರುವ ಶೇ.10 ಮೀಸಲಾತಿಯಲ್ಲಿ ಈ ಸಮುದಾಯಗಳಿಗೆ ಮೀಸಲಾತಿ ಪ್ರಮಾಣ ಹೆಚ್ಚಿಸಲಾಗುವುದು. ಇಡಬ್ಲ್ಯುಎಸ್ ಮೀಸಲಾತಿ ಶೇ.10ರಷ್ಟೂ ಈ ಸಮುದಾಯಗಳಿಗೆ ಅಗತ್ಯವಿಲ್ಲ. ಇದರಲ್ಲಿ ಪ್ರಮಾಣ ಕಡಿಮೆ ಮಾಡಿ, 2ಸಿ ಮತ್ತು 2ಡಿ ಮೀಸಲಾತಿ ಭರ್ತಿ ಮಾಡಲಾಗುವುದು ಎಂದು ಸರಕಾರದ ಕ್ರಮವನ್ನು ವಿವರಿಸಿದರು.

ಈವರೆಗೆ 3ಎ ಪ್ರವರ್ಗದಲ್ಲಿದ್ದ ಒಕ್ಕಲಿಗ ಸೇರಿದಂತೆ ಇತರೆ ಸಮುದಾಯಗಳು ಇನ್ನು ಮುಂದೆ 2ಸಿ ಪ್ರವರ್ಗದಡಿ ಮೀಸಲಾತಿಯನ್ನು ಪಡೆಯಲಿವೆ. ಅದೇ ರೀತಿಯಲ್ಲಿ ಈವರೆಗೆ 3ಬಿ ಪ್ರವರ್ಗದಲ್ಲಿದ್ದ ಪಂಚಮಸಾಲಿ, ಲಿಂಗಾಯಿತ ಸೇರಿದಂತೆ ಇತರೆ ಸಮುದಾಯಗಳು 2ಡಿ ಪ್ರವರ್ಗದಡಿ ಮೀಸಲಾತಿಯನ್ನು ಪಡೆಯಲಿವೆ. ಇವರಿಗೆ ಮೀಸಲಾತಿ ಪ್ರಮಾಣ ಎಷ್ಟು ಪ್ರಮಾಣ ಹೆಚ್ಚಳವಾಗಲಿದೆ ಎಂಬುದು ಹಿಂದುಳಿದ ವರ್ಗಗಳ ಆಯೋಗ ನೀಡುವ ಅಂತಿಮ ವರದಿಯ ನಂತರ ತೀರ್ಮಾನಿಸಲಾಗುವುದು ಎಂದು ಅವರು ಹೇಳಿದರು.

ಈವರೆಗೆ ಮೀಸಲಾತಿಯನ್ನೇ ಪಡೆಯದ, ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ ಮೇಲ್ವರ್ಗದ ಸಮುದಾಯಗಳಿಗಾಗಿ ಕೇಂದ್ರ ಸರ್ಕಾರ ಈಗಾಗಲೇ ನೀಡಿರುವ ಶೇ.10 ಮೀಸಲಾತಿ ಸಂಪೂರ್ಣವಾಗಿ ಅವರಿಗೆ ಅಗತ್ಯವಿಲ್ಲ. ಹಾಗಾಗಿ ಅದರಲ್ಲಿ ಕಡಿತ ಮಾಡಿ ಈ ಸಮುದಾಯಗಳಿಗೆ ಯಾವ ಪ್ರಮಾಣದಲ್ಲಿ ಮೀಸಲಾತಿ ಹೆಚ್ಚಿಸಬೇಕು ಎಂಬುದನ್ನು ಅಂತಿಮ ವರದಿಯ ಆಧಾರದ ಮೇಲೆ ಸರ್ಕಾರ ತೀರ್ಮಾನಿಸಲಿದೆ ಎಂದು ಸ್ಪಷ್ಟಪಡಿಸಿದರು.

ಇದರಿಂದಾಗಿ ಹಿಂದುಳಿದ ವರ್ಗದವರಿಗಾಗಿ ಇದ್ದ 2ಎ ಮೀಸಲಾತಿಯಲ್ಲಿ ಕಡಿತ ಮಾಡುವ ಯಾವುದೇ ಪ್ರಮೇಯ ಇಲ್ಲ. ಜೊತೆಗೆ 2ಎ ಮೀಸಲಾತಿಯಲ್ಲಿ ಮತ್ತೊಂದು ಸಮುದಾಯವನ್ನು ಸೇರಿಸುವ ಯಾವುದೇ ಆಲೋಚನೆಯೂ ಸರ್ಕಾರದ ಮುಂದಿಲ್ಲ. ಹಾಗಾಗಿ ಯಾವುದೇ ಸಮುದಾಯ ಆತಂಕಪಡುವ ಅಗತ್ಯವಿಲ್ಲ ಎಂದು ಸಚಿವರು ವಿಶ್ಲೇಷಿಸಿದರು. 

ಪ್ರಸ್ತುತ ಹಿಂದುಳಿದ ವರ್ಗಗಳ ಆಯೋಗ ನೀಡಿರುವ ಮಧ್ಯಂತರ ವರದಿಯ ಆಧಾರವಾಗಿ ಸರ್ಕಾರ ಈ ನಿರ್ಧಾರ ಕೈಗೊಂಡಿದ್ದು, ಇದರಿಂದ ಈವರೆಗೆ 3ಎ ಮತ್ತು 3ಬಿಯಲ್ಲಿದ್ದ ಸಮುದಾಯಗಳಿಗೆ ಮೀಸಲಾತಿಯಲ್ಲಿ ಹೆಚ್ಚಿನ ಅನುಕೂಲವಾಗಲಿದೆ. ಈ ಸಂಬಂಧ ಆಯೋಗದ ಅಂತಿಮ ವರದಿ ಬಂದ ನಂತರ ಮೀಸಲಾತಿ ಪ್ರಮಾಣವನ್ನು ಸರ್ಕಾರ ಕಲ್ಪಿಸಲಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಕೈಗೊಂಡಿರುವ ಈ ತೀರ್ಮಾನ ಐತಿಹಾಸಿಕವಾದುದಾಗಿದೆ. ತಜ್ಞರ ಜೊತೆ ಚರ್ಚೆ ಮಾಡಿ ಇಂತಹ ತೀರ್ಮಾನ ಕೈಗೊಳ್ಳಲಾಗಿದೆ. ಶ್ರಮಿಕ ವರ್ಗಗಳು, ಭೂಮಿಯನ್ನು ನಂಬಿ ದೇಶದ ಬೆನ್ನುಲುಬಾಗಿರುವ ಒಕ್ಕಲಿಗ ಮತ್ತು ವೀರಶೈವ, ಪಂಚಮಸಾಲಿ ಸಮುದಾಯಗಳಿಗೆ ಮೀಸಲಾತಿಯನ್ನು ಕಲ್ಪಿಸುವ ಜೊತೆಗೆ ಇತರೆ ಯಾವುದೇ ಸಮುದಾಯಗಳಿಗೆ ನೀಡಿರುವ ಮೀಸಲಾತಿಯನ್ನು ಕಡಿತಗೊಳಿಸದೆ ಈ ತೀರ್ಮಾನ ಕೈಗೊಂಡಿರುವುದು ಅಭಿನಂದನೀಯ ಎಂದು ಅವರು ಹೇಳಿದರು.

ಮೀಸಲಾತಿ ಅಪಾಯದಿಂದ ಸರ್ಕಾರ ಪಾರು, ಸಮುದಾಯಕ್ಕೆ ಕೇಳಿದ್ದು ಕೊಡಲಿಲ್ಲ ಅನ್ನೋ ಬೇಜಾರು!

ವಿಶ್ವ ನಾಯಕನನ್ನು ಕೊಟ್ಟ ತಾಯಿ: ದೇಶಕ್ಕೆ ಪ್ರಭಾವಿ ಪ್ರಧಾನಿಯಾಗುವ ಜೊತೆಗೆ ವಿಶ್ವ ನಾಯಕನನ್ನು ನೀಡಿದ ಮಹಾತಾಯಿ ವಿವಶರಾಗಿದ್ದು, ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಹೆತ್ತ ತಾಯಿಯನ್ನು ಕಳೆದುಕೊಂಡ ನೋವು ಭರಿಸುವ ಶಕ್ತಿಯನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಭಗವಂತ ಕರುಣಿಸಲಿ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಪ್ರಾರ್ಥಿಸಿದರು.

IndiaGate: ಮೀಸಲಾತಿ ಫಾರ್ಮುಲಾ ಸುಪ್ರೀಂ ಒಪ್ಪುತ್ತಾ?

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶತಾಯುಷಿ ತಾಯಿಯ ಆಶೀರ್ವಾದ, ಪ್ರೀತಿಯೇ ಪ್ರಧಾನಿಯವರನ್ನು ಇಷ್ಟು ಎತ್ತರಕ್ಕೆ ಬೆಳೆಯಲು ಕಾರಣವಾಗಿದೆ. ವಯೋಸಹಜ ಮರಣವನ್ನು ಅವರು ಹೊಂದಿದ್ದಾರೆ. ತಾಯಿ ಅಗಲಿಕೆ ಎಷ್ಟು ನೋವು ಕೊಡಲಿದೆ ಎಂಬುದು ಸ್ವತಃ ಅನುಭವದಿಂದ ಕಂಡಿದ್ದೇನೆ. ಹಾಗಾಗಿ ಪ್ರಧಾನಿ ಮೋದಿಯವರಿಗೆ ನೋವು ಭರಿಸುವ ಶಕ್ತಿ ನೀಡಲಿ ಮತ್ತು ಆ ಮಹಾ ತಾಯಿಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು.

click me!