IndiaGate: ಮೀಸಲಾತಿ ಫಾರ್ಮುಲಾ ಸುಪ್ರೀಂ ಒಪ್ಪುತ್ತಾ?

ಶೇ.10ರಲ್ಲಿ ಉಳಿಯುವ ಹೆಚ್ಚುವರಿ ಮೀಸಲಾತಿ ಪ್ರಮಾಣವನ್ನು ಹಿಂದುಳಿದ 2ಸಿ ಮತ್ತು 2ಡಿ ಪ್ರವರ್ಗಗಳಿಗೆ ಹಂಚುವ ಆಲೋಚನೆ ಮಾಡಿದೆ. ಇದು ದೇಶದ ಯಾವುದೇ ರಾಜ್ಯ ಸರ್ಕಾರ ತೆಗೆದುಕೊಂಡಿರುವ ಈ ರೀತಿಯ ಮೊದಲ ನಿರ್ಣಯ. ಹೀಗಾಗಿ ಇದನ್ನು ಸುಪ್ರೀಂಕೋರ್ಚ್‌ ಹೇಗೆ ವ್ಯಾಖ್ಯಾನ ಮಾಡುತ್ತದೆ ಅನ್ನುವುದು ಕುತೂಹಲಕಾರಿ.

Does the Supreme Court agree to the reservation formula

ಇಂಡಿಯಾ ಗೇಟ್‌

ಪ್ರಶಾಂತ್‌ ನಾತು

ವೀರಶೈವ ಲಿಂಗಾಯತ ಮತ್ತು ಒಕ್ಕಲಿಗರನ್ನು ಓಲೈಸುವ ದೃಷ್ಟಿಯಿಂದ ಎರಡು ಸಮುದಾಯಗಳಿಗೂ ಕೂಡ 2ಸಿ ಮತ್ತು 2ಡಿ ಎಂಬ ಹೊಸ ಪ್ರವರ್ಗಗಳನ್ನು ರಚಿಸುವುದು ಹಾಗೂ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳ ಶೇ.10 ಮೀಸಲಾತಿಯನ್ನು ಕಡಿಮೆ ಮಾಡಿ ಅದರಲ್ಲಿ ಉಳಿದ ಹೆಚ್ಚುವರಿ ಮೀಸಲಾತಿಯನ್ನು ‘2ಸಿ’ಯಲ್ಲಿ ಒಕ್ಕಲಿಗರು ಮತ್ತು ‘2ಡಿ’ಯಲ್ಲಿ ವೀರಶೈವ ಲಿಂಗಾಯತರಿಗೆ ಹಂಚಿಕೆ ಮಾಡುವ ನಿರ್ಣಯವನ್ನು ರಾಜ್ಯ ಸರ್ಕಾರವೇನೋ ತೆಗೆದುಕೊಂಡಿದೆ. ಆದರೆ, ಅಂತಿಮವಾಗಿ ಈ ನಿರ್ಣಯವನ್ನು ಸುಪ್ರೀಂಕೋರ್ಟ್ ಒಪ್ಪುತ್ತಾ ಅನ್ನುವುದೇ ಮುಖ್ಯ ಪ್ರಶ್ನೆ. ಆರ್ಥಿಕ ಮೀಸಲಾತಿಯನ್ನು ಸುಪ್ರೀಂಕೋರ್ಟು ಶೇ.50ರ ಮಿತಿಯಲ್ಲಿ ಸೇರಿಸದೆ ಪ್ರತ್ಯೇಕವಾಗಿ ನೋಡಿದ್ದೇ ಪರಿಶಿಷ್ಟಜಾತಿ, ಪಂಗಡಗಳು ಮತ್ತು ಹಿಂದುಳಿದ ಸಮುದಾಯಗಳ ಹೊರತಾಗಿ ಮೇಲ್ವರ್ಗದ ಬಡವರಿಗೆ ಮೀಸಲಾತಿ ಸಿಗುತ್ತದೆ ಎನ್ನುವ ಕಾರಣಕ್ಕೆ. ಈಗ ಅದೇ ಮೀಸಲಾತಿಯನ್ನು ತಂದು ಮರಳಿ ಹಿಂದುಳಿದ ವರ್ಗಗಳಿಗೆ ಹಂಚಬಹುದಾ ಅನ್ನುವುದು ಕಾನೂನಿನ ವ್ಯಾಖ್ಯೆ ಆಗಬೇಕಾದ ಪ್ರಶ್ನೆ. ಇದನ್ನು ಸುಪ್ರೀಂಕೋರ್ಚ್‌ ಹೇಗೆ ವ್ಯಾಖ್ಯಾನ ಮಾಡುತ್ತದೆ ಅನ್ನುವುದು ಮೀಸಲಾತಿ ನಿರ್ಧಾರದ ಭವಿಷ್ಯ ತೀರ್ಮಾನಿಸಲಿದೆ.

ರಾಜ್ಯ ಸರ್ಕಾರದ ತರ್ಕ ಏನು?

ಜಾಟ್‌, ಪಟೇಲ್‌ ಮತ್ತು ಮರಾಠಾ ಸಮುದಾಯದ ಹೋರಾಟದ ಕಾರಣದಿಂದಲೇ ಕೇಂದ್ರ ಸರ್ಕಾರ ಶೇ.10 ಮೀಸಲಾತಿ(reservation)ಯನ್ನು ತಥಾಕಥಿತ ಮೇಲ್ವರ್ಗದ ಬಡವರಿಗೆ ಕೊಡುವ ನಿರ್ಣಯ ತೆಗೆದುಕೊಂಡಿತ್ತು. ಆದರೆ, ಕರ್ನಾಟಕ(Karnataka)ದಲ್ಲಿ ಬ್ರಾಹ್ಮಣರು, ವೈಶ್ಯರು, ಮೊದಲಿಯಾರ್‌ ಸೇರಿ ಶೇ.3ರಿಂದ ಶೇ.4 ಮೇಲ್ವರ್ಗದ ಬಡವರು ಮಾತ್ರ ಆರ್ಥಿಕ ಹಿಂದುಳಿದ ನಿಯಮಗಳಲ್ಲಿ ರಾಜ್ಯದಲ್ಲಿ ಮೀಸಲಾತಿ ಪಡೆಯಲು ಅರ್ಹ ಸಮುದಾಯಗಳು. ಏಕೆಂದರೆ, ಇವರನ್ನು ಬಿಟ್ಟು ಉಳಿದ ಎಲ್ಲ ಶೇ.96ರಿಂದ ಶೇ.97 ಸಮುದಾಯಗಳು ಒಂದಿಲ್ಲೊಂದು ಮೀಸಲಾತಿ ಪಟ್ಟಿಯಲ್ಲಿವೆ. ಹೀಗಾಗಿ, ರಾಜ್ಯ ಸರ್ಕಾರ ಮೇಲ್ವರ್ಗದ ಬಡವರ ಸಂಖ್ಯೆಯ ಸಮೀಕ್ಷೆ ನಡೆಸಿ ಅದಕ್ಕೆ ತಕ್ಕಂತೆ ಮೀಸಲಾತಿ ಕೊಟ್ಟು, ಶೇ.10ರಲ್ಲಿ ಉಳಿಯುವ ಹೆಚ್ಚುವರಿ ಮೀಸಲಾತಿ ಪ್ರಮಾಣವನ್ನು ಹಿಂದುಳಿದ 2ಸಿ ಮತ್ತು 2ಡಿ ಪ್ರವರ್ಗಗಳಿಗೆ ಹಂಚುವ ಆಲೋಚನೆ ಮಾಡಿದೆ. ಇದು ದೇಶದ ಯಾವುದೇ ರಾಜ್ಯ ಸರ್ಕಾರ ತೆಗೆದುಕೊಂಡಿರುವ ಈ ರೀತಿಯ ಮೊದಲ ನಿರ್ಣಯ. ಹೀಗಾಗಿ ಇದನ್ನು ಸುಪ್ರೀಂಕೋರ್ಚ್‌ ಹೇಗೆ ವ್ಯಾಖ್ಯಾನ ಮಾಡುತ್ತದೆ ಅನ್ನುವುದು ಕುತೂಹಲಕಾರಿ. ಶೇ.10 ಮೀಸಲಾತಿಗೆ ಅರ್ಹರಾದ ಮೇಲ್ವರ್ಗದ ಬಡವರ ಪ್ರಮಾಣ ಕಡಿಮೆ ಇದ್ದರೆ, ಒಟ್ಟಾರೆ ಮೀಸಲಾತಿಯನ್ನು ಕಡಿಮೆ ಮಾಡಬೇಕಾ ಅಥವಾ ಹೆಚ್ಚುವರಿ ಮೀಸಲಾತಿಯನ್ನು ಮರಳಿ ಹಿಂದುಳಿದ ಸಮುದಾಯಗಳಿಗೆ ಹಂಚಬಹುದಾ ಅನ್ನುವುದು ಮುಖ್ಯ ಪ್ರಶ್ನೆ. ಕರ್ನಾಟಕದಲ್ಲಿ ಮಾತ್ರ ರೈತಾಪಿ ಲಿಂಗಾಯಿತ, ಒಕ್ಕಲಿಗ ಸಮುದಾಯಗಳು ಮತ್ತು ಮುಸ್ಲಿಂ, ಕ್ರೈಸ್ತ ಸಮುದಾಯಗಳು ಮೀಸಲಾತಿ ಪಟ್ಟಿಯಲ್ಲಿವೆ. ದೇಶದಲ್ಲೆಡೆ ಇವರನ್ನು ಮೇಲ್ವರ್ಗಗಳಲ್ಲಿ ಪರಿಗಣಿಸಲಾಗುತ್ತದೆ.

IndiaGate: ಸಿದ್ದರಾಮೋತ್ಸವ, ಸಿದ್ದು ಜೊತೆ ಹಿರಿಯ ನಾಯಕರು, ಮುಲಾಜಿಗೆ ಬಿದ್ರಾ ಡಿಕೆಶಿ..?

ಸಂಪುಟ ವಿಸ್ತರಣೆ ವಿಳಂಬ ಏಕೆ?

ಅಧಿಕಾರ ಹಿಡಿದ ಒಂದೂವರೆ ವರ್ಷದ ನಂತರ ಮೊದಲ ಬಾರಿಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ(Amit Sahah) ಎದುರು ಮುಖ್ಯಮಂತ್ರಿ ಬೊಮ್ಮಾಯಿ 5 ಸಚಿವ ಸ್ಥಾನ ಖಾಲಿ ಉಳಿದಿರುವುದನ್ನು ತುಂಬುವ ಬಗ್ಗೆ ಪ್ರಸ್ತಾಪ ಮಾಡಿದ್ದು, ಮಾಡುವುದೋ ಬೇಡವೋ ಎಂಬ ಬಗ್ಗೆ ವಿಪರೀತ ಜಿಜ್ಞಾಸೆಗಳಿವೆ. ಚುನಾವಣೆ ಹತ್ತಿರ ಬರುತ್ತಿರುವುದರಿಂದ ಐವ​ರಲ್ಲಿ ಬರೀ ಇಬ್ಬರನ್ನು ಅಂದರೆ, ರಮೇಶ ಜಾರಕಿಹೊಳಿ ಮತ್ತು ಈಶ್ವರಪ್ಪ ಅವರನ್ನು ಮಾತ್ರ ಒಳಗೆ ತೆಗೆದುಕೊಳ್ಳೋಣ. ಹಾಲಿ ಸಚಿವರನ್ನು ತೆಗೆಯುವುದು ಬೇಡ. ಹೊಸಬರನ್ನು ಸೇರಿ​ಸಿ​ಕೊ​ಳ್ಳು​ವು​ದೂ ಬೇಡ. ಆಗ ಅಸಮಾಧಾನ ಏಳುವ ಪ್ರಶ್ನೆಯೇ ಇಲ್ಲ ಎಂದು ಅಮಿತ್‌ ಶಾ ಅವರಿಗೆ ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದಾರೆ. ಆದರೆ ವಿಜಯೇಂದ್ರರನ್ನು ತೆಗೆದುಕೊಳ್ಳದೆ ಜಾರಕಿಹೊಳಿ, ಈಶ್ವರಪ್ಪ ಜೊತೆಗೆ ಯತ್ನಾಳ ಅಥವಾ ಬೆಲ್ಲದರನ್ನು ತೆಗೆದುಕೊಂಡು ಸಂಪುಟ ವಿಸ್ತರಣೆ ಮಾಡಿದರೆ ಯಡಿಯೂರಪ್ಪ ಬೇಸರಗೊಳ್ಳ​ಬ​ಹುದು. ಹೀಗಾ​ಗಿ ಅನಗತ್ಯ ತೊಂದರೆ ತೆಗೆ​ದು​ಕೊ​ಳ್ಳದೆ ಬೆಂಗಳೂರಿಗೆ ಬಂದಾಗ ಯಡಿಯೂರಪ್ಪ ಜೊತೆಗೆ ಮಾತನಾಡಿ ಹೇಳುತ್ತೇನೆ ಎಂದು ಹೇಳಿ ಅಮಿತ್‌ ಶಾ ಕಳುಹಿಸಿದ್ದಾರೆ. ಒಂದು ಸಣ್ಣ ಪ್ರಮಾಣದ ಸಂಪುಟ ವಿಸ್ತರಣೆ ಮಾಡಬೇಕು ಎಂದು ದಿಲ್ಲಿ ನಾಯಕರ ಮನಸ್ಸಿನಲ್ಲಿ ಇದೆಯಾದರೂ ಅನಗತ್ಯ ತೊಂದರೆಗಳು ಚುನಾವಣೆ ಹೊಸ್ತಿಲಲ್ಲಿ ಬೇಕಾ? ಎಂಬ ದ್ವಂದ್ವ ಕೂಡ ಇದ್ದೇ ಇದೆ. ಕರ್ನಾಟಕದ ಬಿಜೆಪಿಯಲ್ಲಿ ಸಂಪುಟಕ್ಕೆ ಕೈ ಹಚ್ಚಿದಾಗೊಮ್ಮೆ ಜೇನುಗೂಡಿಗೆ ಕಲ್ಲು ಹೊಡೆದಂತೆ ಭಿನ್ನಮತ ಭುಗಿಲೇಳುತ್ತದೆ ಎಂಬುದು ಅಮಿತ್‌ ಶಾಗೆ ಗೊತ್ತಿಲ್ಲದ ವಿಷಯ ಏನಲ್ಲ.

ಒಕ್ಕಲಿಗರಿಗೆ ಬಿಜೆಪಿ ಅಧ್ಯಕ್ಷ ಸ್ಥಾನ?

ಚುನಾವಣೆಗೆ ಮುಂಚೆ ರಾಜ್ಯ ಬಿಜೆಪಿ ಅಧ್ಯಕ್ಷರನ್ನು ಬದಲಿಸಿ ಒಕ್ಕಲಿಗ ಸಮುದಾಯಕ್ಕೆ ಸೇರಿದ ಒಬ್ಬರನ್ನು ಅಧ್ಯಕ್ಷ ಮಾಡಬಹುದು ಎಂಬ ಸುದ್ದಿ ದಿಲ್ಲಿ ಬಿಜೆಪಿ ವಲಯದಲ್ಲಿ ಹರಿದಾಡುತ್ತಿದೆ. ನಳಿನ್‌ ಕುಮಾರ್‌ ಕಟೀಲ್‌ ಅವಧಿ ಮುಕ್ತಾಯವಾಗಿದ್ದು, ಮೈಸೂರು ಕರ್ನಾಟಕದಲ್ಲಿ ಲಾಭ ಪಡೆಯುವ ಮತ್ತು ಲಿಂಗಾಯತ-ಒಕ್ಕಲಿಗ ಜಾತಿಗಳನ್ನು ಬ್ಯಾಲೆನ್ಸ್‌ ಮಾಡುವ ದೃಷ್ಟಿಯಿಂದ ಹೊಸ ಅಧ್ಯಕ್ಷರನ್ನು ತರುವ ಸಾಧ್ಯತೆಗಳಿವೆ. ಉನ್ನತ ಶಿಕ್ಷಣ ಸಚಿವ ಡಾ

ಸಿ.ಎನ್‌.ಅಶ್ವತ್ಥನಾರಾಯಣ ಮತ್ತು ಸಿ.ಟಿ.ರವಿ ಹೆಸರುಗಳು ಸಹಜವಾಗಿಯೇ ಮುಂದೆ ಇವೆ. ಈಗ ಒಕ್ಕಲಿಗರು ಅಧ್ಯಕ್ಷರಾಗುತ್ತಾರೆ ಎಂಬ ಸುದ್ದಿ ಹರಡಲು ಕೂಡ ಒಂದು ಮಹ​ತ್ವದ ಕಾರಣ ಇದೆ. ಕಳೆದ ವಾರ ಸಂಸ​ತ್ತಿ​ನಲ್ಲಿ ಕೆಲ ಆಂಗ್ಲ ಪತ್ರಕರ್ತರನ್ನು ಭೇಟಿ ಆಗಿದ್ದ ಅಮಿತ್‌ ಶಾ, ತಾವೇ ಕರ್ನಾಟಕದ ವಿಷಯ ತೆಗೆದು ಯಡಿಯೂರಪ್ಪ ಅವರಿಗೆ ಕರ್ನಾಟಕದ ಲಿಂಗಾಯತ ಮತದಾರರ ಮೇಲೆ ಇನ್ನೂ ಗಟ್ಟಿಹಿಡಿತ ಇದೆ. ಅಂತಹ ಒಂದು ಹಿಡಿತ ಒಕ್ಕಲಿಗರ ಮೇಲೂ ಬೇಕು. ಹೀಗಾ​ಗಿ ಒಕ್ಕಲಿಗರ ಓಟು ತರುವ ನಾಯಕತ್ವ ಇದ್ದರೆ ಲಾಭ ಆಗುತ್ತದೆ ಎಂದು ಹೇಳಿದ್ದಾರೆ. ಈ ಸುದ್ದಿ ಹೊರಬಿದ್ದ ನಂತರವೇ ಬಿಜೆಪಿಗೆ ಹೊಸ ಅಧ್ಯಕ್ಷರು ಬರುತ್ತಾರೆ ಎಂಬ ಸುದ್ದಿಗೆ ವೇಗ ಸಿಕ್ಕಿದೆ.

ಶೆಟ್ಟರ್‌ ಏಕಾಂಗಿತನ

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮತ್ತು ಮುಖ್ಯಮಂತ್ರಿ ಬೊಮ್ಮಾಯಿ ನಡುವಿನ ಗಳಸ್ಯ ಕಂಠಸ್ಯದಿಂದ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅಕ್ಷರಶಃ ರಾಜಕೀಯವಾಗಿ ಏಕಾಂಗಿಯಾಗಿ​ದ್ದಾ​ರೆ. ಒಂದು ಕಡೆ ಸರ್ಕಾರದಲ್ಲಿ ಶೆಟ್ಟರ್‌ ಸಾಹೇಬರದು ಹೆಚ್ಚು ನಡೆಯೋದಿಲ್ಲ. ಇನ್ನೊಂದು ಕಡೆ ಬಿಜೆಪಿ ಪಾರ್ಟಿ ಸಂಘಟನೆಯಲ್ಲಿ ಕೂಡ ಕೆಲವರು ಶೆಟ್ಟರ್‌ಗೆ ಟಿಕೆಟ್‌ ಸಿಗುವುದಿಲ್ಲ ಎಂದು ಪುಕಾರು ಹಬ್ಬಿಸುತ್ತಿದ್ದಾರೆ ಎಂಬ ಬೇಸರ ಕೂಡ ಅವ​ರಿ​ಗಿ​ದೆ. ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕೊಪ್ಪಳಕ್ಕೆ ಬಂದಾಗ ತಮ್ಮನ್ನು ಸೌಜನ್ಯಕ್ಕೂ ಕೂಡ ಕೊಪ್ಪಳಕ್ಕೆ ಕರೆಯದೆ ರಾತ್ರಿ 10 ಗಂಟೆಗೆ ಯಾರೋ ಜ್ಯೂನಿಯರ್‌ ಕಡೆಯಿಂದ ಫೋನ್‌ ಮಾಡಿಸಿ ಬೆಳಗ್ಗೆ ಬೀದರ್‌ ಕಾರ್ಯಾಲಯಕ್ಕೆ ಹೋಗಿ ಎಂದು ಹೇಳಿದ್ದರಿಂದ ಕೆರಳಿದ ಶೆಟ್ಟರ್‌, ಮರುದಿನ ತಮ್ಮ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ನನ್ನ ಉಸಾಬರಿಗೆ ಬಂದರೆ ಹುಷಾರ್‌ ಎಂದು ಅಬ್ಬರಿಸಿದ್ದಾರೆ. ಮೊನ್ನೆ ವಿಧಾನಸಭೆಯಲ್ಲಿ ಹುಬ್ಬಳ್ಳಿಗೆ 20 ದಿನ ಆದರೂ ನೀರು ಸಿಗುತ್ತಿಲ್ಲ, ಹಿಂಗಾದರೆ ಹೆಂಗೆ ಎಂದು ಬೇಸರ ಹೊರಹಾಕಿದ್ದಾರೆ. ಇದು ಅಷ್ಟಕ್ಕೇ ನಿಂತಿಲ್ಲ. ಹುಬ್ಬಳ್ಳಿ-ಧಾರವಾಡದ ಅಭಿವೃದ್ಧಿ ಪ್ರಾಧಿಕಾರಕ್ಕೆ ನಾನು ಹೇಳಿದ್ದು ಬಿಟ್ಟು ಅರವಿಂದ ಬೆಲ್ಲದ ಹೇಳಿದ ಹೆಸರಿಗೆ ಅನು​ಮೋ​ದನೆ ನೀಡಿ​ದರೆ ನಾನು ಸುಮ್ಮನೆ ಇರೋಲ್ಲ ಎಂದು ಬೊಮ್ಮಾಯಿ ಮತ್ತು ಕಟೀಲ್‌ ಇಬ್ಬರಿಗೂ ಹೇಳಿ ಬಂದಿದ್ದಾರೆ. ಇವೆಲ್ಲ ನಡೆಯುತ್ತಿರುವುದರಿಂದಲೋ ಏನೋ ಅಷ್ಟಕಷ್ಟೇ ಎಂಬಂತಿದ್ದ ಯಡಿಯೂರಪ್ಪ ಮತ್ತು ಶೆಟ್ಟರ್‌ ಈಗ ಒಂದಾಗಿದ್ದಾರೆ. ರಾಜಕಾರಣವೇ ಹಾಗೆ. ಇಲ್ಲಿ ನೈಜ ಮಿತ್ರರು ಯಾರೂ ಇರುವುದಿಲ್ಲ. ಇಲ್ಲಿ ‘ಕಾಮಾ ಪೂರ್ತಿ ಮಾಮಾ’ ಅಷ್ಟೇ ನೋಡಿ.

From the India Gate: ಸಮಾಜವಾದಿ ಪಕ್ಷಕ್ಕೆ ಮತ್ತಷ್ಟು ಬಲ; ಭಾರತ್‌ ಜೋಡೋ ಯಾತ್ರೆ ಯಶಸ್ಸಿನ ಗುಟ್ಟು..!

ಮುತಾಲಿಕ್‌ ರಾಜಕೀಯ

ಈ ರಾಜ​ಕೀ​ಯ​ದಲ್ಲಿ ಒಮ್ಮೆ ಬಸ್‌ ತಪ್ಪಿಸಿಕೊಂಡರೆ ಮರಳಿ ಹೋಗಿ ಹತ್ತೋದು ಬಲು ಕಷ್ಟ. 2004ರಲ್ಲಿ ಯಡಿಯೂರಪ್ಪ ಅವರು ಅನಂತಕುಮಾರ್‌, ಪ್ರಮೋದ್‌ ಮುತಾಲಿಕ್‌ರಿಗೆ ಧಾರವಾಡ, ಬೆಳಗಾವಿ, ಹಾವೇರಿಯಲ್ಲಿ ಎಲ್ಲಿ ಬೇಕಾದರೂ ನಿಲ್ಲಿ ಟಿಕೆಟ್‌ ಕೊಡುತ್ತೇವೆ ಎಂದರು. ನಾನು ಬಾಳ ಠಾಕ್ರೆ ಥರ. ಹೀಗಾಗಿ ನನ್ನ ಶಿಷ್ಯರಿಗೆ ಟಿಕೆಟ್‌ ಕೊಡಿ ಅಂದ ಮುತಾಲಿಕ್‌, ಆಗ ತಪ್ಪಿಸಿಕೊಂಡ ರಾಜಕೀಯದ ಬಸ್‌ ಹತ್ತಲು ಇನ್ನೂ ಸೈಕಲ… ಹೊಡೆಯುತ್ತಲೇ ಇದ್ದಾರೆ. ಗುಜರಾತ್‌ನಲ್ಲಿ ಪ್ರವೀಣಭಾಯಿ ತೊಗಾಡಿಯಾ ಕೂಡ ಇದೇ ತಪ್ಪು ಮಾಡಿದ್ದರು. 1995ರಿಂದ 2001ರವರೆಗೆ ಕೇಶುಭಾಯಿ ಪಟೇಲ್‌ ಅವಧಿಯಲ್ಲಿ ಗೃಹ ಇಲಾಖೆಯಲ್ಲಿ ತೊಗಾಡಿಯಾ ಹೇಳದೆ ಯಾವ ಫೈಲ… ಕೂಡ ಅಲುಗಾಡುತ್ತಿರಲಿಲ್ಲ. ಆದರೆ, ಮೋದಿ ಬಂದಾಗ 2002ರಲ್ಲಿ ಸ್ಪರ್ಧೆ ಮಾಡುವಂತೆ ಹೇಳಿದರೂ ಕೇಳದ ತೊಗಾಡಿಯಾ ಹಿಂದಿನಿಂದ ಸರ್ಕಾರವನ್ನು ನಡೆಸಲು ಹೋದರು. ಮೋದಿ-ತೊಗಾಡಿಯಾ ನಡುವೆ ತಿಕ್ಕಾಟ ಆಗಿ ಪ್ರವೀಣಭಾಯಿ ಸಂಘ ಪರಿವಾರದಿಂದಲೇ ಹೊರ ಹೋಗಬೇಕಾಯಿತು. ರಾಜಕಾರಣದಲ್ಲಿ ಟೈಮಿಂಗ್‌ ಬಹಳ ಮುಖ್ಯ ನೋಡಿ.

Latest Videos
Follow Us:
Download App:
  • android
  • ios