
ಬೆಂಗಳೂರು (ಏ.16): ನಾಡಪ್ರಭು ಕೆಂಪೇಗೌಡ ಬಡಾವಣೆಯ (NPKL) ಸಾವಿರಾರು ನಿವೇಶನದಾರರಿಗೆ ದಶಕಗಳಿಂದ ಮೂಲಸೌಕರ್ಯ ಒದಗಿಸದೆ ಸತಾಯಿಸುತ್ತಿದ್ದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (BDA) ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (K-RERA) ಈಗ ಸರಿಯಾದ ಪಾಠ ಕಲಿಸಿದೆ. ಬಡಾವಣೆಯಲ್ಲಿ ಸೈಟ್ ನೀಡಿದರೂ ಮನೆ ಕಟ್ಟಲು ಅಗತ್ಯವಾದ ಕನಿಷ್ಠ ಸೌಲಭ್ಯಗಳನ್ನು ನೀಡದ ಕಾರಣಕ್ಕಾಗಿ, ಒಬ್ಬರೇ ನಿವೇಶನದಾರರಿಗೆ ಬರೋಬ್ಬರಿ ₹56,03,736 ಬಡ್ಡಿ ಪರಿಹಾರ ನೀಡುವಂತೆ ಬಿಡಿಎಗೆ ರೇರಾ ಐತಿಹಾಸಿಕ ಆದೇಶ ನೀಡಿದೆ.
ಬೆಂಗಳೂರಿನ ಜಯನಗರ ನಿವಾಸಿ ಮೃದುಲಾ ಕೃಷ್ಣಪುರ್ ಎಂಬುವವರು ನಾಡಪ್ರಭು ಕೆಂಪೇಗೌಡ ಬಡಾವಣೆಯ 8ನೇ ಬ್ಲಾಕ್‌ನಲ್ಲಿ 50x80 ಅಳತೆಯ (ಸೈಟ್ ಸಂಖ್ಯೆ 456) ನಿವೇಶನವನ್ನು 2020ರಲ್ಲಿ ಸುಮಾರು ₹96,87,510 ಪಾವತಿಸಿ ಪಡೆದಿದ್ದರು. ಬಿಡಿಎ ಅವರಿಗೆ 2020ರ ಜೂನ್ 16ರಂದು ಸ್ವಾಧೀನ ಪತ್ರವನ್ನೂ (Possession Certificate) ನೀಡಿತ್ತು. ಆದರೆ, ಸೈಟ್ ಕೈಗೆ ಸಿಕ್ಕರೂ ಅಲ್ಲಿ ರಸ್ತೆ ಇಲ್ಲ, ಕುಡಿಯುವ ನೀರಿಲ್ಲ, ವಿದ್ಯುತ್ ಸಂಪರ್ಕವಿಲ್ಲ ಅಥವಾ ಒಳಚರಂಡಿ ವ್ಯವಸ್ಥೆಯೂ ಇಲ್ಲ. ಮೂಲಸೌಕರ್ಯಗಳಿಲ್ಲದೆ ಮನೆ ಕಟ್ಟಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿ ಮೃದುಲಾ ಅವರು ರೇರಾ ಮೊರೆ ಹೋಗಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ರೇರಾ ಅಧ್ಯಕ್ಷ ರಾಕೇಶ್ ಸಿಂಗ್ ಮತ್ತು ಸದಸ್ಯ ಜಿ.ಆರ್. ರೆಡ್ಡಿ ಅವರ ಪೀಠವು ಬಿಡಿಎ ಧೋರಣೆಯನ್ನು ತೀವ್ರವಾಗಿ ಖಂಡಿಸಿದೆ. 'ಕೇವಲ ಕಾಗದದ ಮೇಲೆ ಸೈಟ್ ಸ್ವಾಧೀನ ಪತ್ರ ನೀಡುವುದು ಸಾಕಾಗುವುದಿಲ್ಲ. ಒಬ್ಬ ನಿವೇಶನದಾರ ಆ ಸೈಟ್‌ನಲ್ಲಿ ಮನೆ ಕಟ್ಟಲು ಮತ್ತು ನೆಮ್ಮದಿಯಿಂದ ವಾಸಿಸಲು ಅಗತ್ಯವಿರುವ ರಸ್ತೆ, ನೀರು, ಚರಂಡಿಯಂತಹ ಕನಿಷ್ಠ ಸೌಲಭ್ಯಗಳನ್ನು ಒದಗಿಸುವುದು ಡೆವಲಪರ್‌ನ (ಬಿಡಿಎ) ಪ್ರಾಥಮಿಕ ಕರ್ತವ್ಯ' ಎಂದು ರೇರಾ ಸ್ಪಷ್ಟಪಡಿಸಿದೆ.
ಸುಪ್ರೀಂ ಕೋರ್ಟ್‌ನ ಈ ಹಿಂದಿನ ತೀರ್ಪುಗಳನ್ನು ಉಲ್ಲೇಖಿಸಿದ ರೇರಾ, ವಿಳಂಬ ಅವಧಿಗೆ SBI MCLR + 2% ದರದಲ್ಲಿ ಬಡ್ಡಿ ನೀಡಲು ಆದೇಶಿಸಿದೆ.
ಮೃದುಲಾ ಅವರಿಗೆ 10-06-2020 ರಿಂದ 02-02-2026ರ ವರೆಗಿನ ಅವಧಿಗೆ ಒಟ್ಟು ₹56,03,736 ಬಡ್ಡಿಯನ್ನು 60 ದಿನಗಳ ಒಳಗಾಗಿ ಪಾವತಿಸಬೇಕು.
ಅಷ್ಟೇ ಅಲ್ಲದೆ, 03-02-2026 ರಿಂದ ಬಡಾವಣೆಯಲ್ಲಿ ಮೂಲಸೌಕರ್ಯಗಳು ಪೂರ್ಣಗೊಳ್ಳುವವರೆಗೂ ಪ್ರತಿ ತಿಂಗಳು ಇದೇ ದರದಲ್ಲಿ ಬಡ್ಡಿ ಪರಿಹಾರವನ್ನು ನೀಡುತ್ತಿರಬೇಕು.
ಈ ತೀರ್ಪು ಕೇವಲ ಒಬ್ಬರಿಗೆ ಸೀಮಿತವಲ್ಲ. ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಸೈಟ್ ಪಡೆದು ಇನ್ನೂ ಮೂಲಸೌಕರ್ಯಕ್ಕಾಗಿ ಕಾಯುತ್ತಿರುವ ಸಾವಿರಾರು ಮಾಲೀಕರಿಗೆ ಇದೊಂದು ಭರವಸೆಯ ಕಿರಣವಾಗಿದೆ. ರೇರಾ ಪೀಠವು ತನ್ನ ಆದೇಶದಲ್ಲಿ ಸ್ಪಷ್ಟವಾಗಿ ಹೇಳಿರುವಂತೆ, ಯಾರು ಅಗತ್ಯ ದಾಖಲೆಗಳೊಂದಿಗೆ ದೂರು ಸಲ್ಲಿಸುತ್ತಾರೋ ಅವರೆಲ್ಲರಿಗೂ ಇಂತಹದ್ದೇ ಪರಿಹಾರ ದೊರಕಲಿದೆ. ಬಿಡಿಎಯ ನಿಷ್ಕ್ರಿಯತೆಯಿಂದ ಸಾವಿರಾರು ಕುಟುಂಬಗಳ ಜೀವಮಾನದ ಉಳಿತಾಯ ನೆನೆಗುದಿಗೆ ಬಿದ್ದಿದೆ. ಬಡಾವಣೆಯ ಅಭಿವೃದ್ಧಿ ಕಾರ್ಯಗಳು ಕುಂಟುತ್ತಾ ಸಾಗುತ್ತಿರುವುದಕ್ಕೆ ಈ ದಂಡದ ರೂಪದ ಬಡ್ಡಿ ಪರಿಹಾರವು ಬಿಡಿಎಗೆ ದೊಡ್ಡ ಹೊಡೆತ ನೀಡಲಿದೆ. ಈ ತೀರ್ಪಿನಿಂದಾಗಿ ಈಗಲಾದರೂ ಬಿಡಿಎ ಎಚ್ಚೆತ್ತುಕೊಂಡು ಬಡಾವಣೆಯ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುತ್ತದೆಯೇ ಎಂದು ನಿವೇಶನದಾರರು ಕಾದು ನೋಡಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ