
ಬೆಂಗಳೂರು: ರಾಜ್ಯದಲ್ಲಿ ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಉತ್ತರ ಕರ್ನಾಟಕ ಸೇರಿದಂತೆ ಹಲವೆಡೆ ತಾಪಮಾನ ತಾರಕಕ್ಕೇರಿದೆ. ಕಲಬುರಗಿ ಜಿಲ್ಲೆಯಲ್ಲಿ ಬುಧವಾರ ಗರಿಷ್ಠ 45 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ರಾಜ್ಯದ 12 ಜಿಲ್ಲೆಗಳಿಗೆ ನಾಲ್ಕು ದಿನಗಳ ಕಾಲ ಹೀಟ್‌ವೇವ್ (ಬಿಸಿಗಾಳಿ) ಎಚ್ಚರಿಕೆ ನೀಡಲಾಗಿದೆ.
ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯ ಪ್ರಕಾರ, ಏಪ್ರಿಲ್ 15ರಿಂದ ಉತ್ತರ ಒಳನಾಡು ಭಾಗಗಳಲ್ಲಿ ಬಿಸಿಗಾಳಿ ತೀವ್ರಗೊಂಡಿದ್ದು, ಏಪ್ರಿಲ್ 19ರವರೆಗೆ ಮುಂದುವರಿಯುವ ಸಾಧ್ಯತೆ ಇದೆ. ಮಧ್ಯ ಭಾರತದಲ್ಲಿ ಉಂಟಾಗಿರುವ ವಾಯು ಒತ್ತಡದ ಹೆಚ್ಚಳ ಹಾಗೂ ಜಾಗತಿಕ ಉಷ್ಣಾಂಶ ಏರಿಕೆಯಿಂದಾಗಿ ಈ ಬಿಸಿಗಾಳಿ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಲಾಗಿದೆ.
ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ವಿಜಯಪುರ, ಬಾಗಲಕೋಟೆ, ಕೊಪ್ಪಳ, ಗದಗ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಈ ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ತಾಪಮಾನ ಹೆಚ್ಚಾಗಿ, ಬಿಸಿಗಾಳಿಯ ಪರಿಣಾಮ ತೀವ್ರವಾಗಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.
ಈ ಕುರಿತು ಬೆಂಗಳೂರು ಹವಾಮಾನ ಕೇಂದ್ರದ ಹಿರಿಯ ವಿಜ್ಞಾನಿ ಸಿ.ಎಸ್. ಪಾಟೀಲ್ ಅವರು ಪ್ರತಿಕ್ರಿಯಿಸಿ, “ರಾಜ್ಯದ 12 ಜಿಲ್ಲೆಗಳಲ್ಲಿ ಇನ್ನೂ ನಾಲ್ಕು ದಿನ ಬಿಸಿಗಾಳಿಯ ವಾತಾವರಣ ಮುಂದುವರಿಯಲಿದೆ. ಕಲಬುರಗಿಯಲ್ಲಿ ಸದ್ಯ 42 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದ್ದು, ಮುಂದಿನ ದಿನಗಳಲ್ಲಿ ಅದು 44 ರಿಂದ 45 ಡಿಗ್ರಿ ಸೆಲ್ಸಿಯಸ್‌ಗೆ ಏರಬಹುದು ಎಂದು ತಿಳಿಸಿದ್ದಾರೆ.
ಅದೇ ವೇಳೆ, ಬೆಂಗಳೂರಿನಲ್ಲಿ ಈಗಾಗಲೇ 36 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ಅದು 38 ರಿಂದ 39 ಡಿಗ್ರಿ ಸೆಲ್ಸಿಯಸ್‌ಗೆ ಏರಬಹುದು. ಕರಾವಳಿ ಜಿಲ್ಲೆಗಳಲ್ಲಿಯೂ ಉಷ್ಣಾಂಶ 38 ಡಿಗ್ರಿ ಸೆಲ್ಸಿಯಸ್‌ವರೆಗೆ ತಲುಪುವ ಸಾಧ್ಯತೆ ಇದೆ. ಕರ್ನಾಟಕ ಮಾತ್ರವಲ್ಲದೆ ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ಇನ್ನೂ ಹಲವು ರಾಜ್ಯಗಳಲ್ಲಿಯೂ ಬಿಸಿಗಾಳಿ ತೀವ್ರವಾಗಿರುವುದಾಗಿ ಅವರು ವಿವರಿಸಿದರು.
ಉತ್ತರ ಕರ್ನಾಟಕದ ಕಲಬುರಗಿ, ರಾಯಚೂರು, ವಿಜಯಪುರ ಸೇರಿದಂತೆ ಹಲವೆಡೆ ಉಷ್ಣಾಂಶ ತೀವ್ರವಾಗಿ ಏರಿಕೆಯಾಗಿದ್ದು, ಕಲಬುರಗಿಯಲ್ಲಿ ದಾಖಲೆಯ 45 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ಮೇ ತಿಂಗಳಲ್ಲಿ ದಾಖಲಾಗುವ ಈ ಮಟ್ಟದ ಉಷ್ಣಾಂಶ ಈ ಬಾರಿ ಏಪ್ರಿಲ್‌ನಲ್ಲೇ ಕಾಣಿಸಿಕೊಂಡಿರುವುದು ಅಸಾಮಾನ್ಯ ಬೆಳವಣಿಗೆಯಾಗಿದೆ.
ಇದೇ ವೇಳೆ ವಿಜಯಪುರ ಮತ್ತು ರಾಯಚೂರಿನಲ್ಲಿ 40 ಡಿಗ್ರಿ ಸೆಲ್ಸಿಯಸ್, ಕೊಪ್ಪಳ, ಬೀದರ್, ಬಾಗಲಕೋಟೆ, ಗದಗ ಜಿಲ್ಲೆಗಳಲ್ಲಿ 39 ಡಿಗ್ರಿ ಸೆಲ್ಸಿಯಸ್, ಧಾರವಾಡ ಮತ್ತು ಚಿತ್ರದುರ್ಗದಲ್ಲಿ 38 ಡಿಗ್ರಿ ಸೆಲ್ಸಿಯಸ್, ಶಿವಮೊಗ್ಗ, ಹಾವೇರಿ, ದಾವಣಗೆರೆ, ಬೆಂಗಳೂರು ಹಾಗೂ ಮೈಸೂರಿನಲ್ಲಿ 37 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.
ವಿಪರೀತ ಬಿಸಿಲು ಹಾಗೂ ಉಷ್ಣಾಂಶ ಏರಿಕೆಯಿಂದಾಗಿ ಕಲಬುರಗಿ ಜಿಲ್ಲಾಡಳಿತ ಆರೆಂಜ್ ಅಲರ್ಟ್ ಘೋಷಿಸಿದೆ. ಬೆಳಗ್ಗೆ 11ರಿಂದ ಮಧ್ಯಾಹ್ನದವರೆಗೆ ಅನಾವಶ್ಯಕವಾಗಿ ಹೊರಗೆ ಹೋಗದಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಸೇವಿಸುವುದು, ನೆರಳಿನಲ್ಲಿ ಕಾಲ ಕಳೆಯುವುದು, ತಲೆ ಮುಚ್ಚಿಕೊಳ್ಳುವುದು ಸೇರಿದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ.
ಕಲಬುರಗಿ ಸೇರಿದಂತೆ ಉತ್ತರ ಕರ್ನಾಟಕದ ಹಲವೆಡೆಗಳಲ್ಲಿ ಬೆಳಗ್ಗೆ 8 ಗಂಟೆಯಿಂದಲೇ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಮಧ್ಯಾಹ್ನ ವೇಳೆಗೆ ರಸ್ತೆಗಳು ಬಿಕೋ ಎನ್ನುತ್ತಿವೆ. ಸಂಜೆ 6 ಗಂಟೆಯ ನಂತರ ಬಿಸಿಲು ತಗ್ಗಿದಾಗ ಮಾತ್ರ ಜನರು ಹೊರಗೆ ಬರುತ್ತಿರುವುದು ಕಂಡು ಬರುತ್ತಿದೆ.
ಒಟ್ಟಾರೆ, ರಾಜ್ಯದಲ್ಲಿ ಮುಂದಿನ ಕೆಲವು ದಿನಗಳ ಕಾಲ ಬಿಸಿಗಾಳಿಯ ತೀವ್ರತೆ ಮುಂದುವರಿಯುವ ಸಾಧ್ಯತೆ ಇದ್ದು, ಸಾರ್ವಜನಿಕರು ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸುವುದು ಅಗತ್ಯವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ