ಕರ್ನಾಟಕಕ್ಕೆ 2024ರ ಮೊದಲ ಮಳೆಯು ಮಾರ್ಚ್ ತಿಂಗಳಲ್ಲೇ ಸುರಿದಿದೆ. ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಬೇಸಿಗೆ ಆರಂಭಕ್ಕೂ ಮುನ್ನವೇ ಮಳೆಯಾಗಿದೆ.
ಕೊಡಗು/ಚಿಕ್ಕಮಗಳೂರು (ಮಾ.14): ಕರ್ನಾಟಕಕ್ಕೆ 2024ರ ಮೊದಲ ಮಳೆಯು ಮಾರ್ಚ್ ತಿಂಗಳಲ್ಲೇ ಸುರಿದಿದೆ. ರಾಜ್ಯದ ಘಟ್ಟ ಪ್ರದೇಶಗಳಾದ ಹಾಗೂ ಹಲವು ನದಿಗಳ ಉಗಮ ಸ್ಥಾನಗಳೂ ಆಗಿರುವ ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಬೇಸಿಗೆ ಆರಂಭಕ್ಕೂ ಮುನ್ನವೇ ಮಳೆಯಾಗಿದೆ. ಇದರಿಂದ ಕಾದು ಕೆಂಡದಂತಾಗುತ್ತಿದ್ದ ಭೂಮಿ ತಂಪಾಗಿದ್ದು, ಕೆಲವು ಹಳ್ಳ ಕೊಳ್ಳಗಳು ಕೂಡ ತುಂಬಿ ಹರಿದಿವೆ.
ಕಳೆದೊಂದು ವಾರದಿಂದಲೂ ರಾಜ್ಯದಲ್ಲಿ ಮಳೆಯ ಮುನ್ಸೂಚನೆ ಹವಾಮಾನ ಇಲಾಖೆಯಿಂದ ಸಿಕ್ಕಿತ್ತು. ಆದರೆ, ಬೆಂಗಳೂರು ಹಾಗೂ ಇತರೆ ದಕ್ಷಿಣ ಒಳನಾಡಿದ ಪ್ರದೇಶಗಳಲ್ಲಿ ಆಗಾಗ ಮೋಡ ಕವಿಯುತ್ತಿದ್ದರೂ ಮಳೆಯ ಸುಳಿವು ಮಾತ್ರ ಸಿಕ್ಕಿರಲಿಲ್ಲ. ಆದರೆ, ಘಟ್ಟ ಪ್ರದೇಶಗಳಾದ ಕಾಫಿನಾಡು ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳಲ್ಲಿ ಮಳೆಯಾಗಿದೆ. ನಿನ್ನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕೆಲವು ಸ್ಥಳಗಳಲ್ಲಿ ಸುಮಾರು 10 ರಿಂದ 30 ನಿಮಿಷಗಳ ಕಾಲ ಮಳೆಯಾಗಿದೆ. ಜೊತೆಗೆ, ಇಂದು ಮಧ್ಯಾಹ್ನ ಚಿಕ್ಕಮಗಳೂರು ತಾಲೂಕಿನ ಮುತ್ತೋಡಿ, ಕೊಳಗಾವೆ ಗ್ರಾಮದ ಸುತ್ತಲಿನ ಪ್ರದೇಶದಲ್ಲಿ 1 ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದೆ.
ಮಾತುಗಾರರಿಗೆ ಮಣೆ ಹಾಕದ ಬಿಜೆಪಿ : ನಾಲಿಗೆ ಹರಿಬಿಟ್ಟವರಿಗೆ ಟಿಕೆಟ್ ಕಟ್ ಮಾಡಿತಾ ಹೈಕಮಾಂಡ್!
ಕಾಫಿನಾಡಿಗೆ ತಂಪೆರೆದ ವರುಣ: ಕಾಫಿನಾಡು ಚಿಕ್ಕಮಗಳೂರಿನಲ್ಲಿ 2024ನೇ ಸಾಲಿನ ವರ್ಷದ ಮೊದಲ ಮಳೆ ನಿರ್ಮಾಣವಾಗಿದೆ. ಕಾದ ಕಾವಲಿಯಂತಾಗಿದ್ದ ಭೂಮಿಗೆ ತಂಪೆರೆದ ವರುಣದೇವ ತಂಪಿನ ಸಿಂಚನ ನೀಡಿದ್ದಾರೆ. ಕೇವಲ ಒಂದು ಗಂಟೆಯಲ್ಲಿ ಬರೋಬ್ಬರಿ ಒಂದೂವರೆ ಇಂಚಿನಷ್ಟು ಮಳೆಯಾಗಿದೆ. ಇನ್ನು ಬೇಸಿಗೆ ಆರಂಭಕ್ಕೂ ಮುನ್ನವೇ ಮಳೆ ಕಂಡು ಹಳ್ಳಿಗರು ಹಾಗೂ ಕೃಷಿಕರು ಸಂತಸಕ್ಕೀಡಾಗಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಕೊಳಗಾವೆ, ಮೇಲಿನ ಹುಲುವತ್ತಿ ಗ್ರಾಮದಲ್ಲಿ ಹಾಗೂ ಮುತ್ತೋಡಿ ಹೋಬಳಿಯ ಅರಣ್ಯ ಪ್ರದೇಶಗಳ ಗ್ರಾಮದಲ್ಲಿ ಭಾರಿ ಮಳೆಯಾಗಿದೆ.
ಒಟ್ಟು ಚಿಕ್ಕಮಗಳೂರು ಜಿಲ್ಲೆಯ ವಿವಿಧೆಡೆ 20-30-40 ಮಿ.ಮೀ.ನಷ್ಟು ಮಳೆಯಾಗಿದೆ. ಇದರಿಂದ ಮಳೆಗಾಗಿ ಆಕಾಶ ನೋಡುತ್ತಿದ್ದ ರೈತರು, ಕಾಫಿ ಬೆಳೆಗಾರರು ನಿಟ್ಟುಸಿರು ಬಿಟ್ಟಿದ್ದಾರೆ. ಅಡಿಕೆ-ಕಾಫಿ-ಮೆಣಸು ಉಳಿಕೊಳ್ಳಲು ಪರದಾಡ್ತಿದ್ದ ಬೆಳೆಗಾರರಿಗೆ ಈ ಮಳೆಯು ಭಾರಿ ಅನುಕೂಲ ಮಾಡಿಕೊಟ್ಟಿದೆ. ಚಿಕ್ಕಮಗಳೂರು ತಾಲೂಕಿನ ಮುತ್ತೋಡಿ ಅರಣ್ಯ ಸಮೀಪದ ಗ್ರಾಮಗಳಲ್ಲಿನ ಸಣ್ಣ ಹಳ್ಳಗಳು ಕೂಡ ತುಂಬಿ ಹರಿದಿವೆ. ಇದರಿಂದ ಅಂತರ್ಜಲದ ಮಟ್ಟವೂ ಕೂಡ ಸುಧಾರಿಸಲಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಸದಾನಂದಗೌಡರ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ!
ವಿರಾಜಪೇಟೆಯಲ್ಲಿ ಸುರಿದ ಮಳೆ: ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ನಿನ್ನೆ (ಬುಧವಾರ) ಮಧ್ಯಾಹ್ನ ಸಾಧಾರಣ ಮಳೆ ಸುರಿದಿದೆ. ಬಿಸಿಲ ಬೇಗೆಯಿಂದ ತತ್ತರಿಸಿದ್ದ ಜನತೆಗೆ ಅಲ್ಪ ಸ್ವಲ್ಪ ಸುರಿದ ಮಳೆಯಿಂದ ಭಾರಿ ಸಂತಸ ಉಂಟಾಗಿದೆ. ಕಳೆದ ಮೂರು ದಿನಗಳಿಂದ ಕೊಡಗು ಜಿಲ್ಲೆಯ ವಿವಿಧೆಡೆ ಮೋಡ ಕವಿದ ವಾತಾವರಣ ನಿರ್ಮಾಣವಾಗುತ್ತಿತ್ತು. ಇನ್ನೇನು ಮಳೆಯಾಗುತ್ತದೆ ಎಂಬ ನಿರೀಕ್ಷೆಯೂ ಹೆಚ್ಚಾಗಿತ್ತು. ಅದರಂತೆ ಮೂರ್ನಾಡು, ಕಿಗ್ಗಾಲು ಗ್ರಾಮಗಳ ಸುತ್ತಮುತ್ತ ಸುಮಾರು 10 ನಿಮಿಷಗಳಿಂದ 30 ನಿಮಿಷಗಳ ಕಾಲ ಮಳೆಯಾಗಿದೆ.