ಮಾತುಗಾರರಿಗೆ ಮಣೆ ಹಾಕದ ಬಿಜೆಪಿ : ನಾಲಿಗೆ ಹರಿಬಿಟ್ಟವರಿಗೆ ಟಿಕೆಟ್ ಕಟ್ ಮಾಡಿತಾ ಹೈಕಮಾಂಡ್!

By Sathish Kumar KHFirst Published Mar 14, 2024, 4:46 PM IST
Highlights

ರಾಜಕಾರಣದಲ್ಲಿ ಮಾತೇ ನಮ್ಮ ಬಂಡವಾಳ ಎಂದು ಪಕ್ಷಕ್ಕೆ ಉಂಟಾಗುತ್ತಿದ್ದ ಡ್ಯಾಮೇಜ್‌ ಅನ್ನೂ ಲೆಕ್ಕಿಸದೇ ಮಾತನಾಡುತ್ತಿದ್ದವರನ್ನು ಬಿಜೆಪಿ ಹೈಕಮಾಂಡ್ ಲೋಕಸಭಾ ಚುನಾವಣೆಯಿಂದ ದೂರವಿಟ್ಟಿದೆ.

ಬೆಂಗಳೂರು (ಮಾ.14): ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದ 20 ಲೋಕಸಭಾ ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಹಂಚಿಕೆ ಮಾಡಿದೆ. ಆದರೆ, ಅದರಲ್ಲಿ ಮಾತೇ ನಮ್ಮ ಬಂಡವಾಳ ಎಂದು ಪಕ್ಷಕ್ಕೆ ಉಂಟಾಗುತ್ತಿದ್ದ ಡ್ಯಾಮೇಜ್‌ ಅನ್ನೂ ಲೆಕ್ಕಿಸದೇ ಮಾತನಾಡುತ್ತಿದ್ದವರನ್ನು ಬಿಜೆಪಿ ಹೈಕಮಾಂಡ್ ಹೊರಗಿಟ್ಟಂತೆ ಕಾಣುತ್ತಿದೆ.

ರಾಜ್ಯದ ವಿಧಾನಸಭೆ ಚುನಾವಣೆ ಸೋತರೇನಂತೆ ಲೋಕಸಭೆಯಲ್ಲಿ ಟಿಕೆಟ್ ಗಿಟ್ಟಿಸೋಣ, ಎಂದುಕೊಂಡವರಿಗೆ ಶಾಕ್ ಉಂಟಾಗಿದೆ. ಇನ್ನು ನಾನು ಅಭಿವೃದ್ಧಿ ಕಾರ್ಯ ಮಾಡಿದ್ದೀನಿ, ಟಿಕೆಟ್ ನಂದೇ ಎನ್ನುತ್ತಿದ್ದವರಿಗೂ ಬ್ರೇಕ್ ಹಾಕಲಾಗಿದೆ. ಇನ್ನು ವಿಧಾನಸಭೆಯಲ್ಲಂತೂ ಟಿಕೆಟ್ ಕೊಡಲಿಲ್ಲ, ಲೋಕಸಭೆಯಲ್ಲಾದರೂ ಕೊಡ್ತಾರಂತಾ ಎಲ್ಲೆಡೆ ನಾಲಿಗೆ ಹರಿಬಿಟ್ಟವರಿಗೂ ಈಗ ಬೆಂಕಿ ಹಚ್ಚಿದಂತಾಗಿದೆ. ಅಂದರೆ, ಲೋಕಸಭೆಯ ಟಿಕೆಟ್ ಸಿಗುತ್ತದೆ ಎಂದು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದ ಘಟಾನುಘಟಿ ನಾಯಕರನ್ನು ಬಿಜೆಪಿ ಹೈಕಮಾಂಡ್ ಕೈಬಿಟ್ಟಿದೆ.

ಬಿಜೆಪಿ ಟಿಕೆಟ್ ನಿರೀಕ್ಷೆಯಿಂದ ವಂಚಿತರಾದವರು
ನಳಿನ್ ಕುಮಾರ್ ಕಟೀಲ್
ಎಂ.ಪಿ. ರೇಣುಕಾಚಾರ್ಯ
ಕೆ.ಎಸ್. ಈಶ್ವರಪ್ಪ (ಕಾಂತೇಶ್)
ಸಿ.ಟಿ. ರವಿ

ಹೌದು, ಮೇಲೆ ನಮೂದಿಸಿದ ಬಿಜೆಪಿ ನಾಯಕರು ಲೋಕಸಭೆಯ ಟಿಕೆಟ್ ನಿರೀಕ್ಷೆಯಿಂದ ರಾಜ್ಯಾದ್ಯಂತ ಹಾಗೂ ತಮ್ಮ ಕ್ಷೇತ್ರದಲ್ಲಿ ಫುಲ್ ಆಕ್ಟಿವ್ ಆಗಿದ್ದರು. ಆಡಳಿತ ಪಕ್ಷದ ಒಂದೊಂದು ಘಟನಾವಳಿಗಳನ್ನೂ ಹಿಡಿದುಕೊಂಡು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಗೃಹಮಂತ್ರಿ ಡಾ.ಜಿ. ಪರಮೇಶ್ವರ್ ಸೇರಿದಂತೆ ಎಲ್ಲರಿಗೂ ಮಾತಿನ ಚಾಟಿಯಿಂದ ತಿರುಗೇಟು ಕೊಟ್ಟವರು ಇವರಾಗಿದ್ದಾರೆ. ಆದರೆ, ತಮ್ಮ ಮಾತೇ ತಮಗೆ ತಿರುಗುಬಾಣವಾಗುತ್ತದೆ ಎಂದು ಎಂದೆಂದೂ ಭಾವಿಸಿರಲಿಲ್ಲ. ಈಗ ಮಿತಿಗಿಂತ ಹೆಚ್ಚಾಗಿ ಮಾತನಾಡಿದ್ದೇ ಮುಳುವಾಯ್ತಾ ಎಂಬಂತೆ ಬಿಜೆಪಿ ಟಿಕೆಟ್ ಕೂಡಾ ಕೈತಪ್ಪಿ ಹೋಗಿದ್ದು, ಸಾಮಾನ್ಯ ಕಾರ್ಯಕರ್ತರಂತೆ ಕೆಲಸ ಮಾಡಬೇಕಿದೆ.

Eshwarappa on BSY: ನನ್ನ ಮಗನಿಗೆ ಬಿಎಸ್‌ವೈ ಯಾಕೆ ಟಿಕೆಟ್ ಕೊಡಿಸಲಿಲ್ಲ, ನನಗೆ ಮೋಸ ಮಾಡಿದ್ದಾರೆ: ಕೆ.ಎಸ್ ಈಶ್ವರಪ್ಪ

ಪುತ್ರನಿಗೆ ರಾಜಕೀಯ ನೆಲೆ ಕೊಡಿಸಲು ಪರದಾಟ: 
ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ತಮ್ಮ ಪುತ್ರ ಕೆ.ಇ. ಕಾಂತೇಶ್ ಅವರಿಗೆ ವಿಧಾನಸಭಾ ಚುನಾವಣೆಯಲ್ಲಿಯೇ ಟಿಕೆಟ್ ನೀಡುವಂತೆ ಕೇಳಿದ್ದರು. ಆದರೆ, ಪಕ್ಷದಲ್ಲಿ ಕೆಲ ದಿನಗಳ ಕಾಲ ಕಾರ್ಯಕರ್ತನಾಗಿ ಕೆಲಸ ಮಾಡಲಿ ಎಂದು ಬೇರೊಬ್ಬರಿಗೆ ಟಿಕೆಟ್ ನೀಡಲಾಯಿತು. ನಂತರ, ಲೋಕಸಭಾ ಚುನಾವಣೆ ವೇಳೆಗೆ ಹಾವೇರಿಯ ಸಂಸದ ಶಿವಕುಮಾರ್ ಉದಾಸಿ ರಾಜಕೀಯ ನಿವೃತ್ತಿ ಹೊಂದುತ್ತಾರೆ. ಆಗ ಹಾವೇರಿಯಿಂದ ತಮ್ಮ ಪುತ್ರ ಕಾಂತೇಶ್ ಅವರನ್ನು ಕಣಕ್ಕಿಸಿಸಲು ಟಿಕೆಟ್ ಗಿಟ್ಟಿಸಿಕೊಳ್ಳೋಣ ಎಂದು ಈಶ್ವರಪ್ಪ ಕಸರತ್ತು ನಡೆಸಿದ್ದರು. ಹೀಗಾಗಿ, ತಾವು ಯಾವುದೇ ಅಧಿಕಾರದಲ್ಲಿರದಿದ್ದರೂ ಆಡಳಿತಾರೂಢ ಸರ್ಕಾರಕ್ಕೆ ಕಟುವಾಗಿಯೇ ತಿವಿಯುತ್ತಿದ್ದರು. ಇದನ್ನು ಬಿಜೆಪಿ ಹೈಕಮಾಂಡ್ ಗುರುತಿಸುತ್ತದೆ ಎಂದೇ ತಿಳಿದುಕೊಂಡಿದ್ದರು. ಆದರೆ, ಇದ್ಯಾವುದನ್ನೂ ಪರಿಗಣಿಸದೇ ಹಾವೇರಿ ಟಿಕೆಟ್‌ ಅನ್ನು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಕೊಡಲಾಗಿದೆ.

ನಳಿನ್ ಕುಮಾರ್ ಕಟೀಲ್:
ಬಿಜೆಪಿ ನಿಕಟಪೂರ್ವ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಕೂಡ ಮಾತನಾಡಬೇಕಾದ ಸ್ಥಳದಲ್ಲಿ ಮಾತನಾಡದೇ, ಅನಗತ್ಯವಾಗಿ ಕೆಲವು ಹೇಳಿಕೆ ನೀಡಿ ಬಿಜೆಪಿಗೆ ಡ್ಯಾಮೇಜ್ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದವು. ಜೊತೆಗೆ, ನಳಿನ್ ಕುಮಾರ್‌ಗೆ ಮಗ್ಗಲು ಮುಳ್ಳಾಗಿ ಹಿಂದೂ ಕಾರ್ಯಕರ್ತ ಅರುಣ್ ಕುಮಾರ್ ಪುತ್ತಿಲ ಕಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ನಳಿನ್ ಕುಮಾರ್ ಕಟೀಲ್ ಅವರನ್ನು ಅಧಿಕಾರದಿಂದಲೇ ದೂರವಿಡುವ ಕಾರ್ಯ ಮಾಡಲಾಗಿದೆ.

ಎಂ.ಪಿ. ರೇಣುಕಾಚಾರ್ಯ:
ದಾವಣಗೆರೆಯ ಹೊನ್ನಾಳಿ ವಿಧಾನಸಭಾ ಕ್ಷೇತ್ರದಿಂದ ಸೋತು ಸುಣ್ಣವಾಗಿರುವ ಎಂ.ಪಿ. ರೇಣುಕಾಚಾರ್ಯ ಕೂಡ, ತಾವು ಲೋಕಸಭಾ ಟಿಕೆಟ್ ಆಕಾಂಕ್ಷಿ ಎಂದೇ ಬಿಂಬಿಸಿಕೊಂಡಿದ್ದರು. ಟಿಕೆಟ್ ಹಂಚಿಕೆಗೂ ಮುನ್ನವೇ ಬಿಜೆಪಿ ನಾಯಕರನ್ನು ಭೇಟಿ ಮಾಡಿದ್ದರು. ಆದರೂ, ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ ಅವರ ಪತ್ನಿಗೆ ಟಿಕೆಟ್ ನೀಡಲಾಗಿದೆ. ದಾವಣಗೆರೆಯಲ್ಲಿ ಶ್ಯಾಮನೂರು ಶಿವಶಂಕರಪ್ಪ ಕುಟುಂಬಕ್ಕೆ ಪ್ರಭಲ ಪೈಪೋಟಿ ನೀಡುವ ವ್ಯಕ್ತಿಯನ್ನು ಪರಿಗಣಿಸಿ ರೇಣುಕಾಚಾರ್ಯ ಅವರಿಗೆ ಟಿಕೆಟ್ ತಪ್ಪಿಸಲಾಗಿದೆ ಎಂದು ತಿಳಿದುಬಂದಿದೆ.

ಕರ್ನಾಟಕದಲ್ಲಿ ಟಿಕೆಟ್ ಕೈ ತಪ್ಪಿದವರ ಕೋಲಾಹಲ; ಮುನಿಸು ಕೈಬಿಟ್ಟ ಸಿಂಹ, ಸಿಡಿದೇಳುತ್ತಾರಾ ಈಶ್ವರಪ್ಪ!

ಮಾಜಿ ಸಚಿವ ಸಿ.ಟಿ. ರವಿ:
ಸಿ.ಟಿ. ರವಿ ಅವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ಬಿಜೆಪಿ ಹೈಕಮಾಂಡ್ ನಾಯಕರು ಆಪ್ತರಾಗಿದ್ದರೂ, ಸಿ.ಟಿ. ರವಿ ಅವರ ಮಾತಿನ ಧಾಟಿಯೇ ಅವರಿಗೆ ಮುಳ್ಳಾಯಿತು ಎಂಬಂತೆ ಕಂಡುಬಂದಿದೆ. ಇನ್ನು ಚಿಕ್ಕಮಗಳೂರು-ಉಡುಪಿ ಲೋಕಸಭಾ ಕ್ಷೇತ್ರದ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಅವರ ವಿರುದ್ಧ ಗೋ ಬ್ಯಾಕ್ ಅಭಿಯಾನ ಆರಂಭವಾಗಿದ್ದರೂ ಸುಮ್ಮನಿದ್ದರು. ಇದರಿಂದ ತಮಗೆ ಟಿಕೆಟ್ ಸಿಗುತ್ತದೆ ಎಂಬ ನಿರೀಕ್ಷೆಯನ್ನೂ ಇಟ್ಟುಕೊಂಡಿದ್ದರು. ಆದರೆ, ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಕ್ಷೇತ್ರವೂ ಸೇರಿದಂತೆ ಇಡೀ ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಿಜೆಪಿ ಉಳಿಸಿಕೊಳ್ಳಲಾಗದ ನಾಯಕ ಸಿ.ಟಿ. ರವಿ ಅವರಿಗೆ ಟಿಕೆಟ್ ನೀಡುವುದು ಉಚಿತವಲ್ಲವೆಂದು ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಟಿಕೆಟ್ ಕೊಡಲಾಗಿದೆ. ಇಲ್ಲಿನ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಲಾಗಿದೆ.

click me!