Bengaluru Rains: ತಿಂಗಳ ಬಳಿಕ ಒಂದೇ ದಿನದಲ್ಲಿ 60 ಮಿ.ಮೀ ಸುರಿದ ಮಳೆ! ಇಂದಿನ ಹವಾಮಾನ ಇಲಾಖೆ ಮುನ್ಸೂಚನೆ ಏನು?

Kannadaprabha News   | Kannada Prabha
Published : Sep 16, 2026, 06:01 AM IST
Bengaluru 60 mm rainfall in a single day

ಸಾರಾಂಶ

ಒಂದೂವರೆ ತಿಂಗಳ ಬಳಿಕ ಬೆಂಗಳೂರಿನಲ್ಲಿ ಭಾರಿ ಮಳೆಯಾಗಿದ್ದು, ತಗ್ಗು ಪ್ರದೇಶಗಳು ಮತ್ತು ರಸ್ತೆಗಳು ಜಲಾವೃತವಾಗಿವೆ. ಮಳೆಯಿಂದಾಗಿ ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡಿದರು ಹಾಗೂ ಸುಲ್ತಾನ್‌ಪಾಳ್ಯದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಮುಂದಿನ ಎರಡು ದಿನಗಳ ಕಾಲ ಮಳೆಯಾಗುವ ಮುನ್ಸೂಚನೆ.

ಹಲವೆಡೆ ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ

-ಇನ್ನೆರೆಡು ದಿನ ಮಳೆ ಮುನ್ಸೂಚನೆ: ಹವಾಮಾನ ಇಲಾಖೆ

-ಸುಲ್ತಾನ್‌ಪಾಳ್ಯದಲ್ಲಿ ಮನೆಗಳಿಗೆ ನೀರು ನುಗ್ಗಿ ವಸ್ತುಗಳು ಹಾನಿ

 ಬೆಂಗಳೂರು (ಸೆ.16): ಹಲವು ದಿನಗಳಿಂದ ಬೇಸಿಗೆಯಂತಹ ಬಿಸಿಲಿನ ತಾಪದಿಂದ ಬಿಸಿಯಾಗಿದ್ದ ಉದ್ಯಾನ ನಗರಿಗೆ ಮಂಗಳವಾರ ಸಂಜೆ ಸುರಿದ ಭರ್ಜರಿ ಮಳೆ ತಂಪೆರೆದಿದೆ.

ಬಹುತೇಕ ಒಂದುವರೆ ತಿಂಗಳ ಬಳಿಕ ನಗರದಲ್ಲಿ ಉತ್ತಮ ಮಳೆಯಾಗಿದೆ. ಸಂಜೆ ಮಳೆಯಿಂದ ನಗರದ ತಗ್ಗು ಪ್ರದೇಶಗಳು, ಫ್ಲೈಓವರ್‌ಗಳು, ಅಂಡರ್‌ಪಾಸ್‌ಗಳು, ರಸ್ತೆಗಳು, ಜಂಕ್ಷನ್‌ಗಳಲ್ಲಿ ನೀರು ನಿಂತು ವಾಹನ ಸಂಚಾರ ನಿಧಾನಗೊಂಡು ಟ್ರಾಫಿಕ್‌ ಜಾಮ್‌ ಉಂಟಾಗಿ ಸವಾರರು ಪರದಾಡಿದರು. ಕೆಲವೆಡೆ ಮರಗಳು, ಕೊಂಬೆಗಳು ಧರೆಗೆ ಉರುಳಿದ್ದು, ಅವುಗಳನ್ನು ತೆರವುಗೊಳಿಸಿ ವಾಹನ ಹಾಗೂ ಜನ ಸಂಚಾರಕ್ಕೆ ಪಾಲಿಕೆ ಸಿಬ್ಬಂದಿ ಅನುವು ಮಾಡಿಕೊಟ್ಟರು. ಸುಲ್ತಾನ್ ಪಾಳ್ಯದಲ್ಲಿನ ತಗ್ಗು ಪ್ರದೇಶದಲ್ಲಿನ ಕೆಲವು ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಗೃಹ ಬಳಕೆಯ ವಸ್ತುಗಳಿಗೆ ಹಾನಿಯಾಗಿದೆ.

ಹಲವೆಡೆ ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ

ಕೋರಮಂಗಲ ಗರುಡಾ ಮಾಲ್, ಶೇಷಾದ್ರಿಪುರ, ಹಾಸ್ಮೆಟ್ ಆಸ್ಪತ್ರೆ ಬಳಿ ಮರಗಳು ಹಾಗೂ ಮರದ ರೆಂಬೆ ಕೊಂಬೆಗಳು ಮುರಿದು ಬಿದ್ದಿವೆ. ತಕ್ಷಣ ಸ್ಥಳಕ್ಕೆ ತೆರಳಿ ಮರಗಳನ್ನು ತೆರವುಗೊಳಿಸಲಾಗಿದೆ. ಯಾವುದೇ ಅನಾಹುತಗಳು ಸಂಭವಿಸಿಲ್ಲ ಎಂದು ಜಿಬಿಎ ಮೂಲಗಳು ತಿಳಿಸಿವೆ.

ಬೆಂಗಳೂರಿನಲ್ಲಿ ಭಾರೀ ಮಳೆ, ರಸ್ತೆಗಳು ಜಲಾವೃತ:

ಓಕಳಿಪುರ ಜಂಕ್ಷನ್, ಶಿವಾನಂದ ವೃತ್ತ ರೈಲ್ವೆ ಅಂಡರ್‌ಪಾಸ್, ರಿಚ್ಮಂಡ್ ಸರ್ಕಲ್, ಎಚ್‌ಎಎಲ್ ಏರ್ಪೋರ್ಟ್ ರಸ್ತೆ, ಹೆಬ್ಬಾಳ ಜಂಕ್ಷನ್ ಡೌನ್‌ರ್‍ಯಾಂಪ್, ಜೆ.ಸಿ. ನಗರ ದೂರದರ್ಶನ ಕೇಂದ್ರ ವೃತ್ತ, ಎಸ್‌ಜೆಪಿ ರಸ್ತೆ, ವೀರಣ್ಯಪಾಳ್ಯ, ಜಯಮಹಲ್ ರೈಲ್ವೆ ಅಂಡರ್‌ಪಾಸ್, ಬ್ರಿಯಾಂಡ್ ಜಂಕ್ಷನ್, ಚಿಕ್ಕಪೇಟೆ ಮೆಟ್ರೋ ನಿಲ್ದಾಣ, ರೂಪೇನ ಅಗ್ರಹಾರ, ಶ್ರೀನಿವಾಗಿಲು, ಲ್ಯಾವೆಲ್ಲೆ ರಸ್ತೆ, ತುಮಕೂರು ರಸ್ತೆ ಪೀಣ್ಯ ಫ್ಲೈಓವರ್, ಮಡಿವಾಳ ಅಯ್ಯಪ್ಪ ಸ್ವಾಮಿ ಕೆಳ ಸೇತುವೆ, ಬಿಜಿಎಸ್ ಫ್ಲೈಓವರ್, ಬಿಜಿಎಸ್ ಫ್ಲೈಓವರ್ ಚಾಮರಾಜಪೇಟೆ ಕಡೆಯ ಡೌನ್‌ರ್‍ಯಾಂಪ್, ಪ್ಯಾಲೆಸ್ ಗುಟ್ಟಹಳ್ಳಿ, ಕೋರಮಂಗಲ ರಿಂಗ್ ರಸ್ತೆ, ಗರುಡಾ ಮಾಲ್ ಜಂಕ್ಷನ್ ಸೇರಿದಂತೆ ನಗರದ ಅನೇಕ ರಸ್ತೆಗಳಲ್ಲಿ ನೀರು ನಿಂತು ವಾಹನ ಸವಾರರು ಪರದಾಡಿದರು.

ಎಲ್ಲೆಲ್ಲಿ ಮಳೆಯಿಂದ ತೊಂದರೆ

ಅಶೋಕ ನಗರ ಪೋತಪ್ಪ ಗಾರ್ಡನ್, ಪ್ಯಾಲೆಸ್ ಗುಟ್ಟಹಳ್ಳಿ, ಎಚ್‌ಎಎಲ್ ಏರ್ಪೋಟ್ ರಸ್ತೆಗಳಲ್ಲಿನ ಡ್ರೈನ್‌ಗಳಲ್ಲಿ ಕಸ ತುಂಬಿಕೊಂಡಿದ್ದ ಕಾರಣ ನೀರು ಹರಿದು ಹೋಗದೆ ರಸ್ತೆಗಳು ಜಲಾವೃತವಾಗಿದ್ದರು. ಸಂಚಾರ ಪೊಲೀಸರು ಕಟ್ಟಿಗೆಯಿಂದ ಕಸ ತೆಗೆದು ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಲು ಹರಸಾಹಸ ಪಟ್ಟರು. ಸಿಲ್ಕ್‌ಬೋರ್ಡ್ ಮೆಟ್ರೋ ನಿಲ್ದಾಣ ಕೆಳಭಾಗದಲ್ಲಿ ಭಾರಿ ಪ್ರಮಾಣದಲ್ಲಿ ನೀರು ನಿಂತು ಕೆರೆಯಂತಾಗಿತ್ತು. ಸಾಧ್ವಿ ಎಂಬುವರು ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದು, ಆಟೋ ಚಕ್ರ ಮುಳುಗುವಷ್ಟು ನೀರು ನಿಂತಿರುವುದು ಕಂಡು ಬಂತು.

ನಗರದ ಕೆಲವೆಡೆ ಸರಾಸರಿ 50 ಮಿ.ಮೀ ಮಳೆ

ನಗರದ ಕೋರಮಂಗಲ ಹಾಗೂ ಬೊಮ್ಮನಹಳ್ಳಿಯಲ್ಲಿ ಭಾರಿ ಮಳೆಯಾಗಿದ್ದು, ಈ ಎರಡು ಪ್ರದೇಶಗಳಲ್ಲಿ ಗರಿಷ್ಠ 60 ಮಿ.ಮೀ.ಗೂ ಹೆಚ್ಚು ಮಳೆಯಾಗಿದೆ. ಮಾರಪ್ಪನಪಾಳ್ಯ 58 ಮಿ.ಮೀ, ನಾಗಪುರ 54.5 ಮಿ.ಮೀ, ಕೂಡ್ಲು 52 ಮಿ.ಮೀ, ಸಂಪಂಗಿರಾಮನಗರ 45.5 ಮಿ.ಮೀ, ನ್ಯೂ ಬಿ.ಎಲ್.ಆರ್ ರಸ್ತೆ 47 ಮಿ.ಮೀ, ಆರ್.ಟಿ ನಗರ 46.8 ಮಿ.ಮೀ, ಜಯನಗರ 35.4 ಮಿ.ಮೀ, ಹೆಚ್.ಎಸ್.ಆರ್ ಲೇಔಟ್ 31.6 ಮಿ.ಮೀ ಹಾಗೂ ಎಂ.ಜಿ ರಸ್ತೆಯಲ್ಲಿ 29 ಮಿ.ಮೀ ಮಳೆಯಾಗದೆ. ನಗರದ ಕೇಂದ್ರ ಭಾಗ, ದಕ್ಷಿಣ, ಪೂರ್ವ, ಉತ್ತರ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಪಶ್ಚಿಮ ಭಾಗದ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಿದೆ.

ಹವಾಮಾನ ಇಲಾಖೆ ಮುನ್ಸೂಚನೆ

ಸೆ.18ರವರೆಗೆ ನಗರದಲ್ಲಿ ಮೋಡ ಮುಸುಕಿದ ವಾತಾವರಣ ಇರಲಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರಿನಲ್ಲಿ ಸಡನ್ ಸುರಿದ ವಿಪರೀತ ಮಳೆ, ನೀರು ನಿಂತು ಅವಾಂತರ, ಕರ್ನಾಟಕದ 8 ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ಘೋಷಣೆ!
ಬಿಪಿಎಲ್ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ರೇಷನ್ ಪಡೆಯಲು ಇನ್ನುಮುಂದೆ ಬೆರಳಚ್ಚು ಕೊಡುವುದು ಕಡ್ಡಾಯವಿಲ್ಲ!