Karnataka Rainfall: ಕೊಡಗಿನಲ್ಲಿ ಆಲಿಕಲ್ಲು ಮಳೆ, ಚಿಕ್ಕಮಗಳೂರಿನಲ್ಲಿ ಧರೆಗೆ ತಂಪೆರೆದ ವರುಣ!

By Gowthami K  |  First Published Mar 14, 2023, 8:11 PM IST

ಬಿಸಿಲ ಬೇಗೆಯಿಂದ ತತ್ತರಿಸಿದ ರಾಜ್ಯದ ಜನತೆಗೆ ಹವಾಮಾನ ಇಲಾಖೆ ಮಳೆಯ ಮುನ್ಸೂಚನೆ ನೀಡಿತ್ತು. ಇದೀಗ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ  ಚಿಕ್ಕಮಗಳೂರು ಜಿಲ್ಲೆ, ಕೊಡಗು ಜಿಲ್ಲೆಯ ಕೆಲವೆಡೆ ಮಳೆ ಸುರಿದಿದೆ. 


ಬೆಂಗಳೂರು (ಮಾ.14): ಬಿಸಿಲ ಬೇಗೆಯಿಂದ ತತ್ತರಿಸಿದ ರಾಜ್ಯದ ಜನತೆಗೆ ಹವಾಮಾನ ಇಲಾಖೆ ಮಳೆಯ ಮುನ್ಸೂಚನೆ ನೀಡಿತ್ತು. ಇದೀಗ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ರಾಜ್ಯದ ಕೆಲ ಜಿಲ್ಲೆಗಳಲ್ಲಿ ವರುಣ ಧರೆಗೆ ತಂಪೆರೆದಿದ್ದಾನೆ. ಚಿಕ್ಕಮಗಳೂರು ಜಿಲ್ಲೆ, ಕೊಡಗು ಜಿಲ್ಲೆಯ ಕೆಲವೆಡೆ ಮಳೆ ಸುರಿದಿದೆ. 

ಮಲೆನಾಡಿನ ಅನೇಕ ಕಡೆ ಗುಡುಗು ಸಹಿತ ಉತ್ತಮ ಮಳೆ:
ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಿಸಿಲಿನಿಂದ ತತ್ತರಿಸಿದ್ದ ಜನರಿಗೆ ವರುಣದೇವ ಕೃಪೆತೋರಿದ್ದು ವರ್ಷದ ಮೊದಲ ಮಳೆಗೆ ಮಲೆನಾಡಿನ ಜನರಲ್ಲಿ ಹರ್ಷ ಮೂಡಿಸಿದೆ.ಮಲೆನಾಡು ಭಾಗದಲ್ಲಿ ಅನೇಕ ಕಡೆ ಇಂದು ಗುಡುಗು ಸಹಿತ ಉತ್ತಮ ಮಳೆಯಾಗಿದೆ.ಇಂದು ಮಧ್ಯಾಹ್ನ ಇದ್ದಕ್ಕಿದ್ದಂತೆ ವಾತಾವರಣದಲ್ಲಿ ಬದಲಾವಣೆಯಾಗಿದ್ದು ಮಲೆನಾಡಿನ ಮೂಡಿಗೆರೆ, ಕಳಸ, ಎನ್.ಆರ್.ಪುರ ತಾಲ್ಲೂಕಿನ ಅನೇಕ ಕಡೆ ಅಲ್ಲಲ್ಲಿ ಉತ್ತಮ ಮಳೆಯಾಗಿದೆ.

Latest Videos

undefined

ಮೂಡಿಗೆರೆ ತಾಲ್ಲೂಕಿನ ಬೆಟ್ಟಗೆರೆ, ದಾರದಹಳ್ಳಿ ಸುತ್ತಮುತ್ತಲ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದೆ.ಕಳಸ ತಾಲ್ಲೂಕಿನ ಮುನ್ನೂರುಪಾಲು, ಬಾಳೆಹೊಳೆ, ಹೊರನಾಡು, ಕಾರಗದ್ದೆ ಸುತ್ತಮುತ್ತ ಗುಡುಗು ಸಹಿತ ಮಳೆಯಾಗಿದೆ.ಎನ್.ಆರ್. ಪುರ ತಾಲ್ಲೂಕಿನ ಬಾಳೆಹೊನ್ನೂರು, ಚಿಕ್ಕ ಅಗ್ರಹಾರ, ಬನ್ನೂರು, ಸಂಗಮೇಶ್ವರ ಪೇಟೆ, ಕೊಪ್ಪ ತಾಲ್ಲೂಕಿನ ಜಯಪುರ ಸುತ್ತಮುತ್ತ ಮಳೆಯಾಗಿದೆ.

ಬಿಸಿಲಿನ ಬೇಗೆಯಿಂದ ಬಳಲುತ್ತಿರುವವರಿಗೆ ಗುಡ್‌ ನ್ಯೂಸ್‌: ರಾಜ್ಯದಲ್ಲಿ ಇಂದಿನಿಂದ 5 ದಿನ ಮಳೆ..!

ಒಂದೇ ಪ್ರದೇಶದ ಬೇರೆ ಬೇರೆ ಕಡೆ ಮಳೆಯಲ್ಲಿ ವ್ಯತ್ಯಾಸವಾಗಿದೆ. 5 ಸೆಂಟ್ಸ್ ನಿಂದ 2 ಇಂಚುವರೆಗೆ ಮಳೆ  ಬೇರೆ ಬೇರೆ ಪ್ರದೇಶದಲ್ಲಿ ವ್ಯತ್ಯಾಸವಾಗಿ ಬಿದ್ದಿದೆ. ಉತ್ತಮ ಮಳೆಯಾಗಿರುವ ಪ್ರದೇಶದಲ್ಲಿ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಇನ್ನು ಕೆಲವು ಕಡೆ ಅಲ್ಪ ಮಳೆಯಾಗಿದ್ದು ಕೃಷಿಕರ ಆತಂಕವನ್ನು ಹೆಚ್ಚಿಸಿದೆ. ಮುಂದಿನ ಮೂರ್ನಾಲ್ಕು ದಿನಗಳ ವರೆಗೆ ರಾಜ್ಯದ ಹಲವು ಭಾಗದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಚೀನಾದಲ್ಲಿ ಇದೆಂತಾ ಮಳೆ, ಆಕಾಶದಿಂದ ಮಳೆಯಂತೆ ಬಿತ್ತು ಕಂಬಳಿಹುಳಗಳು!

ಕೊಡಗಿನಲ್ಲಿ ಆಲಿಕಲ್ಲು ಮಳೆ:
ಕೊಡಗು ಜಿಲ್ಲೆಯ ವಿವಿಧೆಡೆ ಮಧ್ಯಾಹ್ನ ಮಳೆ ಸುರಿದಿದೆ. ಮರಗೋಡು, ಕತ್ತಲೆಕಾಡು ಮತ್ತಿತರ ಕಡೆಗಳಲ್ಲಿ ಮಳೆಯಾಗಿದೆ. ಸುಂಟಿಕೊಪ್ಪದ ಪನ್ಯದಲ್ಲಿ ಗಾಳಿ ಸಹಿತ ಆಲಿಕಲ್ಲು ಮಳೆಯಾಗಿದೆ. ನಾಪೋಕ್ಲು ಹೋಬಳಿಯಲ್ಲಿ ಧಾರಾಕಾರ ಮಳೆಯಾಗಿದೆ. ಮುಂದಿನ 24 ಗಂಟೆಯ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಮಳೆಯಾಗಲಿದೆ ಎಂದು ವರದಿ ತಿಳಿಸಿದೆ.

ಎಲ್ಲೆಲ್ಲಿ ಮಳೆಯಾಗಲಿದೆ:
ಸಮುದ್ರಗಳಲ್ಲಿ ಮೆಲ್ಮೈ ಸುಳಿ ಕಾಣಿಸಿಕೊಂಡಿರೋ ಕಾರಣ ರಾಜ್ಯದ ನಾನಾ ಕಡೆ ಇಂದಿನಿಂದ 5 ದಿನ ಮಳೆಯಾಗುವ ಸಾಧ್ಯತೆ ಎಂದು ಮಾಹಿತಿ ನೀಡಿದೆ. ಮಾರ್ಚ್‌ 14 ರಿಂದ 18 ರವರೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕೆಲವೆಡೆ ಹಾಗೂ ಮಾರ್ಚ್‌ 16 ರಿಂದ 18 ರವರೆಗೆ ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಹಗುರದಿಂದ ಸಾಧಾರಣ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 

ಅದೇ ರೀತಿ, ಉತ್ತರ ಒಳನಾಡಿನ ಬಾಗಲಕೋಟೆ, ಬಳ್ಳಾರಿ, ಬೀದರ್‌, ಧಾರವಾಡ, ಗದಗ, ಕಲಬುರಗಿ, ವಿಜಯಪುರ ಮತ್ತು ಕೊಪ್ಪಳ ಜಿಲ್ಲೆಯ ಕೆಲವೆಡೆ ಮಾರ್ಚ್‌ 16 ರಿಂದ ಮಾರ್ಚ್‌ 18 ರವರೆಗೆ ಮಳೆಯಾಗಲಿದೆ ಎಂದೂ ಹೇಳಲಾಗುತ್ತಿದೆ. ಹಾಗೆ, ದಕ್ಷಿಣ ಒಳನಾಡಿನ ಬೆಂಗಳೂರು, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಯಲ್ಲಿ ಸಹ ಮಾರ್ಚ್‌ 17 ಹಾಗೂ 18 ರಂದು ಹಗುರ ಅಥವಾ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದೂ ಹವಾಮಾನ ಇಲಾಖೆ ತಿಳಿಸಿದೆ. 

click me!