
ಬೆಂಗಳೂರು(ಮಾ.14): ಕೆಎಸ್‌ಆರ್‌ಟಿಸಿಯಲ್ಲಿ ಜಾರಿಗೆ ತಂದಿರುವ ಮಾದರಿಯಲ್ಲೇ ಬಿಎಂಟಿಸಿ, ಕೆಕೆಆರ್‌ಟಿಸಿ ಹಾಗೂ ವಾಯವ್ಯ ಕರ್ನಾಟಕ ಸಾರಿಗೆ ನೌಕರರಿಗೂ ಒಂದು ಕೋಟಿ ರು. ಮೊತ್ತದ ಅಪಘಾತ ವಿಮೆ ಯೋಜನೆ ವಿಸ್ತರಿಸಬೇಕು, ರಾತ್ರಿ ಪಾಳಿಯಲ್ಲಿ ತಂಗುವ ಚಾಲಕ, ನಿರ್ವಾಹಕರಿಗೆ ಮಲಗುವ ಹಾಗೂ ಭದ್ರತೆ ಒದಗಿಸಬೇಕು ಎಂದು ‘ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘ ಸರ್ಕಾರಕ್ಕೆ ಒತ್ತಾಯಿಸಿದೆ.
ಈ ಕುರಿತು ಸಂಘವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಾರಿಗೆ ಸಚಿವ ಬಿ.ಶ್ರೀರಾಮುಲು ಸೇರಿದಂತೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್‌ಡಬ್ಲ್ಯೂಕೆಆರ್‌ಟಿಸಿ, ಕೆಕೆಆರ್‌ಟಿಸಿ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಪತ್ರ ಸಲ್ಲಿಸಿದೆ.
ಮಾ. 24ರಿಂದ ಕೆಎಸ್‌ಆರ್‌ಟಿಸಿ ನೌಕರರ ಅನಿರ್ದಿಷ್ಟ ಮುಷ್ಕರ
ಕಳೆದ ನಾಲ್ಕು ದಿನಗಳ ಹಿಂದೆ ಬಿಎಂಟಿಸಿ ಘಟಕ 31ರ ನಿರ್ವಾಹಕರಾದ ಮುತ್ತಯ್ಯಸ್ವಾಮಿ ಅವರು ಲಿಂಗಧೀರನಹಳ್ಳಿ ಬಸ್ ನಿಲ್ದಾಣದಲ್ಲಿ ಕರ್ತವ್ಯ ನಿರತರಾಗಿ ಬಸ್‌ನಲ್ಲಿ ಮಲಗಿದ್ದ ವೇಳೆ ಬಸ್ಸಿನಲ್ಲಿ ಬೆಂಕಿ ಅವಘಡ ಸಂಭವಿಸಿ ಪ್ರಾಣ ಕಳೆದುಕೊಂಡಿದ್ದಾರೆ. ಸರ್ಕಾರ ಮತ್ತು ಬಿಎಂಟಿಸಿ ಆಡಳಿತ ಮಂಡಳಿ ಕೇವಲ 8 ಲಕ್ಷ ರು.ಗಳನ್ನು ಪರಿಹಾರ ಘೋಷಿಸಿ ಕುಟುಂಬದ ಅವಲಂಬಿತರಿಗೆ ಉದ್ಯೋಗ ನೀಡಿದೆ. ಆದರೆ ಈ ಅಲ್ಪ ಪರಿಹಾರದಿಂದ ಬಿಎಂಟಿಸಿಯ ಮೃತ ನೌಕರನ ಕುಟುಂಬ ನಿರ್ವಹಣೆ ಮಾಡಲು ಕಷ್ಟಕರವಾಗಿದೆ. ಆದ್ದರಿಂದ ಕೆಎಸ್‌ಆರ್‌ಟಿಸಿಯಲ್ಲಿ ಜಾರಿಯಲ್ಲಿರುವ ಅಪಘಾತ ವಿಮೆ ಒಂದು ಕೋಟಿ ರು.ಗಳನ್ನು ಬಿಎಂಟಿಸಿ, ಕೆಕೆಆರ್‌ಟಿಸಿ, ವಾಯವ್ಯ ಸಾರಿಗೆಗೂ ವಿಸ್ತರಿಸಬೇಕು ಎಂದು ಒತ್ತಾಯಿಸಿದೆ.
ರಾತ್ರಿ ಪಾಳಿಯಲ್ಲಿ ತಂಗುವ ಚಾಲಕ ಹಾಗೂ ನಿರ್ವಾಹಕರಿಗೆ ಸೂಕ್ತ ಭದ್ರತೆ ಮತ್ತು ಮೂಲಭೂತ ಸೌಕರ್ಯಗಳ ಕೊರತೆಯಿಂದ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದರೂ ಚಾಲಕ, ನಿರ್ವಾಹಕರು ಅಧಿಕಾರಿಗಳ ಮೌಖಿಕ ಆದೇಶದಂತೆ ಬಸ್‌ನಲ್ಲಿ ಮಲಗಬೇಕಾದ ಪರಿಸ್ಥಿತಿ ಇದೆ. ಬಸ್‌ನಲ್ಲಿ ಮಲಗಬೇಕೆಂಬ ಸರ್ಕಾರದ ಯಾವುದೇ ಸುತ್ತೋಲೆ ಇಲ್ಲದಿದ್ದರೂ ಸಹ ಅಧಿಕಾರಿಗಳು ಅನೇಕ ನೌಕರರಿಗೆ ಬಸ್‌ನಲ್ಲಿ ತಂಗಿಲ್ಲವೆಂದು ಮೆಮೋ ಮತ್ತು ಆರೋಪಣಾ ಪತ್ರಗಳನ್ನು ನೀಡಿ ವರ್ಗಾವಣೆ, ಅಮಾನತು ಮತ್ತು ಇತರೆ ಶಿಸ್ತು ಕ್ರಮಗಳನ್ನು ಕೈಗೊಂಡಿರುವ ಉದಾಹರಣೆಗಳು ಸಾಕಷ್ಟಿವೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.
ಯಾವುದೇ ಅವಘಡಗಳು ಸಂಭವಿಸಿದಲ್ಲಿ ಮತ್ತು ಕರ್ತವ್ಯನಿರತ ನೌಕರರು ಸಾವನ್ನಪ್ಪಿದರೂ ಅವರ ಕುಟುಂಬಕ್ಕೆ ಒಂದು ಕೋಟಿ ರು.ಗಳ ಪರಿಹಾರ ನೀಡಬೇಕು. ರಾತ್ರಿ ಪಾಳಿಯಲ್ಲಿ ಚಾಲಕ, ನಿರ್ವಾಹಕರು ಬಸ್ಸಿನಲ್ಲೇ ಮಲಗಬೇಕೆಂಬ ಆದೇಶವಿದ್ದರೆ ಹಿಂಪಡೆದು ಐದಕ್ಕಿಂತ ಹೆಚ್ಚು ಬಸ್ಸುಗಳು ತಂಗುವ ಬಸ್ ನಿಲ್ದಾಣಗಳಿಗೆ ಉತ್ತಮ ಮೂಲಭೂತ ಸೌಕರ್ಯ ಮತ್ತು ಭದ್ರತೆ ಒದಗಿಸಬೇಕು ಎಂದು ಸಂಘದ ಅಧ್ಯಕ್ಷ ಎಚ್.ಆರ್.ಜನಾರ್ದನ್, ಪ್ರಧಾನ ಕಾರ್ಯದರ್ಶಿ ಡಿ.ರಾಮು, ಖಜಾಂಚಿ ಎಚ್.ಕೆ.ಯೋಗೇಶ್ ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ