ನಮ್ಮ ಕಾಲದಲ್ಲಿ ವಿದ್ಯುತ್ ದರ ಹೆಚ್ಚಳವಾಗಿಲ್ಲ. ಕೆಇಆರ್‌ಸಿಯವರು ವಿದ್ಯುತ್ ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರೂ ನಾವು ಒಪ್ಪಿಗೆ ಕೊಟ್ಟಿರಲಿಲ್ಲ. ಕಾಂಗ್ರೆಸ್ ಸರ್ಕಾರ ಬಂದ ಮೇಲೆಯೇ ದರ ಹೆಚ್ಚಳವಾಗಿದೆ ಎಂದು ಬಿಜೆಪಿ ಆರೋಪಿಸಿದೆ.
ಬೆಂಗಳೂರು (ಜೂ.14): ನಮ್ಮ ಕಾಲದಲ್ಲಿ ವಿದ್ಯುತ್ ದರ ಹೆಚ್ಚಳವಾಗಿಲ್ಲ. ಕೆಇಆರ್‌ಸಿಯವರು ವಿದ್ಯುತ್ ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರೂ ನಾವು ಒಪ್ಪಿಗೆ ಕೊಟ್ಟಿರಲಿಲ್ಲ. ಕಾಂಗ್ರೆಸ್ ಸರ್ಕಾರ ಬಂದ ಮೇಲೆಯೇ ದರ ಹೆಚ್ಚಳವಾಗಿದೆ ಎಂದು ಬಿಜೆಪಿ ಆರೋಪಿಸಿದೆ.
ಹಾವೇರಿಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj bommai), ವಿದ್ಯುತ್ ದರ ಏರಿಸಿ(electricity bill hike)ದ್ದು ಹಿಂದಿನ ಬಿಜೆಪಿ ಸರ್ಕಾರ ಎಂಬ ಕಾಂಗ್ರೆಸ್ ಸಚಿವರ ಹೇಳಿಕೆಗೆ ತೀಕ್ಷ$್ಣವಾಗಿ ಪ್ರತಿಕ್ರಿಯಿಸಿದರು. ನಮ್ಮ ಕಾಲದಲ್ಲಿ ದರ ಹೆಚ್ಚಳವಾಗಿಲ್ಲ. ಕೆಇಆರ್‌ಸಿ ಒಂದು ಸಾಂವಿಧಾನಿಕ ಸಂಸ್ಥೆ. ಅವರು ಮಾಚ್‌ರ್‍ನಲ್ಲಿ ವಿದ್ಯುತ್ ದರ ಹೆಚ್ಚಳದ ಪ್ರಸ್ತಾವನೆ ಕೊಟ್ಟರೂ ನಾವು ಒಪ್ಪಿಗೆ ಕೊಟ್ಟಿರಲಿಲ್ಲ. ಕಾಂಗ್ರೆಸ್‌ನವರು ಬಂದ ಮೇಲೆಯೇ ದರ ಹೆಚ್ಚಳ ಮಾಡಿದ್ದಾರೆ. ಏಪ್ರಿಲ್‌ನಿಂದ ವಿದ್ಯುತ್ ದರ ಹೆಚ್ಚಳವಾಗಿದೆ. ಹೀಗಾಗಿ, ಈಗ ವಿದ್ಯುತ್ ಬಿಲ್ ಜಾಸ್ತಿಯಾಗಿದೆ ಎಂದರು.
ಸುರ್ಜೇವಾಲಾ ನಡೆಸಿದ ಸಭೆಯಲ್ಲಿ ಬಿಬಿಎಂಪಿ ಅಧಿಕಾರಿಗಳು: ವಿವಾದ
ಇದೇ ವೇಳೆ, ಮೈಸೂರಿನಲ್ಲಿ ಮಾತನಾಡಿದ ಸಂಸದ ಪ್ರತಾಪ್‌ಸಿಂಹ(Pratap simha), ಹಿಂದಿನ ಬಿಜೆಪಿ ಸರ್ಕಾರ(BJP government)ದ ಅವಧಿಯಲ್ಲಿ ನಡೆದಿರುವ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡುವ ಆದೇಶಕ್ಕೆ ತಡೆ ನೀಡುವ ಕಾಂಗ್ರೆಸ್ ಸರ್ಕಾರ, ಕೆಇಆರ್‌ಸಿ ಜಾರಿಗೊಳಿಸಿರುವ ವಿದ್ಯುತ್ ದರ ಹೆಚ್ಚಳ ಆದೇಶಕ್ಕೆ ಯಾಕೆ ತಡೆ ಹಾಕಲ್ಲ ಎಂದು ಪ್ರಶ್ನಿಸಿದರು. ರಾಜ್ಯದ ಜನರ ದಾರಿ ತಪ್ಪಿಸುವ ಕೆಲಸವನ್ನು ಕಾಂಗ್ರೆಸ್ ನಾಯಕರು ಮಾಡಬಾರದು. ಕೆಇಆರ್‌ಸಿಯ ಶಿಫಾರಸ್ಸನ್ನು ತಡೆಯುವ ಹಾಗೂ ತಿರಸ್ಕರಿಸುವ ಹಕ್ಕು ರಾಜ್ಯ ಸರ್ಕಾರಕ್ಕಿದೆ. ವಿದ್ಯುತ್ ದರವನ್ನು ಯದ್ವಾತದ್ವಾ ಏರಿಕೆ ಮಾಡಿ, ಆ ಮೂಲಕ ಒಂದಷ್ಟುಜನರ ದರೋಡೆ ಮಾಡಿ, ಇನ್ನೊಬ್ಬರಿಗೆ ಉಚಿತವಾಗಿ ಕೊಡುವ ನಿಮ್ಮ ನಾಟಕದ ವಿರುದ್ದ ಜನಾಂದೋಲನ ಮಾಡುತ್ತೇವೆ ಎಂದು ಎಚ್ಚರಿಸಿದರು.
ಕೆಇಆರ್‌ಸಿ(KERC) ವಿದ್ಯುತ್ ದರ ಹೆಚ್ಚಳ ಮಾಡಿದೆ ಎಂಬ ಸಚಿವರ ಹೇಳಿಕೆಗೆ ಕಿಡಿ ಕಾರಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಇದು ಜನರನ್ನು ದಾರಿ ತಪ್ಪಿಸುವ ಹೇಳಿಕೆ. ಕೆಇಆರ್‌ಸಿ, ಸರ್ಕಾರಕ್ಕಿಂತ ಮೇಲಲ್ಲ. ಅದರ ಆದೇಶಕ್ಕೆ ತಡೆ ನೀಡುವ ಅಧಿಕಾರ ಸರ್ಕಾರಕ್ಕೆ ಇದೆ ಎಂದರು. ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯಿಸಿ, ಕೆಇಆರ್‌ಸಿ ಅಂದು ನಮ್ಮ ಸರ್ಕಾರದ ಮುಂದೆ ದರ ಹೆಚ್ಚಳದ ಪ್ರಸ್ತಾಪ ಇಟ್ಟರೂ, ನಮ್ಮ ಸರ್ಕಾರ ಒಪ್ಪಿಗೆ ಕೊಟ್ಟಿರಲಿಲ್ಲ. ದರ ಏರಿಕೆ ಪರಿಷ್ಕರಣೆ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ ಎಂದು ತಿರುಗೇಟು ನೀಡಿದ್ದಾರೆ.
ಬಿಜೆಪಿ ಏರಿಕೆ ಮಾಡಿದ್ದಕ್ಕೆ ದಾಖಲೆ ಇದೆ: ಸರ್ಕಾರ
ಬೆಂಗಳೂರು/ಚಾಮರಾಜನಗರ ವಿದ್ಯುತ್ ದರ ಹೆಚ್ಚಳವನ್ನು ಬಿಜೆಪಿ ಸರ್ಕಾರ ಮಾಡಿಲ್ಲ, ದರ ಹೆಚ್ಚಳ ಪ್ರಸ್ತಾವನೆಗೆ ತಮ್ಮ ಸರ್ಕಾರ ಒಪ್ಪಿಗೆ ನೀಡಿರಲಿಲ್ಲ ಎಂಬ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್ ನಾಯಕರು, ಬಿಜೆಪಿ ಸರ್ಕಾರದ ಅವಧಿಯಲ್ಲಿ ದರ ಹೆಚ್ಚಳ ಮಾಡಿರುವುದಕ್ಕೆ ದಾಖಲೆಗಳಿವೆ. ಒಂದು ವೇಳೆ ಕೆಇಆರ್‌ಸಿ ಆದೇಶವನ್ನು ಒಪ್ಪದೇ ಇದ್ದರೆ ಅದನ್ನು ಆಗಲೇ ರದ್ದು ಮಾಡಬೇಕಿತ್ತು. ಬಿಜೆಪಿಗರು ತಮ್ಮ ಅನುಕೂಲತೆಗೆ ತಕ್ಕಂತೆ ಮಾತನಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಮಾಧ್ಯಮ ಪ್ರತಿನಿಧಿಗಳ ಜೊತೆ ಪ್ರತ್ಯೇಕವಾಗಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಎಂ.ಬಿ.ಪಾಟೀಲ್ ಹಾಗೂ ಡಾ.ಎಚ್.ಸಿ.ಮಹದೇವಪ್ಪ ಅವರು ವಿದ್ಯುತ್ ದರ ಹೆಚ್ಚಳ ಕಾಂಗ್ರೆಸ್ ಸರ್ಕಾರದ ನಿರ್ಧಾರವಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ದರ ಹೆಚ್ಚಿಸಲಾಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿದ್ಯುತ್ ದರ ಹೆಚ್ಚಳ ಮಾಡಿರುವ ಕುರಿತ ದಾಖಲೆಗಳಿದ್ದು, ಎಲ್ಲ ದಾಖಲೆಗಳನ್ನು ಕೊಡುತ್ತೇವೆ. ಬಸವರಾಜ ಬೊಮ್ಮಾಯಿ ಅವರು ದುಃಖದಲ್ಲಿ ಮಾತನಾಡಿದ್ದಾರೆ. ಅದಕ್ಕೆ ನಾನ್ಯಾಕೆ ಬೇಸರ ಮಾಡಿಕೊಳ್ಳಲಿ ಎಂದÜರು.
ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ಕೆಇಆರ್‌ಸಿ ಆದೇಶದಂತೆ ವಿದ್ಯುತ್ ದರ ಹೆಚ್ಚಳ ಮಾಡಲಾಗಿದೆ. ಬಿಜೆಪಿಯವರು ಕೆಇಆರ್‌ಸಿ ಆದೇಶದ ಒಪ್ಪದಿದ್ದರೆ ಅಂದೇ ರದ್ದು ಮಾಡಬೇಕಿತ್ತು. ಈಗ ಅದರ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ತೀಕ್ಷ$್ಣವಾಗಿ ಪ್ರತಿಕ್ರಿಯಿಸಿದರು.
ವಿದ್ಯುತ್ ದರ ಏರಿಕೆಯಿಂದ ಜನರಿಗಾಗುತ್ತಿರುವ ಸಮಸ್ಯೆ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು. ಜತೆಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು, ಗ್ಯಾರಂಟಿ ಯೋಜನೆಗೂ ವಿದ್ಯುತ್ ದರ ಏರಿಕೆಗೂ ಯಾವುದೇ ಸಂಬಂಧವಿಲ್ಲ. ಗೃಹಜ್ಯೋತಿ ಯೋಜನೆ ಬಗ್ಗೆ ಜನರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಬಿಜೆಪಿಯವರಿಗೆ ಮಾಡಲು ಬೇರೆ ಕೆಲಸವಿಲ್ಲ, ಹೀಗಾಗಿ ಯೋಜನೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ ಎಂದು ಪಾಟೀಲ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ವಿದ್ಯುತ್ ದರವನ್ನು ಇಳಿಸಲಿ: ಕಾಂಗ್ರೆಸ್ ಸರ್ಕಾರಕ್ಕೆ ಕೋಟ ಸವಾಲು
ಚಾಮರಾಜನಗರದಲ್ಲಿ ಮಾತನಾಡಿದ ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ.ಮಹದೇವಪ್ಪ, ವಿದ್ಯುತ್ ದರ ಏರಿಕೆ ಮಾಡಿದ್ದು ಹಿಂದಿನ ಬಿಜೆಪಿ ಸರ್ಕಾರ. ಈಗ ಅನುಕೂಲಕ್ಕೆ ತಕ್ಕಂತೆ ಅವರು ಮಾತನಾಡುತ್ತಿದ್ದಾರೆ. ಬೇಕಾದಾಗ ಒಂದು, ಬೇಡದಿದ್ದಾಗ ಒಂದು ಎಂಬಂತೆ ಹೇಳಿಕೆ ಕೊಡುತ್ತಿದ್ದಾರೆ. ಅವರೇ ವಿದ್ಯುತ್ ದರ ಏರಿಕೆ ಮಾಡಿ, ಈಗ ಅವರೇ ಟೀಕೆ ಮಾಡುವುದು ಎಷ್ಟುಸರಿ ಎಂದು ಪ್ರಶ್ನಿಸಿದರು.