ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್, ಸಿದ್ದರಾಮಯ್ಯ ಸರ್ಕಾರದ ಆರ್ಥಿಕ ನೀತಿ ಮತ್ತು ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದ್ದಾರೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂದು ಆರೋಪಿಸಿ, ಸರ್ಕಾರ ಯಾವುದೇ ಶಾಶ್ವತ ಯೋಜನೆಗಳನ್ನು ನೀಡಿಲ್ಲ ಎಂದು ದೂರಿದ್ದಾರೆ.
ಮೈಸೂರು (ಏ.2): ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅವರು ಮೈಸೂರಿನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ ಎಂದು ಆರೋಪಿಸಿ, ಸರ್ಕಾರದ ಗ್ಯಾರಂಟಿ ಯೋಜನೆಗಳು ಮತ್ತು ಆಡಳಿತದ ನೀತಿಗಳನ್ನು ತೀವ್ರವಾಗಿ ಟೀಕಿಸಿದ್ದಾರೆ.
ಆರ್ಥಿಕ ಪರಿಸ್ಥಿತಿ ಮತ್ತು ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕೆ
ರಾಜ್ಯದ ಆರ್ಥಿಕ ಪರಿಸ್ಥಿತಿ ಸರಿಯಾಗಿಲ್ಲ. ಸಿದ್ದರಾಮಯ್ಯ 16 ಬಾರಿ ಬಜೆಟ್ ಮಂಡನೆ ಮಾಡಿದ್ದಾರೆ, ಆದರೆ ಯಾವ ಶಾಶ್ವತ ಯೋಜನೆಯನ್ನೂ ಕೊಟ್ಟಿಲ್ಲ ಉಚಿತ ಬಸ್ ಸೇವೆಯಿಂದ ಮನೆಗಳಲ್ಲಿ ಒಡಕು ಉಂಟಾಗಿದೆ ಎಂದು ಆರೋಪಿಸಿದ ಅವರು, 'ಗಂಡನ ಮಾತನ್ನು ಹೆಂಡತಿ ಕೇಳದ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ಯಾರಂಟಿ ಯೋಜನೆಗಳ ಜಾರಿಯಿಂದ ಆಗಿರುವ ಸಾಧಕ-ಬಾಧಕಗಳ ಬಗ್ಗೆ ಸರ್ಕಾರ ಅಧ್ಯಯನ ನಡೆಸಲಿ' ಎಂದು ಸವಾಲು ಹಾಕಿದ್ದಾರೆ. ಗೃಹಲಕ್ಷ್ಮಿ ಯೋಜನೆಗೆ ಯಾವುದೇ ಮಾನದಂಡವಿಲ್ಲ. ಸಾಲ ಮಾಡಿ ಗ್ಯಾರಂಟಿ ಯೋಜನೆಗಳನ್ನು ಕೊಡುತ್ತಿರುವ ನೀವು ಎಂತಹ ಆರ್ಥಿಕ ತಜ್ಜರು? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: 'ವಿಜಯೇಂದ್ರ ಆಡಿಯೋ-ವಿಡಿಯೋ ನನ್ನ ಬಳಿ ಇವೆ' ಯತ್ನಾಳ್ ಹೊಸ ಬಾಂಬ್!
ಜಾತಿಗಣತಿ ವರದಿ ಮತ್ತು ಅನುದಾನದ ಕೊರತೆ
ಜಾತಿಗಣತಿ ವರದಿಯ ಬಗ್ಗೆ ಪ್ರಸ್ತಾಪಿಸಿದ ವಿಶ್ವನಾಥ್,ಜಾತಿಗಣತಿ ವರದಿ ಏನಾಯಿತು? ಆ ವರದಿಯ ಆಧಾರದ ಮೇಲೆ ಬಜೆಟ್ ಮಂಡನೆ ಆಗಬೇಕಿತ್ತು. ಆದರೆ ಇವರಿಗೆ ಅದನ್ನು ಜಾರಿಗೊಳಿಸಲು ಧೈರ್ಯವಿಲ್ಲ ಎಂದು ಟೀಕಿಸಿದ್ದಾರೆ. ನೀರಾವರಿ ಸೇರಿದಂತೆ ಯಾವುದೇ ಯೋಜನೆಗಳಿಗೆ ಸರ್ಕಾರ ಅನುದಾನ ಕೊಡುತ್ತಿಲ್ಲ. ಕುರಿಗಾಹಿಗಳಿಗೂ ಬಜೆಟ್‌ನಲ್ಲಿ ಯಾವುದೇ ಅನುದಾನ ನೀಡಿಲ್ಲ. ಏನನ್ನೂ ನೀಡದೇ ಬರೀ ಕಿರುಚಾಡುತ್ತಿದ್ದಾರೆ' ಎಂದು ಆರೋಪಿಸಿದ್ದಾರೆ.
ರಾಜ್ಯ ಆಳುವುದು ಸಂಸಾರ ನಡೆಸಿದಂತೆ:
ರಾಜ್ಯ ಆಳುವುದು ಸಂಸಾರ ನಡೆಸಿದಂತೆಯೇ. ಸಂಸಾರ ಹೇಗೆ ನಡೆಸುತ್ತಾರೆಂದು ಹೆಣ್ಣುಮಕ್ಕಳಿಂದ ಸಿದ್ದರಾಮಯ್ಯಗೆ ಪಾಠ ಮಾಡಿಸಬೇಕು. ಎರಡು ಬಾರಿ ಸಿಎಂ ಆಗಿರುವ ಸಿದ್ದರಾಮಯ್ಯ ಯಾವ ಶಾಶ್ವತ ಯೋಜನೆ ಕೊಟ್ಟಿದ್ದಾರೆಂದು ಹೇಳಲಿ. ನಿಮ್ಮ ವೈಯಕ್ತಿಕ ತೆವಲಿಗಾಗಿ ಗ್ಯಾರಂಟಿ ಯೋಜನೆ ಜಾರಿಗೊಳಿಸಿದ್ದೀರಾ? ಆರ್ಥಿಕ, ಕಾನೂನು, ರಾಜಕೀಯ ಸಲಹೆಗಾರರಿಗೆ ಎಲ್ಲರಿಗೂ ಕ್ಯಾಬಿನೆಟ್ ರ್ಯಾಂಕ್ ಕೊಟ್ಟಿದ್ದಾರೆ. ಆದರೆ ಆಡಳಿತ ಪಕ್ಷದಲ್ಲೇ ನಿಮ್ಮ ಮಾತಿಗೆ ಬೆಲೆ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರ್ಥಿಕ ತಜ್ಞರ ಆತಂಕ ಮತ್ತು ರಾಜ್ಯದ ಭವಿಷ್ಯ
ಬಹುತೇಕ ಆರ್ಥಿಕ ತಜ್ಞರು ಉಚಿತ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸರಿಯಾಗಿಲ್ಲ ಎಂದಿದ್ದಾರೆ. ದುಡಿಯುವ ಕೈಗಳಿಗೆ ಕೆಲಸ ಕೊಡುತ್ತಿಲ್ಲ. ಅಕ್ಷರ ಮತ್ತು ಆರೋಗ್ಯ ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಏನು? ರಾಜ್ಯವನ್ನು ಬರ್ಬಾದ್ ಮಾಡಿ ಹೋಗುವುದು ನಿಮ್ಮ ಗುರಿಯೇ? ಎಂದು ಸಿದ್ದರಾಮಯ್ಯರನ್ನು ಪ್ರಶ್ನಿಸಿದ್ದಾರೆ. ಮುಂದುವರಿದು,ಸಿದ್ದರಾಮಯ್ಯ 16ನೇ ಲೂಹಿ ಇದ್ದಂತೆ. ಆತ ಕೂಡ ತನ್ನ ಅವಧಿ ನಂತರ ಜಲಪ್ರಳಯ ಆಗಲಿ ಎಂದು ಬಯಸಿದಂತಿದೆ' ಎಂದು ಲೇವಡಿ ಮಾಡಿದ್ದಾರೆ.
ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ಆಕ್ರೋಶ
ನಾನು ಕಾಂಗ್ರೆಸ್ ಗೆ ಕರೆದುಕೊಂಡು ಬರದೇ ಇದಿದ್ರೆ ನೀನು ಸಿಎಂ ಆಗ್ತಿದ್ದ? ಕಾಂಗ್ರೆಸ್ ನಿನ್ನನ್ನು ಕರೆದುಕೊಂಡು ಬಂದದ್ದೇ ಸಿಎಂ ಮಾಡಲಿಕ್ಕೆ. ಆದರೆ ಸಿದ್ದರಾಮಯ್ಯರಿಂದ ಇಂತಹದ್ದನ್ನು ನಿರೀಕ್ಷೆ ಮಾಡಿರಲಿಲ್ಲ ಎಂದು ವಿಶ್ವನಾಥ್ ಹೇಳಿದ್ದಾರೆ. ಇದೇ ವೇಳೆ ಬಿಜೆಪಿಯನ್ನೂ ಟೀಕಿಸಿರುವ ಅವರು, 'ನಮ್ಮ ಬಿಜೆಪಿಗೆ ಆಡಳಿತ ಗೊತ್ತಿಲ್ಲ, ವಿರೋಧವೂ ಗೊತ್ತಿಲ್ಲ. ಆಡಳಿತ ಪಕ್ಷವನ್ನು ಕೇಳುವ ತಾಕತ್ತು ಬಿಜೆಪಿಗಿಲ್ಲ. ವಿಜಯೇಂದ್ರ ಶಿಕಾರಿಪುರದಲ್ಲಿ ಗೆದ್ದಿದ್ದು ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ಹೊಂದಾಣಿಕೆಯಿಂದ ಎಂದು ಆರೋಪಿಸಿದ್ದಾರೆ.
ಸ್ವಂತ ಸಾಧನೆಗೆ ಒತ್ತು
ತಮ್ಮ ಕೆಲಸವನ್ನು ಸ್ಮರಿಸಿರುವ ವಿಶ್ವನಾಥ್, 'ನಾವು ನಡೆಸಿದ ಇಲಾಖೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದೇವೆ. ಜನ ನಮ್ಮ ಕೆಲಸಗಳನ್ನು ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ. ಆದರೆ ಜನರ ನೆನಪಿನಲ್ಲಿ ಇರುವಂತಹ ಯಾವ ಯೋಜನೆಯನ್ನು ನೀವು ಕೊಟ್ಟಿದ್ದೀರಿ? ಹೇಳಿ ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಅಕ್ಷರ ಮತ್ತು ಆರೋಗ್ಯ ಚೆನ್ನಾಗಿದ್ದರೆ ರಾಜ್ಯ ಚೆನ್ನಾಗಿರುತ್ತದೆ. ಆದರೆ ಈ ಕ್ಷೇತ್ರಗಳಿಗೆ ಸರ್ಕಾರ ಏನೂ ಮಾಡಿಲ್ಲ, ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: 18 ಶಾಸಕರ ಸಸ್ಪೆಂಡ್ ವಾಪಸ್ ಕೋರಿ ಸ್ಪೀಕರ್‌ಗೆ ಅಶೋಕ್ ಪತ್ರ! ಬಿಜೆಪಿಯಲ್ಲಿ ಅಸಮಾಧಾನ!
ಒಟ್ಟಿನಲ್ಲಿ ಎಚ್. ವಿಶ್ವನಾಥ್ ಅವರ ಈ ಹೇಳಿಕೆಗಳು ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿವೆ. ಸಿದ್ದರಾಮಯ್ಯ ಸರ್ಕಾರದ ಆರ್ಥಿಕ ನೀತಿ, ಗ್ಯಾರಂಟಿ ಯೋಜನೆಗಳು ಮತ್ತು ಆಡಳಿತದ ವೈಫಲ್ಯಗಳನ್ನು ತೀವ್ರವಾಗಿ ಟೀಕಿಸಿರುವ ಅವರು, ರಾಜ್ಯದ ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.