
ಬೆಂಗಳೂರು (ಸೆ.26): ದಸರಾ ಹಬ್ಬದ ಸಡಗರ ಮುಗಿದ ಬಳಿಕ ರಾಜ್ಯ ಪೊಲೀಸ್ ಇಲಾಖೆಗೆ ದೊಡ್ಡ ಬದಲಾವಣೆಗೆ ಯೋಜಿಸಿರುವ ರಾಜ್ಯ ಸರ್ಕಾರ, ಹಿರಿಯ ಐಪಿಎಸ್ ಅಧಿಕಾರಿಗಳು ಸೇರಿ ಪೊಲೀಸರ ಸಾಮೂಹಿಕ ವರ್ಗಾವಣೆ ಮಾಡಲು ಮುಂದಾಗಿದೆ.
ರಾಜ್ಯದಲ್ಲಿ ಅಸ್ವಿತ್ವದಲ್ಲಿ ಬಂದ ನಂತರ ಎರಡನೇ ಬಾರಿಗೆ ಮೇಜರ್ ಸರ್ಜರಿಗೆ ಸರ್ಕಾರ ಸಿದ್ಧತೆ ನಡೆಸಿದೆ. ಇತ್ತ ವರ್ಗಾವಣೆಗೆ ಮುಹೂರ್ತ ನಿಗದಿಯಾದ ಬೆನ್ನಲ್ಲೇ ಆಯಕಟ್ಟಿನ ಸ್ಥಾನಗಳ ಪಡೆಯಲು ಕೆಲ ಅಧಿಕಾರಿಗಳು ಲಾಬಿ ಶುರು ಮಾಡಿದ್ದಾರೆ.
ಒಂದೇ ಕಾರ್ಯಸ್ಥಾನದಲ್ಲಿ ಎರಡು ವರ್ಷ ಪೂರೈಸಿರುವ ಡಿವೈಎಸ್ಪಿ-ಎಸಿಪಿ ಹಾಗೂ ಇನ್ಸ್‌ಪೆಕ್ಟರ್‌ಗಳ ಜತೆ ಐಪಿಎಸ್ ಅಧಿಕಾರಿಗಳ ಸ್ಥಾನ ಪಲ್ಲಟಕ್ಕೂ ಸರ್ಕಾರ ಕೈ ಹಾಕಿದೆ. ಇತ್ತೀಚಿನ ಕೆಲವೆಡೆ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತಂದ ಗಲಾಟೆಗಳು ಹಾಗೂ ಭ್ರಷ್ಟಾಚಾರ ಪ್ರಕರಣಗಳು ಕೂಡ ಸರ್ಕಾರದ ಕ್ರಮಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಪೊಲೀಸ್ ವರ್ಗಾವಣೆ ಕಾಯ್ದೆಗೆ ಮತ್ತೆ ತಿದ್ದುಪಡಿ?: ರಾಜಕೀಯ ಗಾಡ್ ಫಾದರ್ ಮೂಲಕ ಅಧಿಕಾರಿಗಳ ಒತ್ತಡ
ಈ ಆಡಳಿತ ಬದಲಾವಣೆ ಸಂಬಂಧ ಕೆಲ ದಿನಗಳ ಹಿಂದೆ ಅಶೋಕನಗರ ಸಮೀಪದಲ್ಲಿರುವ ರಾಜ್ಯ ಸಶಸ್ತ್ರ ಮೀಸಲು ಪಡೆಯ (ಕೆಎಸ್ಆರ್‌ಪಿ) ಮೆಸ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ನಡೆದಿದೆ. ಸಭೆಯಲ್ಲಿ ಗೃಹ ಮಂತ್ರಿ ಡಾ.ಜಿ.ಪರಮೇಶ್ವರ್, ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ, ಎಡಿಜಿಪಿ (ಆಡಳಿತ) ಸೌಮೆಂದು ಮುಖರ್ಜಿ ಹಾಗೂ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಅಜುಂ ಪರ್ವೇಜ್ ಉಪಸ್ಥಿತರಿದ್ದರು. ಅಲ್ಲದೆ ಪಿಐ-ಡಿವೈಎಸ್ಪಿಗಳ ವರ್ಗಾವಣೆಗೆ ಶಾಸಕರ ಶಿಫಾರಸಿನ ಬಗ್ಗೆ ಸಹ ಚರ್ಚೆ ಕೂಡ ನಡೆದಿದೆ ಎಂದು ತಿಳಿದು ಬಂದಿದೆ.
ಹಿತೇಂದ್ರ ಔಟ್ ನಿಂಬಾಳ್ಕರ್ ಇನ್:
ರಾಜ್ಯದಲ್ಲಿ ಗೌರಿ-ಗಣೇಶ ಹಬ್ಬದ ಗಲಾಟೆಗಳು ಪದೇ ಪದೆ ವರದಿಯಾಗುತ್ತಿವೆ. ಅಲ್ಲದೆ, ಕೆಲವೆಡೆ ಮತೀಯ ವಿಚಾರವಾಗಿ ಘರ್ಷಣೆ ನಿಯಂತ್ರಿಸುವಲ್ಲಿ ಪೊಲೀಸರ ವೈಫಲ್ಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ। ಜಿ.ಪರಮೇಶ್ವರ್ ಅವರಿಗೆ ಅಸಮಾಧಾನ ತಂದಿದೆ. ಈ ಹಿನ್ನಲೆಯಲ್ಲಿ ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್.ಹಿತೇಂದ್ರ ಅವರ ಬದಲಾವಣೆಗೆ ಉಭಯ ನಾಯಕರು ಯೋಜಿಸಿದ್ದಾರೆ ಎನ್ನಲಾಗಿದೆ.
ಅವರಿಂದ ತೆರವಾಗಲಿರುವ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಮುಖ್ಯಸ್ಥ ಹುದ್ದೆಗೆ ವಾರ್ತಾ ಇಲಾಖೆಯ ಆಯುಕ್ತ ಹೇಮಂತ್ ನಿಂಬಾಳ್ಕರ್, ಸಿಐಡಿ ಎಡಿಜಿಪಿ ಬಿ.ಕೆ.ಸಿಂಗ್ ಹಾಗೂ ಆಡಳಿತ ವಿಭಾಗದ ಎಡಿಜಿಪಿ ಸೌಮೆಂದು ಮುಖರ್ಜಿ ಅವರ ಹೆಸರು ಕೇಳಿ ಬಂದಿದೆ. ಅದೇ ರೀತಿ ಕೆಲ ಐಜಿಪಿಗಳು ಹಾಗೂ ಜಿಲ್ಲಾ ಎಸ್ಪಿಗಳು ಸಹ ವರ್ಗಾವಣೆಯಾಗಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ರಾಜ್ಯ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ: 25 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಮೈಸೂರು ದಸರಾ ಭದ್ರತೆಗೆ ಬೆಂಗಳೂರು ಡಿಸಿಪಿಗಳು:
ಮೈಸೂರು ದಸರಾ ಹಬ್ಬಕ್ಕೆ ಬೆಂಗಳೂರಿನಿಂದ ಡಿಸಿಪಿಗಳು ಹಾಗೂ ಬಹುತೇಕ ಇನ್ಸ್‌ಪೆಕ್ಟರ್‌ಗಳು ನಿಯೋಜನೆಗೊಂಡಿದ್ದಾರೆ. ಅಲ್ಲದೆ ಮಂಗಳೂರು, ತುಮಕೂರು, ಕೊಡಗು, ಬೆಳಗಾವಿ ಹಾಗೂ ಹುಬ್ಬಳ್ಳಿ ಧಾರವಾಡ ಸೇರಿದಂತೆ ಕೆಲವು ಜಿಲ್ಲಾ ಕೇಂದ್ರಗಳಲ್ಲಿ ಕೂಡ ಅದ್ದೂರಿಯಾಗಿ ದಸರಾ ಆಚರಣೆ ನಡೆದಿದೆ. ಈ ಬಂದೋಬಸ್ತ್ ಕಾರ್ಯಗಳಲ್ಲಿ ಪೊಲೀಸರು ವ್ಯಸ್ತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಹಬ್ಬ ಮುಗಿದ ಬಳಿಕ ಪೊಲೀಸರ ಸಾಮೂಹಿಕ ವರ್ಗಾವಣೆಗೆ ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ಹೇಳಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ