
ಬೆಂಗಳೂರು (ನ.06): ದೇಶಾದ್ಯಂತ ಪೆಟ್ರೋಲ್‌ನಲ್ಲಿ ಶೇಕಡಾ 20ರಷ್ಟು ಎಥೆನಾಲ್ (E20) ಮಿಶ್ರಣ ಮಾಡುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿರುವ ಬೆನ್ನಲ್ಲೇ, ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿದೆ. ರಾಜ್ಯದ 7 ಜಿಲ್ಲೆಗಳಿಂದ ಪ್ರಮುಖ ತೈಲ ಸಂಸ್ಥೆಗಳ (IOCL, HPCL, BPCL ಇತ್ಯಾದಿ) ಪೆಟ್ರೋಲ್ ಬಂಕ್‌ಗಳಿಂದ ಸಂಗ್ರಹಿಸಿದ ಇಂಧನ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದಾಗ, ನಿಗದಿತ ಶೇ. 20ರ ಮಿತಿಯನ್ನು ಮೀರಿ ಶೇಕಡಾ 31.2 ರಷ್ಟು ಎಥೆನಾಲ್ ಮಿಶ್ರಣವಾಗಿರುವುದು ಬೆಳಕಿಗೆ ಬಂದಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ತಿಳಿಸಿದ್ದಾರೆ.
ಕೇಂದ್ರ ಸರ್ಕಾರವೇ ಒಪ್ಪಿಕೊಂಡಿರುವಂತೆ E20 (ಶೇ. 20 ಎಥೆನಾಲ್) ಬಳಕೆಯಿಂದಲೇ ವಾಹನಗಳ ಮೈಲೇಜ್ ಸ್ವಲ್ಪಮಟ್ಟಿಗೆ ಕಡಿಮೆಯಾಗುತ್ತದೆ. ಹೀಗಿರುವಾಗ, ಪೆಟ್ರೋಲ್‌ನಲ್ಲಿ ಎಥೆನಾಲ್ ಪ್ರಮಾಣ ಶೇಕಡಾ 30ಕ್ಕಿಂತ ಹೆಚ್ಚಾದರೆ ವಾಹನ ಎಂಜಿನ್‌ಗಳ ಕಾರ್ಯಕ್ಷಮತೆ ಹಾಗೂ ಆಯುಷ್ಯದ ಮೇಲಾಗುವ ಭಾರಿ ಪರಿಣಾಮಕ್ಕೆ ಹೊಣೆ ಯಾರು ಎಂಬ ಪ್ರಶ್ನೆ ಎದ್ದಿದೆ. ಎಥೆನಾಲ್ ಇಂಧನಕ್ಕೆ ಹೊಂದಿಕೆಯಾಗದ ಹಳೆಯ ವಾಹನಗಳಿಗೆ ಇದು ನೇರ ಹಾನಿ ಉಂಟುಮಾಡಲಿದ್ದು, ಮೈಲೇಜ್ ಕಡಿಮೆಯಾಗುವುದರಿಂದ ಗ್ರಾಹಕರಿಗೆ ಇಂಧನ ವೆಚ್ಚ ಹೆಚ್ಚಾಗುತ್ತಿದೆ. ಈ ತಪ್ಪಿಗೆ ಸಾಮಾನ್ಯ ವಾಹನ ಸವಾರರು ತಮ್ಮ ಜೇಬಿನಿಂದ ಬೆಲೆ ತೆರಬೇಕಾಗಿ ಬಂದಿರುವುದು ಗ್ರಾಹಕ ಹಕ್ಕುಗಳ ನೇರ ಉಲ್ಲಂಘನೆಯಾಗಿದೆ ಎಂದು ಸರ್ಕಾರ ಕಿಡಿಕಾರಿದೆ.
ಒಂದೆಡೆ ಎಥೆನಾಲ್ ಮಿಶ್ರಣದಿಂದ ಕಬ್ಬು ಬೆಳೆಯುವ ರೈತರಿಗೆ ಲಾಭವಾಗುತ್ತದೆ ಎಂದು ಪ್ರತಿಪಾದಿಸುವ ಕೇಂದ್ರ ಸರ್ಕಾರ, ಮತ್ತೊಂದೆಡೆ ಎಥೆನಾಲ್ ಖರೀದಿಗಾಗಿ ಹೊರಡಿಸಿರುವ ಹೊಸ ಟೆಂಡರ್ ನಿಯಮಗಳಲ್ಲಿ ಕಬ್ಬಿನ ರಸ (Sugarcane Juice), ಸಕ್ಕರೆ ಪಾಕ (Sugar Syrup) ಹಾಗೂ ಬಿ-ಹೆವಿ ಮೊಲಾಸಿಸ್ ನಿಂದ ತಯಾರಿಸುವ ಎಥೆನಾಲ್ ಅನ್ನು ಹೊರಗಿಟ್ಟಿದೆ. ಕರ್ನಾಟಕದ ರೈತರು ತೀವ್ರ ಬರದಿಂದ ಕಷ್ಟಪಡುತ್ತಿರುವ ಈ ಸಮಯದಲ್ಲಿ, ಕಬ್ಬಿನ ಎಥೆನಾಲ್‌ಗೆ ಇರುವ ಪ್ರಮುಖ ಮಾರುಕಟ್ಟೆ ಅವಕಾಶವನ್ನು ಕೇಂದ್ರವೇ ಕಡಿತಗೊಳಿಸುತ್ತಿದೆ. ಇತ್ತ ರೈತರಿಗೂ ನ್ಯಾಯ ಸಿಗದೆ, ಅತ್ತ ಗ್ರಾಹಕರಿಗೂ ಸೂಕ್ತ ಇಂಧನ ಸಿಗದೆ ಇಬ್ಬರನ್ನೂ ವಂಚಿಸಲಾಗುತ್ತಿದೆ ಎಂಬ ಆರೋಪ ವ್ಯಕ್ತವಾಗಿದೆ.
ಕರ್ನಾಟಕದಲ್ಲಿ ನಡೆಸಲಾದ ಈ ಪ್ರಯೋಗಾಲಯ ಪರೀಕ್ಷೆಯ ವರದಿಯನ್ನು ಅಧಿಕೃತವಾಗಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಲಾಗಿದೆ.
- ಸಮಗ್ರ ತನಿಖೆ: ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಬೆರೆಸಿ ಮಾರಾಟ ಮಾಡುತ್ತಿರುವ ತೈಲ ಕಂಪನಿಗಳ ವಿರುದ್ಧ ತಕ್ಷಣವೇ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕು.
- ಬಂಕ್‌ಗಳಲ್ಲಿ ಮಾಹಿತಿ ಪ್ರಕಟಣೆ: ಪ್ರತಿ ಪೆಟ್ರೋಲ್ ಬಂಕ್‌ನಲ್ಲೂ ಸಾರ್ವಜನಿಕರಿಗೆ ಕಾಣಿಸುವಂತೆ ಪೆಟ್ರೋಲ್‌ನಲ್ಲಿ ಎಷ್ಟು ಪ್ರಮಾಣದ ಎಥೆನಾಲ್ ಮಿಶ್ರಣವಾಗಿದೆ ಎಂಬುದನ್ನು ಸ್ಪಷ್ಟವಾಗಿ ಪ್ರಕಟಿಸಬೇಕು.
- ನಷ್ಟ ಪರಿಹಾರ ಮತ್ತು ಭದ್ರತೆ: ವಾಹನ ಸವಾರರ ಹಿತಾಸಕ್ತಿ ಕಾಪಾಡಲು ಹಾಗೂ ಎಂಜಿನ್‌ಗಳಿಗೆ ಹಾನಿಯಾಗದಂತೆ ಅಗತ್ಯ ಸುರಕ್ಷತಾ ಕ್ರಮಗಳನ್ನು ತಕ್ಷಣವೇ ಜಾರಿಗೆ ತರಬೇಕು.
ಈ ಕುರಿತು ದೇಶದ ಜನತೆಗೆ ಹಾಗೂ ವಾಹನ ಸವಾರರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಉತ್ತರಿಸಬೇಕೆಂದು ರಾಜ್ಯ ಸರ್ಕಾರದ ಪರವಾಗಿ ಆಗ್ರಹಿಸಲಾಗಿದೆ.
ಪೆಟ್ರೋಲ್‌ನಲ್ಲಿ ಶೇ.20ರಷ್ಟು ಎಥೆನಾಲ್ (E20) ಅನ್ನು ಮಿಶ್ರಣಗೊಳಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಎಥೆನಾಲ್ ಮಿಶ್ರಿತ ಪೆಟ್ರೋಲ್ ಖರೀದಿಯನ್ನು ಜನರಿಗೆ ಅನಿವಾರ್ಯವಾಗಿಸಿದೆ.
ಇದರಿಂದ ವಾಹನಗಳ ಮೈಲೇಜ್ ಕಡಿಮೆಯಾಗುವುದು ಹಾಗೂ ಬಹಳ ಮುಖ್ಯವಾಗಿ ಎಥೆನಾಲ್ ಇಂಧನ ಬಳಕೆಗೆ ಹೊಂದಿಕೆಯಾಗದ ಹಳೆಯ ವಾಹನಗಳಿಗೆ ಸಮಸ್ಯೆಯಾಗುವ ಬಗ್ಗೆ ಆತಂಕಗಳಿದ್ದರೂ ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ಜನರ ಮೇಲೆ ಒತ್ತಾಯಪೂರ್ವಕವಾಗಿ ಹೇರಿದೆ. ಇದೀಗ ಕರ್ನಾಟಕದಲ್ಲಿ ನಮ್ಮ ಸರ್ಕಾರ ನಡೆಸಿರುವ ಪರೀಕ್ಷೆಯಲ್ಲಿ ಬೆಳಕಿಗೆ ಬಂದಿರುವ ಕೆಲವು ವಿಚಾರಗಳು ವಾಹನ ಸವಾರರ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ.
ನಮ್ಮ ಸರ್ಕಾರವು ಸ್ವತಂತ್ರ ಪ್ರಯೋಗಾಲಯಗಳಲ್ಲಿ ನಡೆಸಿದ ಪರೀಕ್ಷೆಯಲ್ಲಿ ಪ್ರಮುಖ ತೈಲ ಕಂಪನಿಗಳು ಮಾರಾಟ ಮಾಡುತ್ತಿರುವ ಪೆಟ್ರೋಲ್‌ನಲ್ಲಿ ಶೇ.31.2ರವರೆಗೆ ಎಥೆನಾಲ್ ಮಿಶ್ರಣವಾಗಿರುವುದು ಕಂಡುಬಂದಿದೆ. ರಾಜ್ಯದ ಏಳು ಜಿಲ್ಲೆಗಳಿಂದ ಸಂಗ್ರಹಿಸಿದ ಪೆಟ್ರೋಲ್ ಮಾದರಿಗಳಲ್ಲಿ ನಿಗದಿತ ಶೇ.20ರ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಇರುವುದು ಪತ್ತೆಯಾಗಿದೆ.
E20 ಪೆಟ್ರೋಲ್ ಬಳಕೆಯಿಂದ ಕೆಲವು ವಾಹನಗಳ ಮೈಲೇಜ್ ಕಡಿಮೆಯಾಗಬಹುದು ಎಂಬುದನ್ನು ಕೇಂದ್ರ ಸರ್ಕಾರವೇ ಒಪ್ಪಿಕೊಂಡಿದೆ. ಹೀಗಿರುವಾಗ ಪೆಟ್ರೋಲ್‌ನಲ್ಲಿ ಎಥೆನಾಲ್ ಪ್ರಮಾಣ ಶೇ.30ಕ್ಕಿಂತ ಹೆಚ್ಚಾದರೆ ಏನಾಗಬಹುದು? ಇದರಿಂದ ಹೆಚ್ಚಾಗುವ ಇಂಧನ ವೆಚ್ಚವನ್ನು ಯಾರು ಭರಿಸಬೇಕು? ವಾಹನಗಳ ಕಾರ್ಯಕ್ಷಮತೆಗೆ ತೊಂದರೆಯಾದರೆ ಅದರ ಹೊಣೆ ಯಾರು ಹೊರಬೇಕು? ಇಂತಹ ತಪ್ಪುಗಳಿಗೆ ಸಾಮಾನ್ಯ ವಾಹನ ಸವಾರರು ಬೆಲೆ ತೆರಬೇಕಾಗಿ ಬಂದಿರುವುದನ್ನು ಒಪ್ಪಲು ಸಾಧ್ಯವಿಲ್ಲ.
ಎಥೆನಾಲ್ ಮಿಶ್ರಣದಿಂದ ರೈತರಿಗೆ ಲಾಭವಾಗುತ್ತದೆ ಎಂದು ಹೇಳುವ ಕೇಂದ್ರ ಸರ್ಕಾರವೇ ಎಥೆನಾಲ್ ಖರೀದಿಗಾಗಿ ಹೊರಡಿಸಿರುವ ಹೊಸ ಟೆಂಡರ್ನಲ್ಲಿ ಕಬ್ಬಿನ ರಸ, ಸಕ್ಕರೆ ಪಾಕ (Sugar Syrup) ಹಾಗೂ ಬಿ-ಹೆವಿ ಮೊಲಾಸಿಸ್ನಿಂದ (B-heavy Molasses) ತಯಾರಿಸುವ ಎಥೆನಾಲ್ ಅನ್ನು ಹೊರಗಿಟ್ಟಿದೆ. ಇದು ಮೋದಿಯವರ ಸರ್ಕಾರದ ದ್ವಂದ್ವ ನಿಲುವು.
ಕರ್ನಾಟಕದ ರೈತರು ಈಗಾಗಲೇ ತೀವ್ರ ಬರದಿಂದ ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಕಬ್ಬಿನಿಂದ ತಯಾರಿಸುವ ಎಥೆನಾಲ್‌ಗೆ ಇರುವ ಪ್ರಮುಖ ಮಾರುಕಟ್ಟೆಯ ಅವಕಾಶವನ್ನು ಕೇಂದ್ರ ಸರ್ಕಾರವೇ ಕಡಿತಗೊಳಿಸುತ್ತಿದೆ. ಮತ್ತೊಂದೆಡೆ, ನಿಗದಿಪಡಿಸಿದ ಶೇ.20ರ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣವಾಗಿರುವ ಪೆಟ್ರೋಲ್ ಮಾರಾಟವಾಗಲು ಅವಕಾಶ ನೀಡಲಾಗುತ್ತಿದೆ.
ಹಾಗಾದರೆ ಎಥೆನಾಲ್ ಮಿಶ್ರಣದಿಂದ ರೈತರಿಗೆ ಲಾಭ ಆಗುತ್ತದೆ ಎಂದು ನೀಡಿದ್ದ ಭರವಸೆ ಏನಾಯಿತು? ವಾಹನ ಸವಾರರ ಹಿತಾಸಕ್ತಿಗೆ ರಕ್ಷಣೆ ಎಲ್ಲಿದೆ? ಇದು ರೈತರು ಮತ್ತು ಗ್ರಾಹಕರು ಇಬ್ಬರನ್ನೂ ವಂಚಿಸುವ ಕೆಲಸವಲ್ಲವೇ?
ಕೇಂದ್ರ ಸರ್ಕಾರವೇ ಪೆಟ್ರೋಲ್‌ನಲ್ಲಿ ಶೇ.20ರಷ್ಟು ಎಥೆನಾಲ್ ಮಿಶ್ರಣದ ಮಿತಿಯನ್ನು ನಿಗದಿಪಡಿಸಿರುವಾಗ, ಶೇ.30ಕ್ಕಿಂತ ಹೆಚ್ಚು ಎಥೆನಾಲ್ ಇರುವ ಪೆಟ್ರೋಲ್ ಜನರಿಗೆ ಹೇಗೆ ಮಾರಾಟವಾಗುತ್ತಿದೆ? ಈ ತೈಲ ಕಂಪನಿಗಳ ಮೇಲೆ ನಿಗಾ ವಹಿಸುತ್ತಿರುವವರು ಯಾರು? ಇದಕ್ಕೆ ಹೊಣೆ ಯಾರು? ಎನ್ನುವ ಬಗ್ಗೆ ಪ್ರಧಾನಮಂತ್ರಿ ಶ್ರೀ @narendramodi ಹಾಗೂ ಕೇಂದ್ರ ಸಚಿವರಾದ ಶ್ರೀ @nitin_gadkari ಅವರು ದೇಶದ ಜನತೆಗೆ ಉತ್ತರ ನೀಡಬೇಕು.
ಕರ್ನಾಟಕದಲ್ಲಿ ನಡೆಸಿರುವ ಪರೀಕ್ಷೆಯ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು. ಈ ಬಗ್ಗೆ ತಕ್ಷಣ ಸಮಗ್ರ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಪ್ರತಿಯೊಂದು ಪೆಟ್ರೋಲ್ ಬಂಕ್ನಲ್ಲಿಯೂ ಪೆಟ್ರೋಲ್ಗೆ ಎಷ್ಟು ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣ ಮಾಡಲಾಗಿದೆ ಎಂಬ ಮಾಹಿತಿಯನ್ನು ಸಾರ್ವಜನಿಕರಿಗೆ ಸ್ಪಷ್ಟವಾಗಿ ತಿಳಿಸಬೇಕು. ಜೊತೆಗೆ ಗ್ರಾಹಕರ ಹಿತಾಸಕ್ತಿ ಕಾಪಾಡಲು ಹಾಗೂ ವಾಹನಗಳಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸುತ್ತೇನೆ.
— Dr. G Parameshwara (@DrParameshwara) November 6, 2026
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ