
ಬೆಂಗಳೂರು: ಕ್ಯಾನ್ಸರ್ ರೋಗಿಗಳ ಚಿಕಿತ್ಸಾ ವ್ಯವಸ್ಥೆ ಸುಧಾರಿಸಲು ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಹಾಗೂ ಹುಬ್ಬಳ್ಳಿಯ ಕಿಮ್ಸ್‌ಗೆ ಒಟ್ಟು 40 ಕೋಟಿ ವೆಚ್ಚದಲ್ಲಿ ತಲಾ ಒಂದೊಂದು ರೋಬೊಟಿಕ್ ಸರ್ಜರಿ ಉಪಕರಣ ಖರೀದಿಸಲು ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆ ನಿರ್ಧರಿಸಿದೆ.
ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಈಶ್ವರ್ ಖಂಡ್ರೆ, ಪ್ರತಿ ಸಂಸ್ಥೆಗೆ 20 ಕೋಟಿ ರು. ವೆಚ್ಚದಲ್ಲಿ ಈ ಉಪಕರಣ ಖರೀದಿ ಮಾಡಲಾಗುತ್ತಿದ್ದು, ಈ ಪೈಕಿ ತಲಾ 5 ಕೋಟಿ ರು.ಗಳನ್ನು ಆಯಾ ಸಂಸ್ಥೆಗಳು ಸ್ವಂತ ಸಂಪನ್ಮೂಲದಿಂದ ಭರಿಸಲಿವೆ. ಉಳಿದ ಮೊತ್ತವನ್ನು ಸರಕಾರ ಭರಿಸಲಿದೆ. ಈ ಪ್ರಸ್ತಾವನೆಗೆ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ. ಇದರಿಂದ ಕ್ಯಾನ್ಸರ್ ಚಿಕಿತ್ಸೆಗೆ ಬರುವ ರೋಗಿಗಳ ಸೇವೆಗೆ ಮತ್ತಷ್ಟು ಬಲ ಸಿಗಲಿದೆ ಎಂದು ತಿಳಿಸಿದರು.
ಉಡುಪಿ ಜಿಲ್ಲೆಯ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಒಟ್ಟು 1,800 ಚದರ ಮೀಟರ್ ವಿಸ್ತೀರ್ಣದ ಜಾಗದಲ್ಲಿ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಬಹುಮಹಡಿ ವಾಹನ ನಿಲುಗಡೆ ಸೌಲಭ್ಯ ಅಭಿವೃದ್ಧಿಪಡಿಸುವ ಪ್ರಸ್ತಾವನೆಗೆ ಸಂಪುಟ ಅನುಮೋದನೆ ನೀಡಿತು.
ಬಂದರಿಗೆ ನಿತ್ಯ 7 ಸಾವಿರ ಪ್ರವಾಸಿಗರ ಭೇಟಿ ಜತೆಗೆ, ಮೀನುಗಾರಿಕೆ ಅವಧಿಯಲ್ಲಿವಾಹನ ಸಂಚಾರ ಹೆಚ್ಚಿರುತ್ತದೆ. 3 ಸಾವಿರ ನೋಂದಾಯಿತ ಮೀನುಗಾರಿಕೆ ದೋಣಿಗಳು ಇಲ್ಲಿಕಾರ್ಯನಿರ್ವಹಿಸುತ್ತವೆ. ಹಾಗಾಗಿ, ಬಂದರಿನಲ್ಲಿ ಸುಗಮ ಕಾರ್ಯಾಚರಣೆ, ವಾಹನ ದಟ್ಟಣೆ ಕಡಿಮೆ ಮಾಡುವುದು, ಮೀನುಗಾರರು, ಪ್ರವಾಸಿಗರು ಮತ್ತು ಸಾರ್ವಜನಿಕರ ಅನುಕೂಲದ ದೃಷ್ಟಿಯಿಂದ ಈ ತೀರ್ಮಾನ ಮಾಡಲಾಗಿದೆ ಎಂದು ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಹಾಗೂ ಬಳ್ಳಾರಿ ಜಿಲ್ಲೆ ಕಂಪ್ಲಿಹೋಬಳಿಯ ಹರಳಹಳ್ಳಿಯಲ್ಲಿಒಟ್ಟು 26.10 ಕೋಟಿ ರು. ವೆಚ್ಚದಲ್ಲಿಹೊಸದಾಗಿ ಕೈಗಾರಿಕಾ ವಸಾಹತುಗಳನ್ನುನಿರ್ಮಿಸುವ ಪ್ರಸ್ತಾವನೆಗೆ ಕ್ಯಾಬಿನೆಟ್ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಆಯವ್ಯಯದಲ್ಲಿ ಘೋಷಣೆ ಮಾಡಿದ್ದಂತೆ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಸಂಪನ್ಮೂಲದಿಂದ ಈ ವಸಾಹತುಗಳ ನಿರ್ಮಾಣವಾಗಲಿದ್ದು, ಸ್ಥಳೀಯ ಕೈಗಾರಿಕೋದ್ಯಮಿಗಳು ಸಣ್ಣ ಕೈಗಾರಿಕೆಗಳನ್ನು ಪ್ರಾರಂಭಿಸಲು ಹಾಗೂ ಸ್ಟಾರ್ಟಪ್‌ಗಳಿಗೆ ಉತ್ತೇಜನ ನೀಡುವುದು ಈ ತೀರ್ಮಾನದ ಉದ್ದೇಶವಾಗಿದೆ.
ಮಲೆ ಮಹದೇಶ್ವರ ವನ್ಯಜೀವಿ ವಲಯದಲ್ಲಿಪಿ.ಜಿ.ಪಾಳ್ಯದಿಂದ ಕುಡುವಲೆ ಕ್ರಾಸ್‌ವರೆಗೆ ಒಟ್ಟು 10.60 ಕಿ.ಮೀ ಉದ್ದದ ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡುವ 16.83 ಕೋಟಿ ರು. ವೆಚ್ಚದ ಪ್ರಸ್ತಾವನೆಗೆ ಸಂಪುಟ ಅನುಮೋದನೆ ನೀಡಿತು.
ಈ ವನ್ಯಜೀವಿಧಾಮ ವಲಯದಲ್ಲಿಹೆಚ್ಚುತ್ತಿರುವ ಮಾನವ-ವನ್ಯಜೀವಿ ಸಂಘರ್ಷವನ್ನು ನಿಯಂತ್ರಿಸುವ ಉದ್ದೇಶದ 81.75 ಕೋಟಿ ರೂ ವೆಚ್ಚದ ಯೋಜನೆಯ ಭಾಗವಾಗಿ ಈ ರೈಲ್ವೆ ಬ್ಯಾರಿಕೇಡ್ ಅಳವಡಿಸುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.
ಸಚಿವ ಸಂಪುಟ ಸಭೆ ಬಳಿಕ ಸಂಪುಟ ತೀರ್ಮಾನಗಳ ಕುರಿತು ಮಾಹಿತಿ ನೀಡಬೇಕಿದ್ದ ಸರ್ಕಾರ ಸುದ್ದಿಗೋಷ್ಠಿ ನಡೆಸುವುದನ್ನೇ ಮರೆತ ಘಟನೆ ಗುರುವಾರ ನಡೆದಿದೆ. ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಬೇಕಾದ ಉಪಮುಖ್ಯಮಂತ್ರಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾದ ಡಾ.ಜಿ.ಪರಮೇಶ್ವರ್ ಅವರು ಅನಾರೋಗ್ಯದಿಂದಾಗಿ ಬೇಗನೆ ಹೊರಟು ಹೋದರು.
ಇನ್ನು ಪರಮೇಶ್ವರ್ ಅವರ ಅನುಪಸ್ಥಿತಿಯಲ್ಲಿ ಕಳೆದ ಸಚಿವ ಸಂಪುಟದಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಕೃಷ್ಣಬೈರೇಗೌಡ ಅವರು ತಮ್ಮ ಜವಾಬ್ದಾರಿಯಲ್ಲ ಎಂದು ಹೊರಟುಬಿಟ್ಟರು. ಈ ಬಗ್ಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮಾಹಿತಿಯನ್ನೇ ನೀಡಿರಲಿಲ್ಲ. ಸಂಪುಟ ಸಭೆ ಮುಗಿದು ಒಂದು ತಾಸಿಗೂ ಹೆಚ್ಚು ಸಮಯ ಕಳೆದರೂ ಸುದ್ದಿಗೋಷ್ಠಿ ನಡೆಸಬೇಕಾಗಿದ್ದ ಸಮಿತಿ ಕೊಠಡಿಗೆ ಯಾವೊಬ್ಬ ಸಚಿವರೂ ಆಗಮಿಸಲಿಲ್ಲ. ಬಳಿಕ ಮುಖ್ಯಮಂತ್ರಿ ಅವರಿಗೆ ವಿಷಯ ತಲುಪಿಸಿದ್ದರಿಂದ ತರಾತುರಿಯಲ್ಲಿ ಸಚಿವ ಈಶ್ವರ್ ಖಂಡ್ರೆ ಅವರನ್ನು ಸುದ್ದಿಗೋಷ್ಠಿ ನಡೆಸಲು ಕಳುಹಿಸಿದರು ಎಂದು ತಿಳಿದುಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ