
ಬೆಂಗಳೂರು : ದೇಶದಲ್ಲೇ ಮೊದಲ ಬಾರಿಗೆ ಶುಶ್ರೂಷಕರ ನೋಂದಣಿಗಾಗಿ ಕರ್ನಾಟಕ ರಾಜ್ಯ ಶುಶ್ರೂಷ ಪರಿಷತ್ ವಿಶೇಷ ಡಿಜಿ ಲಾಕರ್ ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದು, ಆಧಾರ್ ಮತ್ತು ಡಿಜಿ ಲಾಕರ್ ಇ-ಕೆವೈಸಿ ಮೂಲಕ ನೋಂದಣಿ ಪ್ರಮಾಣ ಪತ್ರಗಳನ್ನು ವಿತರಿಸುವ ತಂತ್ರಜ್ಞಾನದ ಲೋಕಾರ್ಪಣೆ ಮಂಗಳವಾರ ನಡೆಯಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
ಯುಐಡಿಎಐ, ಸಿ-ಇಜಿ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ ಹಾಗೂ ಕರ್ನಾಟಕ ರಾಜ್ಯ ಶುಶ್ರೂಷ ಪರೀಕ್ಷಾ ಮಂಡಳಿ ಸಹಯೋಗದೊಂದಿಗೆ ಈ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗಿದೆ. ಈ ತಂತ್ರಜ್ಞಾನದ ನೆರವಿನಿಂದ ಆಧಾರ್ ಇ-ಕೆವೈಸಿ ಯಿಂದ ಶುಶ್ರೂಷಕರ ವೈಯಕ್ತಿಕ ಡಾಟಾ, ವಿಳಾಸ, ಫೋಟೋ ಹಾಗೂ ಇತರೆ ಮಾಹಿತಿಗಳನ್ನು ಆಧಾರ್ ಸರ್ವರ್ ನಿಂದ ನೇರವಾಗಿ ಕರ್ನಾಟಕ ಶುಶ್ರೂಷ ಪರಿಷತ್ ಪಡೆದುಕೊಳ್ಳಬಹುದಾಗಿದೆ. ಈ ಹಿಂದೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ನೋಂದಣಿಗಾಗಿ ಕರ್ನಾಟಕ ರಾಜ್ಯ ಶುಶ್ರೂಷ ಪರಿಷತ್ತಿನ ಬೆಂಗಳೂರಿನ ಕೇಂದ್ರ ಕಚೇರಿಗೆ ಬರಬೇಕಾಗಿತ್ತು ಎಂದು ಅವರು ಹೇಳಿದ್ದಾರೆ.
ತೊಂದರೆ ತಪ್ಪಿಸಲು ನೂತನ ತಂತ್ರಜ್ಞಾನ:
ರಾಜ್ಯ ಮತ್ತು ಹೊರ ರಾಜ್ಯದ ಶುಶ್ರೂಷಕರ ಸಮೂಹ ಕೇವಲ ನೋಂದಣಿಯ ಉದ್ದೇಶದಿಂದ ಊಟ, ವಸತಿಗಾಗಿ ಸಾವಿರಾರು ರುಪಾಯಿ ವ್ಯಯಿಸಿ ಪರದಾಡುವ ಪರಿಸ್ಥಿತಿ ಇತ್ತು. ಜೊತೆಗೆ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ನೋಂದಣಿಗಾಗಿ ಸರತಿಯಲ್ಲಿ ನಿಂತು ಕಾಯಬೇಕಾಗಿತ್ತು. ಮಹಿಳೆಯರು, ಗರ್ಭಿಣಿಯರು, ಹಸುಗೂಸುಗಳ ತಾಯಂದಿರು ಸಾಕಷ್ಟು ತೊಂದರೆ ಅನುಭವಿಸಬೇಕಾಗಿತ್ತು. ನೂತನ ತಂತ್ರಜ್ಞಾನದ ಅಳವಡಿಕೆಯಿಂದ ಈ ಎಲ್ಲಾ ಸಮಸ್ಯೆಗಳಿಗೆ ಮುಕ್ತಿ ದೊರಕಿದಂತಾಗಿದೆ ಎಂದು ಸಚಿವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ನಕಲಿ ಹಾವಳಿ ತಡೆಗಟ್ಟಲು ಸಹಕಾರಿ:
ಈ ಹೊಸ ಡಿಜಿ ಲಾಕರ್ ತಂತ್ರಜ್ಞಾನದಿಂದ ಶುಶ್ರೂಷಕರ ಆಧಾರ್ ಕಾರ್ಡ್, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಅಂಕಪಟ್ಟಿ ಮತ್ತಿತರ ಪ್ರಮಾಣಪತ್ರಗಳನ್ನು ಸಂಬಂಧಪಟ್ಟ ಆಯಾ ಪರೀಕ್ಷಾ ಬೋರ್ಡ್‌ಗಳಿಂದ ನೇರವಾಗಿ ಪಡೆದುಕೊಳ್ಳಬಹುದು. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ ಹಾಗೂ ಕರ್ನಾಟಕ ರಾಜ್ಯ ಶುಶ್ರೂಷ ಪರೀಕ್ಷಾ ಮಂಡಳಿಗಳು ಅಳವಡಿಸಿಕೊಂಡಿರುವ ಈ ತಂತ್ರಜ್ಞಾನದಿಂದ ಪರೀಕ್ಷಾ ಫಲಿತಾಂಶವನ್ನು ನೇರವಾಗಿ ಕರ್ನಾಟಕ ರಾಜ್ಯ ಶುಶ್ರೂಷ ಪರಿಷತ್ ಪಡೆದುಕೊಳ್ಳಲಿದೆ. ನಂತರ ಡಿಜಿ ಲಾಕರ್ ತಂತ್ರಜ್ಞಾನದಿಂದ ಶುಶ್ರೂಷಕರಿಗೆ ನೇರವಾಗಿ ನೋಂದಣಿ ಪತ್ರ ವಿತರಿಸಬಹುದಾಗಿದೆ. ಅಂತೆಯೇ ನಕಲಿ ನೋಂದಣಿ ಪ್ರಮಾಣ ಪತ್ರಗಳ ಹಾವಳಿಯನ್ನೂ ತಡೆಗಟ್ಟಬಹುದು ಎಂದು ಶುಶ್ರೂಷ ಪರಿಷತ್ತಿನ ಕುಲಸಚಿವ ಡಾ.ಕೆ.ಮಲ್ಲು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ