ಶ್ರೀಗಳ ಕ್ರಿಯಾವಿಧಿ ವೇಳೆ ಮಹಿಳಾ ಅಧಿಕಾರಿಗೆ ಸಚಿವರಿಂದ ಅವಮಾನ

By Web DeskFirst Published Jan 23, 2019, 1:32 PM IST
Highlights

ಸಿದ್ಧಗಂಗಾಶ್ರೀ ಕ್ರಿಯಾವಿಧಿ ವೇಳೆ ಅವಮಾನಕಾರಿ ಘಟನೆಯೊಂದು ಸಂಭವಿಸಿದೆ. ಶ್ರೀಗಳ ಪಾರ್ಥಿವ ಶರೀರದ ಎದುರೇ ಸಚಿವರೊಬ್ಬರು ಸಿಟ್ಟು, ಬೈಗುಳ ನೀಡಿ ಭದ್ರತೆ ಉಸ್ತುವಾರಿ ಹೊತ್ತಿದ್ದ ಮಹಿಳಾ ಐಪಿಎಸ್ ಅಧಿಕಾರಿಗೆ ಅವಮಾನ ಮಾಡಿದ್ದಾರೆ. ಅಷ್ಟಕ್ಕೂ ಆ ಸಚಿವ ಯಾರು? ಅವಮಾನಕ್ಕೊಳಗಾದ ಮಹಿಳಾ ಅಧಿಕಾರಿ ಯಾರು? ಇಲ್ಲಿದೆ ವಿವರ

ತುಮಕೂರು[ಜ.23]: ತುಮಕೂರು ಜಿಲ್ಲಾ ಎಸ್ಪಿಯಾಗಿದ್ದ, ಮಹಿಳಾ ಐಪಿಎಸ್ ಅಧಿಕಾರಿ ದಿವ್ಯಾ ಗೋಪಿನಾಥ್ ಶ್ರೀಗಳು ಶಿವೈಕ್ಯರಾದ ಹಿನ್ನೆಲೆ ಮಗುವಿನ ಆರೋಗ್ಯವನ್ನೂ ಲೆಕ್ಕಿಸದೇ, ರಜೆ ಬಿಟ್ಟು ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ ಶ್ರೀಗಳ ಕ್ರಿಯಾವಿಧಿ ಶಾಂತವಾಗಿ ನಡೆಯಲು ಶ್ರಮಿಸಿದ ಅಧಿಕಾರಿ ವಿರುದ್ಧ ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಗರಂ ಆಗಿದ್ದಾರೆ. ಶ್ರೀಗಳ ಕ್ರಿಯಾವಿಧಿ ನಡೆಯೋ ಗದ್ದುಗೆಗೆ ಎಂಟ್ರಿ ನೀಡಿಲ್ಲ ಎಂಬುವುದೇ ಐಪಿಎಸ್ ಅಧಿಕಾರಿ ದಿವ್ಯಾ ಮೇಲೆ ಸಚಿವರು ಗರಂ ಆಗಲು ಕಾರಣವೆನ್ನಲಾಗಿದೆ.

15 ಲಕ್ಷ ಜನರಿಂದ ಶ್ರೀಗಳ ಅಂತಿಮ ದರ್ಶನ

ಮೇಲೆ ಸಚಿವರ ಸೊಕ್ಕಿನ ಪ್ರದರ್ಶನ

ಸಿದ್ದಗಂಗಾ ಶ್ರೀಗಳ ಕ್ರಿಯಾವಿಧಿ ವೇಳೆ ಗದ್ದುಗೆಗೆ ಕೇವಲ 30 ಪ್ರಮುಖರನ್ನು ಮಾತ್ರ ಬಿಡಲು ಐಜಿ ದಯಾನಂದ್ ಆದೇಶಿಸಿದ್ದರು. ಆ ಪಟ್ಟಿಯಲ್ಲಿ ಸಚಿವ ಸಾ.ರಾ. ಮಹೇಶ್ ಹೆಸರಿಲ್ಲದ ಕಾರಣ ಒಳಬಿಡಲು ನಿರಾಕರಿಸದ ಎಸ್ಪಿ ದಿವ್ಯಾ ಅವರನ್ನು ತಡೆದಿದ್ದರು. ಈ ವೇಳೆ ಕುಪಿತರಾದ ಸಚಿವರು ನಾನು ಮಿನಿಸ್ಟರ್, ನನ್ನನ್ನೇ ಬಿಡುವುದಿಲ್ವಾ?  ಬ್ಲಡಿ ಈಡಿಯಟ್ ಎಂದು ನಾಲಿಗೆ ಹರಿ ಬಿಟ್ಟಿದ್ದಾರೆ. ಸಚಿವರ ಉಗ್ರಾವತಾರ ನೋಡಿ ನೊಂದುಕೊಂಡ ಐಪಿಎಸ್ ಅಧಿಕಾರಿ ದಿವ್ಯಾ ಗೋಪಿನಾಥ್, ಹಿರಿಯ ಅಧಿಕಾರಿಗಳ ಆದೇಶ ಪಾಲಿಸುತ್ತಿದ್ದೇನೆ ಎಂದಿದ್ದಾರೆ. ಆದರೆ ಇದನ್ನು ಕೇಳಲು ತಯಾರಿಲ್ಲದ ಸಚಿವ ಸಾ.ರಾ. ಮಹೇಶ್ ಮಹಿಳಾ ಅಧಿಕಾರಿ ಮೇಲೆ ಕೂಗಾಡಿದ್ದಾರೆ.

"

15 ದಿನಗಳ ಹಿಂದಷ್ಟೇ ಎಸ್ಪಿ  ದಿವ್ಯಾ ಗೋಪಿನಾಥ್ ರಜೆ ಮೇಲೆ ತೆರಳಿದ್ದರು. ಆದರೆ ಸಿದ್ದಗಂಗಾ ಶ್ರೀಗಳ ಮೇಲೆ ಅಪಾರ ಗೌರವ, ಭಕ್ತಿ ಇಟ್ಟುಕೊಂಡಿದ್ದ ಎಸ್ಪಿ ದಿವ್ಯಾ ಶ್ರೀಗಳ ಶಿವೈಕ್ಯದ ಸುದ್ದಿ  ತಿಳಿದು ಕ್ರಿಯಾವಿಧಿ ಪ್ರಕ್ರಿಯೆ ಅಸ್ತವ್ಯಸ್ತಗೊಳ್ಳಬಾರದೆಂದು ರಜೆ ಮೊಟಕುಗೊಳಿಸಿ ಕರ್ತವ್ಯಕ್ಕೆ ಹಾಜರಾಗಿದ್ದರು. ಅಲ್ಲದೇ ಶ್ರೀಗಳ ಕ್ರಿಯಾವಿಧಿ, ಮೆರವಣಿಗೆ, ಭಕ್ತರ ದರ್ಶನದ ವ್ಯವಸ್ಥೆಯ ಸಂಪೂರ್ಣ ಯೋಜನೆಯನ್ನೂ ರೂಪಿಸಿದ್ದರು. 

ಸಿದ್ಧಗಂಗಾ ಶ್ರೀಗಳ ಶೋಕಾಚರಣೆ ನಡುವೆಯೂ ಕಾರ್ಯಕ್ರಮ: ಸಚಿವನ ವಿರುದ್ಧ ದೂರು

ಕ್ರಿಯಾವಿಧಿ ಸಂದರ್ಭದಲ್ಲಿ ಖುದ್ದು ಬಂದೋಬಸ್ತ್ ಉಸ್ತುವಾರಿ ವಹಿಸಿಕೊಂಡಿದ್ದ ದಿವ್ಯಾ ವೃತ್ತಿನಿಷ್ಠೆಗೆ ಅನೇಕ ಹಿರಿಯ ಅಧಿಕಾರಿಗಳು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ಆದರೆ, ಸಚಿವ ಸಾ.ರಾ.ಮಹೇಶ್ ಸೊಕ್ಕಿನ ವರ್ತನೆಯಿಂದ ನೊಂದ ದಿವ್ಯಾ ಮತ್ತೆ ರಜೆ ಮೇಲೆ ತೆರಳಿದ್ದಾರೆ. ಜೀವನದುದ್ದಕ್ಕೂ ಶಾಂತಿ, ಸಹಬಾಳ್ವೆ ಸಾರಿದ ಶ್ರೀಗಳ ಸನ್ನಿಧಿಯಲ್ಲಿ ಇಂತಹ ಘಟನೆ ನಡೆದಿರುವುದು ದುರಂತವೇ ಸರಿ.

"

ಸಚಿವರ ವಿರುದ್ಧ ಸಾರ್ವಜನಿಕರ ಆಕ್ರೋಶ

ದಿವ್ಯಾರವರು ಕಳೆದ ಎರಡೂವರೆ ವರ್ಷಗಳಿಂದ ತುಮಕೂರಿನ ಎಸ್‌ಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತನ್ನ ಸೇವೆಯಿಂದ ಜನ ಮನ್ನಣೆ ಗಳಿಸಿದ್ದಾರೆ. ಹೀಗಿರುವಾಗ ನಿಷ್ಠಾವಂತ ಪೊಲೀಸ್ ಅಧಿಕಾರಿ ವಿರುದ್ಧ ಕೂಗಾಡಿದ ಸಚಿವರ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

click me!