ರಾಜ್ಯಕ್ಕೆ 7 ಬಾಲ ಶಕ್ತಿ ಪುರಸ್ಕಾರದ ಗರಿ: ಮಂಡ್ಯದ ಯುವ ವಿಜ್ಞಾನಿಗೂ ಪ್ರಶಸ್ತಿ

By Web DeskFirst Published Jan 23, 2019, 12:58 PM IST
Highlights

ಕರ್ನಾಟಕಕ್ಕೆ 7 ಬಾಲ ಶಕ್ತಿ ಪುರಸ್ಕಾರದ ಗರಿ| ವೈಜ್ಞಾನಿಕ ಸಂಶೋಧನೆ, ಸಮಾಜಸೇವೆ, ಶೌರ್ಯ, ಕಲಾ ವಿಭಾಗದಲ್ಲಿ ಪ್ರಶಸ್ತಿ| 26 ಪ್ರಶಸ್ತಿಗಳಲ್ಲಿ ಅತಿ ಹೆಚ್ಚು ಪ್ರಶಸ್ತಿ ರಾಜ್ಯಕ್ಕೆ

ಕೇಂದ್ರ ಸರ್ಕಾರ ನೀಡುವ ‘ರಾಷ್ಟ್ರೀಯ ಬಾಲ ಶಕ್ತಿ ಪುರಸ್ಕಾರ’ಕ್ಕೆ ಈ ಸಲ 26 ಮಕ್ಕಳು ಆಯ್ಕೆಯಾಗಿದ್ದಾರೆ. ಕರ್ನಾಟಕಕ್ಕೆ ಇದರಲ್ಲಿ ಸಿಂಹಪಾಲು ದಕ್ಕಿದ್ದು, ಆರು ಬಾಲಕ/ಬಾಲಕಿಯರು ಹಾಗೂ ಒಂದು ಸಂಸ್ಥೆಗೆ ಪ್ರಶಸ್ತಿ ಸಂದಿದೆ. ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಪ್ರಶಸ್ತಿಗಳನ್ನು ಮಂಗಳವಾರ ಪ್ರದಾನ ಮಾಡಿದರು.

ಅಮೆರಿಕಾದಲ್ಲಿ ಮಿಂಚುತ್ತಿದ್ದಾನೆ ಮಂಡ್ಯದ ಹುಡುಗ ಸುಹೇಲ್

ರಾಜ್ಯದ ಮೊಹಮ್ಮದ್ ಸುಹೇಲ್ ಚೀಣ್ಯ ಸಲೀಂಪಾಷಾ, ಅರುಣಿಮಾ ಸೇನ್ ಹಾಗೂ ಎ.ಯು. ನಚಿಕೇತ್ ಕುಮಾರ್, ಬಿ.ಆರ್. ಪ್ರತ್ಯಕ್ಷಾ, ನಿಖಿಲ್ ಜಿತೂರಿ, ಕಲಾ ವಿಭಾಗದಲ್ಲಿ ಎಂ. ವಿನಾಯಕ ಪ್ರಶಸ್ತಿಗೆ ಭಾಜನರಾದವರು. ಇನ್ನು ಕರ್ನಾಟಕದ ‘ರಂಗಕಹಳೆ’ ಎಂಬ ಸಂಸ್ಥೆಗೂ ಗೌರವ ಸಂದಿದೆ.

ಯಾರ ಸಾಧನೆ ಏನು?: ಸುಹೇಲ್ ಚೀಣ್ಯ ಅವರು ಅಪೌಷ್ಟಿಕತೆಗೆ ಸಂಬಂಧಿಸಿದಂತೆ ಸಂಶೋಧನೆ ನಡೆಸಿದ್ದರೆ, ಅರುಣಿಮಾ ಸೇನ್ ಅವರು ಇಂಧನ ಕ್ಷಮತೆಯ ಗಗನಚುಂಬಿ ಕಟ್ಟಡ ನಿರ್ಮಾಣದ ಬಗ್ಗೆ ಸಂಶೋಧನೆ ನಡೆಸಿದ್ದಾರೆ. ಇನ್ನು ನಚಿಕೇತ್ ಅವರು, ಮಾಮೂಲಿ ರಬ್ಬರ್ ಶೀಟ್ ಬದಲು ಬಿಳಿಂಬಿ ಎಂಬ ಹಣ್ಣಿನಿಂದ ಪರಿಸರ ಸ್ನೇಹಿ ರಬ್ಬರ್ ಶೀಟ್ ತಯಾರಿಸಿದ್ದಾರೆ.

ಪ್ರತ್ಯಕ್ಷಾ ಅವರು ‘ಪಾಯಿಖಾನೆ’ ಎಂಬ ಏಕಪಾತ್ರಾಭಿನಯ ನಾಟಕವನ್ನು 119 ಹಳ್ಳಿಗಳಲ್ಲಿ ಮಾಡಿ ಶೌಚಾಲಯ ನಿರ್ಮಾಣದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಅಲ್ಲದೆ, ತಮ್ಮೆಲ್ಲ ಉಳಿತಾಯ ಹಣವನ್ನು ಪ್ರಧಾನಮಂತ್ರಿ ನಿಧಿಗೆ ನೀಡಿದ್ದಾರೆ.

ಬೆಳಗಾವಿಯ ವಾಝೇ ಗಲ್ಲಿಯ ನಿಖಿಲ್ ಜಿತೂರಿ ಅವರಿಗೆ ಶೌರ್ಯ ವಿಭಾಗದಲ್ಲಿ ಪ್ರಶಸ್ತಿ ಸಂದಿದೆ. 15 ಅಡಿ ನೀರಿದ್ದ ಹಾಗೂ 150 ಅಡಿ ಆಳವಿದ್ದ ಬಾವಿಗೆ 2 ವರ್ಷದ ಮಗು ಬಿದ್ದಿತ್ತು. ಪ್ರಾಣದ ಹಂಗು ತೊರೆದು ಬಾವಿಗೆ ಜಿಗಿದ ನಿಖಿಲ್, ಮಗುವನ್ನು ನೀರಿಂದ ಮೇಲೆತ್ತಿ ಅಲ್ಲೇ ಅದರ ಹೊಟ್ಟೆ ಸೇರಿದ್ದ ನೀರು ತೆಗೆದರು. ಮಗುವನ್ನು ಬಕೆಟ್‌ನಲ್ಲಿರಿಸಿ ಹಗ್ಗದಿಂದ ಮೇಲೆತ್ತುವಂತೆ ಮಾಡಿದರು.

ಇದೇ ವೇಳೆ, ‘ರಂಗಕಹಳೆ’ ಎಂಬ ಸಂಸ್ಥೆ ಚಿಕ್ಕಮಕ್ಕಳಿಗೆ ನಾಟಕ, ಕಲೆ, ಹಾಡುಗಾರಿಕೆ ಇತ್ಯಾದಿಗಳಲ್ಲಿ ಉಚಿತವಾಗಿ ತರಬೇತಿ ನೀಡುತ್ತ 20 ವರ್ಷ ಸೇವೆ ಸಲ್ಲಿಸಿದೆ.

click me!