2040ಕ್ಕೆ ಮಂಗಳೂರು, ಉಡುಪಿಯ ಶೇ.5 ರಷ್ಟು ಭೂಮಿ ಸಮುದ್ರಪಾಲು..!

By Kannadaprabha News  |  First Published Aug 1, 2024, 9:44 AM IST

ನೀರಿನ ಮಟ್ಟ ಏರಿಕೆಯ ಪರಿಣಾಮ ಸಮುದ್ರದ ನೀರು ಜನವಸತಿ ಅಥವಾ ಕೃಷಿ ಚಟುವಟಿಕೆಗೆ ಬಳಸುತ್ತಿರುವ ಪ್ರದೇಶಗಳಿಗೆ ನುಗ್ಗಿ ಅವು ಬಳಕೆಗೆ ಅಯೋಗ್ಯವಾಗಲಿದೆ ಎಂದು ಬೆಂಗಳೂರು ಮೂಲದ ಚಿಂತಕರ ಚಾವಡಿ ‘ಸೆಂಟರ್‌ ಫಾರ್‌ ಸ್ಟಡಿ ಆಫ್‌ ಸೈನ್ಸಸ್‌’ ಬಿಡುಗಡೆ ಮಾಡಿರುವ ವರದಿ ಎಚ್ಚರಿಕೆ ನೀಡಿದೆ.


ನವದೆಹಲಿ(ಆ.01):  ಹವಾಮಾನ ಬದಲಾವಣೆಯ ಪರಿಣಾಮಗಳಿಂದ ನಾನಾ ರೀತಿಯ ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತಿರುವ ನಡುವೆಯೇ, ಸಮುದ್ರಮಟ್ಟದ ಏರಿಕೆಯ ಪರಿಣಾಮ ಕರ್ನಾಟಕದ ಮಂಗಳೂರು, ಉಡುಪಿ ಸೇರಿದಂತೆ ದೇಶದ ಹಲವು ಕರಾವಳಿ ನಗರಗಳ ಗಮನಾರ್ಹ ಪ್ರಮಾಣದ ಭೂಭಾಗ ಸಮುದ್ರದ ಪಾಲಾಗಲಿದೆ ಎಂದು ವರದಿಯೊಂದು ಎಚ್ಚರಿಕೆ ನೀಡಿದೆ.

ನೀರಿನ ಮಟ್ಟ ಏರಿಕೆಯ ಪರಿಣಾಮ ಸಮುದ್ರದ ನೀರು ಜನವಸತಿ ಅಥವಾ ಕೃಷಿ ಚಟುವಟಿಕೆಗೆ ಬಳಸುತ್ತಿರುವ ಪ್ರದೇಶಗಳಿಗೆ ನುಗ್ಗಿ ಅವು ಬಳಕೆಗೆ ಅಯೋಗ್ಯವಾಗಲಿದೆ ಎಂದು ಬೆಂಗಳೂರು ಮೂಲದ ಚಿಂತಕರ ಚಾವಡಿ ‘ಸೆಂಟರ್‌ ಫಾರ್‌ ಸ್ಟಡಿ ಆಫ್‌ ಸೈನ್ಸಸ್‌’ ಬಿಡುಗಡೆ ಮಾಡಿರುವ ವರದಿ ಎಚ್ಚರಿಕೆ ನೀಡಿದೆ. ಸಮುದ್ರದ ನೀರಿನ ಮಟ್ಟದಲ್ಲಿ ಏರಿಕೆಯ ಈ ಹಿಂದಿನ ಅಂಕಿ ಅಂಶಗಳು ಮತ್ತು ಭವಿಷ್ಯದಲ್ಲಿ ಹವಾಮಾನ ಬದಲಾವಣೆಯ ಪರಿಣಾಮಗಳಿಂದ ಆಗಬಹುದಾದ ನೀರಿನ ಮಟ್ಟವನ್ನು ಊಹಿಸಿ ಈ ವರದಿ ತಯಾರಿಸಲಾಗಿದೆ.

Tap to resize

Latest Videos

ಭೂಕುಸಿತ, ಪ್ರವಾಹ ಭೀತಿ, ಇನ್ನೆಷ್ಟು ಕಾಲ ಈ ಜಲದಿಗ್ಬಂಧನ? ಯಾವ್ಯಾವ ಜಿಲ್ಲೆಗಳ ಪರಿಸ್ಥಿತಿ ಏನಾಗಿದೆ..?

ಮಂಗಳೂರು, ಉಡುಪಿ:

ಹವಾಮಾನ ಬದಲಾವಣೆ ಪರಿಣಾಮಗಳಿಂದ ಸಮುದ್ರದ ನೀರಿನ ಮಟ್ಟದಲ್ಲಿ ಉಂಟಾಗುವ ಏರಿಕೆಯು ಮಂಗಳೂರು ಮತ್ತು ಉಡುಪಿಯ ಶೇ.5ರಷ್ಟು ಭೂಭಾಗಗಳನ್ನು ಆವರಿಸಿಕೊಳ್ಳಲಿದೆ. ಇದೇ ರೀತಿ ಕರಾವಳಿ ನಗರಗಳಾದ ಮುಂಬೈ, ಕೊಚ್ಚಿ, ವಿಶಾಖಪಟ್ಟಣ, ಪುರಿ, ಚೆನ್ನೈ, ತಿರುವನಂತಪುರ, ಕಲ್ಲಿಕೋಟೆ, ಹಲ್ದಿಯಾ, ಕನ್ಯಾಕುಮಾರಿ, ಪಣಜಿ, ಪಾರಾದೀಪ್‌, ತೂತ್ತುಕುಡಿ ಮತ್ತು ಯಾನಂ ನಗರಗಳು ಕೂಡಾ ಸಮಸ್ಯೆಗೆ ತುತ್ತಾಗಲಿವೆ ಎಂದು ವರದಿ ಎಚ್ಚರಿಸಿದೆ.

3 ನಗರಗಳಿಗೆ ಭಾರೀ ಶಾಕ್‌:

ಉಳಿದ ಕರಾವಳಿ ನಗರಗಳಿಗೆ ಹೋಲಿಸಿದರೆ ದೇಶದ ವಾಣಿಜ್ಯ ರಾಜಧಾನಿ ಮುಂಬೈ, ಪಾಂಡಿಚೇರಿಗೆ ಯಾನಂ ಮತ್ತು ತಮಿಳುನಾಡಿನ ತೂತ್ತುಕುಡಿ ನಗರಗಳು ತಮ್ಮ ಭೂಭಾಗದ ಪೈಕಿ ಶೇ.10ಕ್ಕಿಂತ ಜಾಗ ಕಳೆದುಕೊಳ್ಳುವ ಸಾಧ್ಯತೆ ಇದೆ. ಪಣಜಿ ಮತ್ತು ಚೆನ್ನೈ ಶೇ.5ರಿಂದ ಶೇ.10, ಉಳಿದ ನಗರಗಳು ಶೇ.1-ಶೇ.5ರಷ್ಟು ಭೂಭಾಗ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ವರದಿ ಎಚ್ಚರಿಸಿದೆ.

ಕೃಷ್ಣನ ದ್ವಾರಕಾ ಮಾತ್ರವಲ್ಲ… ವಿಶ್ವದ ಈ 5 ಶ್ರೀಮಂತ ನಗರಗಳು ಇಂದು ಸಮುದ್ರ ಗರ್ಭ ಸೇರಿವೆ!

ಏರಿಕೆಯ ಇತಿಹಾಸ:

1987ರಿಂದ 2021ರ ಅವಧಿಯಲ್ಲಿ ಮುಂಬೈನಲ್ಲಿ ಸಮುದ್ರದ ನೀರಿನ ಮಟ್ಟದಲ್ಲಿ 4.440 ಸೆಂ.ಮೀ., ಹಲ್ದಿಯಾದಲ್ಲಿ 2.726 ಸೆಂ.ಮೀ., ವಿಶಾಖಪಟ್ಟಣದಲ್ಲಿ 2.381 ಸೆಂ.ಮೀ., ಕೊಚ್ಚಿ 2.213 ಸೆಂ.ಮೀ., ಪಾರಾದೀಪ್‌ನಲ್ಲಿ 0.717 ಸೆಂ.ಮೀ., ಚೆನ್ನೈನಲ್ಲಿ 0.679 ಸೆಂ.ಮೀ.ನಷ್ಟು ಏರಿಕೆ ದಾಖಲಾಗಿದೆ.

ಭವಿಷ್ಯದ ಊಹೆ:

ಸಂಸ್ಥೆಯ ವರದಿ ಅನ್ವಯ 2100ರ ವೇಳೆಗೆ ಮುಂಬೈನಲ್ಲಿ ಸಮುದ್ರದ ನೀರಿನ ಮಟ್ಟ 76.2 ಸೆಂ.ಮೀ., ಪಣಜಿಯಲ್ಲಿ 75.5 ಸೆಂ.ಮೀ., ಉಡುಪಿಯಲ್ಲಿ 75.2 ಸೆಂ.ಮೀ., ಮಂಗಳೂರಿನಲ್ಲಿ 75.2 ಸೆಂ.ಮೀ., ಕಲ್ಲಿಕೋಟೆಯಲ್ಲಿ 75.1 ಸೆಂ.ಮೀ., ಕೊಚ್ಚಿಯಲ್ಲಿ 74.9 ಸೆಂ.ಮೀ., ತಿರುವನಂತಪುರದಲ್ಲಿ 74.7 ಸೆಂ.ಮೀ., ಮತ್ತು ಕನ್ಯಾಕುಮಾರಿಯಲ್ಲಿ 74.7 ಸೆಂ.ಮೀ.ನಷ್ಟು ಏರಿಕೆಯಾಗಲಿದೆ.

click me!