ಕಸ್ತೂರಿ ರಂಗನ್ ವರದಿ ಜಾರಿಗೆ ಪಶ್ಚಿಮ ಘಟ್ಟದ ಶಾಸಕರು, ಸಚಿವರು ಏನ್ ಹೇಳಿದ್ರು? ಇಲ್ಲಿದೆ ಅಧಿವೇಶನ ವಿವರ

Sathish Kumar KH   | Kannada Prabha
Published : Sep 22, 2026, 07:48 AM IST
Karnataka Assembly Session Kasturirangan Repost

ಸಾರಾಂಶ

ಕೇಂದ್ರ ಸರ್ಕಾರದ ಕಸ್ತೂರಿ ರಂಗನ್ ವರದಿ ಜಾರಿಗೆ ಕರ್ನಾಟಕ ವಿಧಾನಮಂಡಲದ ಉಭಯ ಸದನಗಳಲ್ಲಿ ಪಕ್ಷಾತೀತವಾಗಿ ತೀವ್ರ ವಿರೋಧ ವ್ಯಕ್ತವಾಗಿದೆ. ಉಪಗ್ರಹ ಆಧಾರಿತ ಸಮೀಕ್ಷೆ ಬದಲು ಕೇರಳ ಮಾದರಿಯಲ್ಲಿ ಭೌತಿಕ ಸಮೀಕ್ಷೆ ನಡೆಸಿ ಎನ್‌ಜಿಟಿಗೆ ವರದಿ ಸಲ್ಲಿಸಲು ಆಗ್ರಹಿಸಲಾಗಿದೆ. ಯಾರು ಏನು ಮಾತನಾಡಿದರು? ಇಲ್ಲಿದೆ ವಿವರ.

ಬೆಂಗಳೂರು (ಸೆ.22): ಕಸ್ತೂರಿ ರಂಗನ್‌ ವರದಿ ಜಾರಿ ಸಂಬಂಧ ಕೇಂದ್ರ ಸರ್ಕಾರ ಹೊರಡಿಸಿರುವ ಕರಡು ಅಧಿಸೂಚನೆಗೆ ಸೋಮವಾರ ಆರಂಭವಾದ ವಿಧಾನಮಂಡಲದ ವಿಶೇಷ ಅಧಿವೇಶನದ ಮೊದಲ ದಿನ ಉಭಯ ಸದನಗಳಲ್ಲಿ ಪಕ್ಷಾತೀತವಾಗಿ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರ ಕೇರಳ ಮಾದರಿಯಲ್ಲಿ ಭೌತಿಕ ಸಮೀಕ್ಷೆ ನಡೆಸಿ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣಕ್ಕೆ(ಎನ್‌ಜಿಟಿ) ವರದಿ ಸಲ್ಲಿಸಿ ಕಾನೂನು ಹೋರಾಟ ಮುಂದುವರೆಸಬೇಕು. ಕೇಂದ್ರದ ಕರಡು ಅಧಿಸೂಚನೆಯನ್ನು ತಿರಸ್ಕರಿಸಬೇಕು ಎಂದು ಒಕ್ಕೊರಲಿನಿಂದ ಆಗ್ರಹಿಸಿದರು.

ಸೋಮವಾರ ಕಸ್ತೂರಿ ರಂಗನ್ ವರದಿ ಕುರಿತು ಉಭಯ ಸದನಗಳಲ್ಲಿ ನಡೆದ ಚರ್ಚೆಯಲ್ಲಿ ಬಿಜೆಪಿ, ಜೆಡಿಎಸ್‌, ಕಾಂಗ್ರೆಸ್‌ ಪಕ್ಷದ ಸದಸ್ಯರು ಪಾಲ್ಗೊಂಡು ಮಾತನಾಡಿದರು. ದಶಕದ ಹಿಂದೆ ಉಪಗ್ರಹಗಳ ಮೂಲಕ ಮಾಡಿರುವ ಸಮೀಕ್ಷೆ ಮಾಡಿ ಸಿದ್ಧಪಡಿಸಿರುವ ಈ ಅವೈಜ್ಞಾನಿಕ ವರದಿ ಜಾರಿಯಾದರೆ, ಜನಜೀವನಕ್ಕೆ ಮಾರಕವಾಗಲಿದೆ. ಯಾವುದೇ ಕಾರಣಕ್ಕೂ ಈ ವರದಿ ಒಪ್ಪಬಾರದು. ರಾಜ್ಯ ಸರ್ಕಾರ ಕೇರಳ ಮಾದರಿಯಲ್ಲಿ ಭೌತಿಕ ಸರ್ವೆ ನಡೆಸಿ ಎನ್‌ಜಿಟಿಗೆ ಸಮಗ್ರ ವರದಿ ಸಲ್ಲಿಸಬೇಕು ಎಂದು ಒತ್ತಾಯಿಸಿದರು.

ವರದಿ ಜಾರಿಯಿಂದ ಪರಿಸರ ಸೂಕ್ಷ್ಮ ವಲಯದೊಳಗೆ ಬರುವ ಗ್ರಾಮಗಳ ಜನರ ಬದುಕು ಹಾಳಾಗುತ್ತದೆ, ಜನವಸತಿ ಪ್ರದೇಶಗಳು, ಕಾಫಿ, ಏಲಕ್ಕಿ ತೋಟಗಳನ್ನು ಅರಣ್ಯ ಎಂದು ಪರಿಗಣಿಸಲಾಗಿದೆ. ಹೀಗಾಗಿ ಜನರಲ್ಲಿ ಆತಂಕ ಹೆಚ್ಚಾಗಿದೆ. ಹೀಗಾಗಿ ಈ ವರದಿಯನ್ನು ಒಪ್ಪಬಾರದು. ಕಸ್ತೂರಿ ರಂಗನ್‌ ವರದಿ ಸಂಬಂಧ ಕೇಂದ್ರ ಸರ್ಕಾರ ಎನ್‌ಜಿಟಿ ಎದುರು ತನ್ನ ನಿಲುವು ಸ್ಪಷ್ಟಪಡಿಸಬೇಕು ಎಂದು ಸದಸ್ಯರು ಆಗ್ರಹಿಸಿದರು.

ನೈಜ ಸ್ಥಿತಿ ಪರಿಗಣಿಸಿ:

ರೈತರ ಕೃಷಿ ಭೂಮಿ ಹಾಗೂ ವಾಸಸ್ಥಳದ ನೈಜ ಸ್ಥಿತಿಯನ್ನು ಪರಿಗಣಿಸಬೇಕು. ಕಸ್ತೂರಿ ರಂಗನ್ ವರದಿಯಲ್ಲಿರುವ ಉಪಗ್ರಹ ಆಧಾರಿತ ಮ್ಯಾಪಿಂಗ್ ಮಾತ್ರ ಆಧಾರವಾಗಬಾರದು. ಸ್ಥಳೀಯ ಮಟ್ಟದಲ್ಲಿ ಭೂಮಿಯ ವಾಸ್ತವ ಸ್ಥಿತಿ, ಗ್ರಾಮಗಳ ಗಡಿ, ಕೃಷಿ ಪ್ರದೇಶ, ವಸತಿ ಪ್ರದೇಶ ಹಾಗೂ ಅರಣ್ಯ ಪ್ರದೇಶಗಳನ್ನು ಪ್ರತ್ಯೇಕವಾಗಿ ಗುರುತಿಸಬೇಕು ಎಂದು ಸಲಹೆ ನೀಡಿದರು.

ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ವಿಧಾನ ಪರಿಷತ್ತಿನಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಸ್ತೂರಿ ರಂಗನ್‌ ವರದಿಯಲ್ಲಿ ಪ್ರಮುಖ ಅಂಶಗಳು, ಶಿಫಾರಸುಗಳ ಬಗ್ಗೆ ವಿವರಿಸಿದರು.

ಮಲೆನಾಡಿನ ಭಾಗದ ಯುವಕರು ಉದ್ಯೋಗಕ್ಕಾಗಿ ನಗರ ಪ್ರದೇಶಗಳಿಗೆ ತೆರಳಿದ್ದಾರೆ. ವರದಿ ಜಾರಿಯಾದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಲಿದ್ದು, ಮುಂದಿನ ದಿನಗಳಲ್ಲಿ ಅಲ್ಲಿನ ಗ್ರಾಮಗಳಲ್ಲಿ ಜನರೇ ಉಳಿಯದ ಸ್ಥಿತಿ ನಿರ್ಮಾಣವಾಗಬಹುದು ಎಂದು ಸದಸ್ಯರು ಎಚ್ಚರಿಸಿದರು.

ನುರಿತ ವಕೀಲರ ಮೂಲಕ ಕಾನೂನು ಹೋರಾಟ:

ಬಿಜೆಪಿಯ ಆರಗ ಜ್ಞಾನೇಂದ್ರ ಮಾತನಾಡಿ, ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ 208 ಗ್ರಾಮಗಳ ಪೈಕಿ 157 ಗ್ರಾಮಗಳು ಕಸ್ತೂರಿ ರಂಗನ್‌ ವರದಿಯಂತೆ ಪರಿಸರ ಸೂಕ್ಷ್ಮ ವಲಯದೊಳಗೆ ಬರುತ್ತವೆ. ಇಷ್ಟು ಗ್ರಾಮಗಳು ಪರಿಸರ ಸೂಕ್ಷ್ಮ ವಲಯದೊಳಗೆ ಬಂದರೆ ಅಲ್ಲಿನ ಜನ ಏನು ಮಾಡಬೇಕು? ಕೇರಳ ಮಾದರಿಯಲ್ಲಿ ಭೌತಿಕ ಸರ್ವೆ ಮಾಡಿಸಿ ಎನ್‌ಜಿಟಿಗೆ ವರದಿ ಸಲ್ಲಿಸಬೇಕು. ನುರಿತ ವಕೀಲರನ್ನು ನೇಮಿಸಿ ರಾಜ್ಯ ಪರ ಕಾನೂನು ಹೋರಾಟ ಮುಂದುವರೆಸಬೇಕು ಎಂದು ಸಲಹೆ ನೀಡಿದರು.

ಕಾಂಗ್ರೆಸ್‌ನ ಎ.ಎಸ್‌.ಪೊನ್ನಣ್ಣ ಮಾತನಾಡಿ, ಕಸ್ತೂರಿ ರಂಗನ್‌ ವರದಿ ಕರ್ನಾಟಕ ಸೇರಿ 6 ರಾಜ್ಯಗಳನ್ನು ಒಳಗೊಂಡಿದೆ. ಕರ್ನಾಟಕ 10 ಜಿಲ್ಲೆಗಳು ಇದರ ವ್ಯಾಪ್ತಿಗೆ ಬರುತ್ತವೆ. ಕಸ್ತೂರಿ ರಂಗನ್‌ ವರದಿ ವೈಜ್ಞಾನಿಕವಾಗಿಲ್ಲ. ಈವರೆಗೆ 7 ಕರಡು ಅಧಿಸೂಚನೆ ಹೊರಡಿಸಲಾಗಿದೆ. ಪ್ರತಿ ಬಾರಿ ಆಕ್ಷೇಪಣೆ ಸಲ್ಲಿಸಿದರೂ ಪರಿಗಣಿಸಿಲ್ಲ. ಈ ವರದಿ ಜಾರಿಯಾದರೆ ಕೊಡಗು ಜಿಲ್ಲೆಯ 54 ಗ್ರಾಮಗಳಿಗೆ ತೊಂದರೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಬಡವರು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ:

ವಿಧಾನ ಪರಿಷತ್ತಿನಲ್ಲಿ ಬಿ.ಕೆ.ಹರಿಪ್ರಸಾದ್‌ ಮಾತನಾಡಿ, ಕಸ್ತೂರಿ ರಂಗನ್ ವರದಿಯಲ್ಲಿರುವ ಉಪಗ್ರಹ ಆಧಾರಿತ ಮ್ಯಾಪಿಂಗ್ ಮಾತ್ರ ಆಧಾರವಾಗಬಾರದು. ಸ್ಥಳೀಯ ಮಟ್ಟದಲ್ಲಿ ಭೂಮಿಯ ವಾಸ್ತವ ಸ್ಥಿತಿ, ಗ್ರಾಮಗಳ ಗಡಿ, ಕೃಷಿ ಪ್ರದೇಶ, ವಸತಿ ಪ್ರದೇಶ ಹಾಗೂ ಅರಣ್ಯ ಪ್ರದೇಶಗಳನ್ನು ಪ್ರತ್ಯೇಕವಾಗಿ ಗುರುತಿಸಬೇಕು. ಇಲ್ಲದಿದ್ದರೆ ಬಡವರು ಹಾಗೂ ಅರಣ್ಯವಾಸಿಗಳು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದರು.

ಜೆಡಿಎಸ್‌ ಸದಸ್ಯ ಎಸ್‌.ಎಲ್‌.ಭೋಜೇಗೌಡ ಮಾತನಾಡಿ, ಕಸ್ತೂರಿ ರಂಗನ್ ವರದಿಯನ್ನು ಯಥಾವತ್ತಾಗಿ ಜಾರಿಗೆ ತಂದರೆ ಮಲೆನಾಡು ಭಾಗದ ಜನಜೀವನವೇ ಅಸ್ತವ್ಯಸ್ತವಾಗಲಿದೆ. ಜನರ ಜೀವನವನ್ನೇ ಕಸಿದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾದರೆ ರಕ್ತಪಾತವೇ ನಡೆಯಲಿದೆ ಎಂದು ಎಚ್ಚರಿಸಿದರು.

ಕಾಂಗ್ರೆಸ್ಸಿನ ಎಸ್‌.ರವಿ ಮಾತನಾಡಿ, ಮಲೆನಾಡಿನ ಭಾಗದ ಯುವಕರು ಉದ್ಯೋಗಕ್ಕಾಗಿ ನಗರ ಪ್ರದೇಶಗಳಿಗೆ ತೆರಳಿದ್ದಾರೆ. ವರದಿ ಜಾರಿಯಾದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಲಿದೆ ಎಂದರು.

ವಿಧಾನ ಸಭೆಯಲ್ಲಿ ಕಾಂಗ್ರೆಸ್ಸಿನ ನಯನಾ ಮೋಟಮ್ಮ ಮುಂತಾದವರು ಮಾತನಾಡಿದರೆ, ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್‌ನ ಬಿ.ಕೆ.ಹರಿಪ್ರಸಾದ್‌, ಎಸ್.ರವಿ, ನಾಗರಾಜ್‌ ಯಾದವ್‌, ಐವಾನ್‌ ಡಿಸೋಜಾ, ಬಲ್ಕೀಸ್ ಬಾನು, ಬಿಜೆಪಿಯ ಎನ್‌.ರವಿಕುಮಾರ್‌, ಡಿ.ಎಸ್‌.ಅರುಣ್‌, ಹರೀಶ್‌ ಪೂಂಜಾ, ಕಿಶೋರ್‌ ಕುಮಾರ್‌ ಪುತ್ತೂರು, ಆರ್‌.ರಘು ಕೌಟಿಲ್ಯ, ಡಾ.ಧನಂಜಯ ಸರ್ಜಿ, ಕೇಶವ ಪ್ರಸಾದ್‌, ಜೆಡಿಎಸ್‌ನ ಎಸ್‌.ಎಲ್‌ ಭೋಜೇಗೌಡ ಅವರು ವರದಿ ಜಾರಿಯಿಂದ ಆಗುವ ಸಮಸ್ಯೆ, ತೊಂದರೆಗಳ ಬಗ್ಗೆ ವಿವರಿಸಿದರು.

ರಾಜಕಾರಣ ಬದಿಗಿಟ್ಟು ಹಿತ ಕಾಪಾಡೋಣ

ರಾಜ್ಯದ ರೈತರು, ಜನರ ರಕ್ಷಣೆ ನನಗೆ ಮುಖ್ಯ. ಅದಕ್ಕೆ ಬದ್ಧನಾಗಿದ್ದೇನೆ. ದೊರೆತಿರುವ ಈ ಅವಕಾಶ ಬಳಸಿಕೊಂಡು ಪಶ್ಚಿಮಘಟ್ಟ ವ್ಯಾಪ್ತಿಯ ಜನ ಸೇರಿ ಎಲ್ಲರನ್ನೂ ರಕ್ಷಣೆ ಮಾಡಬೇಕು. ಸಮಸ್ಯೆಗಳನ್ನು ಇಟ್ಟುಕೊಂಡು ರಾಜಕಾರಣ ಮಾಡುವ ಉದ್ದೇಶ ನನಗಿಲ್ಲ. ನಾವೆಲ್ಲ ರಾಜಕಾರಣ ಬದಿಗಿಟ್ಟು ರಾಜ್ಯದ ಹಿತ ಕಾಪಾಡುವ ಕೆಲಸ ಮಾಡಬೇಕಿದೆ.

- ಡಿ.ಕೆ. ಶಿವಕುಮಾರ್‌, ಮುಖ್ಯಮಂತ್ರಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸೌಜನ್ಯ ಪ್ರಕರಣ ಮರು ತನಿಖೆ ಆದೇಶಕ್ಕೆ ಧರ್ಮಸ್ಥಳ ಕ್ಷೇತ್ರ ಸ್ವಾಗತ ; ಪಾರ್ಶ್ವನಾಥ ಜೈನ್ ಮಹತ್ವದ ಹೇಳಿಕೆ!
Karnataka News Live: ಕಸ್ತೂರಿ ರಂಗನ್ ವರದಿ ಜಾರಿಗೆ ಪಶ್ಚಿಮ ಘಟ್ಟದ ಶಾಸಕರು, ಸಚಿವರು ಏನ್ ಹೇಳಿದ್ರು? ಇಲ್ಲಿದೆ ಅಧಿವೇಶನ ವಿವರ