
ಬೆಂಗಳೂರು(ಏ.27): ಬರುವ ಜೂನ್‌ನಲ್ಲಿ ತೆರವಾಗಲಿರುವ ರಾಜ್ಯಸಭೆಯ ನಾಲ್ಕು ಸ್ಥಾನಗಳು ಮತ್ತು ವಿಧಾನಸಭೆಯಿಂದ ವಿಧಾನಪರಿಷತ್ತಿನ ಏಳು ಸ್ಥಾನಗಳಿಗೆ ಮೇ ತಿಂಗಳಿನಲ್ಲಿ ವೇಳಾಪಟ್ಟಿಪ್ರಕಟಗೊಳ್ಳುವ ಸಾಧ್ಯತೆಯಿದ್ದು, ಪ್ರಮುಖ ರಾಜಕೀಯ ಪಕ್ಷಗಳ ಪಾಳೆಯದಲ್ಲಿ ತೆರೆಮರೆಯ ಚಟುವಟಿಕೆಗಳು ಆರಂಭಗೊಂಡಿವೆ.
ಕರ್ನಾಟಕದಿಂದ ಆಯ್ಕೆಯಾಗಿರುವ ರಾಜ್ಯಸಭೆಯ ನಾಲ್ವರು ಸದಸ್ಯರು ಜೂ.30ರಂದು ಮತ್ತು ವಿಧಾನ ಪರಿಷತ್ತಿನ ಏಳು ಸದಸ್ಯರು ಜೂನ್ 14ರಂದು ನಿವೃತ್ತಿ ಹೊಂದಲಿದ್ದಾರೆ.
ರಾಜ್ಯಸಭೆಯಿಂದ ಬಿಜೆಪಿಯ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಕೆ.ಸಿ.ರಾಮಮೂರ್ತಿ, ಕಾಂಗ್ರೆಸ್ಸಿನ ಜೈರಾಂ ರಮೇಶ್ ಅವರ ಅವಧಿ ಮುಗಿಯಲಿದೆ. ಕಾಂಗ್ರೆಸ್ ಸದಸ್ಯರಾಗಿದ್ದ ಆಸ್ಕರ್ ಫರ್ನಾಂಡಿಸ್ ಇತ್ತೀಚೆಗೆ ನಿಧನ ಹೊಂದಿದ್ದರಿಂದ 1 ಸ್ಥಾನ ತೆರವಾಗಿದೆ.
ಸಭಾಪತಿ ವಿರುದ್ಧವೇ FIR, ಹೊರಟ್ಟಿ ಪರ ನಿಂತ ಕಾಂಗ್ರೆಸ್-JDS ಸದಸ್ಯರು!
ಇನ್ನು ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ಆಯ್ಕೆಯಾಗಿದ್ದ ಕಾಂಗ್ರೆಸ್ಸಿನ ಆರ್.ಬಿ.ತಿಮ್ಮಾಪುರ, ಅಲ್ಲಂ ವೀರಭದ್ರಪ್ಪ, ಎಸ್.ವೀಣಾ ಅಚ್ಚಯ್ಯ, ಕೆ.ವಿ.ನಾರಾಯಣಸ್ವಾಮಿ, ಬಿಜೆಪಿಯ ಲೆಹರ್ ಸಿಂಗ್ ಸಿರೋಯಾ, ಲಕ್ಷ್ಮಣ ಸವದಿ ಮತ್ತು ಜೆಡಿಎಸ್‌ನ ಎಚ್.ಎಂ.ರಮೇಶ್‌ಗೌಡ ನಿವೃತ್ತಿ ಹೊಂದುತ್ತಿದ್ದಾರೆ.
ವಿಧಾನಸಭೆಯ ಸದಸ್ಯರು ಈ ಚುನಾವಣೆಯ ಮತದಾರರಾಗಿರುವುದರಿಂದ ಸಂಖ್ಯಾ ಬಲದ ಆಧಾರದ ಮೇಲೆ ರಾಜ್ಯಸಭೆ ಮತ್ತು ವಿಧಾನಪರಿಷತ್ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯೇ ಹೆಚ್ಚಿನ ಸ್ಥಾನಗಳನ್ನು ಗಳಿಸುವುದು ನಿಶ್ಚಿತವಾಗಿದೆ.
ರಾಜ್ಯಸಭೆಯ ನಾಲ್ಕು ಸ್ಥಾನಗಳ ಪೈಕಿ ಎರಡು ಬಿಜೆಪಿ, ಒಂದು ಕಾಂಗ್ರೆಸ್ ಪಾಲಾಗಲಿವೆ. ಇನ್ನುಳಿದ ಒಂದು ಸ್ಥಾನಕ್ಕೆ ಜೆಡಿಎಸ್ ಪಕ್ಷ ಬಿಜೆಪಿ ಅಥವಾ ಕಾಂಗ್ರೆಸ್‌ನ ಹೆಚ್ಚುವರಿ ಮತಗಳನ್ನು ಅವಲಂಬಿಸಬೇಕಾಗುತ್ತದೆ. ಹೀಗಾಗಿ, ಈ ರಾಜ್ಯಸಭೆಗೆ ಅವಿರೋಧ ಆಯ್ಕೆಯಾಗುವ ಸಾಧ್ಯತೆ ಕಡಮೆಯಿದ್ದು, ಮತದಾನ ನಡೆಯುವ ಸಂಭವ ಹೆಚ್ಚಾಗಿದೆ. ಇನ್ನು ವಿಧಾನಪರಿಷತ್ತಿನ ಏಳು ಸ್ಥಾನಗಳ ಪೈಕಿ ಬಿಜೆಪಿಗೆ ನಾಲ್ಕು, ಕಾಂಗ್ರೆಸ್‌ಗೆ ಎರಡು ಮತ್ತು ಜೆಡಿಎಸ್‌ಗೆ ಒಂದು ಸ್ಥಾನ ಖಾತ್ರಿ ಎನ್ನಲಾಗಿದೆ.
ಆಡಳಿತಾರೂಢ ಬಿಜೆಪಿಯಲ್ಲಿ ಇದುವರೆಗೆ ಆಕಾಂಕ್ಷಿಗಳ ಭರಾಟೆ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ. ಪಕ್ಷ ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ಸಂಪುಟ ಕಸರತ್ತು, ಪಕ್ಷದ ಸಂಘಟನೆಯ ರೂಪುರೇಷೆಯಲ್ಲಿ ಬದಲಾವಣೆ ತರುವ ಬಗ್ಗೆ ಹೆಚ್ಚು ಗಮನ ಕೇಂದ್ರೀಕರಿಸಿರುವುದರಿಂದ ಪಕ್ಷದ ನಾಯಕರು ಈ ಚುನಾವಣೆಗಳ ಬಗ್ಗೆ ಗಮನಹರಿಸಿಲ್ಲ. ಆದರೆ, ಕಳೆದ ಎರಡು ಬಾರಿಯಂತೆ ಪಕ್ಷದ ಹೈಕಮಾಂಡ್‌ನಿಂದಲೇ ಅಚ್ಚರಿಯ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ನಿಚ್ಚಳ ಎಂಬ ಮಾತು ಕೇಳಿಬಂದಿದೆ.
Karnataka Legislative Assembly: ಯು.ಟಿ ಖಾದರ್ ವಿಧಾನಸಭೆ ವಿಪಕ್ಷ ಉಪನಾಯಕರಾಗಿ ಆಯ್ಕೆ!
ರಾಜ್ಯಸಭೆಯಲ್ಲಿ ಲಭ್ಯವಾಗುವ ಎರಡು ಸ್ಥಾನಗಳ ಪೈಕಿ ನಿರ್ಮಲಾ ಸೀತಾರಾಮನ್ ಅವರನ್ನು ಮತ್ತೊಮ್ಮೆ ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಾಗಿದೆ. ಕೆ.ಸಿ.ರಾಮಮೂರ್ತಿ ಅವರಿಗೆ ಮತ್ತೆ ಟಿಕೆಟ್ ನೀಡುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ ಎನ್ನಲಾಗಿದೆ.
ಇನ್ನು ಕಾಂಗ್ರೆಸ್‌ನ ಎರಡು ರಾಜ್ಯ ಸಭೆ ಸ್ಥಾನಗಳು ತೆರವಾಗಿದ್ದರೂ ಈ ಬಾರಿ ತನ್ನ ಸ್ಥಾನ ಬಲದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಒಂದೇ ಸ್ಥಾನ ಪಡೆಯಲು ಸಾಧ್ಯ. ಒಂದೇ ಸ್ಥಾನವಾದ್ದರಿಂದ ಹೈಕಮಾಂಡ್ ಮಟ್ಟದಲ್ಲಿಯೇ ಅಭ್ಯರ್ಥಿ ನಿರ್ಧಾರವಾಗಲಿದೆ. ದೆಹಲಿ ಮಟ್ಟದಲ್ಲಿ ಜೈರಾಂ ರಮೇಶ್ ಅವರು ಮರು ಆಯ್ಕೆಗೆ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಕುತೂಹಲಕಾರಿ ಸಂಗತಿಯೆಂದರೆ, ಆಸ್ಕರ್ ಫರ್ನಾಂಡೀಸ್ ಅವರ ಪುತ್ರಿ ಓಷಾನಿ ಫರ್ನಾಂಡೀಸ್ ಅವರು ಸಹ ಆಕಾಂಕ್ಷಿಯಾಗಿರುವುದು. ಆಸ್ಕರ್ ಅವರದ್ದು ಸೋನಿಯಾ ಗಾಂಧಿ ಅವರೊಂದಿಗೆ ನೇರ ಸಂಪರ್ಕ ಹೊಂದಿರುವ ಕುಟುಂಬವಾಗಿರುವುದರಿಂದ ಓಷಾನಿ ಲಾಬಿ ಪ್ರಬಲವಾಗಿಯೇ ಇದೆ ಎಂದು ಕಾಂಗ್ರೆಸ್ ಮೂಲಗಳು ಹೇಳುತ್ತಿವೆ.
ಆದರೆ, ದೆಹಲಿ ಮಟ್ಟದಲ್ಲೇ ರಾಜ್ಯಸಭೆಗೆ ಹಲವಾರು ಆಕಾಂಕ್ಷಿಗಳಿರುವ ಕಾರಣ ಓಷಾನಿ ಫರ್ನಾಂಡೀಸ್ ಅವರನ್ನು ರಾಜ್ಯಸಭೆ ಬದಲಾಗಿ ವಿಧಾನಪರಿಷತ್ತಿಗೂ ಪರಿಗಣಿಸಬಹುದು ಎನ್ನಲಾಗುತ್ತಿದೆ. ವಿಧಾನಪರಿಷತ್ತಿನಲ್ಲಿ ನಾಲ್ಕು ಮಂದಿ ನಿವೃತ್ತರಾಗುತ್ತಿದ್ದು, ಈ ಪೈಕಿ ಎರಡು ಸ್ಥಾನವನ್ನು ಮಾತ್ರ ಕಾಂಗ್ರೆಸ್ ಗೆಲ್ಲಲು ಸಾಧ್ಯವಿದೆ.
ಪರಿಶಿಷ್ಟ, ಲಿಂಗಾಯತ, ಮುಸ್ಲಿಂ ಸಮುದಾಯದವರಿಂದ ಸ್ಥಾನಗಳು ತೆರವಾಗುತ್ತಿರುವ ಕಾರಣ ಈ ಸಮುದಾಯದ ಆಕಾಂಕ್ಷಿಗಳೇ ದೊಡ್ಡ ಪ್ರಮಾಣದಲ್ಲಿ ಪ್ರಯತ್ನ ಮಾಡುತ್ತಿದ್ದಾರೆ. ಅಲ್ಪಸಂಖ್ಯಾತರಿಗೆ ಪಕ್ಷದಲ್ಲಿ ಸಾಕಷ್ಟುಅವಕಾಶ ದೊರಕಿರುವುದರಿಂದ ಅಲ್ಪಸಂಖ್ಯಾತ ಕೋಟಾದಲ್ಲಿ ಈ ಬಾರಿ ಕ್ರಿಶ್ಚಿಯನ್‌ರಿಗೆ ನೀಡಬೇಕು ಎಂಬ ಬೇಡಿಯೂ ಇದೆ. ಇದಲ್ಲದೆ, ಪರಿಶಿಷ್ಟ(ಎಡ), ಲಿಂಗಾಯತ, ಕೊಡವ, ಒಕ್ಕಲಿಗ ಸಮುದಾಯದ ಆಕಾಂಕ್ಷಿಗಳು ಪ್ರಯತ್ನ ನಡೆಸಿದ್ದಾರೆ.
ರಾಜ್ಯಸಭೆ ಪ್ರತಿಪಕ್ಷ ನಾಯಕ ಸ್ಥಾನವೂ ‘ಕೈ’ ತಪ್ಪುವ ಆತಂಕ!
ಆದರೆ, ಯಾವ ಸಮುದಾಯಕ್ಕೆ ಪರಿಷತ್ ಸ್ಥಾನ ನೀಡಬೇಕು ಎಂಬ ಬಗ್ಗೆ ಪಕ್ಷ ಇನ್ನೂ ತೀರ್ಮಾನ ಮಾಡಿಲ್ಲ. ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರು ಬುಧವಾರ ಹಾಗೂ ಗುರುವಾರ ನಗರಕ್ಕೆ ಆಗಮಿಸುತ್ತಿದ್ದು, ಈ ವೇಳೆ ಅವರು ಈ ವಿಚಾರದ ಬಗ್ಗೆಯೂ ಪಕ್ಷದ ನಾಯಕರೊಂದಿಗೆ ಚರ್ಚೆ ನಡೆಸಲಿದ್ದಾರೆ ಎಂದು ಮೂಲಗಳು ಹೇಳಿವೆ.
ಯಾರ ಅವಧಿ ಅಂತ್ಯ?
ರಾಜ್ಯಸಭೆ
ಬಿಜೆಪಿ- ನಿರ್ಮಲಾ ಸೀತಾರಾಮನ್, ಕೆ.ಸಿ.ರಾಮಮೂರ್ತಿ
ಕಾಂಗ್ರೆಸ್- ಜೈರಾಂ ರಮೇಶ್, ಆಸ್ಕರ್ ಫರ್ನಾಂಡೀಸ್
ವಿಧಾನಪರಿಷತ್
ಕಾಂಗ್ರೆಸ್- ಆರ್.ಬಿ.ತಿಮ್ಮಾಪುರ, ಅಲ್ಲಂ ವೀರಭದ್ರಪ್ಪ, ಎಸ್.ವೀಣಾ ಅಚ್ಚಯ್ಯ, ಕೆ.ವಿ.ನಾರಾಯಣಸ್ವಾಮಿ
ಬಿಜೆಪಿ- ಲೆಹರ್ ಸಿಂಗ್ ಸಿರೋಯಾ, ಲಕ್ಷ್ಮಣ ಸವದಿ
ಜೆಡಿಎಸ್- ಎಚ್.ಎಂ.ರಮೇಶ್‌ಗೌಡ
ಯಾರಿಗೆ ಎಷ್ಟುಸೀಟು ಗೆಲ್ಲುವ ಅವಕಾಶ?
ವಿಧಾನ ಪರಿಷತ್
ಬಿಜೆಪಿ 4, ಕಾಂಗ್ರೆಸ್ 2, ಜೆಡಿಎಸ್ 1
ರಾಜ್ಯಸಭೆ
ಬಿಜೆಪಿ 2, ಕಾಂಗ್ರೆಸ್ 1, ಇನ್ನೊಂದು ಸ್ಥಾನಕ್ಕೆ ಹಣಾಹಣಿ
ವಿಧಾನಸಭೆಯ ಪಕ್ಷವಾರು ಬಲಾಬಲ:
ಒಟ್ಟು- 225.
ಬಿಜೆಪಿ- 119
ಕಾಂಗ್ರೆಸ್- 69
ಜೆಡಿಎಸ್- 32
ಬಿಎಸ್‌ಪಿ- 01
ಪಕ್ಷೇತರರು- 02
ಸ್ಪೀಕರ್- 01
ನಾಮನಿರ್ದೇಶನ- 01.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ