
ವರದಿ: ಗಿರೀಶ್ ಮಾದೇನಹಳ್ಳಿ
ಬೆಂಗಳೂರು(ಏ.27): ಐದು ತಿಂಗಳ ಹಿಂದೆ ನಡೆದಿದ್ದ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ)ಯ ಕಿರಿಯ ಎಂಜಿನಿಯರ್‌ಗಳ ನೇಮಕಾತಿ ಪರೀಕ್ಷೆ ಆರಂಭವಾದ ಹತ್ತು ನಿಮಿಷದಲ್ಲೇ ಕಲಬುರಗಿ ಜಿಲ್ಲೆಯ ಕಾಂಗ್ರೆಸ್ ಮುಖಂಡನಿಗೆ ಸೇರಿದ ಪಾಲಿಟೆಕ್ನಿಕ್ ಕಾಲೇಜಿನ ಪರೀಕ್ಷಾ ಕೇಂದ್ರದಿಂದ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ರಾಜ್ಯ ವ್ಯಾಪಿ ಹಂಚಿಕೆಯಾಗಿತ್ತು ಎಂಬ ಸ್ಫೋಟಕ ಸಂಗತಿ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಕಲಬುರಗಿ ನಗರದ ನಾಗರಾಜ್ ಕಾಂಬ್ಳೆ ಎಂಬುವರಿಗೆ ಸೇರಿದ ಶ್ರೀ ಬಾಲಾಜಿ ಪಾಲಿಟೆಕ್ನಿಕ್ ಕಾಲೇಜಿನ ಪರೀಕ್ಷಾ ಕೇಂದ್ರದಿಂದ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದ್ದು, ಈ ಪತ್ರಿಕೆಗೆ .40 ರಿಂದ .50 ಲಕ್ಷಕ್ಕೆ ಡೀಲ್ ಕುದುರಿಸಲಾಗಿತ್ತು. ಈ ಪ್ರಶ್ನೆ ಪತ್ರಿಕೆ ಲಭ್ಯವಾದ ಬಳಿಕ ಬ್ಲೂ ಟೂತ್ ಬಳಸಿ ಪರೀಕ್ಷೆ ಬರೆಯಲು ಯತ್ನಿಸಿದ್ದ ಮೂವರು ಅಭ್ಯರ್ಥಿಗಳು ಮಾತ್ರವಲ್ಲದೆ ಅಕ್ರಮದಲ್ಲಿ ಪಾಲ್ಗೊಂಡಿದ್ದ ಕಲಬುರಗಿ ಜಿಲ್ಲೆಯ ನೀರಾವರಿ ಇಲಾಖೆಯ ಸಹಾಯಕ ಎಂಜಿನಿಯರ್, ಸಮಾಜ ಕಲ್ಯಾಣ ಇಲಾಖೆಯ ಇಬ್ಬರು ವಾರ್ಡನ್‌ಗಳು ಹಾಗೂ ಶಿಕ್ಷಕರು ಸೇರಿ 15 ಆರೋಪಿಗಳನ್ನು ಬಂಧಿಸಿದ ಬೆಂಗಳೂರಿನ ಅನ್ನಪೂಣೇಶ್ವರಿ ನಗರ ಪೊಲೀಸರು, ಅಕ್ರಮದ ತನಿಖೆ ಪೂರ್ಣಗೊಳಿಸಿ ನಗರದ ಎಸಿಎಂಎಂ ನ್ಯಾಯಾಲಯಕ್ಕೆ ಆರೋಪಿಪಟ್ಟಿಯನ್ನು ಕೂಡ ಸಲ್ಲಿಸಿದ್ದಾರೆ.
ಕಾಂಗ್ರೆಸ್‌ನತ್ತ ತಿರುಗಿತು PSI ನೇಮಕಾತಿ ಹಗರಣ, ಫೋಟೋ ಬಿಡುಗಡೆ ಮಾಡಿದ ಬಿಜೆಪಿ!
ಕಳೆದ 2021ರ ಡಿಸೆಂಬರ್ 13 ರಂದು ನಡೆದ ಪಿಡಬ್ಲ್ಯುಡಿ ಕಿರಿಯ ಎಂಜಿನಿಯರ್ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಗೆ ಕಲಬುರಗಿ ನಗರದ ಕಾಂಗ್ರೆಸ್ ಮುಖಂಡ ನಾಗರಾಜ್ ಕಾಂಬ್ಳೆ ಒಡೆತನದ ಶ್ರೀ ಬಾಲಾಜಿ ಪಾಲಿಟೆಕ್ನಿಕ್ ಕಾಲೇಜ್ ಅನ್ನು ಕರ್ನಾಟಕ ಲೋಕ ಸೇವಾ ಆಯೋಗವು (ಕೆಪಿಎಸ್‌ಸಿ) ಪರೀಕ್ಷಾ ಕೇಂದ್ರವಾಗಿ ಆಯ್ಕೆ ಮಾಡಿತ್ತು. ಈ ಪರೀಕ್ಷಾ ಕೇಂದ್ರದಿಂದ ಪ್ರಶ್ನೆ ಪತ್ರಿಕೆ ಪಡೆದ ಆರೋಪಿಗಳು, ಅದನ್ನು ಫೋಟೋ ತೆಗೆದು ವಾಟ್ಸ್‌ಆ್ಯಪ್‌ನಲ್ಲಿ ಹಂಚಿಕೆ ಮಾಡಿದ್ದರು ಎಂದು ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.
ಕಲುಬರಗಿ ನಗರದ ಲಾಡ್ಜ್‌ವೊಂದರಲ್ಲಿ ವ್ಯಕ್ತಿಯೊಬ್ಬ ಪ್ರಶ್ನೆ ಪತ್ರಿಕೆಯನ್ನು ಮುಂದಿಟ್ಟುಕೊಂಡು ಫೋನ್ ಕರೆಯಲ್ಲಿ ಕಿರಿಯ ಎಂಜಿನಿಯರ್ ಪ್ರವೇಶ ಪರೀಕ್ಷೆಯ ಪತ್ರಿಕೆ ಬಗ್ಗೆ ಉತ್ತರ ಹೇಳುವ ವಿಡಿಯೋ ಭಾನುವಾರ ಬಹಿರಂಗವಾಗಿತ್ತು. ಈ ಬೆನ್ನಲ್ಲೇ ಕಿರಿಯ ಎಂಜಿನಿಯರ್ ಪರೀಕ್ಷೆಯಲ್ಲಿ ಸಹ ಭಾನಗಡಿ ನಡೆದಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು.
ಕಾಲೇಜಿನ ಟಾಯ್ಲೆಟಲ್ಲಿ ಪ್ರಶ್ನೆ ಪತ್ರಿಕೆ:
ಹಲವು ದಿನಗಳಿಂದ ಬಾಲಾಜಿ ಪಾಲಿಟೆಕ್ನಿಕ್ ಕಾಲೇಜಿನ ಮಾಲೀಕ ನಾಗರಾಜ್ ಹಾಗೂ ವಾರ್ಡನ್ ರಾವುತಪ್ಪ ಪರಿಚಿತರು. ಪಿಡಬ್ಲ್ಯುಡಿ ಕಿರಿಯ ಎಂಜಿನಿಯರ್ ನೇಮಕಾತಿ ಪರೀಕ್ಷೆಗೆ ಬಾಲಾಜಿ ಪಾಲಿಟೆಕ್ನಿಕ್ ಕಾಲೇಜ್ ಪರೀಕ್ಷಾ ಕೇಂದ್ರವಾಗಿ ಆಯ್ಕೆಯಾದ ವಿಚಾರ ತಿಳಿದ ರಾವುತಪ್ಪ, ಪ್ರಶ್ನೆ ಪತ್ರಿಕೆ ಸೋರಿಕೆಗೆ ನೆರವು ಕೋರಿ ಆ ಕಾಲೇಜಿನ ಮಾಲೀಕ ನಾಗರಾಜ್‌ನನ್ನು ಭೇಟಿಯಾಗಿ .5 ಲಕ್ಷಕ್ಕೆ ‘ವ್ಯವಹಾರ’ ಕುದುರಿಸಿದ್ದ. ಪರೀಕ್ಷೆಗೆ ಗೈರಾದ ಅಭ್ಯರ್ಥಿಗೆ ನೀಡಲಾದ ಪ್ರಶ್ನೆ ಪತ್ರಿಕೆಯನ್ನು ಪರೀಕ್ಷಾ ಕೊಠಡಿಯಿಂದ ಹೊರಗೆ ಸಾಗಿಸಿ ಅದನ್ನು ಫೋಟೋ ತೆಗೆದುಕೊಳ್ಳಲು ಸಂಚು ರೂಪಿಸಿದ್ದ.
ನೇಮಕಾತಿ ಹಗರಣದ ಮೂಲ ರಹಸ್ಯ! ಅಕ್ರಮದ ಮಹಾ ಸೀಕ್ರೆಟ್ ಇಲ್ಲಿದೆ!
ಅಂತೆಯೇ 2021ರ ಡಿಸೆಂಬರ್ 13ರಂದು ಪರೀಕ್ಷೆ ಆರಂಭವಾದ ಕೂಡಲೇ ಅಭ್ಯರ್ಥಿಗಳಿಗೆ ಒಎಂಆರ್ ಶೀಟ್ ಹಾಗೂ ಪ್ರಶ್ನೆ ಪತ್ರಿಕೆ ವಿತರಿಸಲಾಗಿತ್ತು. 30 ನಿಮಿಷದ ನಂತರ ಗೈರಾದ ಅಭ್ಯರ್ಥಿಗಳ ಪ್ರಶ್ನೆ ಪತ್ರಿಕೆ ಹಾಗೂ ಒಎಂಆರ್ ಶೀಟ್ ಅನ್ನು ಪರೀಕ್ಷಾ ಕೇಂದ್ರದ ಮೇಲ್ವಿಚಾರಕರು ಮರಳಿ ಪಡೆದಿದ್ದರು. ಈ 30 ನಿಮಿಷದ ಅಲ್ಪಾವಧಿಯಲ್ಲಿ ಓರ್ವ ಗೈರಾದ ಅಭ್ಯರ್ಥಿಗೆ ನೀಡಿದ ಪ್ರಶ್ನೆ ಪತ್ರಿಕೆಯನ್ನು ರಹಸ್ಯವಾಗಿ ಪರೀಕ್ಷಾ ಕೊಠಡಿಯಿಂದ ಹೊರಗೆ ತಂದ ನಾಗರಾಜ್, ಆ ಪತ್ರಿಕೆಯನ್ನು ಕಾಲೇಜಿನ ಶೌಚಾಲಯದಲ್ಲಿ ಇಟ್ಟಿದ್ದರು. ಅಲ್ಲಾಗಲೇ ಕಾದಿದ್ದ ರಾವುತಪ್ಪ, ಪ್ರಶ್ನೆ ಪತ್ರಿಕೆಯ ಫೋಟೋ ತೆಗೆದುಕೊಂಡು ಬಂದಿದ್ದ. ಬಳಿಕ ಅದು ವಾಟ್ಸ್‌ಆ್ಯಪ್‌ನಲ್ಲಿ ‘ಹಂಚಿಕೆ’ಯಾಗಿತ್ತು. ಈ ಬಗ್ಗೆ ರಾವುತಪ್ಪ ತಪ್ಪೊಪ್ಪಿಗೆ ಹೇಳಿಕೆ ಸಹ ಕೊಟ್ಟಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.
ಈ ಪ್ರಕರಣದ ಆರೋಪಿ ಗೋಳಾಳಪ್ಪ ಬಳಿ .30 ಲಕ್ಷ ಜಪ್ತಿ ಮಾಡಲಾಗಿದೆ. ವಿಚಾರಣೆ ವೇಳೆ ತಾನು .38 ಲಕ್ಷ ಕೊಟ್ಟಿದ್ದಾಗಿ ಅಭ್ಯರ್ಥಿ ಶಾಂತಕುಮಾರ್ ಹೇಳಿಕೆ ನೀಡಿದ್ದ. ಅಭ್ಯರ್ಥಿಯಿಂದ .38 ಲಕ್ಷದಲ್ಲಿ .5 ಲಕ್ಷ ಅನ್ನು ಶಿಕ್ಷಕ ಬಸವರಾಜ್‌ಗೆ ಕೊಟ್ಟಿದ್ದಾಗಿ ಗೋಳಾಳಪ್ಪ ತಪ್ಪೊಪ್ಪಿಗೆ ಹೇಳಿಕೆ ಕೊಟ್ಟಿದ್ದಾನೆ. ಮತ್ತೊಬ್ಬ ಅಭ್ಯರ್ಥಿ ವೀರಣ್ಣಗೌಡ, ತಾನು ಕೆಲಸ ಸಿಕ್ಕಿದ ಬಳಿಕ .50 ಲಕ್ಷ ಹಣ ಕೊಡುವುದಾಗಿ ಹೇಳಿದ್ದೆ ಎಂದಿದ್ದ. ಅಂತೆಯೇ ನೀರಾವರಿ ಇಲಾಖೆಯ ಎಂಜಿನಿಯರ್ ಮಲ್ಲಿಕಾರ್ಜುನ ಮೇಳಕುಂದ ಮನೆಯಲ್ಲಿ ತಪಾಸಣೆ ನಡೆಸಿದಾಗ ಅಭ್ಯರ್ಥಿ ವೀರಣ್ಣಗೌಡನ ಅಂಕಪಟ್ಟಿಗಳು ಹಾಗೂ ಆತ ಬರೆದು ಕೊಟ್ಟಿದ್ದ 2 ಖಾಲಿ ಚೆಕ್‌ಗಳು ಪತ್ತೆಯಾದವು ಎಂದು ಪೊಲೀಸರು ಹೇಳಿದ್ದಾರೆ.
ಅಕ್ರಮ ಬಯಲಾಗಿದ್ದು ಹೇಗೆ?
ಅನ್ನಪೂರ್ಣೇಶ್ವರಿ ನಗರ ವ್ಯಾಪ್ತಿಯ ಖಾಸಗಿ ಕಾಲೇಜಿನಲ್ಲಿ ಪಿಡಬ್ಲ್ಯುಡಿ ಜೆಇ ಪರೀಕ್ಷೆಯನ್ನು ಬ್ಲೂ ಟೂತ್ ಬಳಸಿ ಬರೆಯಲು ಯತ್ನಿಸಿದ್ದಾಗ ವೀರಣ್ಣಗೌಡ ಸಿಕ್ಕಿಬಿದ್ದಿದ್ದ. ಬಳಿಕ ಆತನ ವಿಚಾರಣೆ ವೇಳೆ ಇಡೀ ಅಕ್ರಮ ಜಾಲ ಬಯಲಾಯಿತು. ನಗರದ ಸೆಂಟ್ ಜೋಸೆಫ್ ಕಾಲೇಜಿನಲ್ಲಿ ಪರೀಕ್ಷೆ ಬರೆದು ಮನೆಗೆ ಸೇರಿದ್ದ ಶಾಂತಕುಮಾರ್‌ನನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ