Belagavi Session: ಬೆಳಗಾವಿ ಅಧಿವೇಶನ ತೆರೆ, ಮುಂದಿನ ಅಧಿವೇಶನದ ಬಗ್ಗೆ ತಿಳಿಸಿದ ಬೊಮ್ಮಾಯಿ

By Suvarna News  |  First Published Dec 24, 2021, 8:22 PM IST

* ಬೆಳಗಾವಿ ಚಳಿಗಾಲದ ಅಧಿವೇಶನಕ್ಕೆ ತೆರೆ
* ಸುವರ್ಣ ಸೌಧದಲ್ಲಿ ಹತ್ತು ದಿನಗಳ ಕಾಲ ನಡೆದ ಅಧಿವೇಶನ
* ಮುಂದಿನ ಅಧಿವೇಶನದ ಬಗ್ಗೆ ತಿಳಿಸಿದ ಸಿಎಂ ಬಸವರಾಜ ಬೊಮ್ಮಾಯಿ


ಬೆಳಗಾವಿ, (ಡಿ.24): ಬೆಳಗಾವಿಯ ಸುವರ್ಣ ಸೌಧದಲ್ಲಿ 10 ದಿನಗಳ ಕಾಲ ನಡೆದ ಚಳಿಗಾಲದ ಅಧಿವೇಶನಕ್ಕೆ (Belagavi Winter Session0 ಇಂದು (ಶುಕ್ರವಾರ) ತೆರೆ ಬಿದಿದ್ದು, ಜನವರಿಯಲ್ಲಿ ಜಂಟಿ ಅಧಿವೇಶನ ಕರೆಯಲು ಸರ್ಕಾರ ತೀರ್ಮಾನಿಸಿದೆ.

ಇಂದು(ಡಿ.24) ಬೆಳಗಾವಿಯಲ್ಲಿ(Belagavi) ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai), ಜನವರಿಯಲ್ಲಿ ಜಂಟಿ ಅಧಿವೇಶನ ಕರೆಯಲು ತೀರ್ಮಾನಿಸಿದ್ದೇವೆ ಎಂದು ಹೇಳಿದರು.

Latest Videos

undefined

ಮತಾಂತರ ನಿಷೇಧ ಕಾಯ್ದೆ(Ani Conversion Bill) ಕುರಿತು ಚರ್ಚೆ ಮಾಡಿದ್ದೇವೆ. ವಿಧಾನಪರಿಷತ್​ನಲ್ಲಿ ಕಾಯ್ದೆ ಮಾಡುವ ಮೂಡ್​ನಲ್ಲಿ ಅವರು ಇರಲಿಲ್ಲ. ಜತೆಗೆ ಸಂಖ್ಯಾಬಲವೂ ಇರಲಿಲ್ಲ. ಒತ್ತಡದಿಂದ ಮಾಡಬಾರದು ಎಂದು ವಿಧೇಯಕ ಮಂಡನೆ ನಿರ್ಧಾರ ಕೈಬಿಟ್ಟೆವು ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್​ನವರು(Congress) ಇದ್ದಾಗ ರಾಜ್ಯದಲ್ಲಿ ಎಷ್ಟು ಅಭಿವೃದ್ಧಿ ಆಗಿತ್ತು ಮತ್ತು ಯೋಜನೆಗಳು ಪೂರ್ಣಗೊಂಡಿದ್ದವು ಎಂಬುದನ್ನು ನೋಡಿಕೊಳ್ಳಲಿ. ಮಾತಿಗೆ ತಪ್ಪಿದವರಿಂದ ನೀತಿ ಪಾಠ ಕಲಿಯಬೇಕಾಗಿಲ್ಲ ಎಂದು ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.

ಅಧಿವೇಶನ ಮುಕ್ತಾಯ, ವಿಧಾನ ಪರಿಷತ್ತಿನಲ್ಲಿ ಮಂಡನೆಯಾಗದ ಮತಾಂತರ ಮಸೂದೆ

ಚರ್ಚೆ ನಡೆಸಿದ ಬಗ್ಗೆ ವಿವರಿಸಿದ ಬೊಮ್ಮಾಯಿ
ಸುವರ್ಣಸೌಧದಲ್ಲಿ ಅಧಿವೇಶನ ನಡೆಸಬೇಕೆಂಬುದು ಜನರ ಆಸೆ ಆಗಿತ್ತು. ಅಧಿವೇಶನದಲ್ಲಿ ಜನರ ಸಮಸ್ಯೆಗಳ ಕುರಿತು ಚರ್ಚೆ ನಡೆಸಲಾಗಿದೆ. ಕಂದಾಯ ಸಚಿವರು ಸಮರ್ಥವಾಗಿ ಉತ್ತರಗಳನ್ನು ನೀಡಿದ್ದಾರೆ. ಮಳೆ ಹಾನಿ, ಬೆಳೆ ಹಾನಿ ಪರಿಹಾರದ ಬಗ್ಗೆ ಉತ್ತರ ನೀಡಿದ್ದಾರೆ. ಸಕಾಲದಲ್ಲಿ ರೈತರಿಗೆ ನೆರವಾಗಿದ್ದ ಸರ್ಕಾರ ಅಂದರೆ ಅದು ಬಿಜೆಪಿ ಸರ್ಕಾರ. ರೈತರ ಕಷ್ಟಕ್ಕೆ ಸ್ಪಂದಿಸಿ, ಪರಿಹಾರ ನೀಡಿದ್ದೇವೆ. ರೈತರಿಗೆ ಕೊಡಬೇಕಿದ್ದ ಪರಿಹಾರದ ಮೊತ್ತವನ್ನೂ ಹೆಚ್ಚಿಸಿದ್ದೇವೆ. ಕನ್ನಡದ ಅಸ್ಮಿತೆ ಎತ್ತಿಹಿಡಿಯುವ ಕೆಲಸ ಮಾಡಿದ್ದೇವೆ ಎಂದು ವಿವರಿಸಿದರು,

ಕನ್ನಡದ ನೆಲ, ಜಲದ ವಿಚಾರವಾಗಿ ನಾವೆಲ್ಲ ಒಂದಾಗಿದ್ದೇವೆ. ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳಿಗೆ ಅಧಿವೇಶನದಲ್ಲಿ ಉತ್ತರ ಸಿಕ್ಕಿದೆ. ಉತ್ತರ ಕರ್ನಾಟಕದ ಅವಶ್ಯತೆಗಳಿಗೆ ಸರ್ಕಾರ ಸ್ಪಂದಿಸಲಿದೆ. ಅಲ್ಲಿನ ಅಗತ್ಯಗಳನ್ನು ಪೂರ್ಣಗೊಳಿಸಲು ಮಾಡಬೇಕಿರುವ ಎಲ್ಲ ಕೆಲಸಗಳನ್ನೂ ಮಾಡುತ್ತದೆ. ವಿರೋಧ ಪಕ್ಷಗಳಿಗೆ ಉತ್ತರ ಕರ್ನಾಟಕದ ಬಗ್ಗೆ ಪ್ರೀತಿ ಇಲ್ಲ. ಹಲವು ಯೋಜನೆಗಳಿಗೆ ನಾವು ಅನುಮೋದನೆ ಕೊಟ್ಟಿದ್ದೇವೆ. ಅಧಿವೇಶನದಲ್ಲಿ ಕಾಂಗ್ರೆಸ್​ ಪಕ್ಷದ ದ್ವಿಮುಖ ನೀತಿ ಗೊತ್ತಾಗಿದೆ. ಅಧಿಕಾರದಲ್ಲಿದ್ದಾಗ ಒಂದು ರೀತಿಯಲ್ಲಿರುವ ಅವರ ಧೋರಣೆಯು ವಿರೋಧ ಪಕ್ಷದ ಸ್ಥಾನದಲ್ಲಿದ್ದಾಗ ಮತ್ತೊಂದು ರೀತಿಯಾಗುತ್ತದೆ ಎಂದು ಹೇಳಿದರು.

Belagavi Session: ಹಲವು ಘಟನೆಗಳಿಗೆ ಸಾಕ್ಷಿಯಾದ ಕಲಾಪ, ಗುರಿ ಮುಟ್ಟದ ಉತ್ತರಕರ್ನಾಟಕ ಕನವರಿಕೆ

ಮುಂದಿನ ದಿನಗಳಲ್ಲಿ ಬೆಳಗಾವಿಯಲ್ಲಿ ಮೂಲಸೌಕರ್ಯಕ್ಕೆ ಒತ್ತು ನೀಡಲಾಗುವುದು. ಉತ್ತರ ಕರ್ನಾಟಕದ ಬಹುತೇಕ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ವಿರೋಧ ಪಕ್ಷದವರು ಎಲ್ಲ ವಿಷಯದಲ್ಲೂ ಧರಣಿ ಮಾಡುತ್ತಾರೆ. ಉತ್ತರ ಕರ್ನಾಟಕ ಭಾಗಕ್ಕೆ ಏನು ಮಾಡಿದ್ದೇವೆ ಎಂಬುದು ನನಗೆ ಗೊತ್ತಿದೆ. ಮಾತಿಗೆ ತಪ್ಪಿದ ಕಾಂಗ್ರೆಸ್​ನಿಂದ ನೀತಿಪಾಠ ಕಲಿಯುವ ಅಗತ್ಯವಿಲ್ಲ ಎಂದು ಟಾಂಗ್ ಕೊಟ್ಟರು.

ಮುಂದಿನ ಅಧಿವೇಶನದಲ್ಲಿ ತೆಗೆದುಕೊಳ್ಳುತ್ತೇವೆ
ಮುಂದಿನ ಅಧಿವೇಶನದಲ್ಲಿ ವಿಧೇಯಕ ಮಂಡಿಸುತ್ತೇವೆ ಎಂದು ಸರ್ಕಾರದ ಪರವಾಗಿ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಉತ್ತರ ನೀಡಿದ್ದಾರೆ. ಮತಾಂತರ ನಿಷೇಧ ವಿಧೇಯಕ ಮಂಡಿಸದ ಸರ್ಕಾರ, ಮುಂದಿನ ಅಧಿವೇಶನದಲ್ಲಿ ತೆಗೆದುಕೊಳ್ಳುತ್ತೇವೆ ಎಂದು ಪೂಜಾರಿ ಹೇಳಿದ್ದಾರೆ. 

ಇದಕ್ಕೂ ಮೊದಲು ಪರಿಷತ್​ ಕಲಾಪಕ್ಕೆ ಕೆಲಕಾಲ ಬ್ರೇಕ್ ನೀಡಿರುವ ಸಭಾಪತಿ, ಕಾಂಗ್ರೆಸ್ ಸದಸ್ಯರ ಜತೆ ಸಭೆ ನಡೆಸಿದ್ದರು. ಸದನ ನಾಯಕರು, ವಿಪಕ್ಷಗಳ ನಾಯಕರ ಜತೆ ಹೊರಟ್ಟಿ ಸಭೆ ನಡೆಸಿದ್ದಾರೆ. ನಾನು ತಿಳಿದು ತಿಳಿದು ನಾನು ಕಾಲಹರಣ ಮಾಡಿಲ್ಲ. ಬಿಜೆಪಿ ನಾಯಕರೇ ಕಾಲಾವಕಾಶಕ್ಕೆ ಮನವಿ ಮಾಡಿದ್ರು. ಇದರ ಬಗ್ಗೆ ನಿಮ್ಮ ಜೊತೆ ಚರ್ಚಿಸಿದ್ದೇವೆ ಅಂದರು. ಹೀಗಾಗಿ ನಾನು ಕಾಲಾವಕಾಶ ಕೊಟ್ಟಿದ್ದೆ ಎಂದು ಬಸವರಾಜ ಹೊರಟ್ಟಿ ಹೇಳಿದ್ದರು. ಇದೀಗ ವಿಧಾನ ಪರಿಷತ್ ಕಲಾಪವನ್ನ ಅನಿರ್ದಿಷ್ಟಾವಧಿಗೆ ಮುಂದೂಡಿ ಉಪಸಭಾಪತಿ ಪ್ರಾಣೇಶ್ ಆದೇಶಿಸಿದ್ದಾರೆ.

click me!