ರಣತಂತ್ರ ರೂಪಿಸುವ ಬಿಜೆಪಿಯೊಳಗೆ ಈಗ ತೀವ್ರ ಆತಂಕ

Published : Jan 25, 2019, 08:08 AM IST
ರಣತಂತ್ರ ರೂಪಿಸುವ ಬಿಜೆಪಿಯೊಳಗೆ ಈಗ ತೀವ್ರ ಆತಂಕ

ಸಾರಾಂಶ

ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇದೇ ವೇಳೆ ರಣತಂತ್ರ ರೂಪಿಸುವ ಬಿಜೆಪಿಯಲ್ಲೇ ಈಗ ತೀವ್ರ ಆತಂಕ ಎದುರಾಗಿದೆ. ಪಕ್ಷದಲ್ಲಿ ಯಾವುದೇ ರೀತಿಯ ಸಿದ್ಧತೆಗಳು ಆರಂಭವಾಗದಿರುವುದೇ ಈ ಆತಂಕಕ್ಕೇ ಕಾರಣವಾಗಿದೆ. 

ಬೆಂಗಳೂರು :  ಮುಂಬರುವ ಲೋಕಸಭಾ ಚುನಾವಣೆಗೆ ಹೆಚ್ಚೂ ಕಡಿಮೆ ಮೂರು ತಿಂಗಳು ಬಾಕಿ ಉಳಿದಿರುವ ಈ ಹಂತದಲ್ಲೂ ರಾಜ್ಯ ಬಿಜೆಪಿಯಲ್ಲಿ ಅದಕ್ಕೆ ಬೇಕಾದ ಯಾವುದೇ ತಳಮಟ್ಟದ ಸಿದ್ಧತೆ ಆರಂಭವಾಗದಿರುವ ಬಗ್ಗೆ ಪಕ್ಷದೊಳಗೇ ಆತಂಕ ಹೆಚ್ಚುತ್ತಿದೆ.

ಪಕ್ಷದ ಮುಂಚೂಣಿ ನಾಯಕತ್ವ ವಹಿಸಿಕೊಂಡವರು ಚುನಾವಣೆಗೆ ಬೇಕಾದ ಸಿದ್ಧತೆ ಕೈಗೊಳ್ಳುವ ಬಗ್ಗೆ ಚಕಾರ ಎತ್ತದೆ ಕೇವಲ ವಿಧಾನಸೌಧದ ಮೂರನೇ ಮಹಡಿಯಲ್ಲಿನ ಗದ್ದುಗೆ ಏರುವ ದಿಕ್ಕಿನಲ್ಲಿ ವಿಶೇಷ ಶ್ರಮ ಹಾಕುತ್ತಿರುವ ಬಗ್ಗೆ ರಾಜ್ಯ ಬಿಜೆಪಿಯ ಎರಡನೇ ಹಂತದ ಮುಖಂಡರು ಹಾಗೂ ಕಾರ್ಯಕರ್ತರು ತೀವ್ರ ಚಿಂತೆಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ.

ಬಹುತೇಕ ಮಾಚ್‌ರ್‍ ಮೊದಲ ವಾರದಲ್ಲಿ ಚುನಾವಣೆಯ ವೇಳಾಪಟ್ಟಿಪ್ರಕಟಗೊಳ್ಳುವ ನಿರೀಕ್ಷೆ ಇದ್ದು, ದಿನಗಣನೆ ಆರಂಭವಾಗಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ ಗಳಿಸಲು ಸಾಧ್ಯವಿರುವ ರಾಜ್ಯ ಕರ್ನಾಟಕ ಮಾತ್ರ. ಹೀಗಿರುವಾಗ ರಾಜ್ಯ ಬಿಜೆಪಿಯ ಹಿರಿಯ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮತ್ತೊಮ್ಮೆ ಕೇಂದ್ರದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ತಂತ್ರ ರೂಪಿಸುವುದನ್ನು ಬಿಟ್ಟು ತೆರೆಮರೆಯಲ್ಲಿ ಪರ್ಯಾಯ ಸರ್ಕಾರ ರಚಿಸಲು ಮಾಡುತ್ತಿರುವ ಪ್ರಯತ್ನದಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟಾಗುವ ಸಾಧ್ಯತೆಯೇ ಹೆಚ್ಚು ಎಂಬ ಅಭಿಪ್ರಾಯ ಬಲವಾಗಿಯೇ ಕೇಳಿಬರುತ್ತಿದೆ.

ಹೊಸ ಸವಾಲು:  ಕಳೆದ ಚುನಾವಣೆಯಲ್ಲಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 17 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದ್ದ ಬಿಜೆಪಿಗೆ ಈ ಬಾರಿ ಹೊಸ ಸವಾಲು ಎದುರಾಗಲಿದೆ. ಆಡಳಿತಾರೂಢ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷಗಳು ಸ್ಥಾನ ಹೊಂದಾಣಿಕೆ ಮಾಡಿಕೊಂಡು ಒಟ್ಟಾಗಿ ಚುನಾವಣೆ ಎದುರಿಸಲು ಮುಂದಾಗಿರುವುದರಿಂದ ಅದರಿಂದ ಬಿಜೆಪಿಗೆ ಹೊಡೆತ ಬೀಳುವ ಅಪಾಯವೂ ಇದೆ. ರಾಜ್ಯದಲ್ಲಿ ಕಳೆದ ಬಾರಿ ಪಕ್ಷಕ್ಕಿದ್ದ ಅನುಕೂಲಕರ ಪರಿಸ್ಥಿತಿ ಈ ಬಾರಿ ಇಲ್ಲ. ಹೀಗಿರುವಾಗ ಕಳೆದ ಬಾರಿಗಿಂತ ಹೆಚ್ಚು ಕ್ರಿಯಾಶೀಲವಾಗಿ ಮತ್ತು ಜಾಗ್ರತೆಯಿಂದ ಚುನಾವಣಾ ಸಿದ್ಧತೆ ಕೈಗೊಳ್ಳಬೇಕು ಎಂದು ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಅಭಿಪ್ರಾಯಪಟ್ಟಿದ್ದಾರೆ.

ಸಾಮಾನ್ಯವಾಗಿ ಚುನಾವಣೆ ಆರು ತಿಂಗಳು ಇರುವಾಗಲೇ ಬಿಜೆಪಿ ತನ್ನ ಕೆಲಸ ಆರಂಭಿಸುತ್ತದೆ. ಕಳೆದ 2014ರ ಲೋಕಸಭಾ ಚುನಾವಣೆ ವೇಳೆಯೂ ಅಷ್ಟೆ. ಆದರೆ, ಈ ಬಾರಿ ಮಾತ್ರ ರಾಜ್ಯ ಬಿಜೆಪಿಯಲ್ಲಿ ಲೋಕಸಭಾ ಚುನಾವಣೆಯನ್ನು ಎದುರಿಸಲು ಇರಬೇಕಾದ ಸಂಭ್ರಮವಾಗಲಿ ಅಥವಾ ವಾತಾವರಣವಾಗಲಿ ಕಂಡು ಬರುತ್ತಿಲ್ಲ.

ಒಂದೆಡೆ ಪಕ್ಷದ ಚುನಾವಣಾ ರಣತಂತ್ರ ರೂಪಿಸುವಲ್ಲಿ ತಮ್ಮದೇ ಆದ ಪ್ರಭಾವ ಹೊಂದಿದ್ದ ಹಿರಿಯ ನಾಯಕ ಅನಂತಕುಮಾರ್‌ ಅವರು ಅಗಲಿದ್ದಾರೆ. ಮತ್ತೊಂದೆಡೆ ಪಕ್ಷದ ಮುಖಂಡರನ್ನು ಹಾಗೂ ಕಾರ್ಯಕರ್ತರಿಗೆ ಕೆಲಸ ಕೊಟ್ಟು ಹುರಿದುಂಬಿಸುತ್ತಿದ್ದ ರಾಷ್ಟ್ರೀಯ ಸಹ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರು ರಾಜ್ಯ ರಾಜಕಾರಣದಿಂದ ದೂರ ಉಳಿದು ರಾಷ್ಟ್ರ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದಾರೆ.

ಹಿಂದಿನ ಲೋಕಸಭಾ ಚುನಾವಣೆ ವೇಳೆ ಪಕ್ಷದ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಂತೋಷ್‌ ಅವರ ಸ್ಥಾನವನ್ನು ಈಗ ಅರುಣ್‌ಕುಮಾರ್‌ ವಹಿಸಿಕೊಂಡಿದ್ದಾರೆ. ಆದರೆ, ವರ್ಷ ಕಳೆದರೂ ಅವರಿಗೆ ಪಕ್ಷದ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗುತ್ತಿಲ್ಲ. ಪರಿಣಾಮ, ರಾಜ್ಯ ಬಿಜೆಪಿ ಹಳಿ ತಪ್ಪಿದ ರೈಲಿನಂತಾಗುತ್ತಿದೆ ಎಂಬ ಮಾತುಗಳು ಪಕ್ಷದ ವಿವಿಧ ಹಂತದ ಮುಖಂಡರಿಂದ ಕೇಳಿಬರತೊಡಗಿವೆ.

ಬಿಎಸ್‌ವೈಗೆ ಹೇಳುವುದು ಹೇಗೆ?: ರಾಜ್ಯ ಬಿಜೆಪಿಯ ಅನೇಕ ಮುಖಂಡರು ಲೋಕಸಭಾ ಚುನಾವಣೆಯ ಬಗ್ಗೆ ಪಕ್ಷ ಅಣಿಗೊಳ್ಳದೇ ಇರುವ ಬಗ್ಗೆ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ಗಮನಕ್ಕೆ ತರಲು ಪಕ್ಷದ ಹಲವು ಮುಖಂಡರು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ.

ಇತ್ತೀಚಿನ ದಿನಗಳಲ್ಲಿ ಯಡಿಯೂರಪ್ಪ ಅವರು ಪಕ್ಷದ ಕಚೇರಿಗೆ ಆಗಮಿಸುವುದು ಕಡಮೆಯಾಗಿದೆ. ತಮ್ಮ ಡಾಲರ್ಸ್‌ ಕಾಲೋನಿಯ ನಿವಾಸದಿಂದಲೇ ಎಲ್ಲವನ್ನೂ ನಿಭಾಯಿಸಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ, ಅಲ್ಲಿಗೆ ತೆರಳಿ ಮುಕ್ತವಾಗಿ ಪಕ್ಷ ಸಂಘಟನೆ ಮತ್ತು ಲೋಕಸಭಾ ಚುನಾವಣೆಯ ಸಿದ್ಧತೆ ಬಗ್ಗೆ ಚರ್ಚೆ ನಡೆಸಬೇಕು ಎಂದರೆ ಅಲ್ಲಿ ಸದಾಕಾಲ ಅವರ ಆಪ್ತರು ಸುತ್ತುವರೆದಿರುತ್ತಾರೆ. ಅಲ್ಲಿ ಪರ್ಯಾಯ ಸರ್ಕಾರ ರಚನೆ ಯತ್ನದ ಮಾತುಗಳದ್ದೇ ಕಾರುಬಾರು. ಹೀಗಾಗಿ, ಯಡಿಯೂರಪ್ಪ ಅವರ ಮನೆಗೆ ಹೋಗಿ ಔಪಚಾರಿಕವಾಗಿ ಮಾತನಾಡಿ ವಾಪಸ್‌ ಬಂದಿದ್ದೇವೆ ಹೊರತು ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗಿಲ್ಲ ಎಂದು ಮುಖಂಡರೊಬ್ಬರು ಮಾಹಿತಿ ನೀಡಿದರು.

ಹೈಕಮಾಂಡ್‌ ಏನು ಮಾಡುತ್ತಿದೆ?

ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾದರೂ ರಾಜ್ಯ ಬಿಜೆಪಿಯ ಕಾರ್ಯವೈಖರಿ ಬಗ್ಗೆ ಏನನ್ನೂ ಪ್ರಶ್ನಿಸದೆ ಮೌನಕ್ಕೆ ಶರಣಾಗಿರುವ ಹೈಕಮಾಂಡ್‌ ಧೋರಣೆ ಬಗ್ಗೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಗೆ ಎಂಟು ತಿಂಗಳು ಬಾಕಿ ಇರುವಾಗಲೇ ರಾಜ್ಯಕ್ಕೆ ಆಗಮಿಸಿ ಮೂರು ದಿನಗಳ ಕಾಲ ಪಕ್ಷದ ಎಲ್ಲ ವಿಭಾಗಗಳ ಮುಖಂಡರಿಗೆ ಕ್ಲಾಸ್‌ ತೆಗೆದುಕೊಂಡಿದ್ದ ಅಮಿತ್‌ ಶಾ ಅವರು ಲೋಕಸಭಾ ಚುನಾವಣೆಗೆ ಮಾತ್ರ ಆ ರೀತಿಯ ಕ್ಲಾಸ್‌ ತೆಗೆದುಕೊಳ್ಳಲೇ ಇಲ್ಲ. ಈಗ ಬರುತ್ತಾರೆ, ಆಗ ಬರುತ್ತಾರೆ ಎಂಬ ಮಾತುಗಳೇ ಆಗಾಗ ಕೇಳಿಬಂದಿತಾದರೂ ಯಾವಾಗ ಎಂಬುದು ಮಾತ್ರ ಅಂತಿಮಗೊಳ್ಳಲೇ ಇಲ್ಲ. ಅದಕ್ಕೆ ಬೇರೆ ಬೇರೆ ಕಾರಣಗಳೂ ಇವೆ ಎನ್ನಲಾಗುತ್ತಿದೆ.

ವರದಿ :  ವಿಜಯ್‌ ಮಲಗಿಹಾಳ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದ್ವೇಷ ಭಾಷಣಕ್ಕೆ 7 ವರ್ಷ ಜೈಲು: ವಿಧೇಯಕ ಮಂಡಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್‌
ಉ.ಕರ್ನಾಟಕ ಬಗ್ಗೆ ರಾಜ್ಯ ಸರ್ಕಾರ ದಿವ್ಯ ನಿರ್ಲಕ್ಷ್ಯ: ವಿಜಯೇಂದ್ರ