ಕರ್ನಾಟಕ ಶಾಲಾ ಪಠ್ಯಪುಸ್ತಕಗಳಿಗೆ ಹೊಸ ಹೆಸರು: ವಿಜ್ಞಾನ ಪುಸ್ತಕಕ್ಕೆ ‘ಕುತೂಹಲ’, ಕನ್ನಡಕ್ಕೆ ‘ಸಿರಿ ಕನ್ನಡ’

Kannadaprabha News   | Kannada Prabha
Published : Jun 15, 2026, 11:36 AM IST
Karnataka School Students

ಸಾರಾಂಶ

ರಾಜ್ಯ ಪಠ್ಯಪುಸ್ತಕ ರಚನಾ ಮಂಡಳಿಯು ಕಲಿಕೆಯನ್ನು ಆಸಕ್ತಿದಾಯಕವಾಗಿಸಲು ಪಠ್ಯಪುಸ್ತಕಗಳಿಗೆ ಹೊಸ ಹೆಸರುಗಳನ್ನು ನೀಡಿದೆ. ವಿಜ್ಞಾನಕ್ಕೆ 'ಕುತೂಹಲ' ಎಂದು ಹೆಸರಿಡಲಾಗಿದ್ದು, ಈ ಹೊಸ ಪುಸ್ತಕಗಳು ರಾಷ್ಟ್ರೀಯ ಶಿಕ್ಷಣ ನೀತಿಯಂತೆ ಚಟುವಟಿಕೆ ಆಧಾರಿತ ಕಲಿಕೆ ಮತ್ತು ಅನ್ವೇಷಣೆಗೆ ಒತ್ತು ನೀಡುತ್ತವೆ. ವರ್ಣಮಯ ಚಿತ್ರಗಳು ಮತ್ತು ಪ್ರಾಯೋಗಿಕ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ವಿಶೇಷ ಆಸಕ್ತಿ ಮೂಡಿಸುತ್ತಿವೆ.

ರಾಘು ಕಾಕರಮಠ, ಕನ್ನಡಪ್ರಭ ವಾರ್ತೆ

ಅಂಕೋಲಾ:  ವಿದ್ಯಾರ್ಥಿಗಳನ್ನು ಪಠ್ಯಪುಸ್ತಕಗಳತ್ತ ಇನ್ನಷ್ಟು ಆಕರ್ಷಿಸುವ ಹಾಗೂ ಕಲಿಕೆಯನ್ನು ಆಸಕ್ತಿದಾಯಕವಾಗಿಸುವ ಉದ್ದೇಶದಿಂದ ರಾಜ್ಯ ಪಠ್ಯಪುಸ್ತಕ ರಚನಾ ಮಂಡಳಿಯು ಪಠ್ಯಪುಸ್ತಕಗಳಿಗೆ ಹೊಸ ಹೆಸರಿಡುವ ಮೂಲಕ ವಿನೂತನ ಪ್ರಯೋಗಕ್ಕೆ ಮುಂದಾಗಿದೆ.

ಈ ಬದಲಾವಣೆಯಡಿ ವಿಜ್ಞಾನ ಪುಸ್ತಕಕ್ಕೆ ‘ಕುತೂಹಲ’, ಕನ್ನಡಕ್ಕೆ ‘ಸಿರಿ ಕನ್ನಡ’, ಗಣಿತಕ್ಕೆ ‘ಗಣಿತ ಪ್ರಕಾಶ’, ದೈಹಿಕ ಶಿಕ್ಷಣಕ್ಕೆ ‘ಮೌಲ್ಯ ಶಿಕ್ಷಣ’ ಎಂಬ ಹೊಸ ಹೆಸರು ನೀಡಲಾಗಿದೆ. ಆಂಗ್ಲ ಮಾಧ್ಯಮದ ವಿಜ್ಞಾನ ಪಠ್ಯಪುಸ್ತಕಕ್ಕೆ (ಕ್ಯೂರಿಯಾಸಿಟಿ) ಎಂದು ಹೆಸರಿಡಲಾಗಿದೆ.

ಚಟುವಟಿಕೆ ಮತ್ತು ಅನ್ವೇಷಣೆಗೆ ಆದ್ಯತೆ:

2020ರ ರಾಷ್ಟ್ರೀಯ ಶಿಕ್ಷಣ ನೀತಿ ಹಾಗೂ 2023ರ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ ಆಶಯಗಳಿಗೆ ಅನುಗುಣವಾಗಿ ಹೊಸ ಪಠ್ಯಪುಸ್ತಕ ರೂಪಿಸಲಾಗಿದೆ. ಕೇವಲ ಪಾಠದ ವಿಷಯಗಳನ್ನು ಬೋಧಿಸುವುದಕ್ಕಿಂತಲೂ ವಿದ್ಯಾರ್ಥಿಗಳಲ್ಲಿ ಕುತೂಹಲ, ಚಿಂತನೆ ಮತ್ತು ಅನ್ವೇಷಣಾ ಮನೋಭಾವ ಬೆಳೆಸುವ ಉದ್ದೇಶಕ್ಕೆ ಹೆಚ್ಚು ಒತ್ತು ನೀಡಲಾಗಿದೆ.

ಹೊಸ ಪಠ್ಯಗಳಲ್ಲಿ ಪ್ರಯೋಗಗಳು, ಚರ್ಚೆಗಳು, ಯೋಜನಾ ಕಾರ್ಯಗಳು, ಸಂವಾದಗಳು, ಆಟಗಳು, ಪರಿಸರದೊಂದಿಗೆ ನೇರ ಸಂಪರ್ಕ ಹೊಂದುವ ಚಟುವಟಿಕೆ ಹಾಗೂ ಗುಂಪು ಕಾರ್ಯಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳು ತಾರ್ಕಿಕವಾಗಿ ಆಲೋಚಿಸುವುದು, ಸ್ವತಂತ್ರವಾಗಿ ಸಮಸ್ಯೆಗಳನ್ನು ಗುರುತಿಸುವುದು ಮತ್ತು ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಕೌಶಲ ಬೆಳೆಸಿಕೊಳ್ಳಲು ನೆರವಾಗಲಿದೆ.

ಹಿಂದಿನ ಪಠ್ಯಪುಸ್ತಕಗಳಲ್ಲಿ ಮುಖ್ಯವಾಗಿ ಪಾಠದ ವಿವರಣೆ ಮತ್ತು ಪ್ರಶ್ನೋತ್ತರಗಳಿಗೆ ಮಾತ್ರ ಅವಕಾಶವಿದ್ದರೆ, ಹೊಸ ಪಠ್ಯಗಳಲ್ಲಿ ‘ನಿಮ್ಮ ಅನಿಸಿಕೆಗಳೇನು?’, ‘ಸುರಕ್ಷತೆ ಮುಖ್ಯ’, ‘ನೀನು ವಿಜ್ಞಾನಿಯಾಗು’, ‘ನಮ್ಮ ವಿಜ್ಞಾನ ಪರಂಪರೆ’ ಸೇರಿದಂತೆ ಹಲವು ಹೊಸ ವಿಭಾಗಗಳನ್ನು ಸೇರಿಸಲಾಗಿದೆ. ಪ್ರತಿ ಪಾಠದ ಕೊನೆಯಲ್ಲಿ ಪ್ರಮುಖ ಅಂಶಗಳ ಸಂಕ್ಷಿಪ್ತ ಸಾರಾಂಶವನ್ನೂ ನೀಡಲಾಗಿದೆ.

ವರ್ಣಮಯ ಪಠ್ಯಪುಸ್ತಕಗಳು

ಈ ಹಿಂದೆ ಬಹುತೇಕ ಪಠ್ಯಪುಸ್ತಕಗಳು ಕಪ್ಪು-ಬಿಳುಪು ಮುದ್ರಣದಲ್ಲಿ ಪ್ರಕಟವಾಗುತ್ತಿದ್ದವು. ಆದರೆ ಹೊಸ ಆವೃತ್ತಿಯ ಪುಸ್ತಕಗಳು ಆಕರ್ಷಕ ಬಹುವರ್ಣದ ಮುಖಪುಟ, ಬಣ್ಣಬಣ್ಣದ ಚಿತ್ರಗಳು ಮತ್ತು ದೃಶ್ಯಾಧಾರಿತ ಮಾಹಿತಿಗಳಿಂದ ವಿದ್ಯಾರ್ಥಿಗಳ ಗಮನ ಸೆಳೆಯುತ್ತಿವೆ.

ಪುಸ್ತಕಗಳಲ್ಲಿ ಸರಳ ಹಾಗೂ ಪ್ರಾಯೋಗಿಕ ಚಟುವಟಿಕೆಗೆ ಹೆಚ್ಚಿನ ಸ್ಥಾನ ನೀಡಲಾಗಿದೆ. ಬಲೂನುಗಳು, ದೈನಂದಿನ ಜೀವನದಲ್ಲಿ ಬಳಸುವ ವಸ್ತುಗಳು ಹಾಗೂ ಸುತ್ತಮುತ್ತ ಸುಲಭವಾಗಿ ದೊರೆಯುವ ಸಾಮಗ್ರಿಗಳ ಮೂಲಕ ಪ್ರಯೋಗಗಳನ್ನು ನಡೆಸಲು ಪ್ರೋತ್ಸಾಹಿಸಲಾಗಿದೆ. ಅನೇಕ ಕಡೆಗಳಲ್ಲಿ ವಿದ್ಯಾರ್ಥಿಗಳು ತಮ್ಮ ಉತ್ತರಗಳು ಮತ್ತು ಅಭಿಪ್ರಾಯಗಳನ್ನು ದಾಖಲಿಸಲು ಪ್ರತ್ಯೇಕ ಸ್ಥಳಾವಕಾಶವನ್ನೂ ಕಲ್ಪಿಸಲಾಗಿದೆ.

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ೬ರಿಂದ ೮ನೇ ತರಗತಿಯ ವಿದ್ಯಾರ್ಥಿಗಳಿಗೆ ಪರಿಚಯಿಸಲಾಗಿರುವ ‘ಕ್ಯೂರಿಯಾಸಿಟಿ’ ಹಾಗೂ ಇತರ ಹೊಸ ಪಠ್ಯಪುಸ್ತಕಗಳು ವಿದ್ಯಾರ್ಥಿಗಳಲ್ಲಿ ವಿಶೇಷ ಆಸಕ್ತಿ ಮೂಡಿಸುತ್ತಿವೆ.

ಪ್ರಯತ್ನ ಶ್ಲಾಘನೀಯ

ಪಠ್ಯಪುಸ್ತಕಗಳಿಗೆ ಹೊಸ ಹೆಸರು ನೀಡುವ ಮೂಲಕ ವಿದ್ಯಾರ್ಥಿಗಳಲ್ಲಿ ಓದಿನಲ್ಲಿ ಆಸಕ್ತಿ ಮತ್ತು ಕುತೂಹಲ ಹೆಚ್ಚಿಸಲು ಕೈಗೊಂಡಿರುವ ಪ್ರಯತ್ನ ಶ್ಲಾಘನೀಯವಾಗಿದೆ. ಜತೆಗೆ ಚಟುವಟಿಕೆ ಆಧಾರಿತ ಕಲಿಕೆಗೆ ಒತ್ತು ನೀಡಿರುವುದರಿಂದ ವಿದ್ಯಾರ್ಥಿಗಳ ಅರ್ಥೈಸುವಿಕೆ, ಕಲಿಕೆ ಮತ್ತು ನೆನಪಿಟ್ಟುಕೊಳ್ಳುವ ಸಾಮರ್ಥ್ಯ ಮತ್ತಷ್ಟು ಉತ್ತಮಗೊಳ್ಳಲಿದೆ.

-ಉದಯ ನಾಯ್ಕ, ಶಿಕ್ಷಕ, ಕಟ್ಟಿನಹಕ್ಕಲ ಗ್ರಾಮ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಣಿಕಂಠನ ದರ್ಶನಕ್ಕಾಗಿ ಇರುಮುಡಿ ಹೊತ್ತು ಶಬರಿಮಲೆಗೆ ಹೊರಟ ಕೇಂದ್ರ ಸಚಿವ HD ಕುಮಾರಸ್ವಾಮಿ
ಗೃಹಲಕ್ಷ್ಮೀ ಗ್ಯಾರಂಟಿ ಯೋಜನೆ ಸ್ಥಗಿತದ ಸುದ್ದಿಗೆ ಸಿಎಂ ಡಿಕೆ ಶಿವಕುಮಾರ್ ಸ್ಪಷ್ಟನೆ