ಸಚಿವ ಕೆ.ಎನ್. ರಾಜಣ್ಣ ಹನಿಟ್ರ್ಯಾಪ್ ಕುರಿತು ಗೃಹ ಸಚಿವರಿಗೆ ದೂರು ನೀಡಲು ಸಿದ್ಧರಾಗಿದ್ದಾರೆ. ತನಿಖೆಯ ಸ್ವರೂಪ ಮತ್ತು ಹೈಕಮಾಂಡ್‌ನ ಪ್ರತಿಕ್ರಿಯೆಯ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ.
ಬೆಂಗಳೂರು (ಮಾ.25): 'ನಾನು ದೂರು ಕೊಡಲು ತಯಾರಾಗಿ ಬಂದಿದ್ದೆ. ಆದರೆ ಗೃಹ ಸಚಿವರು ಆಫೀಸ್ ಕೆಲಸದಲ್ಲಿ ಬ್ಯುಸಿ ಇದ್ದಾರೆ. ಹೀಗಾಗಿ 4:30ಕ್ಕೆ ಸದಾಶಿವನಗರದ ಮನೆಗೆ ಬರಲು ತಿಳಿಸಿದ್ದಾರೆ ಎಂದು ಸಚಿವ ಕೆ ಎನ್ ರಾಜಣ್ಣ ತಿಳಿಸಿದರು.
'ಹನಿಟ್ರ್ಯಾಪ್' ವಿಚಾರವಾಗಿ ಇಂದು ಗೃಹ ಸಚಿವ ಪರಮೇಶ್ವರ್ ಅವರನ್ನ ಭೇಟಿಯಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ನಾನು ಅವರ ದೂರು ನೀಡಿದ ಬಳಿಕ ಅದರ ಪ್ರತಿಯನ್ನು ನಿಮಗೆ ಕೊಡುತ್ತೇನೆ ಎಂದರು.
ದಾಖಲೆಗಳು ಅಂದ್ರೆ, ನಂದು ತಪ್ಪಿದೆ ಅನ್ಸುತ್ತೆ. ನಮ್ಮ ಮನೆಯಲ್ಲಿ ಸಿಸಿಟಿವಿ ಹಾಕಿರುತ್ತೇವೆ ಎಂಬ ಕಾರಣಕ್ಕೆ ಆ ರೀತಿ ಹೇಳಿದೆ. ಆದರೆ ಸರ್ಕಾರಿ ನಿವಾಸಕ್ಕೆ ಸಿಸಿಟಿವಿ ಹಾಕಿಲ್ಲ, ಯಾಕೆ ಹಾಕಿಲ್ಲ ಅಂತಾ ನನಗೆ ಗೊತ್ತಿಲ್ಲ. ಸರ್ಕಾರದಿಂದಲೇ ಈ ರೀತಿ ನಿರ್ದೇಶನ ಇದೆಯಂತೆ. ಅದು ನನ್ ಕಡೆಯಿಂದ ತಪ್ಪಾಗಿ ಹೇಳಿರುವ ಪದ. ಈಗಾಗಲೇ ಅವರದ್ದೇ ಮಾಹಿತಿಯನ್ನು ತರಿಸಿಕೊಂಡಿದ್ದಾರೆ. ನಾನು ದೂರು ಕೊಟ್ಟ ಮೇಲೆ ಮುಖ್ಯಮಂತ್ರಿಗಳು ಜೊತೆ ಚರ್ಚೆ ಮಾಡ್ತಾರೆ ಎಂದರು.
ಇದನ್ನೂ ಓದಿ: 'ರಾಜಣ್ಣ ಅಂಥವರಲ್ಲ, ಹಲೋ ಅಂದ್ರೆ ವಾಟ್ ಅಂತಾರೆ..', ಡಿಕೆಶಿ ಹನಿಟ್ರ್ಯಾಪ್ ಹೇಳಿಕೆಗೆ ಎಂಬಿ ಪಾಟೀಲ್ ತಿರುಗೇಟು!
ತನಿಖೆ ಯಾವ ರೀತಿ ಇರುತ್ತೆ ಗೊತ್ತಿಲ್ಲ:
ಈ ಪ್ರಕರಣದಲ್ಲಿ ತನಿಖೆ ಯಾವ ರೀತಿ ಮಾಡ್ತಾರೋ ಗೊತ್ತಿಲ್ಲ. ಎಸ್‌ಐಟಿಯಿಂದ ನಡೆಯುತ್ತೋ, ಎಡಿಜಿಪಿ ಲೆವೆಲ್ ಅಧಿಕಾರಿಯಿಂದ ಮಾಡ್ತಾರೋ ಅದೀಲ್ಲ ಗೃಹಮಂತ್ರಿಗಳು, ಮುಖ್ಯಮಂತ್ರಿಗಳಿಗೆ ಸೇರಿದ ವಿಚಾರ. ರಾಜೇಂದ್ರ ಏನು ದೂರು ಕೊಡ್ತಾನೋ ಗೊತ್ತಿಲ್ಲ. ನನ್ನ ಕಡೆಯಿಂದ ಏನು ಮಾಹಿತಿ ಇದೆಯೋ ಅದನ್ನು ಕೊಡುತ್ತೇನೆ. ಸಿಸಿಟಿವಿ ಆಧಾರದ ಮೇಲೆ ದಾಖಲೆ ಇದೆ ಅಂತಾ ಹೇಳಿದ್ದೇನೆ. ಆದರೆ ಅಲ್ಲಿ ಸಿಸಿ ಕ್ಯಾಮೆರಾ ಹಾಕಿಲ್ಲ ಅಂತ ಆಮೇಲೆ ಗೊತ್ತಾಯ್ತು. ಯಾವ ಸಚಿವರ ಮನೆಗೂ ಹಾಕಿಲ್ವಂತೆ. ನಮ್ಮ ಮನೆಗೆ ಸಾಕಷ್ಟು ಜನ ಬರ್ತಾರೆ ಅವರ ಮುಖ ನೋಡಿ ಮಾತನಾಡಿಸುವುದು ಕಷ್ಟ. ಅವರು ವಿಡಿಯೋ ಮಾಡೋದು ಅದೆಲ್ಲ ನಮಗೆ ಗೊತ್ತಾಗಲ್ಲ. ಕುತಂತ್ರ ಮಾಡೋದಾದ್ರೆ ಏನು ಪ್ಲಾನ್ ಇಟ್ಕೊಂಡು ಮಾಡಬೇಕು. ಏನೆಲ್ಲ ನಡೆದಿದೆ ಎಂಬುದನ್ನ ನಾನು ಪ್ರಾಮಾಣಿಕವಾಗಿ ಹೇಳುತ್ತೇನೆ. ನನ್ನ ಮೇಲೆ ಯಾವುದೇ ಒತ್ತಡ ಇಲ್ಲ ನನಗೆ ಯಾರೂ ಒತ್ತಡ ಮಾಡುವ ಪ್ರಯತ್ನ ಮಾಡಲ್ಲ. ಅಷ್ಟಕ್ಕೂ ನಾನು ಯಾರ ಮಾತು ಕೇಳುವವನಲ್ಲ ಅಂತಾ ನಿಮಗೂ ಗೊತ್ತು ಎಂದರು.
ಹೈಕಮಾಂಡ್‌ಗೂ ಮಾಹಿತಿ:
ಈ ವಿಚಾರವಾಗಿ ನಮ್ಮ ಹೈಕಮಾಂಡ್ ಸಹ ಎಲ್ಲ ಮೂಲಗಳಿಂದ ಮಾಹಿತಿ ತರಸಿಕೊಂಡಿದ್ದಾರೆ. ಮುಖ್ಯಮಂತ್ರಿಗಳನ್ನ ಎಸಿಸಿ ಅಧ್ಯಕ್ಷರು ಭೇಟಿಯಾಗಿದ್ದರು. ಅಲ್ಲಿಯೂ ಚರ್ಚೆಯಾಗಿದೆ ಎಂಬ ಮಾಹಿತಿ ಇದೆ. ಹೈಕಮಾಂಡ್ ಗೆ ಭೇಟಿಗೆ ಇನ್ನೂ ಹೋಗೋರು ಇದ್ದಾರೆ. ನಾನು 10ನೇ ತಾರೀಕಿನ ನಂತರ ಹೋಗ್ತೇನೆ. ಈ ವಿಚಾರದದಲ್ಲಿ ನಾನು ಯಾರ ವಿರುದ್ಧ ಹೇಳಬೇಕಾದ್ರೆ ನನ್ನ ಬಳಿ ಪುರಾವೆ ಇರಬೇಕು. ಏನೇ ಪುರಾವೆ ಮಾಹಿತಿ ಬರಬೇಕು ಎಂದರೆ ತನಿಖೆ ಆಗಬೇಕು ಎಂದರು.
ಇದನ್ನೂ ಓದಿ: ಸಿಎಂ ಪರ ಮಾತಾಡಿದ್ರೆ ಕೆಲವರಿಗೆ ಹೊಟ್ಟೆ ಕಿಚ್ಚು, 'ಹನಿಟ್ರ್ಯಾಪ್' ಕುರಿತು ಹೆಚ್‌ಸಿ ಮಹದೇವಪ್ಪ ಸ್ಫೋಟಕ ಹೇಳಿಕೆ!
ಒಂದೆರಡು ದಿನದಲ್ಲಿ ನಾನು ದೂರು ಕೊಟ್ಟ ಮೇಲೆ ಯಾವ ರೀತಿ ತನಿಖೆಗೆ ಕ್ರಮ ತೆಗೆದುಕೊಳ್ಳುತ್ತಾರೆ ನೋಡಬೇಕು. ನಮ್ಮ ಮಾಹಿತಿ ಹೇಗೆ ತೆಗೆದುಕೊಳ್ಳುತ್ತಾರೆ ಅದನ್ನು ಕೊಡುತ್ತೇನೆ. ಹನಿಟ್ರ್ಯಾಪ್ ವಿಚಾರದಲ್ಲಿ ನನ್ನ ಬೇಡಿಕೆ ಅಂದ್ರೆ ಈ ರೀತಿ ಯಾರೆಲ್ಲ ಮಾಡ್ತಾರೆ ಅದು ನಿಲ್ಲಬೇಕು. ಹಿಂದೆ ಯಾರ್ಯಾರ ಮೇಲೆ ಮಾಡಿದ್ದಾರೋ ಇಂದು ಈಗ ನನ್ನ ಮೇಲೆ ಪ್ರಯತ್ನ ಮಾಡಿದ್ದಾರೆ. ಮುಂದೆ ಇನ್ಯಾರ ಮೇಲೆ ಮಾಡ್ತಾರೋ ಗೊತ್ತಿಲ್ಲ. ಇಂಥಾ ದುಸ್ಸಾಹಸಕ್ಕೆ ಕೈ ಹಾಕೋ ಕೆಲಸ ಯಾರೂ ಮಾಡಬಾರದು. ಆ ರೀತಿಯಾದ ವಾತಾವರಣ ಬರಬೇಕು ಎಂದು ಪರೋಕ್ಷವಾಗಿ ಡಿಕೆ ಶಿವಕುಮಾರ ವಿರುದ್ಧ ಕಿಡಿಕಾರಿದರು.