ಬಿಜೆಪಿ ಕರೆ ನೀಡಿದ್ದ ಪಾದಯಾತ್ರೆ ಕವಲು ಹಾದಿ ಹಿಡಿದಿದೆ. ಹೋರಾಟದ ವಿಮುಖತೆಯಿಂದ ಮುಡಾದಲ್ಲಿ ಹಗರಣ ನಡೆದಿಲ್ಲ ಎನ್ನುವುದು ಸ್ಪಷ್ಟವಾಗಿದೆ ಎಂದು ಗೃಹ ಸಚಿವ ಪರಮೇಶ್ವರ ತಿಳಿಸಿದರು.
ಹುಬ್ಬಳ್ಳಿ (ಜು.30): ಬಿಜೆಪಿ ಕರೆ ನೀಡಿದ್ದ ಪಾದಯಾತ್ರೆ ಕವಲು ಹಾದಿ ಹಿಡಿದಿದೆ. ಹೋರಾಟದ ವಿಮುಖತೆಯಿಂದ ಮುಡಾದಲ್ಲಿ ಹಗರಣ ನಡೆದಿಲ್ಲ ಎನ್ನುವುದು ಸ್ಪಷ್ಟವಾಗಿದೆ ಎಂದು ಗೃಹ ಸಚಿವ ಪರಮೇಶ್ವರ ತಿಳಿಸಿದರು.
ಇಂದು ಹುಬ್ಬಳ್ಳಿಗೆ ಭೇಟಿ ನೀಡಿದ ವೇಳೆ ಮುಡಾ ಹಗರಣ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹಸಚಿವರು, ಮುಡಾ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರೇ ಸೃಷ್ಟೀಕರಣ ಕೊಟ್ಟಿದ್ದಾರೆ. ನಿವೃತ್ತ ನ್ಯಾಯಾಧೀಶರಾದ ದೇಸಾಯಿ ನೇತೃತ್ವದಲ್ಲಿ ತನಿಖೆ ನಡೆಸಲಾಗತ್ತಿದೆ. ಆಯೋಗ ತನಿಖೆ ನಡೆಸುತ್ತಿರುವುದರಿಂದ ಇದರ ಬಗ್ಗೆ ನಾವು ಹೆಚ್ಚಿಗೆ ಮಾತನಾಡೊಲ್ಲ. ತನಿಖೆ ಬಳಿಕವೇ ಎಲ್ಲ ವಿಷಯಗಳು ಬಹಿರಂಗಗೊಳ್ಳುತ್ತವೆ ಎಂದರು.
ರಾಮನಗರ ಹೆಸರು ಬದಲಾವಣೆ: ಕುಮಾರಸ್ವಾಮಿಗೆ ಸಚಿವ ಪರಮೇಶ್ವರ್ ತಿರುಗೇಟು
ಮೈಸೂರು ಪಾದಯಾತ್ರೆ ಆರಂಭಕ್ಕೆ ಮುನ್ನವೇ ಜೆಡಿಎಸ್ ಹಿಂದೆ ಸರಿದಿದೆ. ಇದು ನಿರೀಕ್ಷಿತ ಬೆಳವಣಿಗೆಯಾಗಿತ್ತು. ನಮ್ಮ ಜೊತೆ ಸಹ 16 ತಿಂಗಳು ಇದ್ದು, ನಂತರ ಜೆಡಿಎಸ್ ಬೇರೆಯಾಗಿತ್ತು. ಹಾಗೆಯೇ ಬಿಜೆಪಿ ಮತ್ತು ಜೆಡಿಎಸ್ ಒಟ್ಟಿಗೆ ಇರಲು ಸಾಧ್ಯವಿಲ್ಲ. ಸ್ವಾಭಾವಿಕವಾಗಿ ಅವರು ಬೇರೆ ಬೇರೆ ಆಗಲೇಬೇಕು. ಹೀಗಾಗಿ ಬಿಜೆಪಿ ಹೋರಾಟಕ್ಕೆ ಜೆಡಿಎಸ್ ಸಹಕಾರ ಕೊಡುತ್ತಿಲ್ಲ. ಇದರಿಂದ ತಿಳಿಯುವುದೆಂದರೆ ಮುಡಾ ಹಗರಣದಲ್ಲಿ ಯಾವುದೇ ಹಗರಣ ನಡೆದಿಲ್ಲ. ಸಿಎಂ ಸಿದ್ದರಾಮಯ್ಯರ ಮೇಲೆ ಸುಖಾಸುಮ್ಮನೆ ಬಿಜೆಪಿಯವರು ಆರೋಪ ಮಾಡಿದ್ದಾರೆ ಅಷ್ಟೇ ಎಂದರು.
ಮುಡಾದಲ್ಲಿ ಏನು ನಡೆದಿದೆ ಅಂತಾ ಕೆಲ ಬಿಜೆಪಿ ನಾಯಕರಿಗೆ ಗೊತ್ತಿದೆ. ಕೆಲವರು ರಾಜಕೀಯ ಕಾರಣಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಪಾದಯಾತ್ರೆಗೆ ಕಾನೂನಿನ ಪ್ರಕಾರ ನಾವು ಅನುಮತಿ ಕೊಡಲ್ಲ. ಪಾದಯಾತ್ರೆ, ಪ್ರತಿಭಟನೆ ಅವರ ಹಕ್ಕು, ಮಾಡಿಕೊಳ್ಳಲಿ. ಶಾಂತಿಯಿಂದ ಹೋರಾಟ ಮಾಡಿದರೆ ನಮ್ಮದೇನು ತಕರಾರಿಲ್ಲ. ಶಾಂತಿಗೆ ಭಂಗ ಆಗುವ ರೀತಿಯಲ್ಲಿ ವರ್ತಿಸಿದರೆ ಕ್ರಮ ಖಚಿತ ಎಂದರು.
ಬಿಜೆಪಿ ನಾಯಕರಿಗೆ ಈಗ ಪ್ರವಾಹ ನೆನಪಾಗಿದೆ. ನಮಗಿಂತ ಮುಂಚೆ ಬಿಜೆಪಿಯಿಂದ ಬೆಳೆಹಾನಿ ಸಮೀಕ್ಷೆ ಸಾಧ್ಯವಿಲ್ಲ. ಸಿಎಂ ಸೂಚನೆ ಮೇರೆಗೆ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು ಈಗಾಗಲೇ ಹಾನಿಯ ಪರಿಶೀಲನೆ ಮಾಡುತ್ತಿದ್ದಾರೆ. ಜೊತೆಗೆ ಕಂದಾಯ ಸಚಿವರು ಎಲ್ಲಾ ಕಡೆ ಪ್ರವಾಸ ಮಾಡುತ್ತಿದ್ದಾರೆ . ಆದರೆ ಬಿಜೆಪಿಯವರು ಈಗ ಎಚ್ಚೆತ್ತು ಪ್ರವಾಸ ಮಾಡಲು ಹೊರಟಿದ್ದಾರೆ ಎಂದು ಟೀಕಿಸಿದರು.
ಕೇರಳ ಗುಡ್ಡ ಕುಸಿತ ದುರಂತ ಪ್ರಕರಣ; ಸಂಕಷ್ಟಕ್ಕೆ ಸಿಲುಕಿದ ಕರ್ನಾಟಕದ ಝಾನ್ಸಿರಾಣಿ ಕುಟುಂಬ!
ಸಿಎಂ ಡಿಸಿಎಂ ದೆಹಲಿಗೆ ಭೇಟಿ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಸಚಿವರು, ಆಡಳಿತ ಪಕ್ಷವಾಗಿ ಹೈಕಮಾಂಡ್ ಸಲಹೆ ಸೂಚನೆ ಪಡೆಯುವುದು ಸಾಮಾನ್ಯ. ಹೀಗಾಗಿ ಸಹಜವಾಗಿ ಇಬ್ಬರನ್ನು ಹೈಕಮಾಂಡ್ ಕರೆದಿರುವ ಹಿನ್ನೆಲೆ ಹೋಗಬಹುದು. ಇದರಲ್ಲಿ ಹೊಸದೇನೂ ಇಲ್ಲ ಎಂದರು ಇದೇ ವೇಳೆ ಕೇರಳದ ವಯನಾಡ್‌ನಲ್ಲಿ ಭೂಕುಸಿತ ದುರಂತ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ ಸಚಿವರು, ಇದೊಂದು ಆಘಾತಕಾರಿ ಬೆಳವಣಿಗೆ. ಈ ಘಟನೆಯಿಂದ ನಮಗೆಲ್ಲರಿಗೂ ದುಃಖವಾಗಿದೆ. 90ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಅವರ ಆತ್ಮಕ್ಕೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ನಮ್ಮ ರಾಜ್ಯದಿಂದಲೂ ಕೇರಳಕ್ಕೆ ನೆರವಿನ ಹಸ್ತ ಚಾಚುತ್ತೇವೆ ಎಂದರು.