ಹೊಸದಾದ ಲಸಿಕೆ ಕುರಿತಂತೆ ಸಾರ್ವಜನಿಕರಲ್ಲಿದ್ದ ಭಯ ಹಾಗೂ ತಪ್ಪು ಮಾಹಿತಿಯನ್ನು ಹೋಗಲಾಡಿಸುವುದು ಸುಲಭದ ಕಾರ್ಯವಾಗಿರಲಿಲ್ಲ. ಆದಾಗ್ಯೂ 10 ತಿಂಗಳ ಒಳಗಾಗಿ ದೇಶದಲ್ಲಿ 100 ಕೋಟಿ ಹಾಗೂ ರಾಜ್ಯದಲ್ಲಿ 6 ಕೋಟಿಗೂ ಅಧಿಕ ಲಸಿಕೆಗಳನ್ನು ನೀಡಿರುವುದು ಊಹೆಗೂ ಮೀರಿದ ಸಾಧನೆ.
ಬೆಂಗಳೂರು (ಅ. 22): ಇದು ಭಾರತೀಯರೆಲ್ಲರಿಗೂ ಸಂತಸ, ಸಂಭ್ರಮ ಹಾಗೂ ಹೆಮ್ಮೆ ನೀಡುವ ಹಾಗೂ ವಿಶ್ವವು ಭಾರತದ ಸಾಧನೆ, ಸಾಮರ್ಥ್ಯವನ್ನು ಗುರುತಿಸುವ ಸಮಯ. ಮಾಚ್‌ರ್ 2020ರಲ್ಲಿ ಪ್ರಪಂಚ/ದೇಶ ಎದುರಿಸಿದ ಬಹುದೊಡ್ಡ ಸವಾಲು ಕೋವಿಡ್-19 ಎಂಬ ಕಂಡುಕೇಳರಿಯದ ಸಾಂಕ್ರಾಮಿಕ ರೋಗ.
ವಿಶ್ವವ್ಯಾಪಿಯಾದ ಈ ರೋಗವನ್ನು ಎದುರಿಸಲು ನಮಗಿದ್ದ ಆಯ್ಕೆಗಳು ರೋಗ ಪತ್ತೆ ಹಚ್ಚುವಿಕೆ, ಪರೀಕ್ಷೆ, ಪ್ರತ್ಯೇಕತೆ, ಚಿಕಿತ್ಸೆ ಹಾಗೂ ತಂತ್ರಾಂಶದ ನೆರವು. ಈ ಎಲ್ಲದರ ಸಹಾಯದಿಂದ ಭಾರತ ಯಶಸ್ವಿಯಾಗಿ ಮೊದಲನೇ ಅಲೆಯನ್ನು ಎದುರಿಸಿತು.
ಕೋವಿಡ್ ವಿರುದ್ಧದ ಬ್ರಹಾಸ್ತ್ರ
ಜನವರಿ 2021ರಲ್ಲಿ ಕೋವಿಡ್ ವಿರುದ್ಧದ ಯುದ್ಧದಲ್ಲಿ ನಮ್ಮ ಬತ್ತಳಿಕೆಗೆ ಸೇರ್ಪಡೆಯಾದ ಬ್ರಹ್ಮಾಸ್ತ್ರ ಕೋವಿಡ್ ಲಸಿಕೆ. ನಮ್ಮ ವಿಜ್ಞಾನಿಗಳು, ಸಂಶೋಧಕರು ಹಾಗೂ ಸರ್ಕಾರದ ನಿರಂತರ ಪ್ರಯತ್ನದಿಂದ ರೋಗ ಕಂಡುಬಂದ 12 ತಿಂಗಳ ಒಳಗಾಗಿ ನಮಗೆ ಕೋವಿಡ್ ಲಸಿಕೆ ಲಭ್ಯವಾಯಿತು. ಜನವರಿ 2021ರಲ್ಲಿ ಭಾರತದಲ್ಲೇ ತಯಾರಾದ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ… ಎಂಬ ಎರಡು ಲಸಿಕೆ ಭಾರತೀಯರಿಗೆ ದೊರಕಿತು. ದೇಶದ ಇತರೆ ರಾಜ್ಯಗಳಂತೆ ಕರ್ನಾಟಕದಲ್ಲಿಯೂ ದಿನಾಂಕ ಈ ವರ್ಷದ ಜನವರಿ 16ರಂದು ಕೋವಿಡ್ ವಿರುದ್ಧದ ಹೋರಾಟದ ಪ್ರಮುಖ ಯೋಧರಾದ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡುವ ಮೂಲಕ ಲಸಿಕಾಕರಣ ಆರಂಭವಾಯಿತು.
100 ಕೋಟಿ ಡೋಸ್ ಲಸಿಕೆ, ಯುದ್ಧ ಗೆಲ್ಲುವ ಹೊಸ್ತಿಲಿನಲ್ಲಿ ಭಾರತ: ಡಾ. ಸುಧಾಕರ್
ನಂತರದಲ್ಲಿ ಕೋವಿಡ್-19 ನಿರ್ವಹಣೆಯಲ್ಲಿ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸಿದ ಇತರೆ ಇಲಾಖೆಯ (ಕಂದಾಯ, ನಗರಾಭಿವೃದ್ಧಿ, ಪಂಚಾಯತ್ ರಾಜ್ ಇತ್ಯಾದಿ) ಕಾರ್ಯಕರ್ತರು/ ಸಿಬ್ಬಂದಿಗಳಿಗೆ ವಿಸ್ತರಿಸಲಾಯಿತು. ನಂತರ ಹಂತ ಹಂತದಲ್ಲಿ 60 ವರ್ಷ ಮೇಲ್ಪಟ್ಟವರಿಗೆ, 45 ವರ್ಷ ಮೇಲ್ಪಟ್ಟು ಸಹ ಕಾಯಿಲೆ ಹೊಂದಿದವರಿಗೆ, 45 ವರ್ಷ ಮೇಲ್ಪಟ್ಟವರಿಗೆ ಹಾಗೂ ಮೇ 5ರಿಂದ 18 ವರ್ಷ ಮೇಲ್ಪಟ್ಟಎಲ್ಲ ನಾಗರಿಕರಿಗೆ ಲಸಿಕೆ ನೀಡುವ ಕಾರ್ಯಕ್ರಮ ಆರಂಭವಾಯಿತು.
ಊಹೆಗೂ ಮೀರಿದ ಸಾಧನೆ
ಭಾರತದಲ್ಲಿ ಮುಂಚಿನಿಂದಲೂ ಪೋಲಿಯೋ ಹಾಗೂ ಇತರೆ ಲಸಿಕಾಕರಣದ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯುತ್ತಿದ್ದು, ವ್ಯವಸ್ಥೆಗಳು ಬಲವಾಗಿದ್ದರೂ ಕೋವಿಡ್ ಲಸಿಕೆ ನೀಡಿಕೆ ನಿರ್ವಹಣೆಯಲ್ಲಿ ಸಾಕಷ್ಟುಸವಾಲುಗಳನ್ನು ಎದುರಿಸಬೇಕಾಯಿತು. ಮೊದಲನೆಯದಾಗಿ ಲಸಿಕೆ ನೀಡಿಕೆಯ ಆಗಾಧ ಪ್ರಮಾಣ (18 ವರ್ಷ ಮೇಲ್ಪಟ್ಟಎಲ್ಲಾ ನಾಗರಿಕರಿಗೂ ಅಂದರೆ ಶೇ.80ರಷ್ಟುಜನರಿಗೆ ಲಸಿಕೆ ನೀಡಿಕೆ), ಅದಕ್ಕೆ ಅಗತ್ಯವಿರುವಷ್ಟು ಲಸಿಕೆ, ಪರಿಣತ ಸಿಬ್ಬಂದಿ, ಸ್ಥಳ, ಯಾವುದೇ ರೀತಿಯ ಅಡ್ಡ ಪರಿಣಾಮ ಉಂಟಾದಲ್ಲಿ ನಿರ್ವಹಿಸಲು ಅಗತ್ಯವಾದ ವೈದ್ಯಕೀಯ ವ್ಯವಸ್ಥೆ, ಫಲಾನುಭವಿಗಳನ್ನು ಗುರುತಿಸಲು ಹಾಗೂ ಅರ್ಹ ಫಲಾನುಭವಿಗಳಿಗೆ ಲಸಿಕೆ ನೀಡುವ ಖಚಿತತೆಗೆ ತಂತ್ರಾಂಶದ ಬೆಂಬಲ, ಹೊಸದಾದ ಲಸಿಕೆ ಕುರಿತಂತೆ ಸಾರ್ವಜನಿಕರಲ್ಲಿದ್ದ ಭಯ ಹಾಗೂ ತಪ್ಪು ಮಾಹಿತಿಯನ್ನು ಹೋಗಲಾಡಿಸುವುದು ಹಾಗೂ ಈ ಪ್ರಮಾಣದ ಅಭಿಯಾನ ನಡೆಸಲು ಅಗತ್ಯವಾದ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡುವುದು, ಈ ರೀತಿ ಹಲವಾರು ಅಂಶಗಳನ್ನು ಗಮನಿಸಬೇಕಿತ್ತು. ಇದು ಯಾವುದೂ ಸುಲಭದ ಕಾರ್ಯವಾಗಿರಲಿಲ್ಲ. ಆದಾಗ್ಯೂ 10 ತಿಂಗಳ ಒಳಗಾಗಿ ದೇಶದಲ್ಲಿ 100 ಕೋಟಿ ಹಾಗೂ ರಾಜ್ಯದಲ್ಲಿ 6 ಕೋಟಿಗೂ ಅಧಿಕ ಲಸಿಕೆಗಳನ್ನು ನೀಡಿರುವುದು ಊಹೆಗೂ ಮೀರಿದ ಸಾಧನೆಯಂದೇ ಹೇಳಬಹುದು.
Narendra Modi Speech Highlights: ಭಾರತ ಶಕ್ತಿಗೆ ವಿಶ್ವವೇ ನಿಬ್ಬೆರಗು: ಮೋದಿ ಮಾತು
ಕರ್ನಾಟಕದಲ್ಲಿ ಲಸಿಕೆಯ ಯಶಸ್ಸು
ಜನವರಿ 2021ರಲ್ಲಿ ಕರ್ನಾಟಕದಲ್ಲಿ ಕೋವಿಡ್ ಲಸಿಕಾ ಕಾರ್ಯಕ್ರಮಕ್ಕೆ ಸಿದ್ಧತೆಗಳು ಆರಂಭವಾಯಿತು. ಮೊದಲ ಹಂತದಲ್ಲಿ ಲಸಿಕೆಗೆ ಅರ್ಹರಾದ ಆರೋಗ್ಯ ಕಾರ್ಯಕರ್ತರ ಪಟ್ಟಿ, ಸುರಕ್ಷಿತವಾಗಿ ಲಸಿಕೆ ನೀಡಬಹುದಾದ ಸ್ಥಳಗಳ ಗುರುತಿಸುವಿಕೆ, ಶಿಷ್ಟಾಚಾರಗಳನ್ನು ಅನುಸರಿಸಿ ಲಸಿಕೆ ನೀಡುವ ಕುರಿತಂತೆ ಆರೋಗ್ಯ ಕಾರ್ಯಕರ್ತ/ ಸಿಬ್ಬಂದಿಗೆ ಮಾಹಿತಿ, ನೀಡುವ ವಿಧಾನ, ಅನುಸರಿಸಬೇಕಾದ ಕ್ರಮ, ಅಡ್ಡ ಪರಿಣಾಮ ಕಂಡುಬಂದಲ್ಲಿ ತೆಗೆದುಕೊಳ್ಳಬೇಕಾದ ಕ್ರಮ ಇತ್ಯಾದಿ ಕುರಿತಂತೆ ತರಬೇತಿ, ಕೋವಿಡ್ ತಂತ್ರಾಂಶ ಕುರಿತಂತೆ ತರಬೇತಿ, ಲಸಿಕೆಗಳ ವ್ಯವಸ್ಥಿತ ಸ್ವೀಕೃತಿ, ಸಂಗ್ರಹಣೆ, ವಿತರಣೆಗೆ ಸೂಕ್ತ ಕ್ರಮ ಹಾಗೂ ಇತರೆ ಎಲ್ಲಾ ವ್ಯವಸ್ಥೆಗಳನ್ನು ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ಮಾಡಲಾಯಿತು. ಇದರೊಂದಿಗೆ ರಾಜ್ಯಮಟ್ಟದಲ್ಲಿ ಲಸಿಕಾ ನಿಯಂತ್ರಣ ಕೊಠಡಿ ಆರಂಭಿಸಿ ಎಲ್ಲಾ ಜಿಲ್ಲೆಗಳ ಲಸಿಕಾ ನಿಯಂತ್ರಣ ಕೊಠಡಿಗಳೊಂದಿಗೆ ಜೋಡಣೆ ಮಾಡಲಾಯಿತು. ಜಿಲ್ಲೆಗಳಿಗೆ ಯಾವುದೇ ರೀತಿಯ ತುರ್ತು ಸಂದೇಶ ನೀಡಲು, ಸಂದೇಹಗಳನ್ನು ಬಗೆಹರಿಸಲು, ತಾಂತ್ರಿಕ, ವೈದ್ಯಕೀಯ ಸಮಸ್ಯೆಗಳ ಕುರಿತು ಚರ್ಚಿಸಲು, ಸ್ಪಷ್ಟೀಕರಣ ನೀಡಲು ಸದರಿ ನಿಯಂತ್ರಣ ಕೊಠಡಿಯನ್ನು ಇನ್ನೂ ಉಪಯೋಗಿಸಲಾಗುತ್ತಿದೆ.
ಲಸಿಕೆ ಬಗ್ಗೆ ಸುಳ್ಳು ವದಂತಿ
ಆರಂಭಿಕ ಹಂತದಲ್ಲಿ ಲಸಿಕೆ ಪಡೆಯಲು ಜನ ಹಿಂಜರಿಯುತ್ತಿದ್ದುದು ಸಾಮಾನ್ಯ ವಿಷಯವಾಗಿತ್ತು. ಪ್ರಮುಖವಾಗಿ ಹೊಸ ಲಸಿಕೆ, ಬಹುಬೇಗ ತಯಾರಾದ ಲಸಿಕೆ, ಅಡ್ಡಪರಿಣಾಮಗಳ ಪೂರ್ಣ ಮಾಹಿತಿ ಇಲ್ಲದಿರಬಹುದು ಹಾಗೂ ಇನ್ನಿತರೆ ತಪ್ಪು ಮಾಹಿತಿಗಳು, ಇದರೊಂದಿಗೆ ಮದ್ಯಪಾನ/ ಮಾಂಸಾಹಾರ ಸೇವನೆಯೊಂದಿಗೆ ಲಸಿಕೆ ಅಪಾಯಕಾರಿ, ಮಕ್ಕಳಾಗುವುದಿಲ್ಲ, ಆರೋಗ್ಯ ಸಮಸ್ಯೆಗಳು ಉಲ್ಬಣಿಸುತ್ತವೆ ಇತ್ಯಾದಿ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಹಿನ್ನೆಲೆಯಲ್ಲಿ ಆರಂಭದ ದಿನಗಳಲ್ಲಿ ಲಸಿಕೆ ಪಡೆಯುವವರ ಸಂಖ್ಯೆ ಕಡಿಮೆ ಕಂಡುಬಂದಿತ್ತು.
ಸರ್ಕಾರದಿಂದ ವದಂತಿಗಳ ಕುರಿತು ನಿಜವಾದ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಲು ಹಾಗೂ ಸರಿಯಾದ ಮಾಹಿತಿಯನ್ನು ಎಲ್ಲಾ ಅರ್ಹ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಯಿತು. ಹೆಚ್ಚು ಜನ ಲಸಿಕೆ ಪಡೆದಂತೆ ಜನರಲ್ಲೂ ನಂಬಿಕೆ, ಧೈರ್ಯ ಹೆಚ್ಚಿ ಲಸಿಕೆ ಪಡೆಯಲು ಮುಂದೆ ಬರಲು ಆರಂಭಿಸಿದರು. ಎರಡನೇ ಅಲೆ ಸಮಯದಲ್ಲಿ ಲಸಿಕೆ ಪಡೆದವರಲ್ಲಿ ರೋಗದ ತೀವ್ರತೆ ಕಡಿಮೆ ಇರುವುದನ್ನು ಮನಗಂಡ ನಂತರದಲ್ಲಿ ಲಸಿಕಾ ಕೇಂದ್ರಗಳ ಮುಂದಿನ ಸಾಲುಗಳು ಉದ್ದವಾದವು. 18 ವರ್ಷದ ಮೇಲ್ಪಟ್ಟಎಲ್ಲರಿಗೂ ಕೋವಿಡ್ ಲಸಿಕೆ ನೀಡಲು ಆರಂಭಿಸಿದ ನಂತರವಂತೂ ಲಭ್ಯವಿದ್ದ ಲಸಿಕೆಗಳು ಸಾಲದಾಯಿತು.
ಕರ್ನಾಟಕದಲ್ಲಿ 6 ಕೋಟಿ ವಿತರಣೆ
ಕರ್ನಾಟಕ ರಾಜ್ಯದ ಕೋವಿಡ್ ಲಸಿಕೆ ನೀಡಿಕೆ ಕಾರ್ಯಕ್ರಮವು ಆರಂಭದಿಂದಲೇ ಮುಖ್ಯಮಂತ್ರಿ ಹಾಗೂ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವರನ್ನು ಒಳಗೊಂಡಂತೆ ಎಲ್ಲಾ ಸಚಿವರು, ಶಾಸಕರು, ಚುನಾಯಿತ ಪ್ರತಿನಿಧಿಗಳು, ಗ್ರಾಮ ಪಂಚಾಯತಿ/ ನಗರಸಭೆ ಸದಸ್ಯರು, ಕಾರ್ಯಪಡೆ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ, ಖಾಸಗಿ ಆಸ್ಪತ್ರೆಗಳು, ಸಂಘ ಸಂಸ್ಥೆಗಳು, ಎಲ್ಲರ ಬೆಂಬಲ ಹೊಂದಿ ಇಂದಿಗೂ ಒಂದು ಜನಾಂದೋಲನವಾಗಿ ಮುಂದುವರಿದಿದೆ.
ಜನವರಿ 2021ರಿಂದ ಅಕ್ಟೋಬರ್ 2021ರ ವರೆಗೆ ದೇಶಾದ್ಯಂತ 100 ಕೋಟಿ ಮತ್ತು ಕರ್ನಾಟಕದಲ್ಲಿ 6 ಕೋಟಿಗಿಂತ ಅಧಿಕ ಲಸಿಕೆ ನೀಡುವವರೆಗಿನ ಹಾದಿ ಸಾಕಷ್ಟುಸವಾಲುಗಳಿಂದ ಕೂಡಿದ್ದರೂ ಎಲ್ಲರ ಸಹಕಾರ, ವ್ಯವಸ್ಥಿತ ಕಾರ್ಯಾಚರಣೆ, ಕೇಂದ್ರ ಸರ್ಕಾರದಿಂದ ನಿಯಮಿತವಾಗಿ ಸ್ವೀಕೃತವಾಗುವ ಸ್ಪಷ್ಟಮಾರ್ಗಸೂಚಿ, ಸರಳ ತಂತ್ರಾಂಶದಿಂದ ಯಶಸ್ಸು ಕಂಡಿದ್ದು, ಹೀಗೆ ಮುಂದುವರೆದಲ್ಲಿ ಡಿಸೆಂಬರ್ 2021ರ ಅಂತ್ಯದಲ್ಲಿ ಎಲ್ಲಾ ಆರ್ಹ ಪಲಾನುಭವಿಗಳಿಗೆ ಲಸಿಕೆ ನೀಡುವ ಕನಸು ಖಂಡಿತವಾಗಿಯೂ ಸಾಕಾರವಾಗುತ್ತದೆ.
- ಡಾ. ಅರುಂಧತಿ ಚಂದ್ರಶೇಖರ್
ರಾಷ್ಟ್ರೀಯ ಆರೋಗ್ಯ ಅಭಿಯಾನದ ರಾಜ್ಯ ನಿರ್ದೇಶಕಿ